More

    ಇಂದು ವಿಶ್ವ ಕ್ಷೀರ ದಿನ; ಹೈನು ಬದುಕು ಹಸನು

    ಹರೀಶ್ ಬೇಲೂರು
    ಬೆಂಗಳೂರು: ಹೈನುಗಾರಿಕೆಯಿಂದ ದೇಶದ ಕೋಟ್ಯಂತರ ಕುಟುಂಬಗಳು ತುಸು ಆರ್ಥಿಕವಾಗಿ ಸದೃಢವಾಗುತ್ತಿವೆ. ಕ್ಷೀರ ಕ್ರಾಂತಿಯಿಂದ ಗ್ರಾಮೀಣ ಪ್ರದೇಶದಲ್ಲಿ ಬಡತನದಿಂದ ಬಳಲುತ್ತಿದ್ದ ಜನತೆ ತುಸುವಾದರೂ ಹಣ ಮುಖ ನೋಡಲು ಸಾಧ್ಯವಾಗಿದೆ. ಮಹಿಳೆಯರು ಸ್ವಾವಲಂಬಿಗಳಾಗಲು ಹಾಗೂ ಮಕ್ಕಳು ಪೌಷ್ಟಿಕ ಆಹಾರ ಪಡೆಯಲು ಅನುಕೂಲವಾಗಿದೆ. ವಿಶ್ವ ಸಂಸ್ಥೆ 2001ರಲ್ಲಿ ಅಧಿಕೃತವಾಗಿ ಜೂನ್ 1ರಂದು ವಿಶ್ವ ಹಾಲು ದಿನವನ್ನಾಗಿ ಘೋಷಿಸಿತು. ಹಾಲು ಮತ್ತು ಹಾಲಿನ ಉತ್ಪನ್ನಗಳ ಮಹತ್ವದ ಬಗ್ಗೆ ಜನರಿಗೆ ಅರಿವು, ಡೇರಿ ಉದ್ಯಮ ಎದುರಿಸುತ್ತಿರುವ ಸವಾಲುಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವದಾದ್ಯಂತ ಪ್ರತಿ ವರ್ಷ ಈ ದಿನವನ್ನು ಆಚರಿಸಲಾಗುತ್ತದೆ.

    ದೇಶದ ಮಾರುಕಟ್ಟೆಯಲ್ಲಿ ಅಮೂಲ್ ನಂಬರ್ ಒನ್ ಸ್ಥಾನದಲ್ಲಿದೆ. ದೇಶಾದ್ಯಂತ ಅಮೂಲ್ ಮಾದರಿಯ 27 ರಾಜ್ಯ ಹೈನು ಮಹಾಮಂಡಳಿ, 218 ಜಿಲ್ಲಾ ಹಾಲು ಜಿಲ್ಲಾ ಉತ್ಪಾದಕರ ಒಕ್ಕೂಟಗಳು, 1.77 ಲಕ್ಷ ಗ್ರಾಮೀಣ ಹಾಲು ಉತ್ಪಾದಕ ಸಂಘಗಳು ಮತ್ತು 1.70 ಕೋಟಿ ಹಾಲು ಉತ್ಪಾದಕರು ಕ್ಷೀರಕ್ರಾಂತಿಯ ಹರಿಕಾರರಾಗಿದ್ದಾರೆ. ದೇಶ ಇಂದು ಜಗತ್ತಿನಲ್ಲಿ ಅತಿ ಹೆಚ್ಚು ಹಾಲು ಉತ್ಪಾದಿಸುವ ರಾಷ್ಟ್ರವಾಗಿ ಹೊರಹೊಮ್ಮಿದೆ. ವಿಶ್ವ ಕ್ಷೀರ ದಿನದ ಅಧ್ವರ್ಯುವಾಗಿದೆ.

    ಕೆಎಂಎಫ್ ಸಾಹಸಗಾಥೆ

    ಗುಜರಾತ್ ಮೂಲದ ಅಮೂಲ್ ನಂತರ ಕೆಎಂಎಫ್ ಮಾರುಕಟ್ಟೆಯಲ್ಲಿ 2ನೇ ಸ್ಥಾನದಲ್ಲಿದೆ. ಕೆಎಂಎಫ್ ವ್ಯಾಪ್ತಿಯಲ್ಲಿ 16 ಹಾಲು ಒಕ್ಕೂಟಗಳು ಬರುತ್ತವೆ. ರಾಜ್ಯದಲ್ಲಿ ಅಂದಾಜು 10 ಲಕ್ಷ ರೈತರಿಂದ 14,700 ಹಾಲು ಉತ್ಪಾದಕರ ಸಹಕಾರ ಸಂಘಗಳು ಪ್ರತಿ ನಿತ್ಯ ಹಾಲು ಶೇಖರಣೆ ಮಾಡುತ್ತಿವೆ. 25 ಲಕ್ಷ ಹಾಲು ಉತ್ಪಾದಕರ ಸದಸ್ಯರು ಇದ್ದಾರೆ. ಪ್ರತಿ ವರ್ಷ 16 ಸಾವಿರ ಕೋಟಿ ರೂ. ವಹಿವಾಟು ನಡೆಯುತ್ತಿದೆ. ಹೈನುಗಾರಿಕೆಗೆ ಪ್ರೋತ್ಸಾಹ ನೀಡುತ್ತಿರುವ ಕೆಎಂಎಫ್,

    ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಸಿ ರೈತರ ಆರ್ಥಿಕ ಮತ್ತು ಸಾಮಾಜಿಕ ಭದ್ರತೆಗೆ ಸಹಕಾರಿಯಾಗಿದೆ. ಅಲ್ಲದೆ, ಕರ್ನಾಟಕ ರಾಜ್ಯದ ಹೈನುಗಾರರಿಂದ ಯಶಸ್ವಿಯಾಗಿ ನಿರ್ವಹಣೆಯಾಗುತ್ತಿರುವ ಕೆಎಂಎಫ್, ದಕ್ಷಿಣ ಭಾರತದಲ್ಲಿನ ಸಹಕಾರಿ ಹಾಲು ಮಹಾಮಂಡಳಿಗಳಲ್ಲಿ ಅಗ್ರಸ್ಥಾನದಲ್ಲಿದೆ. ಹೈನು ಅಭಿವೃದ್ಧಿ ಮುಖೇನ ಗ್ರಾಮೀಣ ಪ್ರದೇಶಗಳ ಶ್ರೇಯೋಭಿವೃದ್ಧಿಯೇ ಮಹಾಮಂಡಳಿ ಧ್ಯೇಯೋದ್ದೇಶ. ಗುಣಮಟ್ಟದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಗ್ರಾಹಕರಿಗೆ ಒದಗಿಸಲು ಗೋವಿನಿಂದ ಗ್ರಾಹಕರವರೆಗೆ ಗುಣಮಟ್ಟದ ಶ್ರೇಷ್ಠತೆ ಎಂಬ ಧ್ಯೇಯವಾಕ್ಯ ಹೊಂದಿ ನಿರಂತರವಾಗಿ ಪರಿಶ್ರಮಿಸುತ್ತದೆ. ಸರಿಸಾಟಿಯಿಲ್ಲದ ಉತ್ತಮ ಗುಣಮಟ್ಟದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ನಂದಿನಿ ಬ್ರಾಂಡ್ ಹೆಸರಿನಲ್ಲಿ ಸ್ಪರ್ಧಾತ್ಮಕ ಬೆಲೆಗಳಲ್ಲಿ ಗ್ರಾಹಕರಿಗೆ ಒದಗಿಸಿ ’ಸಮೃದ್ಧ ಆರೋಗ್ಯವನ್ನು ಹರಡುತ್ತಿದೆ’. ಪ್ರಸ್ತುತದಲ್ಲಿ ಕೆಎಂಎಫ್ ದೇಶದಲ್ಲಿಯೇ ಸಹಕಾರಿ ಹೈನು ಉದ್ಯಮದಲ್ಲಿ ಎರಡನೇ ಸ್ಥಾನದಲ್ಲಿದ್ದು, ದಕ್ಷಿಣ ಭಾರತದಲ್ಲಿ ಹಾಲು ಶೇಖರಣೆ ಹಾಗೂ ಮಾರಾಟದಲ್ಲಿ ಮೊದಲ ಸ್ಥಾನದಲ್ಲಿದೆ.

