ಅಸ್ತಿತ್ವದ ಅರಿವು ಇಲ್ಲದಿದ್ದರೆ ಅಳಿವು

ಪರಿಸರ ಮತ್ತು ಮಾನವನ ನಡುವಿನ ಸಂಬಂಧ ಅನನ್ಯವಾದುದು. ಪರಿಸರವಿಲ್ಲದೆ ಮಾನವನ ಉಳಿವು ಸಾಧ್ಯವೇ ಇಲ್ಲ. ಈ ಭವ್ಯ ಪರಿಸರದ ಭಾಗಗಳೆಲ್ಲ ಸೇರಿ ಹವಾಮಾನ ಸೃಷ್ಟಿಯಾಗಿದೆ. ಆದರೆ, ಇದನ್ನು ಹಾಳುಗೆಡವುತ್ತಿರುವುದರಲ್ಲಿ ಮಾನವನ ಪಾತ್ರ ಹಿರಿದು. ಕಾಡು ನಾಶ ಮಾಡುತ್ತ, ಪರಿಸರಕ್ಕೆ ಭಾರಿ ಪ್ರಮಾಣದಲ್ಲಿ ಕಾರ್ಬನ್ ಡೈ ಆಕ್ಸೈಡ್ ಬಿಡುಗಡೆ ಮಾಡುತ್ತಿರುವ ಮನುಷ್ಯ ಹವಾಮಾನ ಬದಲಾವಣೆಗೆ ನೀಡಿರುವ ಕೊಡುಗೆ ಒಂದೆರಡಲ್ಲ.

ಜಾಗತಿಕ ತಾಪಮಾನ ಏರಿಕೆಯಿಂದ ಧ್ರುವಗಳಲ್ಲಿರುವ ಮಂಜು ಕರಗಿ ಸಮುದ್ರದ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಇದರ ಪರಿಣಾಮವೆಂಬಂತೆ, ಅದಾಗಲೇ ಕೆಲ ಸಣ್ಣಪುಟ್ಟ ದ್ವೀಪಗಳು ವರ್ಷದಿಂದ ವರ್ಷಕ್ಕೆ ಸಾಗರದ ನೀರಿನಿಂದ ಮುಳುಗುತ್ತಿವೆ, ಹವಾಮಾನದ ವೈಪರೀತ್ಯದಿಂದ ಇಂಥ ಘಟನೆಗಳು ಸಂಭವಿಸುತ್ತಿವೆ ಎನ್ನುವ ಸುದ್ದಿಯನ್ನು ಕೇಳುತ್ತಲೇ ಇರುತ್ತೇವೆ. ಈ ಬಾರಿಯ ಮಾರ್ಚ್​ನಲ್ಲೇ ತಾಪಮಾನದಲ್ಲಿ ಆಗಿರುವ ಭಾರಿ ಏರಿಕೆ, ಕಳೆದ ವರ್ಷ ಎಗ್ಗಿಲ್ಲದೆ ಸುರಿದು ಮಡಿಕೇರಿ ಭಾಗದಲ್ಲಿ ಭಾರಿ ಸಂಕಷ್ಟ ತಂದೊಡ್ಡಿದ್ದ ಭಾರಿ ಮಳೆ ಇವೆಲ್ಲವೂ ಹವಾಮಾನದಲ್ಲಾಗುತ್ತಿರುವ ಬದಲಾವಣೆಗಳ ಕೊಡುಗೆಗಳೇ.

ಪರಿಸರಕ್ಕೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಕಾರ್ಬನ್ ಡೈ ಆಕ್ಸೈಡ್ ಬಿಡುಗಡೆ ಮಾಡುತ್ತಿರುವ ರಾಷ್ಟ್ರಗಳಲ್ಲಿ ಭಾರತವೂ ಒಂದು. ಆದರೆ ಇದನ್ನು ತಗ್ಗಿಸಲು ಸೂಕ್ತಕ್ರಮಗಳನ್ನು ಕೈಗೊಳ್ಳಬೇಕೆಂದು ಕೆಲ ಯೋಜನೆಗಳನ್ನು ಹಾಕಿಕೊಂಡಿದೆಯದರೂ ಅದನ್ನು ಕಾರ್ಯರೂಪಕ್ಕೆ ತರುವುದು ಸುಲಭವಾಗಿಲ್ಲ. ಹವಾಮಾನದಲ್ಲಾಗುತ್ತಿರುವ ಬದಲಾವಣೆಗಳು ಮತ್ತು ನಾವು ತೋರುತ್ತಿರುವ ನಿರ್ಲಕ್ಷ್ಯ ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಕಷ್ಟ ತಂದೊಡ್ಡಲಿದೆ. ಈ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನಗಳು ಆಗುತ್ತಿದೆಯಾದರೂ ಹೆಚ್ಚು ಜನ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ.

