ಒಂದೇ ವರ್ಷದಲ್ಲಿ 83 ಸಾವಿರ ಟಿಬಿ ಪ್ರಕರಣಗಳು ಪತ್ತೆ

| ವರುಣ ಹೆಗಡೆ ಬೆಂಗಳೂರು

ಮೈಕೋಬ್ಯಾಕ್ಟೀರಿಯಂ ಟ್ಯೂಬರ್​ಕ್ಯುಲೋಸಿಸ್ ಎಂಬ ರೋಗಾಣುವಿನಿಂದ ಬರುವ ಕ್ಷಯರೋಗ (ಟಿಬಿ) ರಾಜ್ಯದಲ್ಲಿ ತನ್ನ ಬಾಹುಗಳನ್ನು ವಿಸ್ತರಿಸುತ್ತಿದ್ದು, ಕಳೆದ ಒಂದೇ ವರ್ಷದಲ್ಲಿ 83,707 ಮಂದಿಯಲ್ಲಿ ಹೊಸದಾಗಿ ಟಿಬಿ ಪತ್ತೆಯಾಗಿದೆ.

ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ವಿಶ್ವದಲ್ಲಿ 1 ಕೋಟಿ ಕ್ಷಯ ರೋಗಿಗಳಿದ್ದು, ಆ ಪೈಕಿ ಭಾರತದಲ್ಲೇ 27 ಲಕ್ಷ ಜನರಿದ್ದಾರೆ. ರಾಜ್ಯದಲ್ಲಿ ಆರೋಗ್ಯ ಇಲಾಖೆ ಕ್ಷಯ ರೋಗ ಪತ್ತೆ ಮತ್ತು ಚಿಕಿತ್ಸೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, 2017ರಲ್ಲಿ 67 ಸಾವಿರ ಜನರಲ್ಲಿ ಟಿಬಿ ಪತ್ತೆ ಹಚ್ಚಲಾಗಿತ್ತು. ಶೇ.85 ಮಂದಿಗೆ ಸೂಕ್ತ ಚಿಕಿತ್ಸೆ ನೀಡಿ ಗುಣಪಡಿಸಲಾಗಿದೆ. 2018ರಲ್ಲಿ 83,707 ಮಂದಿಯಲ್ಲಿ ಕ್ಷಯ ರೋಗ ಪತ್ತೆಯಾಗಿದ್ದು, 12.21 ಕೋಟಿ ರೂ. ಖರ್ಚಿನಲ್ಲಿ ಶೇ.88 ಮಂದಿಗೆ ಚಿಕಿತ್ಸೆ ನೀಡಲಾಗಿದೆ. ರಾಜ್ಯದಲ್ಲಿ 284 ಕ್ಷಯರೋಗ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ವಿಶ್ವ ಆರೋಗ್ಯ ಸಂಸ್ಥೆ ಕ್ಷಯರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿವರ್ಷ ಮಾ.24ಕ್ಕೆ ವಿಶ್ವ ಕ್ಷಯರೋಗ ದಿನ ಆಚರಿಸುತ್ತಿದೆ.

ರೋಗ ಲಕ್ಷಣಗಳು

# 2 ವಾರಕ್ಕಿಂತ ಅಧಿಕ ಸಮಯ ಕೆಮ್ಮು

# ಸಂಜೆಯಾದಂತೆ ಜ್ವರ ಹೆಚ್ಚಾಗುವುದು

# ಕಫದಲ್ಲಿ ರಕ್ತ ಕಾಣಿಸಿಕೊಳ್ಳುವುದು

# ತೂಕ ಕಡಿಮೆಯಾಗುವುದು.

# ಹಸಿವೆ ಇಲ್ಲದಿರುವುದು

# ಸುಸ್ತು-ನಿರಾಸಕ್ತಿ ಉಂಟಾಗುವುದು

ಹರಡಲಿದೆ ಸೋಂಕು

ಕ್ಷಯ ರೋಗಾಣು ಗಾಳಿಯಲ್ಲಿ ಹರಡುತ್ತದೆ. ಟಿಬಿ ಲಕ್ಷಣಗಳು ಕಂಡ ತಕ್ಷಣ ಚಿಕಿತ್ಸೆ ಪಡೆಯಬೇಕು. ಇಲ್ಲದಿದ್ದಲ್ಲಿ ರೋಗ ಮತ್ತಷ್ಟು ಮಾರಕವಾಗುವ ಸಾಧ್ಯತೆ ಇರುತ್ತದೆ. ಶ್ವಾಸಕೋಶ, ಮಿದುಳು, ಬೆನ್ನಮೂಳೆ ಭಾಗಗಳಿಗೆ ಹಾನಿಕಾರಕ ಆಗುತ್ತದೆ. ನಿರ್ದಿಷ್ಟ ಲಕ್ಷಣದ ಮೂಲಕ ಟಿಬಿ ಪತ್ತೆ ಮಾಡಬಹುದು. ಕಫ-ರಕ್ತ ಪರೀಕ್ಷೆ ಮತ್ತು ಎಕ್ಸ್​ರೇ ಮೂಲಕ ರೋಗ ಪತ್ತೆ ಮಾಡಲು ಸಾಧ್ಯವಿದೆ.

