ದುಬೈ/ಅಕಪುಲ್ಕೊ: ವಿಶ್ವ ನಂ. 1 ಆಟಗಾರ ನೊವಾಕ್ ಜೋಕೊವಿಕ್ ಮತ್ತು ವಿಶ್ವ ನಂ. 2 ಆಟಗಾರ ರಾಫೆಲ್ ನಡಾಲ್ ಕ್ರಮವಾಗಿ ದುಬೈ ಟೆನಿಸ್ ಚಾಂಪಿಯನ್ಷಿಪ್ ಮತ್ತು ಎಟಿಪಿ ಮೆಕ್ಸಿಕೋ ಓಪನ್ನಲ್ಲಿ ಪ್ರಶಸ್ತಿ ಗೆಲುವಿನ ಸಾಧನೆ ಮಾಡಿದ್ದಾರೆ. ಜೋಕೊವಿಕ್ಗೆ ಇದು ವೃತ್ತಿಜೀವನದ 79ನೇ ಪ್ರಶಸ್ತಿ ಗೆಲುವಾಗಿದ್ದರೆ, ನಡಾಲ್ಗೆ 85ನೇ ಪ್ರಶಸ್ತಿಯಾಗಿದೆ.
ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಜೋಕೊವಿಕ್ 6-3, 6-4 ನೇರಸೆಟ್ಗಳಿಂದ ಗ್ರೀಕ್ ಆಟಗಾರ ಸ್ಟೆಫಾನೋಸ್ ಸಿಸಿಪಾಸ್ ವಿರುದ್ಧ ಗೆಲುವು ದಾಖಲಿಸಿದರು. ದುಬೈನಲ್ಲಿ ಅವರಿಗೆ ಇದು 5ನೇ ಪ್ರಶಸ್ತಿ ಗೆಲುವಾಗಿದೆ. ಹಾಲಿ ವರ್ಷ ಸತತ 18 ಗೆಲುವುಗಳೊಂದಿಗೆ 32 ವರ್ಷದ ಜೋಕೊವಿಕ್ ಅಜೇಯ ಓಟ ಮುಂದುವರಿಸಿದ್ದಾರೆ. 2020ರಲ್ಲಿ ಅವರಿಗೆ ಇದು 3ನೇ ಪ್ರಶಸ್ತಿ ಗೆಲುವಾಗಿದೆ. ಇದಕ್ಕೆ ಮುನ್ನ ಎಟಿಪಿ ಕಪ್ನಲ್ಲಿ ಸೆರ್ಬಿಯಾ ಗೆಲುವಿಗೆ ನೆರವಾಗಿದ್ದ ಅವರು, ಆಸ್ಟ್ರೇಲಿಯಾ ಓಪನ್ನಲ್ಲೂ ಪ್ರಶಸ್ತಿ ಜಯಿಸಿದ್ದರು. ಒಟ್ಟಾರೆಯಾಗಿ ಇದು ಅವರಿಗೆ ಸತತ 21ನೇ ಗೆಲುವಾಗಿದ್ದು, ವೃತ್ತಿಜೀವನದಲ್ಲಿ 7ನೇ ಬಾರಿ ಸತತ 20ಕ್ಕಿಂತ ಹೆಚ್ಚು ಪಂದ್ಯಗಳನ್ನು ಗೆದ್ದ ಸಾಧನೆ ಮಾಡಿದ್ದಾರೆ. ಜೋಕೊವಿಕ್ ಸೋಮವಾರದಿಂದ ವಿಶ್ವ ನಂ. 1 ಪಟ್ಟದಲ್ಲಿ 280ನೇ ವಾರಕ್ಕೆ ಕಾಲಿಡಲಿದ್ದಾರೆ.
ನಡಾಲ್ಗೆ ವರ್ಷದ ಮೊದಲ ಪ್ರಶಸ್ತಿ: ಸ್ಪೇನ್ ತಾರೆ ನಡಾಲ್ 2020ರ ಮೊದಲ ಪ್ರಶಸ್ತಿ ಗೆಲುವು ಕಂಡರು. ಫೈನಲ್ ಪಂದ್ಯದಲ್ಲಿ ಅವರು ಅಮೆರಿಕದ ಟೇಲರ್ ಫ್ರಿಟ್ಜ್ ವಿರುದ್ಧ 6-3, 6-2 ನೇರಸೆಟ್ಗಳಿಂದ ಸುಲಭ ಗೆಲುವು ಸಾಧಿಸಿದರು. 33 ವರ್ಷದ ನಡಾಲ್ಗೆ ಆಸ್ಟ್ರೇಲಿಯನ್ ಓಪನ್ ಕ್ವಾರ್ಟರ್ಫೈನಲ್ ನಿರ್ಗಮನದ ಬಳಿಕ ಇದು ಮೊದಲ ಟೂರ್ನಿಯಾಗಿತ್ತು. ದುಬೈನಲ್ಲಿ ಜೋಕೋ ಫೈನಲ್ಗೇರಲು ವಿಫಲರಾಗಿದ್ದರೆ, ನಡಾಲ್ಗೆ ಈ ಪ್ರಶಸ್ತಿ ಜಯದೊಂದಿಗೆ ವಿಶ್ವ ನಂ. 1 ಪಟ್ಟಕ್ಕೆ ಮರಳುವ ಅವಕಾಶವಿತ್ತು. ಸತತ 17ನೇ ವರ್ಷ ಕನಿಷ್ಠ ಒಂದಾದರೂ ಪ್ರಶಸ್ತಿ ಗೆದ್ದ ಸಾಧನೆ ನಡಾಲ್ ಅವರದಾಗಿದೆ.