ಹಸಿರು ಕರ್ನಾಟಕಕ್ಕೆ ಭರ್ಜರಿ ಜನಸ್ಪಂದನ

ಬೆಂಗಳೂರು: ವಿಶ್ವ ಪರಿಸರ ದಿನ ಹಿನ್ನೆಲೆಯಲ್ಲಿ ವಿಜಯವಾಣಿ ಮತ್ತು ದಿಗ್ವಿಜಯ 247 ನ್ಯೂಸ್ ಹಮ್ಮಿಕೊಂಡಿದ್ದ ‘ಹಸಿರು ಕರ್ನಾಟಕ’ ಅಭಿಯಾನಕ್ಕೆ ರಾಜ್ಯಾದ್ಯಂತ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ.

ಬೆಂಗಳೂರು ಸೇರಿ ರಾಜ್ಯದ ಎಲ್ಲ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಬುಧವಾರ ನಡೆದ ಅಭಿಯಾನದಲ್ಲಿ ಲಕ್ಷಾಂತರ ಸಸಿಗಳನ್ನು ನೆಡಲಾಯಿತು; ನೆಟ್ಟ ಸಸಿಗಳನ್ನು ಪೋಷಿಸಿ, ಬೆಳೆಸುವ ಸಂಕಲ್ಪ ಮಾಡಲಾಯಿತು. ಹಸಿರು ಕರ್ನಾಟಕ ಅಭಿಯಾನಕ್ಕೆ ಕೈ ಜೋಡಿಸುವಂತೆ ನೀಡಿದ ಕರೆಗೆ ಓಗೊಟ್ಟ ಸಾರ್ವಜನಿಕರು, ಸಾವಿರಾರು ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಅಭಿಯಾನದ ಯಶಸ್ಸಿಗೆ ಮುನ್ನುಡಿ ಬರೆದರು.

ಶಾಲಾ-ಕಾಲೇಜುಗಳಿಗೆ ರಜೆ ಇದ್ದರೂ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ಬರದಿಂದ ಕಂಗೆಟ್ಟಿರುವ ರಾಜ್ಯದ ಚಿತ್ರಣ ಬದಲಿಸುವ ನಿಟ್ಟಿನಲ್ಲಿ ಈ ಅಭಿಯಾನ ಮಹತ್ವದ ಪಾತ್ರ ವಹಿಸಲಿದೆ. ಮಾಧ್ಯಮ ಸಂಸ್ಥೆಯಾಗಿ ಸಾಮಾಜಿಕ ಕಾರ್ಯಗಳಲ್ಲಿ ಮುಂಚೂಣಿಯಲ್ಲಿರುವ ವಿಜಯವಾಣಿ ಮತ್ತು ದಿಗ್ವಿಜಯ 247 ನ್ಯೂಸ್​ಗೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಯಿತು.

ರಾಜ್ಯಾದ್ಯಂತ ಯಶಸ್ವಿ: ಬೆಂಗಳೂರಿನ 14 ಕಡೆಗಳಲ್ಲಿ ನಡೆದ ಕಾರ್ಯಕ್ರಮಗಳಿಗೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಯಿತು. ಬೆಂಗಳೂರು ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ, ನಟರಾದ ವಿಜಯ ರಾಘವೇಂದ್ರ, ಪ್ರಜ್ವಲ್ ದೇವರಾಜ್, ನಟಿ ಮಿಲನ ನಾಗರಾಜ್ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ, ದಿಗ್ವಿಜಯ ಸುದ್ದಿವಾಹಿನಿ ಪರಿಸರ ಜಾಗೃತಿಯ ಕಾರ್ಯಕ್ರಮಗಳನ್ನು ಏರ್ಪಡಿಸಿರುವುದು ಶ್ಲಾಘನೀಯ. ಹಸಿರು ಇದ್ದರೆ ನಾವು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಗಿಡ, ಮರಗಳನ್ನು ಬೆಳೆಸಲು ಎಲ್ಲರೂ ಮುಂದಾಗಬೇಕಿದೆ.

| ವಿಜಯ್ ರಾಘವೇಂದ್ರ ಚಿತ್ರನಟ