ನಿಯಂತ್ರಣಕ್ಕೆ ಕ್ರಮಗಳು

# ಬೆಂಗಳೂರು, ಮಂಗಳೂರು, ಹುಣಸೂರು, ಬಳ್ಳಾರಿ, ಕಲಬುರಗಿ, ಧಾರವಾಡದಲ್ಲಿ ಡ್ರಗ್​ರೆಸಿಸ್ಟಿವ್ ಟಿಬಿ ಸೆಂಟರ್ ಸ್ಥಾಪನೆ.

# ತಲಾ 2.5 ಲಕ್ಷ ಜನರಿಗೆ ಒಂದರಂತೆ 248 ಕ್ಷಯರೋಗ ಘಟಕ

# 699 ನಿಯೋಜಿತ ಸೂಕ್ಷ್ಮದರ್ಶಕ ಕೇಂದ್ರ ಸ್ಥಾಪನೆ, 65 ಜೀನ್ ಎಕ್ಸ್​ಪರ್ಟ್ ಮಷಿನ್​ಗಳ ಅಳವಡಿಕೆ

# ಕೇಂದ್ರ ಸರ್ಕಾರದಿಂದ ಟಿಬಿ ಪತ್ತೆಗಾಗಿ 45 ಮೆಡಿಕಲ್ ಮೊಬೈಲ್ ವ್ಯಾನ್.

ರಾಜ್ಯದೆಲ್ಲೆಡೆ ಕ್ಷಯ ರೋಗ ಪ್ರಕರಣ ಬೆಳಕಿಗೆ ಬರುತ್ತಿದ್ದು ಖಾಸಗಿ ಆಸ್ಪತ್ರೆಗಳಲ್ಲೂ ವರದಿಯಾಗುತ್ತಿದೆ. ರೋಗಿಗಳನ್ನು ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದಡಿ ಗುರುತಿಸಿ, ಅಗತ್ಯ ಚಿಕಿತ್ಸೆ ನೀಡಲಾಗುವುದು. ಕ್ಷಯಮುಕ್ತ ರಾಜ್ಯ ಆಗಿಸಬೇಕಾದರೆ ಹೆಚ್ಚಿನ ಪ್ರಮಾಣದಲ್ಲಿ ಪ್ರಕರಣಗಳು ಬೆಳಕಿಗೆ ಬರಬೇಕಾಗುತ್ತದೆ. ಮುಂದಿನ 2 ವರ್ಷ ನಿರ್ಣಾಯಕವಾಗಿದ್ದು, ಅಧಿಕ ರೋಗಿಗಳನ್ನು ಪತ್ತೆ ಮಾಡುವ ಜತೆಗೆ ಚಿಕಿತ್ಸೆ ನೀಡುತ್ತೇವೆ.

| ಎಂ. ಮಂಜುಳಾ ಜಂಟಿ ನಿರ್ದೇಶಕರು ಕ್ಷಯ

ಮಾಸಿಕ -ಠಿ;500 ಗೌರವಧನ

15ರಿಂದ 45 ವರ್ಷದೊಳಗಿನವರಲ್ಲಿ ಹೆಚ್ಚಾಗಿ ಕ್ಷಯರೋಗ ಪತ್ತೆ ಆಗುತ್ತಿದೆ. ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದಡಿ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ಟಿಬಿ ಇರುವುದು ವ್ಯಕ್ತಿಗೆ ದೃಢಪಟ್ಟಲ್ಲಿ ನಿಕ್ಷಯ್ ಪೋಷಣಾ ಯೋಜನೆಯಡಿ ಪೌಷ್ಠಿಕಾಂಶ ಕೊರತೆ ನೀಗಿಸಲು 500 ರೂ. ಸಹಾಯಧನ ನೀಡಲಾಗುತ್ತಿದೆ. ಚಿಕಿತ್ಸೆ ಪ್ರಾರಂಭಿಸಿದ ಅವಧಿಯಿಂದ ಚಿಕಿತ್ಸೆ ಮುಗಿಯುವ ತನಕ ಡಿಬಿಟಿ ಮೂಲಕ ಬ್ಯಾಂಕ್ ಖಾತೆಗೆ ಹಣ ಜಮಾ ಆಗಲಿದೆ. ಗುಡ್ಡಗಾಡು ಪ್ರದೇಶಗಳಲ್ಲಿ ಕ್ಷಯರೋಗಿಗಳಿಗೆ 750 ರೂ. ಪಾವತಿಸಲಾಗುತ್ತದೆ. ಕ್ಷಯ ರೋಗಿಯನ್ನು ಗುರುತಿಸಿದವರಿಗೂ ಸರ್ಕಾರ 500 ರೂ. ಪ್ರೋತ್ಸಾಹ ಧನ ನೀಡುತ್ತಿದೆ. ಡಿಎಸ್​ಟಿಬಿ ಚಿಕಿತ್ಸೆ ಬಳಿಕ ಸಾವಿರ ರೂ. ಸಂದಾಯ ಆಗಲಿದೆ.