ಅರಣ್ಯದ ಆಚೆಗೂ ವೃಕ್ಷ ಹೊದಿಕೆ: ಅರಣ್ಯ ಇಲಾಖೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂದರ್ಶನ

ಅಭಿವೃದ್ಧಿ ನೆಪದಲ್ಲಿ ಸಾವಿರಾರು ಮರಗಳ ಮಾರಣಹೋಮ ನಡೆಯುತ್ತಿದ್ದು, ಪರಿಣಾಮ ಜಗತ್ತಿನ ಬಹುತೇಕ ಅರಣ್ಯ ಪ್ರದೇಶಗಳ ಪ್ರಮಾಣ ಕಡಿಮೆಯಾಗಿದೆ. ಇರುವುದೊಂದೇ ಭೂಮಿ, ಸ್ವರ್ಗದಂತಹ ಭೂಮಿಯನ್ನು ನಾನಾ ಕಾರಣಕ್ಕೆ ನಾವೇ ನರಕ ಮಾಡುತ್ತಿದ್ದೇವೆ. ನಾವು ಬದುಕಿ ಮುಂದಿನ ಜನಾಂಗಕ್ಕೆ ಬದುಕಲು ಬಿಡಲು ಇಂದೇ ನಾವು ಪರಿಸರ ರಕ್ಷಿಸಲು ಅರಣ್ಯ ಇಲಾಖೆ ಜತೆಗೆ ಸಾರ್ವಜನಿಕರೂ ಭಾಗಿಯಾಗಬೇಕು ಎಂದು ಕರೆ ನೀಡಿರುವ ಅರಣ್ಯ ಇಲಾಖೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪುನಾಟಿ ಶ್ರೀಧರ್, ಪರಿಸರ ಸಂರಕ್ಷಣೆ, ಹಸಿರು ಕರ್ನಾಟಕ ಯೋಜನೆ ಕುರಿತು ವಿಜಯವಾಣಿ ಜತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

# ವಿಶ್ವ ಪರಿಸರ ದಿನ ಅಂಗವಾಗಿ ಅರಣ್ಯ ಇಲಾಖೆಯ ಸಂಕಲ್ಪ?

ಊರಿಗೊಂದು ತೋಪು, ತಾಲೂಕಿಗೊಂದು ಕಿರು ಅರಣ್ಯ ಹಾಗೂ ಜಿಲ್ಲೆಗೊಂದು ಕಾಡು ಸೃಷ್ಟಿಸುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿರುವ ಅರಣ್ಯ ಇಲಾಖೆ, ಸಣ್ಣ-ಪುಟ್ಟ ಬೆಟ್ಟ, ಗೋಮಾಳ ಜಮೀನು ಮತ್ತು ಕೆರೆಗಳ ಸುತ್ತಮುತ್ತಲಿರುವ ಸರ್ಕಾರಿ ಜಮೀನುಗಳಲ್ಲಿ ಆಯಾ ಪ್ರದೇಶಕ್ಕನುಗುಣವಾಗಿ ಬೆಳೆಯುವ ಸ್ಥಳೀಯ ಜಾತಿಯ ಗಿಡಗಳನ್ನು ವ್ಯಾಪಕವಾಗಿ ಬೆಳೆಸಲು ಈ ಬಾರಿ ಸಂಕಲ್ಪ ಮಾಡಲಾಗಿದೆ.

# ಹಸಿರು ಕರ್ನಾಟಕ ಯೋಜನೆ ಯಶಸ್ವಿಗೊಳ್ಳಬೇಕಾದರೆ ನಿಮ್ಮ ನಿಲುವೇನು?

2019ನೇ ಸಾಲಿನ ಮಳೆಗಾಲದಲ್ಲಿ ಹಸಿರು ಕರ್ನಾಟಕ ಯೋಜನೆಯಡಿ 975 ಹೆಕ್ಟೇರ್​ನಲ್ಲಿ ಅರಣ್ಯ ಪ್ರದೇಶ ನಿರ್ವಿುಸುವ ಗುರಿ ಹೊಂದಿದ್ದೇವೆ. ಇದಕ್ಕೆ ಬೇಕಾದ ಎಲ್ಲ ಸಿದ್ಧತೆ ನಡೆಸಲಾಗುತ್ತಿದೆ. ಇಲಾಖೆಯಿಂದಷ್ಟೇ ಈ ಯೋಜನೆಗಳು ಯಶಸ್ವಿಯಾಗದು. ಸಾರ್ವಜನಿಕ ವಲಯವೂ ಇಲಾಖೆಯೊಂದಿಗೆ ಕೈಜೋಡಿಸಬೇಕು.

