ಬೋಹ್ರಾ ಸಮುದಾಯದ ವ್ಯಾಪಾರ ಇತರರಿಗೆ ಮಾದರಿ: ಪ್ರಧಾನಿ ಮೋದಿ

ಇಂದೋರ್​: ಮಧ್ಯಪ್ರದೇಶದ ಇಂದೋರ್​ನಲ್ಲಿರುವ ಸೈಫಿ ಮಸೀದಿಯಲ್ಲಿ ಆಯೋಜಿಸಲಾಗಿದ್ದ ‘ಆಶ್ರಾ ಮುಬಾರಕಾ’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ, ದಾವೂದಿ ಬೋಹ್ರಾ ಸಮುದಾಯ ತನ್ನ ಕೆಲಸದ ಮೂಲಕ ಇಡೀ ವಿಶ್ವಕ್ಕೆ ವಸುಧೈವ ಕುಟುಂಬಕಂ ಪರಿಕಲ್ಪನೆಯನ್ನು ಪರಿಚಯಿಸುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ವಿಶ್ವವೇ ಒಂದು ಕುಟುಂಬ ಎಂಬುದನ್ನು ಸಾರುವ ವಸುಧೈವ ಕುಟುಂಬಕಂ ಪರಿಕಲ್ಪನೆ ಭಾರತದ ಅತಿದೊಡ್ಡ ಶಕ್ತಿ, ಈ ಪರಿಕಲ್ಪನೆ ನಮ್ಮ ದೇಶವನ್ನು ವಿಶ್ವದ ಇತರ ರಾಷ್ಟ್ರಗಳಿಗಿಂತ ಭಿನ್ನವಾಗಿಸುತ್ತದೆ ಎಂದು ಪ್ರಧಾನಿ ತಿಳಿಸಿದ್ದಾರೆ.

ನಾವು ನಮ್ಮ ಇತಿಹಾಸದ ಕುರಿತು ಹೆಮ್ಮೆ ಹೊಂದಿದ್ದೇವೆ. ವರ್ತಮಾನದ ಕುರಿತು ನಂಬಿಕೆ ಹೊಂದಿದ್ದು, ನಮ್ಮ ಭವಿಷ್ಯ ಉಜ್ವಲವಾಗಿರುತ್ತದೆ ಎಂಬ ಆತ್ಮವಿಶ್ವಾಸ ಹೊಂದಿದ್ದೇವೆ ಎಂದು ಮೋದಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜಿಎಸ್​ಟಿ ತೆರಿಗೆ ಪದ್ಧತಿ ಮತ್ತು ಕೇಂದ್ರ ಸರ್ಕಾರದ ಇತರ ಆರ್ಥಿಕ ಸುಧಾರಣಾ ಯೋಜನೆಗಳಿಂದ ವ್ಯಾಪಾರ ವಹಿವಾಟಿನಲ್ಲಿ ಪ್ರಾಮಾಣಿಕತೆಗೆ ಹೆಸರಾಗಿರುವ ಬೋಹ್ರಾ ಸಮುದಾಯ ಹೆಚ್ಚಿನ ಲಾಭ ಪಡೆದುಕೊಂಡಿದೆ. ಬೋಹ್ರಾ ಸಮುದಾಯ ವ್ಯಾಪಾರದಲ್ಲಿ ಇತರರಿಗೆ ಮಾದರಿಯಾಗಿದ್ದಾರೆ ಎಂದು ಮೋದಿ ಅವರು ಬೋಹ್ರಾ ಸಮುದಾಯವನ್ನು ಹೊಗಳಿದರು. (ಏಜೆನ್ಸೀಸ್​)