ಈ ಬಗ್ಗೆ ಎಲ್ಲರಲ್ಲೂ ಅರಿವು ಮೂಡಿಸುವುದು ಅಗತ್ಯ. ಇಲ್ಲವಾದಲ್ಲಿ ಇದು ನಮ್ಮ ಅಳಿವು ಉಳಿವಿನ ಪ್ರಶ್ನೆಯಾಗಿಬಿಡಬಹುದು. ಹೀಗಾಗಿಯೇ ಪರಿಸರ, ತಾಪಮಾನ, ಹವಾಮಾನ ಮುಂತಾದವುಗಳ ಬಗ್ಗೆ ಅರಿವು ಮೂಡಿಸಲು ಹಲವು ಅವಕಾಶಗಳನ್ನು ನಾವೇ ರೂಪಿಸಿಕೊಂಡಿದ್ದು, ಪ್ರತಿವರ್ಷ ಮಾರ್ಚ್ 23ರಂದು ವಿಶ್ವ ಹವಾಮಾನ ದಿನವನ್ನು ಆಚರಿಸುತ್ತೇವೆ.

ವಿಶ್ವ ಹವಾಮಾನ ದಿನದ ಹುಟ್ಟು

1873ರಲ್ಲಿ ಆಸ್ಟ್ರಿಯಾದ ವಿಯೆನ್ನಾದಲ್ಲಿ ನಡೆದ ಮೊದಲ ಅಂತಾರಾಷ್ಟ್ರೀಯ ಹವಾಮಾನ ಸಮಾವೇಶದಲ್ಲಿ ಹವಾಮಾನಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಯೊಂದರ ಅಗತ್ಯವಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿತ್ತು. ಇದರಂತೆ ಅಂತಾರಾಷ್ಟ್ರೀಯ ಹವಾಮಾನ ಸಂಸ್ಥೆ ಆರಂಭವಾಯಿತು. ಇದರ ಮುಖ್ಯ ಉದ್ದೇಶ ಹವಾಮಾನ ಕೇಂದ್ರಗಳ ಜಾಲವನ್ನು ರೂಪಿಸುವುದಾಗಿತ್ತು. ಇದು ಟೆಲಿಗ್ರಾಫ್​ನೊಂದಿಗೆ ಲಿಂಕ್ ಹೊಂದಿತ್ತು. ಇದರಿಂದ ಹವಾಮಾನ ಮುನ್ಸೂಚನೆಯಲ್ಲಿ ಅಭಿವೃದ್ಧಿ ಕಂಡುಬಂದಿತು. ಇದರಿಂದ ಸುರಕ್ಷಿತ ಮತ್ತು ಗುಣಮಟ್ಟದ ಸಮುದ್ರಯಾನ, ಹಡಗು ಸೇವೆಗಳನ್ನು ನೀಡುವುದು ಎಲ್ಲ ದೇಶಗಳಿಗೆ ಸಾಧ್ಯವಾಯಿತು. 1950ರ ಮಾರ್ಚ್ 23ರಂದು ಅಂತಾರಾಷ್ಟ್ರೀಯ ಹವಾಮಾನ ಸಂಸ್ಥೆ ವಿಶ್ವ ಹವಾಮಾನ ಸಂಸ್ಥೆಯಾಗಿ ಬದಲಾಯಿತು. ಅಲ್ಲದೆ ಇದು 1951ರಲ್ಲಿ ಹವಾಮಾನ, ಆಪರೇಷನಲ್ ಹೈಡ್ರೋಲಜಿ, ಜಿಯೋಫಿಸಿಕಲ್ ಸೈನ್ಸಸ್​ಗೆ ಸಂಬಂಧಿಸಿದ ವಿಶ್ವಸಂಸ್ಥೆಯ ಅಂಗಸಂಸ್ಥೆಯಾಯಿತು. ಈಗ ಜನತೆಯ ಸುರಕ್ಷತೆ ಮತ್ತು ಸೌಕರ್ಯ ಸುಧಾರಣೆಯಲ್ಲಿ ವಿಶ್ವ ಹವಾಮಾನ ಶಾಸ್ತ್ರ ಸಂಸ್ಥೆ ಪ್ರಮುಖ ಪಾತ್ರ ವಹಿಸುತ್ತಿದೆ. ಆಹಾರ ಭದ್ರತೆ, ಜಲಸಂಪನ್ಮೂಲ ಮತ್ತು ಸಾರಿಗೆ ವ್ಯವಸ್ಥೆಯ ನಿರ್ವಹಣೆಯಲ್ಲಿ ಇದರ ಪಾತ್ರ ಮಹತ್ವದ್ದು. ಹೀಗಾಗಿಯೇ ಈ ಸಂಸ್ಥೆ ಹುಟ್ಟಿಕೊಂಡ ದಿನವನ್ನು 1961ರಿಂದ ವಿಶ್ವ ಹವಾಮಾನ ದಿನವೆಂದು ಆಚರಿಸಲಾಗುತ್ತಿದೆ.

