ನಿತ್ಯೋತ್ಸವ ಇಂದು ವಿಶ್ವ ಪರಿಸರ ದಿನ

ವಿವಿಧ ರೀತಿಯ ಮಾಲಿನ್ಯ, ಅರಣ್ಯನಾಶ, ಪ್ಲಾಸ್ಟಿಕ್ ಹಾವಳಿ, ಕೈಗಾರಿಕೀಕರಣ, ನಗರೀಕರಣ… ಇವೆಲ್ಲದುದರ ಪರಿಣಾಮ ಮಳೆ ಇಳಿಮುಖವಾಗುತ್ತಿದೆ, ತಾಪ ಏರುತ್ತಿದೆ. ಹೀಗೆಯೇ ಮುಂದುವರೆದರೆ ಭೂಮಿಯ ಪರಿಸ್ಥಿತಿ ಏನಾಗಬಹುದು ಎಂಬುದನ್ನು ಊಹಿಸುವುದೂ ಕಷ್ಟ. ಅಭಿವೃದ್ಧಿಯೂ ಬೇಕು, ಜತೆಗೆ ಪರಿಸರದ ಮೇಲಾಗುತ್ತಿರುವ ದುಷ್ಪರಿಣಾಮವನ್ನೂ ತಡೆಯಬೇಕು. ಇದಕ್ಕೆ ನಿಮ್ಮ ಬಳಿ ಏನಾದರೂ ವಿಶಿಷ್ಟ ಐಡಿಯಾ ಇದ್ದರೆ ಬರೆದು ಕಳಿಸಿ ಎಂದು ‘ವಿಜಯವಾಣಿ’ ನೀಡಿದ ಕರೆಗೆ ಸಾವಿರಾರು ಓದುಗರು ಸ್ಪಂದಿಸಿದ್ದಾರೆ. ಆ ಪೈಕಿ ಆಯ್ದ ಕೆಲವು ಸಲಹೆಗಳನ್ನು ಇಲ್ಲಿ ಪ್ರಕಟಿಸಲಾಗಿದೆ. ಜತೆಗೆ, ಪರಿಸರದ ಬಗ್ಗೆ ಆಸಕ್ತಿಯುಳ್ಳ ಕೆಲವು ಸೆಲೆಬ್ರಿಟಿಗಳೂ ಇದೇ ಸಂದರ್ಭದಲ್ಲಿ ‘ವಿಜಯವಾಣಿ’ ಜತೆ ಮಾತನಾಡಿದ್ದಾರೆ. ಈ ವಾರದ ‘ಮಸ್ತ್’ ಪುರವಣಿ ‘ಪರಿಸರ ದಿನ’ಕ್ಕೆ ಸಮರ್ಪಿತ.

