ಮೈಸೂರು: ಜಿಲ್ಲಾ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ನಗರದ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಗುರುವಾರ ವಿಶ್ವ ಖೋಖೋ ಕಪ್ ವಿಜೇತರಿಗೆ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು.
ವಿಶ್ವ ಖೋಖೋ ಕಪ್‌ನಲ್ಲಿ ಭಾಗವಹಿಸಿ ವಿಶ್ವದ ಗಮನ ಸೆಳೆದ ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ಕುರುಬೂರಿನ ಬಿ.ಚೈತ್ರಾ ಹಾಗೂ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಡಿ.ಮಲ್ಲಿಗೆರೆಯ ಎಂ.ಕೆ.ಗೌತಮ್ ಅವರನ್ನು ಅರ್ಜುನ ಪ್ರಶಸ್ತಿ ಪುರಸ್ಕೃತ ಹಿರಿಯ ಖೋಖೋ ಆಟಗಾರ್ತಿ ಶೋಭಾ ನಾರಾಯಣ್ ಸನ್ಮಾನಿಸಿದರು. ಇದೇ ಸಂದರ್ಭ ಚೈತ್ರಾ ತಂದೆ ಕೆ.ಎಂ.ಬಸವಣ್ಣ, ತಾಯಿ ನಾಗರತ್ನ, ಗೌತಮ್ ತಂದೆ ಕಪನಿಗೌಡ ಅವರನ್ನು ಸನ್ಮಾನಿಸಲಾಯಿತು.
ಖೋ ಖೋ ಆಟಗಾರರನ್ನು ಏಕಲವ್ಯ ಪ್ರಶಸ್ತಿಗೆ ಪರಿಗಣಿಸಬೇಕು. ಖೋ ಖೋ ಆಟಗಾರರನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರ ಗುರುತಿಸುವ ಕಾರ್ಯ ಮಾಡಬೇಕು ಎಂದು ಎಂದು ಹಿರಿಯ ಖೋ ಖೋ ಆಟಗಾರ್ತಿ ಶೋಭಾ ನಾರಾಯಣ್ ಆಗ್ರಹಿಸಿದರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಖೋ ಖೋ ವಿಶ್ವಕಪ್‌ನಲ್ಲಿ ಬಿ.ಚೈತ್ರಾ ಹಾಗೂ ಎಂ.ಕೆ.ಗೌತಮ್ ತೋರಿದ ಸಾಧನೆಯು ದೇಶಕ್ಕೆ ಕೀರ್ತಿ ತಂದಿದೆ. ರಾಜ್ಯ ಸರ್ಕಾರವು ಇವರಿಗೆ ಕೇವಲ 5 ಲಕ್ಷ ರೂ. ಪ್ರೋತ್ಸಾಹ ಧನ ಘೋಷಣೆ ಮಾಡಿರುವುದು ಸರಿ ಅಲ್ಲ. ದೇಶದ ವಿವಿಧ ರಾಜ್ಯಗಳಲ್ಲಿ ಕ್ರೀಡಾಪಟುಗಳಿಗೆ ಉತ್ತಮ ಪ್ರೋತ್ಸಾಹ ಧನ ನೀಡಲಾಗುತ್ತಿದ್ದು, ರಾಜ್ಯ ಸರ್ಕಾರ ಸಹ ಉತ್ತಮ ಪ್ರೋತ್ಸಾಹ ಧನ ನೀಡಬೇಕು ಎಂದು ಆಗ್ರಹಿಸಿದರು.
ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಸಿ.ಕೃಷ್ಣ ಮಾತನಾಡಿ, ಖೋಖೋ ನಮ್ಮ ದೇಶದ ಹೆಮ್ಮೆಯ ಕ್ರೀಡೆ. ಸಾಕಷ್ಟು ವರ್ಷಗಳಿಂದ ಈ ಆಟವನ್ನು ಉಳಿಸಿಕೊಂಡು ಬರಲಾಗಿದೆ. ಖೋಖೋ ಮಹಾರಾಷ್ಟ್ರದಲ್ಲಿ ಹುಟ್ಟಿದ ಪ್ರಸಿದ್ಧ ಕೀಡೆಯಾಗಿದೆ. ಈ ಕ್ರೀಡೆಗೆ ಸರ್ದಾರ್ ವಲ್ಲಬಾಯಿ ಪಟೇಲ್ ಸೇರಿದಂತೆ ಸಾಕಷ್ಟು ಮಹನೀಯರು ಪ್ರೋತ್ಸಾಹ ನೀಡಿದ್ದರು. ಮಹಾ ಭಾರತದ ಕಾಲದಿಂದಲೂ ಈ ಕ್ರೀಡೆ ಇತ್ತು ಎಂಬುದಕ್ಕೆ ಕುರುಹುಗಳು ಇವೆ ಎಂದರು.
ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ ಮಾತನಾಡಿ, ಖೋಖೋ ವಿಶ್ವಕಪ್ ಸಾಧಕ ಬಿ.ಚೈತ್ರಾ ಹಾಗೂ ಎಂ.ಕೆ.ಗೌತಮ್ಗೆ ರಾಜ್ಯ ಸರ್ಕಾರವು 1 ಕೋಟಿ ರೂ.ಪ್ರೋತ್ಸಾಹ ಧನ, ಸರ್ಕಾರಿ ನೌಕರಿ ಹಾಗೂ ನಿವೇಶನ ನೀಡಬೇಕು ಎಂದು ಆಗ್ರಹಿಸಿದರು.
ಜೆಎಸ್‌ಎಸ್ ದಂತ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕಿ ಡಾ.ಉಷಾ ಹೆಗ್ಗಡೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್ ಹಾಗೂ ಇತರರು ಇದ್ದರು.