ಮೃತಳ ಗರ್ಭಾಶಯದಿಂದ ಮಗು!

ಲಂಡನ್: ಬ್ರೆಜಿಲ್​ನ ವಿಜ್ಞಾನಿಗಳು ವೈದ್ಯಕೀಯ ಲೋಕದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಮೃತ ದಾನಿಯಿಂದ ಪಡೆದ ಗರ್ಭಕೋಶವನ್ನು ಇನ್ನೊಂದು ಮಹಿಳೆಗೆ ಕಸಿ ಮಾಡಿದ್ದು, ಈಗ ಹೆಣ್ಣುಮಗುವೊಂದರ ಜನನವಾಗಿದೆ. ಮೃತ ದಾನಿಯ ಗರ್ಭಕೋಶ ಕಸಿ ಮಾಡಿ, ಮಗು ಜನಿಸಿದ ಮೊದಲ ಪ್ರಕರಣ ಇದಾಗಿದೆ.

ಪಾರ್ಶ್ವವಾಯು ಪೀಡಿತರಾಗಿ ಮೃತಪಟ್ಟಿದ್ದ 45 ವರ್ಷದ ಮಹಿಳೆಯ ಗರ್ಭಕೋಶವನ್ನು, ಹುಟ್ಟಿನಿಂದಲೇ ಗರ್ಭಕೋಶ ಹೊಂದಿರದ 32 ವರ್ಷದ ಮಹಿಳೆಗೆ ಕಸಿ ಮಾಡಲಾಗಿತ್ತು. ಧಮನಿ, ಅಪಧಮನಿ, ಅಸ್ಥಿರಜ್ಜು ಮತ್ತು ಯೋನಿನಾಳವನ್ನು ಗರ್ಭಾಶಯ ಧಮನಿ, ಅಪಧಮನಿ, ಅಸ್ಥಿರಜ್ಜು ಮತ್ತು ಯೋನಿನಾಳದೊಂದಿಗೆ ಅತ್ಯಂತ ಸೂಕ್ಷ್ಮವಾದ ಶಸ್ತ್ರಚಿಕಿತ್ಸೆ ಮೂಲಕ ಜೋಡಣೆ ಮಾಡಲಾಯಿತು ಎಂದು ಲ್ಯಾನ್ಸಟ್ ಮೆಡಿಕಲ್ ಜರ್ನಲ್​ನಲ್ಲಿ ವಿವರಿಸಲಾಗಿದೆ.

10 ಬಾರಿ ವಿಫಲ

ಮೃತ ದಾನಿಯಿಂದ ಪಡೆದ ಗರ್ಭ ಕೋಶವನ್ನು ಕಸಿ ಮಾಡಿ, ಮಗುವನ್ನು ಹೊಂದುವಂತೆ ಮಾಡಲು ಈ ಹಿಂದೆ ಅಮೆರಿಕ, ಜೆಕ್ ಗಣರಾಜ್ಯ ಮತ್ತು ಟರ್ಕಿಗಳಲ್ಲಿ 10 ಬಾರಿ ಪ್ರಯತ್ನಿಸಿ, ವಿಫಲವಾಗಿತ್ತು.

ವರದಾನ

ಈ ಪ್ರಯೋಗ ಗರ್ಭಕೋಶ ಫಲವತ್ತತೆ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರಿಗೆ ವರದಾನವಾಗಿದೆ. ಇದನ್ನು ಇನ್ನಷ್ಟು ಸುಧಾರಣೆ ಮಾಡಬೇಕಿದೆ ಎಂದು ವೈದ್ಯ ಡ್ಯಾನಿ ಜೆಂಬರ್ಗ್ ಹೇಳಿದ್ದಾರೆ.

ಸಾವೊ ಪಾಲೋ ವಿವಿ ಪ್ರಯೋಗ

ಬ್ರೆಜಿಲ್​ನ ಸಾವೊ ಪಾಲೋ ವಿಶ್ವವಿದ್ಯಾಲಯದ ವೈದ್ಯ ಡ್ಯಾನಿ ಜೆಂಬರ್ಗ್ ಈ ಪ್ರಯೋಗ ನಡೆಸಿದ್ದರು. 2016ರ ಸೆಪ್ಟೆಂಬರ್​ನಲ್ಲಿ ಮೃತಪಟ್ಟಿದ್ದ ಮಹಿಳೆಯ ಗರ್ಭಾಶಯವನ್ನು 32 ವರ್ಷದ ಮಹಿಳೆಗೆ ಕಸಿ ಮಾಡಿದ್ದರು. ಶಸ್ತ್ರಚಿಕಿತ್ಸೆ ಮಾಡಿದ 5 ತಿಂಗಳ ನಂತರ ಗರ್ಭಕೋಶ ಚೆನ್ನಾಗಿ ಹೊಂದಿಕೊಂಡಿರುವ ಕುರುಹು ತೋರಿತ್ತು. ಅಲ್ಟ್ರಾಸೌಂಡ್ ಸ್ಕಾ್ಯನಿಂಗ್ ಮಾಡಿದಾಗ ಇದು ಖಚಿತಪಟ್ಟಿತ್ತು. ಈ ಮಹಿಳೆಯ ಅಂಡಾಣು ಪಡೆದು ವೀರ್ಯದೊಂದಿಗೆ ಫಲೀಕರಿಸಲಾಗಿತ್ತು. ಏಳು ತಿಂಗಳು 10 ದಿನಗಳ ಬಳಿಕ ಫಲೀಕರಿಸಲಾಗಿದ್ದ ಅಂಡಾಣುವನ್ನು ಕಸಿ ಮಾಡಲ್ಪಟ್ಟಿದ್ದ ಗರ್ಭಕೋಶದೊಳಗೆ ಇರಿಸಲಾಗಿತ್ತು. 35 ವಾರ ಮತ್ತು ಮೂರು ದಿನಗಳ ಬಳಿಕ ಈ ಮಹಿಳೆ ಸಿಸೇರಿಯನ್ ಶಸ್ತ್ರಚಿಕಿತ್ಸೆ ಮೂಲಕ ಹೆಣ್ಣುಮಗುವಿಗೆ ಜನ್ಮ ನೀಡಿದಳು ಎಂದು ಜೆಂಬರ್ಗ್ ತಿಳಿಸಿದ್ದಾರೆ.