# ನಾವು ಬಳಸುವ ವಸ್ತು ಎಲ್ಲಿಂದ ಬರುತ್ತಿದೆ?

ನಾವು ದಿನನಿತ್ಯ ಉಪಯೋಗಿಸುತ್ತಿರುವ ವಸ್ತುಗಳಿಂದಲೇ ಪರಿಸರ ನಾಶ ಮಾಡುತ್ತಿದ್ದೇವೆ ಎಂಬುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಬಟ್ಟೆ ಹೇಗೆ ತಯಾರಾಗುತ್ತದೆ ಎಂಬ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದೇ ಇಲ್ಲ. ಉದಾಹರಣೆಗೆ ಪಾಲಿಸ್ಟರ್ ಬಟ್ಟೆ. ಇದರಲ್ಲಿ ಸುಂದರ ಡಿಸೈನ್​ಗಳು, ವೆರೈಟಿಗಳು ಸಿಗುತ್ತವೆ ನಿಜ. ಆದರೆ ಪಾಲಿಸ್ಟರ್ ಬಟ್ಟೆ ಒಂದು ರೀತಿಯಲ್ಲಿ ಪ್ಲಾಸ್ಟಿಕ್ ಇದ್ದಂತೆಯೇ. ಇದನ್ನು ತೊಳೆದಾಗ ನೀರಿಗೆ ಸೇರುವ ರಾಸಾಯನಿಕಗಳಿಂದ ಭಾರಿ ಪ್ರಮಾಣದಲ್ಲಿ ಪರಿಸರಕ್ಕೆ ಧಕ್ಕೆ ಉಂಟಾಗುತ್ತದೆ. ಸೀರೆಯ ಮೇಲಿನ ಜರಿಗಳನ್ನು ನೀವು ನೋಡಿರುತ್ತೀರಿ ಅಲ್ಲವೆ? ಅದೂ ಪ್ಲಾಸ್ಟಿಕ್ಕೆ. ಅದರಲ್ಲಿರುವ ಮೈಕ್ರೊ ಪ್ಲಾಸ್ಟಿಕ್ ನೀರಿಗೆ ಸೇರಿದರೆ, ಅದು ಕೊಳಚೆ ನೀರು ಸಂಸ್ಕರಣಾ ಘಟಕದಲ್ಲಿಯೂ ಸಂಸ್ಕರಣೆ ಆಗದೆ ನಾವು ತಿನ್ನುವ ಆಹಾರದೊಡನೆ ಸೇರಿ ಪುನಃ ನಮ್ಮ ಹೊಟ್ಟೆಯನ್ನೇ ಸೇರುತ್ತದೆ. ದಿನನಿತ್ಯ ಉಪಯೋಗಿಸುವ ಟೂಥ್​ಪೇಸ್ಟ್ ಸೇರಿದಂತೆ ಪ್ಲಾಸ್ಟಿಕ್ ನಮ್ಮ ಅರಿವಿಗೆ ಬಾರದೇ ನಮ್ಮ ದೇಹ ಸೇರುತ್ತಿವೆ. ಇವೆಲ್ಲವೂ ನಾವೇ ಸುಲಭದಲ್ಲಿ ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದಾದ ವಸ್ತುಗಳು. ಇವುಗಳ ಬಗ್ಗೆ ಸ್ವಲ್ಪ ಯೋಚಿಸಿ ಚಿಕ್ಕ ಚಿಕ್ಕ ಹೆಜ್ಜೆಯನ್ನಿಟ್ಟರೆ, ಮುಂದೆ ಅದೇ ಬೃಹದಾಕಾರವಾಗಿ ಪರಿಸರ ಉಳಿವಿಗೆ ಕಾರಣವಾಗುತ್ತದೆ. ನಾವೀಗ ಪರಿಸರ ನಾಶ ಮಾಡುವಲ್ಲಿ ಬಹುದೂರ ಬಂದುಬಿಟ್ಟಿದ್ದೇವೆ. ಆದ್ದರಿಂದ ಅದನ್ನು ಉಳಿಸುವ ದಿಸೆಯಲ್ಲಿ ಸ್ವಲ್ಪ ಸ್ವಲ್ಪವಾದರೂ ಮುಂದೆ ಹೆಜ್ಜೆೆ ಇರಿಸಬೇಕಿದೆ.

| ಡಾ. ತೇಜಸ್ವಿನಿ ಅನಂತಕುಮಾರ್ ಅದಮ್ಯ ಚೇತನ ಸ್ವಯಂಸೇವಾ ಸಂಸ್ಥೆ ಅಧ್ಯಕ್ಷೆ

ಕೊಳ್ಳುಬಾಕತನ ಕಮ್ಮಿಯಾಗಲಿ

ಕಂಡಿದ್ದನ್ನೆಲ್ಲ ಖರೀದಿಸಬೇಕು ಎನ್ನಿಸುವ ಕೊಳ್ಳುಬಾಕತನ ಕಮ್ಮಿಯಾಗಲಿ. ಮಿತಬಳಕೆ, ಮರುಬಳಕೆ, ಸರಳ ಜೀವನ ನಮ್ಮದಾದರೆ ಪರಿಸರದ ಮೇಲಿನ ಒತ್ತಡ ಕಡಿಮೆ ಮಾಡಬಹುದು. ಪರಿಸರ ವಿನಾಶವನ್ನು ಖಂಡಿತ ತಡೆಯಬಹುದು.

