ನಿಮಿಷದಲ್ಲಿ 50 ಧನುರಾಸನ ಭಂಗಿ

< ಇನ್ನೊಂದು ವಿಶ್ವ ದಾಖಲೆಗೆ ತನುಶ್ರೀ ಪಿತ್ರೋಡಿ ಸಿದ್ಧತೆ>
ಉಡುಪಿ: ಯೋಗಾಸನದಲ್ಲಿ ಎರಡು ಬಾರಿ ವಿಶ್ವ ದಾಖಲೆ ಮಾಡಿರುವ 10ರ ಹರೆಯದ ತನುಶ್ರೀ ಪಿತ್ರೋಡಿ ಈಗ ಧನುರಾಸನದಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಿದ್ಧತೆ ನಡೆಸಿದ್ದಾರೆ.

ಫೆ.23ರಂದು ಸಂಜೆ 5 ಗಂಟೆಗೆ ನಗರದ ಸೇಂಟ್ ಸಿಸಿಲಿ ಸಮೂಹ ವಿದ್ಯಾಸಂಸ್ಥೆ ಕ್ರೀಡಾಂಗಣದಲ್ಲಿ ಯೋಗ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಕಾರ‌್ಯಕ್ರಮದ ಆಯೋಜಕ ಬಡಗಬೆಟ್ಟು ಕೋ-ಆ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈಗಾಗಲೇ ನಿರಾಲಂಭ ಪೂರ್ಣ ಚಕ್ರಾಸನವನ್ನು 1 ನಿಮಿಷದಲ್ಲಿ 19 ಬಾರಿ ಮಾಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಹಾಗೂ ನಿರಾಲಂಬಾಸನದಲ್ಲಿ ಹೃದಯ ಸ್ತಂಬಿತ ಭಂಗಿಯನ್ನು ನಿಮಿಷಕ್ಕೆ 42 ಬಾರಿ ಮಾಡುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ಮಾಡಿದ್ದಾಳೆ. ಈಗ ಮೂರನೇ ವಿಶ್ವದಾಖಲೆಗಾಗಿ ಈ ಪ್ರಯತ್ನ ನಡೆಸಲಾಗುತ್ತಿದೆ ಎಂದರು.

ಯೋಗ ಪಟು ತನುಶ್ರೀ ಪಿತ್ರೋಡಿ, ಯೋಗ ಗುರು ರಾಮಕೃಷ್ಣ ಕೊಡಂಚ, ತಂದೆ ಉದಯಕುಮಾರ್, ವೆಂಕಟರಮಣ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ಅಧ್ಯಕ್ಷ ಮಲ್ಲೇಶ ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.

ಧನುರಾಸನದಲ್ಲಿ ನಂಬರ್ ಆಫ್ ರೋಲ್ಸ್, ನಂಬರ್ ಆಫ್ ಡಿಸ್ಟೆನ್ಸ್, ಸ್ಪೀಡ್ ರೋಲ್ ಹೀಗೆ 3 ವಿಧಗಳಿವೆ. ನಂಬರ್ ಆಫ್ ರೋಲ್ಸ್‌ನಲ್ಲಿ ದಾಖಲೆ ಮಾಡಲು ಆಯ್ದುಕೊಳ್ಳಲಾಗಿದೆ. ತನುಶ್ರೀ ಒಂದು ನಿಮಿಷದಲ್ಲಿ 50 ಭಂಗಿಯನ್ನು ಪ್ರದರ್ಶಿಸಲಿದ್ದಾಳೆ.
– ಉದಯಕುಮಾರ್, ತನುಶ್ರೀ ತಂದೆ