ಬರೋಬ್ಬರಿ 200 ಫ್ಲಾಶ್ ಕಾರ್ಡ್ ಗುರುತಿಸುವ ತಾರಕರಾಮ್
ಮಾಸ್ತಿ: ನಾಲ್ಕು ತಿಂಗಳ ಪುಟಾಣಿ 200 ಫ್ಲಾಶ್ ಕಾರ್ಡ್ ಗುರುತಿಸುವ ಮೂಲಕ ನೊಬೆಲ್ ವರ್ಲ್ಡ್
ರೆಕಾರ್ಡ್ಸ್ ಪಡೆದು ವಿಶ್ವದಾಖಲೆ ನಿರ್ಮಿಸಿದೆ.
ಮಾಲೂರು ತಾಲೂಕು ಮಾಸ್ತಿ ಹೋಬಳಿಯ ಚಿಕ್ಕದಾನವನಹಳ್ಳಿಯ ಪ್ರೇಮಾ-ಮಂಜುನಾಥ್ ದಂಪತಿಯ 4 ತಿಂಗಳ ಎಂ.ತಾರಕರಾಮ್ ಪಾರಿತೋಷಕ ಪಡೆದ ಮಗು.
ಜನಿಸಿದ 2 ತಿಂಗಳ ಬಳಿಕ ತಾಯಿ ಪ್ರೇಮಾ ಮಗುವಿಗೆಫ್ಲಾಶ್ ಕಾರ್ಡ್ ತೋರಿಸಿ ಹೂವುಗಳು, ಹಣ್ಣುಗಳು, ತರಕಾರಿಗಳು, ಪ್ರಾಣಿ-ಪಕ್ಷಿ ಸೇರಿ ವಿವಿಧ ರೀತಿಯ ವಸ್ತುಗಳ ಫೋಟೋಗಳ ಮೂಲಕ ಗುರುತಿಸುವ ಅಭ್ಯಾಸ ಮಾಡಿಸಿದ್ದರು. ಮಗುವಿನ ಸಾಮರ್ಥ್ಯ ತಿಳಿದ ದಂಪತಿ ಸೆ.3ರಂದು ಆನ್‌ಲೈನ್‌ಮೂಲಕ ನೊಬೆಲ್ ವರ್ಲ್ಡ್ ರೆಕಾರ್ಡ್ಸ್‌ಗೆ
ವಿಡಿಯೋ ಅಪ್‌ಲೋಡ್ ಮಾಡಿದ್ದಾರೆ. ಸೆ.9ರಂದು ಮಗುವಿನ ಎಲ್ಲ ಮಾಹಿತಿ ಪಡೆದ ನೊಬೆಲ್ ವರ್ಲ್ಡ್ ಸಂಸ್ಥೆಯು ವಿಡಿಯೋವನ್ನು ವೀಕ್ಷಿಸಿ, ಮಗುವಿನ ವಿಶೇಷ ಪ್ರತಿಭೆ ಪರಿಶೀಲಿಸಿದ ನಂತರ ಪ್ರತಿಭೆ ಗುರುತಿಸುವ ಮೂಲಕ ಆಯ್ಕೆ ಮಾಡಿ ನೊಬೆಲ್ ವರ್ಲ್ಡ್ ರೆಕಾರ್ಡ್ಸ್ ಪ್ರಮಾಣ ಪತ್ರ ಹಾಗೂ ಪದಕ ನೀಡಿದೆ.
ಹೇಗಿತ್ತು ತರಬೇತಿ: ನಾಲ್ಕು ತಿಂಗಳ ಮಗು ತಾರಕರಾಮ್ ವರ್ಲ್ಡ್ ರೆಕಾರ್ಡ್ಸ್ ಮಾಡುವಲ್ಲಿ ತಾಯಿ ಪ್ರೇಮಾ ನೀಡಿದ ತರಬೇತಿ ಮತ್ತು ತಂದೆ ಮಂಜುನಾಥ ಅವರ ಸಹಕಾರವೇ ಕಾರಣ. ಮಗನಿಗೆ 2 ತಿಂಗಳಿರುವಾಗಲೇ ಫ್ಲಾಶ್ ಕಾರ್ಡ್ ತೋರಿಸಲು ಆರಂಭಿಸಿದ್ದಾರೆ. ಮಗು ಆಸಕ್ತಿಯಿಂದ ಫ್ಲಾಶ್ ಕಾರ್ಡ್‌ಗಳನ್ನು ನೋಡುತ್ತಿರುವ ಬಗ್ಗೆ ಗಮನಹರಿಸಿದ ತಾಯಿ, ಮತ್ತಷ್ಟು ಕಾರ್ಡ್‌ಗಳನ್ನು ತೋರಿಸುತ್ತಾ 2 ಫ್ಲಾಶ್ ಕಾರ್ಡ್ ಕೈಯಲ್ಲಿ ಇಟ್ಟುಕೊಂಡು ಒಂದನ್ನು ಗುರುತಿಸುವಂತೆ ಹೇಳಿದರೆ ಅದಕ್ಕೆ ಸರಿಯಾದ ಕಾರ್ಡ್ ಗುರುತಿಸುವುದನ್ನು ತಾಯಿ ಗಮನಿಸಿದ್ದಾರೆ. ದಿನದಿಂದ ದಿನಕ್ಕೆ ಹೀಗೇ ತರಬೇತಿ ನೀಡಿ ಮಗು 4 ತಿಂಗಳಾಗುವಷ್ಟೊತ್ತಿಗೆ 200 ಕಾರ್ಡ್‌ಗಳನ್ನು ಗುರುತಿಸುವ ಮಟ್ಟಕ್ಕೆ ತಯಾರಿ ಮಾಡಿ, ನಂತರ ನೋಬೆಲ್ ವರ್ಲ್ಡ್ ರೆಕಾರ್ಡ್ಸ್‌ಗೆ ಅಪ್ಲೈ ಮಾಡಿ, ಪ್ರಶಸ್ತಿ ಪಡೆದಿದ್ದಾರೆ.
ಮಗನ ಸಾಮರ್ಥ್ಯ ತಿಳಿದು ತರಬೇತಿ ನೀಡಲು ಪ್ರಾರಂಭಿಸಿದೆ. ಸುಮಾರು 15 ದಿನಗಳು ಕಾರ್ಡ್‌ಗಳನ್ನು ತೋರಿಸುತ್ತಿರಲಿಲ್ಲ. ನಂತರ ತುಂಬಾ ಆಸಕ್ತಿಯಿಂದ ಫ್ಲಾಶ್ ಕಾರ್ಡ್‌ಗಳನ್ನು ನೋಡುತ್ತಿರುವ ಬಗ್ಗೆ ಗಮನಿಸಿ, ಕಾರ್ಡ್‌ಗಳನ್ನು ತೋರಿಸುತ್ತಾ ಮುಂದುವರಿಸಿದೆ. ನಂತರ ಪರೀಕ್ಷೆ ಮಾಡಿದಾಗ ಸರಿಯಾಗಿ ಕಾರ್ಡ್ ಗುರುತಿಸುತ್ತಿದ್ದ. ವಿಶ್ವದಾಖಲೆ ನಿರ್ಮಿಸಿದ್ದು ಖುಷಿಯಾಗುತ್ತಿದೆ.