| ಕಿಶೋರ್ ಕುಮಾರ್ ನಟ

ನಮ್ಮದೂ ಇರಲಿ ಅಳಿಲು ಸೇವೆ

ವಿಶ್ವ ಪರಿಸರ ದಿನಾಚರಣೆ ಅಂದ ತಕ್ಷಣ ಬರೀ ಗಿಡಮರಗಳನ್ನಷ್ಟೇ ನೆಡುವುದಲ್ಲ. ನಮ್ಮ ನಿತ್ಯ ಜೀವನದಲ್ಲೂ ಹಲವು ರೀತಿಯಲ್ಲಿ ಪರಿಸರಕ್ಕೆ ಅಳಿಲು ಸೇವೆ ಮಾಡುವ ಅವಕಾಶ ನಮ್ಮೆಲ್ಲರಿಗೂ ಸಿಗುತ್ತದೆ. ಪ್ಲಾಸ್ಟಿಕ್ ನೀರಿನ ಬಾಟಲ್ ಖರೀದಿಸುವ ಬದಲು, ನಮ್ಮ ಜತೆಯಲ್ಲಿಯೇ ಒಂದು ಸ್ಟೀಲ್ ಬಾಟಲ್ ಇಟ್ಟುಕೊಂಡರೆ ಎಷ್ಟೋ ಒಳಿತು. ಓಡಾಟಕ್ಕೆ ದ್ವಿಚಕ್ರ ವಾಹನ ಬಳಸುವ ಬದಲು ಸಾರ್ವಜನಿಕ ಸಾರಿಗೆ ಉಪಯೋಗಿಸುವುದು ತುಂಬ ಒಳ್ಳೆಯದು. ನಾನೇ ಎಷ್ಟೋ ಸಲ ನಮ್ಮ ಮನೆ ಬಳಿಯ ಮೆಟ್ರೋದಿಂದ ಮುಖಕ್ಕೆ ಸ್ಕಾರ್ಫ್ ಕಟ್ಟಿಕೊಂಡು ಮಾಲ್​ಗೆ ಹೋಗಿದ್ದೇನೆ. ವಾರಾಂತ್ಯದಲ್ಲಿ ವಾಹನ ಬದಿಗಿಟ್ಟು, ಸೈಕಲ್ ಸವಾರಿ ಹೋಗುವುದನ್ನು ರೂಢಿಸಿಕೊಂಡರೆ ದೇಹಕ್ಕೂ ಒಳ್ಳೆಯದು, ಜೇಬಿಗೂ ಉಳಿತಾಯ. ಇದೆಲ್ಲ ಒಂದೆಡೆಯಾದರೆ ಐಟಿ, ಬಿಟಿ ಕಂಪನಿಗಳು ಸ್ವತಃ ಇನಿಷಿಯೇಟಿವ್ ತೆಗೆದುಕೊಂಡು, ವಾರದ ಎರಡು ದಿನ ಕೆರೆ ಹೂಳೆತ್ತುವುದು, ಕೆರೆ ಅಭಿವೃದ್ಧಿ ಕೆಲಸಗಳಲ್ಲಿ ಭಾಗವಹಿಸುವುದರಿಂದಲೂ ಪರಿಸರಕ್ಕೆ ಸೇವೆ ಸಲ್ಲಿದಂತಾಗುತ್ತದೆ. ಹೀಗೆ ಇನ್ನೂ ಸಾಕಷ್ಟು ಅವಕಾಶಗಳು ನಮ್ಮ ಕಣ್ಣ ಮುಂದಿವೆ. ಅವೆಲ್ಲವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡಿದ್ದೇ ಆದಲ್ಲಿ, ನಮ್ಮ ಕೈಯಿಂದ ಪರಿಸರಕ್ಕೆ ಸಣ್ಣ ಕೊಡುಗೆ ಕೊಟ್ಟಂತಾಗುತ್ತದೆ.