# ಅಭಿವೃದ್ಧಿ ಕಾಮಗಾರಿ ನೆಪದಲ್ಲಿ ಸಾವಿರಾರು ಮರಗಳು ಧರೆಗುರುಳಿದ್ದು, ಈ ಬಗ್ಗೆ ಇಲಾಖೆ ಕ್ರಮವೇನು ?

ಯಾವುದೇ ಅಭಿವೃದ್ಧಿ ಕಾಮಗಾರಿಗಳು ಅರಣ್ಯ ಜಾಗದಲ್ಲೇ ಆಗಬೇಕೆಂಬ ನಿಲುವು ಸರಿಯಲ್ಲ. ಅಭಿವೃದ್ಧಿ ನೆಪದಲ್ಲಿ ಈಗಾಗಲೇ ಸಾವಿರಾರು ಮರಗಳು ಧರೆಗುರುಳಿವೆ. ಈ ಬಗ್ಗೆ ಸರ್ಕಾರ ಹಾಗೂ ಇಲಾಖೆ ಯಾವುದೇ ರೀತಿ ಅನುಮತಿ ನೀಡುವುದಿಲ್ಲ. ಕಾನೂನು ಬಾಹಿರವಾದ ಜಾಗಗಳು ಬಹಳಷ್ಟಿವೆ. ಈ ಬಗ್ಗೆ ಸರ್ಕಾರಗಳು ಚಿಂತಿಸಬೇಕಿದೆ.

# ಜಲ ಸಂರಕ್ಷಣೆಗೆ ಇಲಾಖೆ ಕೈಗೊಂಡ ಕ್ರಮ?

ಅರಣ್ಯ ಚೆನ್ನಾಗಿದ್ದರೆ ಪರಿಸರವೂ ಚೆನ್ನಾಗಿರುತ್ತದೆ. ನೀರಿನ ಅಭಾವವೂ ಇರುವುದಿಲ್ಲ. ಇಲಾಖೆಯು ಪರಿಸರ ಸಂರಕ್ಷಣೆ, ಜಲ ಸಂರಕ್ಷಣೆಗಾಗಿ ಒತ್ತು ನೀಡುತ್ತಿದೆ. 2017-18ರಲ್ಲಿ ‘ನೀರಿಗಾಗಿ ಅರಣ್ಯ’ ಎಂಬ ಘೋಷವಾಕ್ಯದಡಿ ಹಲವು ಕಾರ್ಯಕ್ರಮ ಹಮ್ಮಿಕೊಂಡಿತ್ತು. ಜಲ ಸಂರಕ್ಷಣೆಯತ್ತ ಹೆಚ್ಚು ಆದ್ಯತೆ ನೀಡಲಾಗಿದೆ.

# ಶೂನ್ಯ- ಕಾಡ್ಗಿಚ್ಚು ಬಗ್ಗೆ ನಿಮ್ಮ ಅಭಿಪ್ರಾಯ ?

2017-18ರ ಸಾಲಿನ ಬೇಸಿಗೆಯಲ್ಲಿ ಕಾಡ್ಗಿಚ್ಚು ನಿಯಂತ್ರಿಸುವ ಸಲುವಾಗಿ ಈ ಯೋಜನೆ ಜಾರಿಗೆ ತರಲಾಗಿದೆ. ರಕ್ಷಿತ ಅರಣ್ಯ ಪ್ರದೇಶಗಳಾದ ನಾಗರಹೊಳೆ, ಬಂಡೀಪುರ, ಬಿಆರ್​ಟಿ, ಭದ್ರಾ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಗುರುತಿಸಲಾದ ಕೇಂದ್ರಗಳಲ್ಲಿ ಅಗ್ನಿಶಾಮಕ ವಾಹನವನ್ನು ತಾತ್ಕಾಲಿಕವಾಗಿ ನಿಯೋಜಿಸಲು ಪೂರ್ವಭಾವಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು. 2017-18ರಲ್ಲಿ ಶೂನ್ಯ -ಕಾಡ್ಗಿಚ್ಚು ಯೋಜನೆ ಭಾಗಶಃ ಯಶಸ್ವಿಯಾಗಿದೆ. 2018 ನವೆಂಬರ್ ನಂತರ ಮಳೆಯಾಗದ ಕಾರಣ ಹಾಗೂ ಹವಾಮಾನ ವ್ಯತ್ಯಯಗಳಿಂದ ಅತ್ಯಂತ ಒಣ ಪ್ರದೇಶಗಳಲ್ಲಿ ಕಾಡ್ಗಿಚ್ಚು ಉಂಟಾಗಿದೆ. ಈ ಬಾರಿ ಶೂನ್ಯ-ಕಾಡ್ಗಿಚ್ಚು ಯೋಜನೆ ಯಶಸ್ವಿಯಾಗುವಂತೆ ಕ್ರಮ ಕೈಗೊಳ್ಳಲಾಗಿದೆ.

# ಅರಣ್ಯ ಮತ್ತು ಪರಿಸರ ಸಂರಕ್ಷಣೆ ಕುರಿತು ಜನತೆಗೆ ನಿಮ್ಮ ಸಂದೇಶ ಏನು?

ಈಗಾಗಲೇ ಭೌಗೋಳಿಕವಾಗಿ 13 ಮಿಲಿಯನ್ ಹೆಕ್ಟೇರ್ ಅರಣ್ಯಭೂಮಿ ನಾಶವಾಗಿದೆ. ಹೀಗೆ ಮುಂದುವರಿದರೆ ಮುಂದೊಂದು ದಿನ ಭೀಕರಕ್ಷಾಮ ಎದುರಿಸಬೇಕಾದೀತು. ಎಲ್ಲರೂ ಧೃಡ ಸಂಕಲ್ಪದೊಂದಿಗೆ ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದು ಅರಿಯಬೇಕು.

# ಬೀಜದುಂಡೆ ಬಿತ್ತನೆಯಿಂದ ಹಸಿರು ಕರ್ನಾಟಕ ಸಾಧ್ಯವೇ ?

ಸೀಡ್​ಬಾಲ್ಸ್(ಬೀಜದುಂಡೆ )ತಯಾರಿಕೆ ಮತ್ತು ಬಿತ್ತನೆ ಕಾರ್ಯಕ್ರಮವನ್ನು ಸ್ಥಳೀಯ ಶಾಲೆಗಳ ನೆರವಿನಿಂದ ಕರ್ನಾಟಕ ಸರ್ಕಾರದ ಅರಣ್ಯ ವಿಭಾಗವು ಮೊಟ್ಟಮೊದಲ ಬಾರಿಗೆ 2017ರಲ್ಲಿ ಕಾರ್ಯರೂಪಕ್ಕೆ ತರಲಾಯಿತು. ಕೆಂಪು ಮಣ್ಣು, ಸಗಣೆ ಮತ್ತು ಹಸುವಿನ ಗಂಜಲ ಉಪಯೋಗಿಸಿ ಸ್ಥಳೀಯ ವೃಕ್ಷ ಪ್ರಭೇದಗಳ ಬೀಜದುಂಡೆಗಳನ್ನು ವಿದ್ಯಾರ್ಥಿಗಳೇ ತಯಾರಿಸಿದರು. ಹೊಸ ಖರಾಬು ಅರಣ್ಯ ಪ್ರದೇಶದಲ್ಲಿ ಈ ಬಿತ್ತನೆ ಕಾರ್ಯ ಯಶಸ್ವಿಯಾಗಿದೆ. ಇದಲ್ಲದೆ ಪ್ರತಿಯೊಬ್ಬರೂ ತಮ್ಮ ಮನೆ ಮುಂದೆ ಗಿಡ ನೆಟ್ಟು ಮರವಾಗಿಸಿದರೆ ಹಸಿರು ಕರ್ನಾಟಕ ಖಂಡಿತಾ ಆಗಲಿದೆ.