ಯಾವ್ಯಾವ ಕಾರ್ಯಕ್ರಮ?

ಹವಾಮಾನ ದಿನವನ್ನು ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ. ಕೆಲವು ರಾಷ್ಟ್ರಗಳಲ್ಲಿ ವಿಚಾರ ಸಂಕಿರಣಗಳನ್ನು ಆಯೋಜಿಸಿದರೆ, ಕೆಲವು ರಾಷ್ಟ್ರಗಳು ವಸ್ತುಪ್ರದರ್ಶನಗಳನ್ನು ಆಯೋಜಿಸುತ್ತವೆ, ಅಂಚೆ ಸ್ಟಾಂಪ್ ಬಿಡುಗಡೆ ಮಾಡುತ್ತವೆ. ಸಾಮಾನ್ಯವಾಗಿ ಹವಾಮಾನ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಶಸ್ತಿಗಳನ್ನು ಇಂದು ಘೋಷಿಸಲಾಗುತ್ತದೆ. ಕೆಲ ಪ್ರಶಸ್ತಿಗಳ ಪ್ರದಾನ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಗುತ್ತದೆ. ಅಂತಾರಾಷ್ಟ್ರೀಯ ಹವಾಮಾನ ಸಂಸ್ಥೆ ಪ್ರಶಸ್ತಿ, ಪ್ರೊಫೆಸರ್ ಡಾ. ವಿಲ್ಹೊ ವೈಸಾಲಾ ಪ್ರಶಸ್ತಿ, ನಾರ್ಬರ್ಟ್ ಗರ್ಬೀಯರ್ ಮುಮ್ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಇಂದು ಪ್ರದಾನ ಮಾಡಲಾಗುತ್ತದೆ.

ಸೂರ್ಯನ ಆಯ್ಕೆ ಏಕೆ?

ಈ ಬಾರಿಯ ಹವಾಮಾನ ದಿನದ ಥೀಮ್ ಅನ್ನು ‘ನವೀಕರಿಸಬಹುದಾದ ಶಕ್ತಿಯ ಮೂಲಗಳು’ ಎನ್ನುವ ತತ್ತ ್ವ ಆಧರಿಸಿ ಆಯ್ಕೆ ಮಾಡಿಕೊಳ್ಳಲಾಗಿದೆ. ಸೌರಶಕ್ತಿ ಎಂದರೆ ಎಂದೂ ಮುಗಿಯಲಾರದ ಸಂಪತ್ತು. ಆದರೆ ಇದನ್ನು ಶಕ್ತವಾಗಿ ಬಳಸಿಕೊಳ್ಳುವ ಪರಿಯನ್ನು ನಾವಿನ್ನೂ ಅರಿತಿಲ್ಲ. ಇದರ ಬಗ್ಗೆ ಅರಿವು ಮೂಡಿಸಲೆಂದೇ ಈ ಬಾರಿ ಸೂರ್ಯನನ್ನೇ ವಿಷಯವನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ನಾವು ಸೂರ್ಯನಿಂದ ನೇರವಾಗಿ ಶಕ್ತಿಯನ್ನು ಪಡೆದುಕೊಳ್ಳಬಹುದು. ಇತ್ತೀಚಿನ ದಿನಗಳಲ್ಲಿ ವಿಶ್ವಾದ್ಯಂತ ಸೌರಶಕ್ತಿಯ ಬಳಕೆ ಹೆಚ್ಚಾಗುತ್ತಿದೆ. ವಿದ್ಯುತ್​ಗಿರಬಹುದು, ನೀರು ಕಾಯಿಸಲು ಇರಬಹುದು ಎಲ್ಲದಕ್ಕೂ ಸೌರಶಕ್ತಿಯನ್ನು ಬಳಸಿಕೊಳ್ಳಲಾಗುತ್ತಿದೆ. ಇದರ ಜತೆಗೆ ಸೋಲಾರ್ ಪ್ಯಾನೆಲ್​ಗಳ ನಿರ್ಮಾಣ ವೆಚ್ಚವೂ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿರುವುದು ಮತ್ತು ವಿವಿಧ ರಾಷ್ಟ್ರಗಳು ಮತ್ತು ರಾಜ್ಯಗಳು ಸೌರಶಕ್ತಿ ಬಳಕೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ನೀಡುತ್ತಿರುವ ಸಬ್ಸಿಡಿಗಳಿಂದ ಸೌರಶಕ್ತಿಯ ಬಳಕೆ ಹೆಚ್ಚುತ್ತಿದೆ.

ಸೌರಶಕ್ತಿ ಬಳಕೆಯತ್ತ…

# ಮೊರಾಕ್ಕೋದಲ್ಲಿನ ನೋರ್ ಸೋಲಾರ್ ಕಾಂಪ್ಲೆಕ್ಸ್ 10 ಲಕ್ಷ ಜನರಿಗೆ ಸಾಕಾಗುವಷ್ಟು ವಿದ್ಯುತ್ ಅನ್ನು ಸೌರಶಕ್ತಿಯಿಂದ ಉತ್ಪಾದಿಸುತ್ತಿದೆ.

# 2,700 ವರ್ಷಗಳಿಂದ ಸೌರಶಕ್ತಿಯನ್ನು ಬಳಸಿಕೊಳ್ಳಲಾಗುತ್ತಿದೆ. ಕ್ರಿಸ್ತಪೂರ್ವ 700ರಲ್ಲಿಯೇ ಸೂರ್ಯನ ಕಿರಣಗಳನ್ನು ಗ್ಲಾಸ್ ಲೆನ್ಸ್ ಮೂಲಕ ಹಾಯಿಸಿ ಬೆಂಕಿ ಉರಿಸಲಾಗುತ್ತಿತ್ತು.

# ಸೌರಶಕ್ತಿಯ ಬಳಕೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ 2016ರಲ್ಲಿ ಇಬ್ಬರು ಪೈಲಟ್​ಗಳು ಇಂಧನವೇ ಇಲ್ಲದೆ ಬರೀ ಸೌರಶಕ್ತಿ ಬಳಸಿಕೊಂಡು ವಿಮಾನದಲ್ಲಿ 40,000 ಕಿಮೀ ಹಾರಾಟ ನಡೆಸಿದ್ದರು.

ಸೂರ್ಯನೇ ಕೇಂದ್ರಬಿಂದು

ಈ ವರ್ಷದ ವಿಶ್ವ ಹವಾಮಾನ ದಿನವನ್ನು ಸೂರ್ಯ, ಭೂಮಿ ಮತ್ತು ಹವಾಮಾನ ಎನ್ನುವ ಥೀಮ್ೊಂದಿಗೆ ಆಚರಿಸಲು ನಿರ್ಧರಿಸಲಾಗಿದೆ. ಸೂರ್ಯ ಭೂಮಿಯಲ್ಲಿರುವ ಎಲ್ಲ ಜೀವಿಗಳಿಗೆ ಶಕ್ತಿ ನೀಡುತ್ತಾನೆ. ಅಲ್ಲದೆ, ಇವನು ಹವಾಮಾನದಲ್ಲಿನ ಬದಲಾವಣೆಗಳಿಗೂ ಕಾರಣನಾಗುತ್ತಾನೆ. ಹೈಡ್ರೋಲಾಜಿಕಲ್ ಸೈಕಲ್​ನ ಮೂಲ ಸೂರ್ಯ. ಇನ್ನು ಮಾನವನ ಮೇಲೆ ಈತನ ಪ್ರಭಾವವೂ ಅಪಾರ. ಜನರ ಮೂಡ್, ದಿನನಿತ್ಯದ ಚಟುವಟಿಕೆಗಳನ್ನು ನಿಯಂತ್ರಿಸುತ್ತಾನೆ. ಈತ ಸಂಗೀತ, ಕಲೆ ಮತ್ತು ಛಾಯಾಗ್ರಹಣಕ್ಕೆ ಪ್ರೇರಣೆಯೂ ಆಗಿದ್ದಾನೆ ಎನ್ನುವ ಕಾರಣಕ್ಕೆ ಈ ಬಾರಿ ಸೂರ್ಯನನ್ನೇ ಆಧರಿಸಿ ವಿಷಯ ರೂಪಿಸಲಾಗಿದೆ.

|ಅಕ್ಷತಾ ಮುಂಡಾಜೆ