    ಕೆಎಂಎಫ್ ಸಾಗಿಬಂದ ಹಾದಿ

    ಕರ್ನಾಟಕ ಡೇರಿ ಅಭಿವೃದ್ಧಿ ನಿಗಮ (ಕೆಡಿಡಿಸಿ) 1974ರಲ್ಲಿ ಸ್ಥಾಪನೆಯಾಗಿತ್ತು. ವಿಶ್ವ ಬ್ಯಾಂಕ್ ನೆರವಿನಿಂದ ಡೇರಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ಹಂತ ಹಂತವಾಗಿ ಬೆಳೆಯಿತು. ನಂತರ ಅಮೂಲ್ ಮಾದರಿ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಕರ್ನಾಟಕದಲ್ಲಿ ಆರಂಭಿಸಲಾಯಿತು. 1984 ಮತ್ತು 1987ರಲ್ಲಿ ಡೇರಿ ಅಭಿವೃದ್ಧಿ ಚಟುವಟಿಕೆಗಳನ್ನು ರಾಜ್ಯಾದ್ಯಂತ ಹಮ್ಮಿಕೊಂಡು ಪ್ರಸ್ತುತ 16 ಹಾಲು ಒಕ್ಕೂಟಗಳನ್ನು ಸ್ಥಾಪಿಸುವ ಮೂಲಕ ರಾಜ್ಯದ ಗ್ರಾಮೀಣ ಆರ್ಥಿಕ ಅಭಿವೃದ್ಧಿಯಲ್ಲಿ ತೊಡಗಿ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾಗಿ ಬೆಳೆಯಿತು. ಸಹಕಾರಿ ಹೈನು ಉದ್ಯಮವು ಮೂರು ಹಂತಗಳಲ್ಲಿ ವಿನ್ಯಾಸಗೊಂಡಿದೆ. ಪ್ರಾಥಮಿಕ ಹಂತದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳು, ದ್ವಿತೀಯ ಹಂತದಲ್ಲಿ ಹಾಲು ಶೇಖರಣೆ, ಸಂಸ್ಕರಣೆ, ಸ್ಯಾಚೆಟ್, ಮಾರಾಟ ಹಾಗೂ ತೃತೀಯ ಹಂತದಲ್ಲಿ ಜಿಲ್ಲಾಮಟ್ಟದ ಹಾಲು ಒಕ್ಕೂಟಗಳಿವೆ. ಈಗ ರಾಜ್ಯಮಟ್ಟದಲ್ಲಿ ಕರ್ನಾಟಕ ಹಾಲು ಮಹಾಮಂಡಳಿಯು ಕಾರ್ಯನಿರ್ವಹಿಸುತ್ತಿದೆ. ಅಲ್ಲದೆ, ಹೈನುಗಾರಿಕೆಯನ್ನು ಪ್ರಮುಖ ಉದ್ಯಮವಾಗಿ ಪರಿವರ್ತನೆ ಮಾಡಿಕೊಂಡಿರುವ ಕೆಎಂಎಫ್ ದೇಶದಲ್ಲಿಯೇ ಅತ್ಯುತ್ತಮ ಸಂಸ್ಥೆಯಾಗಿ ಬೆಳೆದುನಿಂತಿದೆ.

    ಭಾರತದ ಕ್ಷೀರಬಲ

    • 15-ರಾಜ್ಯಮಟ್ಟದ ಸಹಕಾರಿ ಹಾಲು ಉತ್ಪಾದನೆ ಸಂಘಗಳು
    • 189- ಜಿಲ್ಲಾ ಹಾಲು ಉತ್ಪಾದಕರ ಸಂಘಗಳು
    • 1.56 ಲಕ್ಷ- ಗ್ರಾಮೀಣ ಸಹಕಾರಿ ಸಂಘಗಳು
    • 1.52 ಕೋಟಿ- ಹಾಲು ಉತ್ಪಾದಕರು
    • 45 ಲಕ್ಷ- ಮಹಿಳಾ ಸದಸ್ಯರು
    • 17.8 ಕೋಟಿ ಟನ್- ವಾರ್ಷಿಕ ಹಾಲು ಉತ್ಪಾದನೆ

    ರಾಜ್ಯದ ಕ್ಷೀರಬಲ

    • 16- ಹಾಲು ಒಕ್ಕೂಟಗಳು
    • 17,014- ಹಾಲು ಸಹಕಾರ ಸಂಘಗಳು
    • 25.33 ಲಕ್ಷ- ಹಾಲು ಉತ್ಪಾದಕರು
    • 74.66 ಲಕ್ಷ ಕಿಲೋ- ಪ್ರತಿದಿನದ ಹಾಲು ಉತ್ಪಾದನೆ
    • 37.46 ಲಕ್ಷ ಲೀಟರ್- ಪ್ರತಿದಿನದ ಹಾಲು ಮಾರಾಟ
    • 20.04 ಕೋಟಿ ರೂ. ಹೈನು ಗಾರರಿಗೆ ಪ್ರತಿದಿನದ ಪಾವತಿ

    ದೇಶದ 2ನೇ ದೊಡ್ಡ ಹಾಲು ಉದ್ದಿಮೆ ಸಂಸ್ಥೆಯಾಗಿ ಕೆಎಂಎಫ್ ಬೆಳೆದಿದೆ. ರೈತರ, ಗ್ರಾಹಕರ ಹಾಗೂ ನೌಕರರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಕೆಲಸ ಮಾಡಲಾಗುತ್ತಿದೆ. ಗ್ರಾಹಕರಿಗೆ ಗುಣಮಟ್ಟದ ಹಾಲು ಒದಗಿಸಲಾಗುತ್ತಿದೆ. 2019ರ ಆಗಸ್ಟ್​ನಲ್ಲಿ 16,500 ಕೋಟಿ ರೂ. ಇದ್ದ ವಹಿವಾಟು ಈಗ 20 ಸಾವಿರ ಕೋಟಿ ರೂ.ಗೆ ಏರಿಕೆಯಾಗಿದೆ. ರೈತರು ನೀಡುವ ಹಾಲಿಗೆ ಇನ್ನಷ್ಟು ಬೆಲೆ ದೊರೆತು ಅವರ ಬದುಕು ಹಸನಾಗಿಸಲು ನಾವು ಕಾರ್ಯಪ್ರವೃತ್ತರಾಗಿದ್ದೇವೆ.

    | ಬಾಲಚಂದ್ರ ಜಾರಕಿಹೊಳಿ ಕೆಎಂಎಫ್ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts