More

    ತಂಬಾಕಿಗೆ ವರ್ಷಕ್ಕೆ 14 ಲಕ್ಷ ಜನ ಬಲಿ: ಕೃಷಿಕ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ.ಹನುಮಂತು ಆತಂಕ

    ಮಂಡ್ಯ: ಪ್ರತಿ ವರ್ಷ ದೇಶದಲ್ಲಿ ಸುಮಾರು 13.5 ರಿಂದ 14 ಲಕ್ಷ ಜನ ತಂಬಾಕು ಉತ್ಪನ್ನಗಳ ಬಳಕೆಯಿಂದ ಬಲಿಯಾಗುತ್ತಿದ್ದಾರೆ. ವಿವಿಧ ಅಂಗಗಳ ಕ್ಯಾನ್ಸರ್‌ಗೆ ಒಳಗಾಗುತ್ತಿದ್ದಾರೆ. ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಸುಮಾರು 3 ಕೋಟಿ ಜನ ತಂಬಾಕು ಉತ್ಪನ್ನಗಳನ್ನು ಬಳಸುತ್ತಿದ್ದಾರೆ ಎಂದು ಕೃಷಿಕ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ.ಹನುಮಂತು ಆತಂಕ ವ್ಯಕ್ತಪಡಿಸಿದರು.
    ನಗರದ ಕೆರೆಯಂಗಳದ ವಿವೇಕಾನಂದ ನಗರದಲ್ಲಿರುವ ಮೆಟ್ರಿಕ್ ನಂತರ ವೃತ್ತಿಪರ ಬಾಲಕರ ವಿದ್ಯಾರ್ಥಿ ನಿಲಯ ಆವರಣದಲ್ಲಿ ಸಕ್ಕರೆನಾಡು ಲಯನ್ಸ್ ಸಂಸ್ಥೆ ಹಾಗೂ ಕೃಷಿಕ ಲಯನ್ಸ್ ಸಂಸ್ಥೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಡಿಎಚ್‌ಒ ಕಚೇರಿ ಸಹಯೋಗದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ತಂಬಾಕು ಸೇವನೆಯು ಹಣ ಕೊಟ್ಟು ರೋಗ ಖರೀದಿಸಿದಂತೆ ಎಂದರು.
    ವಿದ್ಯಾವಂತ ಯುವ ಸಮುದಾಯ ಬೀಡಿ, ಸಿಗರೇಟ್, ಗುಟ್ಕಾ ಮುಂತಾದ ತಂಬಾಕು ಉತ್ಪನ್ನಗಳ ಬಳಕೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಮಾದಕದ್ರವ್ಯ ವ್ಯಸನಿಗಳಾಗಿ ಮೃತಡುತ್ತಿದ್ದಾರೆ. ಹಣಕೊಟ್ಟು ಆರೋಗ್ಯ, ಪರಿಸರ, ಮತ್ತೊಬ್ಬರ ಜೀವನ್ನೂ ಪರೋಕ್ಷವಾಗಿ ಕೊಲ್ಲುತ್ತಿದ್ದಾರೆ ಎಂದು ವಿಷಾದಿಸಿದ ಅವರು, ಶೇ.8.8ರಷ್ಟು ಧೂಮಪಾನಿ ಮತ್ತು ಶೇ.16.3ರಷ್ಟು ಧೂಮಪಾನ ರಹಿತ ತಂಬಾಕು ಬಳಕೆದಾರರು ಇದ್ದಾರೆ. ಇವರಲ್ಲಿ ಯುವಕರೇ ಹೆಚ್ಚು ವ್ಯಸನಿಗಳಾಗಿದ್ದಾರೆ. ತಂಬಾಕು ಮತ್ತು ಅದರ ಉತ್ಪನ್ನಗಳಿಂದಾಗುವ ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲು ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.