| ಸೋನು ಗೌಡ ನಟಿ

ನಮ್ಮ ದಿನನಿತ್ಯದ ಜೀವನಶೈಲಿ ಬದಲಿಸಿಕೊಳ್ಳಬೇಕಿದೆ

ದಿನನಿತ್ಯ ನಮ್ಮ ಜೀವನಶೈಲಿಯನ್ನು ಸ್ವಲ್ಪವೇ ಬದಲಿಸಿಕೊಂಡರೂ ಪರಿಸರಕ್ಕೆ ದೊಡ್ಡ ಕೊಡುಗೆಯನ್ನೇ ನೀಡಬಹುದು. ಹೋಟೆಲ್​ಗೆ ಹೋದ ತಕ್ಷಣ ನೀರು ಕೊಡಲು ವೇಟರ್ ಬಂದಾಗ ನಿಮಗೆ ಅಗತ್ಯ ಇದ್ದರೆ ಮಾತ್ರ ತೆಗೆದುಕೊಳ್ಳಿ. ಹಾಗೆ ಮಾಡದ ನಾವು ದಿನನಿತ್ಯ ಎಷ್ಟೊಂದು ನೀರು ಪೋಲು ಮಾಡುತ್ತಿದ್ದೇವೆ ಗೊತ್ತೆ? ಆ ಒಂದು ಗ್ಲಾಸ್ ನೀರು ನಮ್ಮ ಬಳಿಗೆ ಶುದ್ಧಗೊಂಡು ಬರಲು ಎಷ್ಟೊಂದು ಪ್ರೊಸೆಸ್ ಆಗಿರುತ್ತದೆ, ಅಪಾರ ಪ್ರಮಾಣದ ವಿದ್ಯುತ್ ಬಳಕೆಯಾಗಿರುತ್ತದೆ. ಅದರಿಂದ ಪರಿಸರಕ್ಕೆ ಅಪಾರ ಧಕ್ಕೆ ಆಗಿರುತ್ತದೆ. ಆದರೆ ಸುಮ್ಮನೆ ಅರ್ಧಂಬರ್ಧ ನೀರು ಕುಡಿದು ಚೆಲ್ಲಿಬಿಟ್ಟರೆ ಹೇಗೆ? ನಾವು ಅನಗತ್ಯವಾಗಿ ಬಳಸುವ ಲೈಟ್, ಫ್ಯಾನ್, ಎ.ಸಿ. ಎಲ್ಲದರಿಂದಲೂ ಪರಿಸರಕ್ಕೆ ಧಕ್ಕೆಯೇ. ಈಗ ಕಲ್ಲಿದ್ದಲಿನ ಕೊರತೆ ವಿಪರೀತವಿದೆ. ಇದನ್ನು ತಯಾರಿಸಲು ಪರಿಸರಕ್ಕೆ ಅಪಾರ ಹಾನಿ ಮಾಡಲಾಗುತ್ತಿದೆ. ಆದರೆ ನಾವು ವಿದ್ಯುಚ್ಛಕ್ತಿಯ ಬಳಕೆಯನ್ನು ಸರಿಯಾಗಿ ಮಾಡದೇ ಪರಿಸರನಾಶಕ್ಕೆ ಕೊಡುಗೆ ನೀಡುತ್ತಿದ್ದೇವೆ. ಇವೆಲ್ಲಾ ಕೇಳಲು ತೀರಾ ಚಿಕ್ಕ ಅಥವಾ ಕ್ಷುಲ್ಲಕ ವಿಷಯ ಎನ್ನಿಸುತ್ತದೆ. ಆದರೆ ಹನಿಹನಿಗೂಡಿದರೆ ಹಳ್ಳ ಅಲ್ಲವೆ? ಪರಿಸರವನ್ನು ಉಳಿಸಲು ಕೆಲ ಸಂಘ-ಸಂಸ್ಥೆಗಳು, ಕೆಲವೇ ಜನರು ಮುಂದಾದರೆ ಸಾಲದು. ಪ್ರತಿಯೊಬ್ಬ ನಾಗರಿಕ ತಮ್ಮ ಕೈಲಾದ ಕೊಡುಗೆಯನ್ನು ನೀಡಬೇಕು.

| ಸುರೇಶ್ ಹೆಬ್ಳೀಕರ್ ಪರಿಸರವಾದಿ

ಮಣ್ಣು ನಾಶ ಮೊದಲು ತಡೆಯೋಣ

ಒಂದು ಎಕರೆಯಲ್ಲಿ ಒಂದು ಸೆಂಟಿಮೀಟರ್ ಮಳೆಯಾದರೆ 40 ಸಾವಿರ ಲೀಟರ್ ನೀರು ಸಿಗುತ್ತೆ, ಅದರಲ್ಲಿ ಕಾಲು ಭಾಗವನ್ನಾದರೂ ಉಳಿಸಬೇಕಲ್ಲವೇ? ಮಣ್ಣಿಗೆ ಆ ಗುಣವೇ ಉಳಿದಿಲ್ಲ ಈಗ. ಕೊಚ್ಚಿಕೊಂಡು ಹೋಗುತ್ತದೆ. ಕೆರೆಗಳಲ್ಲಿ ಹೀಗೆ ಶೇಖರಣೆ ಯಾದ ಮಣ್ಣನ್ನಾದರೂ ತಂದು ಕೃಷಿ ಭೂಮಿಗೆ ಹಾಕಬೇಕಲ್ಲವೇ? ಆದರೆ, ನಮ್ಮ ರೈತರು ಹಾಗೆ ಮಾಡೋದಿಲ್ಲ. ಬದಲಿಗೆ, ರಾಸಾಯನಿಕ ತಂದು ಸುರೀತಾರೆ. ಮಣ್ಣಿನ ಸಂರಕ್ಷಣೆ ಅತಿ ಮುಖ್ಯ. ಹೀಗಾಗಿ, ಇಂದು ನದಿ ಜೋಡಣೆಯ ಯೋಜನೆಗಳಿಗಿಂತ ಕೆರೆಕುಂಟೆಗಳ ಹೂಳು ತೆಗೆಯಬೇಕಿದೆ. ಮಣ್ಣಿನ ಸತ್ವ ಉಳಿಸಬೇಕು, ಅದರಿಂದ ನೀರು ಉಳಿಯುತ್ತದೆ. ನೂರಿನ್ನೂರು, ಸಾವಿರ ವರ್ಷಗಳಿರುವಂಥ ಮರಗಳನ್ನು ಅರಣ್ಯ ಇಲಾಖೆ ಬೆಳೆಸಬೇಕಿದೆ. ಅಂಥವನ್ನು ಮತ್ತೆ ಮತ್ತೆ ನೆಡಬೇಕು. ಪರಿಸರ ಅಂದರೆ ವೈವಿಧ್ಯ. ಮಣ್ಣು ಅದರ ಪ್ರಮುಖ ಅಂಗ. ಮೇಲ್ಮಣ್ಣಿಲ್ಲದೇ ಭೂಮಿ ಮೇಲೆ ಏನೂ ಬೆಳೆಯೋದಿಲ್ಲ. ರಸಗೊಬ್ಬರಕ್ಕೆ ಸಬ್ಸಿಡಿ ನೀಡುವ ಬದಲು ಹೊಲಗಳಿಗೆ ಬದು ಹಾಕಿಸಲು, ಕೆರೆ ರಕ್ಷಿಸಲು ಅದರ ಅರ್ಧದಷ್ಟನ್ನಾದರೂ ನೆರವು ನೀಡಲಿ. ನೀಲಗಿರಿ, ಅಕೇಶಿಯಾ ಮರಗಳು ಸಹ ಇಂದು ಪರಿಸರದ ನಾಶಕ್ಕೆ ಕಾರಣವಾಗಿವೆ. ಹೀಗಾಗಿ, ಪ್ರತಿ ಗ್ರಾಮದಲ್ಲಿ ಶೇ.30ರಷ್ಟು ಅರಣ್ಯ ಬೆಳೆಸುವುದನ್ನು ಕಡ್ಡಾಯಗೊಳಿಸಲಿ.

| ಸಾಯಿಲ್ ವಾಸು ಮಣ್ಣು ತಜ್ಞ