# ಪರಿಸರ ಸಂರಕ್ಷಣೆಯಲ್ಲಿ ಇಲಾಖೆ ಪಾತ್ರವೇನು ?

ಇಂದಿನ ಹಾಗೂ ಮುಂದಿನ ಪೀಳಿಗೆಗಳಿಗಾಗಿ ನಿರಂತರವಾಗಿ ಅರಣ್ಯ ಗಳನ್ನು ಸಂರಕ್ಷಿಸುವುದು.ನಿರ್ವಹಿಸುವುದು,ಅಭಿವೃದ್ಧಿ ಪಡಿಸುವುದು ಮತ್ತು ಮರಗಳನ್ನು ಬೆಳೆಸುವುದು. ಕೃಷಿ, ತೋಟ, ಅರಣ್ಯಕೀರಣ, ವೃಕ್ಷಾಬಿವೃದ್ಧಿ ಯೋಜನೆಗಳ ಮೂಲಕ ಅರಣ್ಯದ ಹೊರಗೆ ವೃಕ್ಷ ಹೊದಿಕೆ ವಿಸ್ತರಿಸುವುದು ಅರಣ್ಯ ಇಲಾಖೆಯ ಮುಖ್ಯ ಪಾತ್ರ.

ವಿಶ್ವ ಪರಿಸರ ದಿನ ಕೇವಲ ಒಂದು ದಿನದ ಆಚರಣೆಯಾಗಬಾರದು. ಪರಿಸರ ಸಂರಕ್ಷಣೆ ಬಗ್ಗೆ ನಿರಂತರ ಕಾರ್ಯಕ್ರಮಗಳು ನಡೆಯಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ, ಪ್ಲಾಸ್ಟಿಕ್ ತ್ಯಾಜ್ಯ ಎಸೆಯುವುದನ್ನು ತಡೆಗಟ್ಟಬೇಕಿದೆ.

| ಜಯ ಶಂಕರ್ ಸಿಎಂಡಿ, ಆದರ್ಶ ಗ್ರೂಪ್ ಆಫ್ ಕಂಪನಿ

ಮುಂದಿನಪೀಳಿಗೆ ದೃಷ್ಟಿಯಿಂದ ಪರಿಸರದ ಬಗ್ಗೆ ಕಾಳಜಿ ವಹಿಸುವುದು ಅಗತ್ಯ. ಪರಿಸರ ಬೆಳೆಸುವುದರಿಂದ ಆರೋಗ್ಯಪೂರ್ಣವಾದ ಸಕಾರಾತ್ಮಕ ಬದಲಾವಣೆ ಕಾಣಬಹುದು. ಈ ಕೆಲಸಕ್ಕೆ ಎಲ್ಲರೂ ಕೈ ಜೋಡಿಸಿ

| ಬಿಜೈ ಕುಮಾರ್ ಅಗರ್​ವಾಲ್ ಸಿಎಂಡಿ, ಸಲರ್​ಪೂರಿಯಾ ಸತ್ವ ಗ್ರೂಪ್

ವಾಯುಮಾಲಿನ್ಯ ನಿಯಂತ್ರಣ ಕಾರ್ಯ ಆರೋಗ್ಯವಂತ ಜೀವನಕ್ಕೆ ಆಮಂತ್ರಣ ನೀಡಿದಂತೆ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ. ಪ್ರತಿಯೊಬ್ಬರೂ ತಮ್ಮ ಮನೆ ಮುಂದೆ ಗಿಡ ನೆಟ್ಟು ಪೋಷಿಸಬೇಕು.

| ಅಶೋಕ್ ಕುಮಾರ್ ಸಹಾಯಕ ಮುಖ್ಯ ವ್ಯವಸ್ಥಾಪಕ, ಶೋಭಾ ಡೆವಲಪರ್ಸ್