    ಪ್ರಪಂಚದಲ್ಲಿ ಚೀನಾ ದೇಶವು ತಂಬಾಕು ಉತ್ಪಾದನೆಯಲ್ಲಿ ಮೊದಲ ಸ್ಥಾನ, ಭಾರತ 2ನೇ ಸ್ಥಾನದಲ್ಲಿದೆ. ವಿದೇಶಿಗರ ದಾಳಿಯಂದ ಭಾರತಕ್ಕೆ ತಂಬಾಕು ಉತ್ಪನ್ನ ಬಂದು ಹಂತ ಹಂತವಾಗಿ ಎಲ್ಲೆಡೆ ವಿಸ್ತಾರಗೊಂಡಿದೆ. ಇಂದು ಅಮೂಲ್ಯ ಜೀವಗಳನ್ನು ನೇರವಾಗಿ ಮತ್ತು ಪರೋಕ್ಷವಾಗಿ ಕೊಲ್ಲುತ್ತಿದೆ. ತಂಬಾಕು ಬಳಕೆ ಮತ್ತು ಬೆಳೆಯಿಂದ ಆರೋಗ್ಯದ ಮೇಲೆ ಮಾತ್ರವಲ್ಲದೆ ಪರಿಸರ, ಆರ್ಥಿಕತೆ ಮತ್ತು ರಾಷ್ಟ್ರದ ಒಟ್ಟಾರೆ ಉತ್ಪಾದಕತೆಯ ಮೇಲೂ ಪರಿಣಾಮ ಬೀರುತ್ತಿದೆ. ತಂಬಾಕು ಬೆಳೆಯಿಂದ ರೈತರು ಹಾಗೂ ವ್ಯಾಪಾರಿಗಳಿಗೆ ಲಾಭವಾಗುವುದಕ್ಕಿಂತ ಹೆಚ್ಚು ತಂಬಾಕು ಸೇವನೆಯಿಂದ ಅನಾರೋಗ್ಯಕ್ಕೆ ಪೀಡಿತರಾದವರ ವಿವಿಧ ಕಾಯಿಲೆಗಳ ಚಿಕಿತ್ಸೆಗೆಂದು ಸರ್ಕಾರ ಹೆಚ್ಚು ಹಣವನ್ನು ವೆಚ್ಚ ಮಾಡುತ್ತಿದೆ ಎಂದು ವಿವರಿಸಿದರು.
    ತಂಬಾಕು ನಿಯಂತ್ರಣ ಕೋಶ ವಿಭಾಗದ ಸಲಹೆಗಾರ ತಿಮ್ಮರಾಜು ಮಾತನಾಡಿ, ಸಾರ್ವಜನಿಕ ಸ್ಥಳಗಳಲ್ಲಿ ಬೀಡಿ, ಸಿಗರೇಟ್, ತಂಬಾಕು ಉತ್ಪನ್ನ ಬಳಕೆ ಮಾಡುವವರ ವಿರುದ್ದ ದಂಡ ವಿಧಿಸಲಾಗುತ್ತಿದೆ. ಮಾರಾಟ ಮಾಡಿದ ವ್ಯಕ್ತಿಗೂ ದಂಡ ಹಾಕಲಾಗುತ್ತಿದೆ. ಇನ್ನಾದರೂ ಜನರ ಆರೋಗ್ಯ ಮತ್ತು ಪರಿಸರ ಕಾಳಜಿಯಿಂದ ತಂಬಾಕು ಪದಾರ್ಥಗಳನ್ನು ಬಳಸುವುದನ್ನು ನಿಲ್ಲಿಸಬೇಕಿದೆ ಎಂದು ಎಚ್ಚರಿಸಿದ ಅವರು, ತಂಬಾಕು ವ್ಯಸನಿಗಳನ್ನು ಚಿಕಿತ್ಸೆ ಮೂಲಕ ಮುಕ್ತಗೊಳಿಸುವ ಔಷಧಗಳು ಇವೆ. ವೈದ್ಯರ ಸಲಹೆ ಮತ್ತು ಮಾರ್ಗದರ್ಶನದಿಂದ ವ್ಯಸನ ಮುಕ್ತ ಜೀವನ ಮಾಡಲು ಅವಕಾಶಗಳು ಇವೆ. ಅದನ್ನು ಸದುಪಯೋಗಪಡಿಸಿಕೊಳ್ಳಿ. ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸಹಕಾರ ನೀಡಿ ಎಂದು ಮಾಹಿತಿ ನೀಡಿದರು.
    ಸಕ್ಕರೆನಾಡು ಲಯನ್ಸ್ ಸಂಸ್ಥೆ ಅಧ್ಯಕ್ಷ ಕೆ.ಆರ್.ಶಶಿಧರ ಈಚಗೆರೆ, ನಿಲಯಪಾಲಕ ರಾಜೇಶ್, ಪರಿಸರಪ್ರೇಮಿ ಜಯಶಂಕರ್, ಪ್ರತಿಭಾಂಜಲಿ ಡೇವಿಡ್, ಶರತ್, ಅಮೂಲ್ಯ ಇತರರಿದ್ದರು. ಇದೇ ಸಂದರ್ಭದಲ್ಲಿ ತಂಬಾಕು ಮುಕ್ತ ಜೀವನಕ್ಕಾಗಿ ಪ್ರಮಾಣ ವಚನ ಸ್ವೀಕರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts