ತಾಲೂಕಿಗೊಬ್ಬ ಪರಿಸರ ಅಧಿಕಾರಿ ನೇಮಕ

ಶುದ್ಧ ನೀರು, ಶುದ್ಧ ಆಹಾರ ಮಾತ್ರವಲ್ಲ, ಶುದ್ಧ ಗಾಳಿಯ ಕೊರತೆಯೂ ದಟ್ಟವಾಗಿದೆ. ತಾಯಿ ಗರ್ಭದಲ್ಲಿರುವ ಮಗುವಿನ ಆರೋಗ್ಯದ ಮೇಲೂ ಪರಿಸರ ಮಾಲಿನ್ಯ ಛಾಯೆ ಆವಸಿರುವುದು ಕಳವಳಕಾರಿ. ಇಂತಹ ಸಂದರ್ಭ ರಾಜ್ಯದಲ್ಲಿ ಪರಿಸರ ಕಾಪಾಡಲು ಸರ್ಕಾರದ ಕ್ರಮ, ಮುಂದೆ ಜಾರಿಗೆ ತರಲು ಉದ್ದೇಶಿಸಿರುವ ಯೋಜನೆಗಳ ಕುರಿತು ‘ವಿಜಯವಾಣಿ’ ಜತೆ ಅರಣ್ಯ ಮತ್ತು ಪರಿಸರ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿದ್ದಾರೆ. ಪ್ರತಿ ತಾಲೂಕಿಗೆ ಒಬ್ಬ ಪರಿಸರ ಅಧಿಕಾರಿ ನೇಮಕ ಮಾಡುವುದಾಗಿ ತಿಳಿಸಿದ್ದಾರೆ.

# ಪರಿಸರ ಅಸಮತೋಲನ ಹೆಚ್ಚುತ್ತಿದ್ದರೂ ನಿಮ್ಮ ಇಲಾಖೆಗೆ ಸಿಬ್ಬಂದಿಯೇ ಇಲ್ಲ?

ಹೌದು, ಸಿಬ್ಬಂದಿ ಕೊರತೆ ಕಾಡುತ್ತಿದ್ದು, ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಗಳು 40 ಮಾತ್ರ ಇವೆ. ಪ್ರತಿ ತಾಲೂಕಿಗೂ ಒಬ್ಬ ಪರಿಸರ ಅಧಿಕಾರಿ ಇರಬೇಕು. ಕೈಗಾರಿಕೆಗಳ ಅನುಮತಿಯಿಂದ ಹಿಡಿದು ಪ್ರತಿ ಕೆಲಸವೂ ಅಲ್ಲಿಯೇ ಆಗಬೇಕು ಎಂಬುದು ಸರ್ಕಾರದ ಉದ್ದೇಶ. ಆ ನಿಟ್ಟಿನಲ್ಲಿ ಈಗಾಗಲೇ ಯೋಜನೆ ಸಿದ್ಧವಾಗಿದೆ.

# ಬೆಂಗಳೂರಲ್ಲೂ ದೆಹಲಿಯಂತೆ ವಾಯುಮಾಲಿನ್ಯ ಕಾಡುವ ಆತಂಕವಿದೆ…

ಮಾಲಿನ್ಯ ನಿಯಂತ್ರಣ ನಮ್ಮ ಇಲಾಖೆಯೊಂದರಿಂದಲೇ ಸಾಧ್ಯವಿಲ್ಲ. ಬಿಬಿಎಂಪಿ, ಬಿಎಂಟಿಸಿ, ಪೊಲೀಸ್, ಸಾರಿಗೆ ಹೀಗೆ ವಿವಿಧ ಇಲಾಖೆಗಳು ಒಟ್ಟಾಗಿ ಕೆಲಸ ಮಾಡಬೇಕು. ವಾಹನ ದಟ್ಟಣೆ ಒಂದೆಡೆಯಾದರೆ, ಕಸ ಸಮಸ್ಯೆ ಮತ್ತೊಂದೆಡೆ ಇದೆ. ಸದ್ಯದಲ್ಲೇ ಸಿಎಂ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಇಲಾಖೆಗಳ ನಡುವೆ ಸಮನ್ವಯ ತರುವ ಮೂಲಕ ಮಾಲಿನ್ಯದ ಪ್ರಮಾಣ ತಗ್ಗಿಸಲು ಯೋಜನೆ ರೂಪಿಸಲಾಗುವುದು.

# ಅರಣ್ಯ ಪ್ರಮಾಣ ಕ್ಷೀಣಿಸುತ್ತಿದ್ದು, ಪರಿಸರ ರಕ್ಷಣೆ ಹೇಗೆ?

ಅರಣ್ಯ ಎಂದರೆ ಸಹ್ಯಾದ್ರಿ ಸಾಲು ಮಾತ್ರವಲ್ಲ. ಕಾಡು ಒತ್ತುವರಿಗೆ ಕಡಿವಾಣ ಹಾಕುತ್ತಿದ್ದು, ಜನರು ಸಸಿ ನೆಡಲು ಹೆಚ್ಚಿನ ಸಂಖ್ಯೆಯಲ್ಲಿ ನರ್ಸರಿ ತೆರೆಯಲಾಗುತ್ತಿದೆ. ಕಲಬುರಗಿ, ಯಾದಗಿರಿ, ರಾಯಚೂರು, ಚಿತ್ರದುರ್ಗ, ತುಮಕೂರು, ಕೋಲಾರ ಮೊದಲಾದ ಜಿಲ್ಲೆಗಳಲ್ಲಿ 10 ಸಾವಿರ ಎಕರೆಗೂ ಹೆಚ್ಚಿನ ಭೂಮಿ ಇಲಾಖೆಯಲ್ಲಿದ್ದು, ಈ ಪ್ರದೇಶದಲ್ಲಿ ಅರಣ್ಯ ಬೆಳೆಸಲು ಆದ್ಯತೆ ನೀಡಲಾಗುತ್ತದೆ.

# ಅರಣ್ಯ ಬೆಳೆಸಲು ನೀರಿನ ಸಮಸ್ಯೆ ಹೇಗೆ ನಿಭಾಯಿಸುವಿರಿ?

ಹೊಸದಾಗಿ ಅರಣ್ಯ ಅಭಿವೃದ್ಧಿ ಪಡಿಸುವ 10 ಸಾವಿರ ಎಕರೆಯಲ್ಲೂ ಹನಿ ನೀರಾವರಿ ಅಳವಡಿಸಲಾಗುತ್ತದೆ. ಮುಂದಿನ ನಾಲ್ಕೈದು ವರ್ಷಗಳ ಅವಧಿಯಲ್ಲಿ ಈ ಅರಣ್ಯ ಅಭಿವೃದ್ಧಿಯಾಗಲಿದೆ.

# ಇಲಾಖೆಗೆ ಅನುದಾನದ ಕೊರತೆ ಕಾಡುತ್ತಿದೆಯಲ್ಲವೆ?

ಪರಿಸರ ಉಳಿಸುವ ಕಾರ್ಯಕ್ಕೆ ಇಲಾಖೆಗೆ ಹೆಚ್ಚಿನ ಹಣಕಾಸಿನ ಅಗತ್ಯವಿದೆ. ಈ ವರ್ಷ 100 ಕೋಟಿ ರೂ. ಹೆಚ್ಚುವರಿಯಾಗಿ ಕೇಳಿದ್ದೇನೆ. ಇದಕ್ಕೆ ಸಿಎಂ ಸ್ಪಂದಿಸಿದ್ದಾರೆ.

# ಇ-ತ್ಯಾಜ್ಯ ನಿರ್ವಹಣೆ ಹೇಗೆ?

ಇ-ತ್ಯಾಜ್ಯ ಸಮಸ್ಯೆ ಹೆಚ್ಚಾಗಿದ್ದು, ನಿರ್ವಹಣೆ ಸರಿಯಾಗಿ ಆಗದೆ ಪರಿಸರದ ಮೇಲೆ ಪರಿಣಾಮ ಬೀರುತ್ತಿದೆ. ಈ ಬಗ್ಗೆ ಸೂಕ್ತ ಕ್ರಮಕ್ಕಾಗಿ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚಿಸಿದ್ದೇನೆ.

# ಅರಣ್ಯ ಬೆಳೆಸಬೇಕು ಅಂತೀರಿ. ಆದರೆ ಸಸಿಗಳನ್ನೇ ನೆಡುವುದಿಲ್ಲ, ನೆಟ್ಟರೂ ಉಳಿಸಿಕೊಳ್ಳುವುದಿಲ್ಲ…

ಸಸಿಗಳನ್ನು ನೆಡುವುದಿಲ್ಲ ಎಂಬ ಮಾತನ್ನು ನಾನು ಒಪು್ಪವುದಿಲ್ಲ. ನೆಡುವ ಸಸಿಗಳಲ್ಲಿ ಶೇ.30 ಮಾತ್ರ ಉಳಿಯುತ್ತಿವೆ. ಶೇ.70 ಸಸಿ ವಿವಿಧ ಕಾರಣಕ್ಕೆ ಹಾಳಾಗುತ್ತಿವೆ. ಇದನ್ನು ತಪ್ಪಿಸಲು ಇನ್ಮುಂದೆ ರಸ್ತೆಬದಿಯಲ್ಲಿ 6 ಅಡಿ ಬೆಳೆದಿರುವ ಸಸಿಗಳನ್ನು ಮಾತ್ರ ನೆಡಲಾಗುವುದು. ಇದರಿಂದ ನಿರ್ವಹಣೆಯೂ ಸುಲಭ. ನರ್ಸರಿಯಲ್ಲೂ 6 ಅಡಿ ಬೆಳೆದ ಸಸಿಗಳನ್ನು ನೀಡಲಾಗುತ್ತದೆ.