ಬನ್ನಿ ಸರಸರ… ಉಳಿಸೋಣ ಪರಿಸರ

ಪರಿಸರ ಉಳಿಸುವ ಬಗ್ಗೆ ವಿಶಿಷ್ಟ ಐಡಿಯಾ ಕೊಡಿ ಎಂಬ ‘ವಿಜಯವಾಣಿ’ ಕರೆಗೆ ಸ್ಪಂದಿಸಿ ನೂರಾರು ಪತ್ರಗಳು, ಸಾವಿರಾರು ಇ-ಮೇಲ್​ಗಳು ಬಂದಿವೆ. ಪರಿಸರ ರಕ್ಷಿಸುವ ಬಗ್ಗೆ ಜನರಲ್ಲಿ ಎಷ್ಟು ಆಸಕ್ತಿ ಇದೆ ಎಂಬುದಕ್ಕೆ ಇದು ಸಾಕ್ಷಿ. ಸ್ಥಳಾವಕಾಶದ ಅಭಾವದಿಂದ ಎಲ್ಲವನ್ನೂ ಇಲ್ಲಿ ಪ್ರಕಟಿಸಲಾಗುತ್ತಿಲ್ಲ. ಆಯ್ದ ಕೆಲವು ಐಡಿಯಾಗಳು ಇಲ್ಲಿವೆ. ಇದು ಪರಿಸರ ದಿನಕ್ಕಾಗಿ ಓದುಗರಿಗೆ ‘ವಿಜಯವಾಣಿ’ ಕೊಡುಗೆ.

ಸರ್ಕಾರಕ್ಕೆ ಕಾಯದೇ ಕೆರೆಗಳಿಗೆ ಜೀವ ತುಂಬಿದೆವು

ನಮ್ಮೂರ ಕೆರೆಗಳ ಹೂಳೆತ್ತಲು ನಾವು ಒಂದಿಷ್ಟು ಜನ ರ್ಚಚಿಸಿದೆವು. ಸರ್ಕಾರದ ಹಣವಿಲ್ಲದೇ ನಾವೇ ಹಣ ಹೊಂದಿಸಿ, ಹೂಳೆತ್ತೆಲು ತೀರ್ವನಿಸಿ ಅನುಮತಿ ನೀಡುವಂತೆ ಹಿಂದಿನ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡೆವು. ಅವರು ಅದಕ್ಕೆ ಸ್ಪಂದಿಸಿಲ್ಲ. ನಂತರ ಹೊಸ ಜಿಲ್ಲಾಧಿಕಾರಿ ಬಂದಾಗ ಅವರು ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು. ಈಗ ನಮ್ಮೂರ ಎರಡು ಕೆರೆಗಳು ಸಂಪೂರ್ಣ ಕ್ಲೀನ್ ಆಗಿವೆ. ಇನ್ನೆರಡು ಕೆರೆಗಳ ಹೂಳೆತ್ತುವ ಕಾರ್ಯ ಪ್ರಗತಿಯಲ್ಲಿದೆ. ನಮ್ಮ ಕೆಲಸ ಕಂಡ ಗ್ರಾಮಸ್ಥರು ಹುಮ್ಮಸ್ಸಿನಿಂದ ನಮಗೆ ಕೈಜೋಡಿಸಲು ಮುಂದೆ ಬಂದಿದ್ದಾರೆ. ಅರಣ್ಯ ಇಲಾಖೆ ನೀಡಿರುವ ಗಿಡಗಳನ್ನು ಕೆರೆ ಸುತ್ತಲೂ ನೆಡುತ್ತಿದ್ದೇವೆ. ಒಂದು ಕೆರೆ ಪಕ್ಕದಲ್ಲಿರುವ 20 ಎಕರೆ ಜಾಗದಲ್ಲಿ ಉದ್ಯಾನ ನಿರ್ವಿುಸಲು ಹಾಲ್ಕೇರಿ ಮಠಾಧೀಶ ಡಾ. ಅಭಿನವ ಅನ್ನದಾನ ಸ್ವಾಮೀಜಿ ಮುಂದೆ ಬಂದಿದ್ದಾರೆ. ನಮ್ಮ ಊರಲ್ಲಿರುವ ಎರಡು ಮಠಗಳ ಹೆಸರಿನಲ್ಲಿ ಎರಡು ಅಕೌಂಟ್ ತೆರೆದು, ಇಷ್ಟ ಇದ್ದವರು ಕೆರೆಗಳ ರಕ್ಷಣೆಗಾಗಿ ಹಣ ನೀಡಬಹುದು ಎಂದು ಹೇಳಿದೆವು. ಅದರಲ್ಲಿ ಸುಮಾರು 2 ಲಕ್ಷ ಹಣ ಸಂಗ್ರಹವಾಗಿದೆ. ಆದರೆ ಇದುವರೆಗೆ ಆ ಹಣವನ್ನು ನಾವು ಮುಟ್ಟಿಲ್ಲ. ಇನ್ನೂ ಮಾಡಬೇಕಿರುವ ಕೆಲಸ ತುಂಬಾ ಇದೆ. ಇಂಥ ಪ್ರಯತ್ನಕ್ಕೆ ಒಬ್ಬರು ಹೆಜ್ಜೆ ಮುಂದಿಟ್ಟರೆ, ಹಿಂದೆ ಸಾವಿರಾರು ಜನ ಬರುತ್ತಾರೆ ಎನ್ನುವುದಕ್ಕೆ ನಮ್ಮೂರೇ ಸಾಕ್ಷಿ.

| ಆನಂದ ಕುಲಕರ್ಣಿ ನರೇಗಲ್

ಗಿಡ ನೆಟ್ಟರೆ ಮಾತ್ರ ಅನುಮತಿ

ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಿದಂತೆ, ಮನೆ ಕಟ್ಟುವಾಗ ಗಿಡ ನೆಡುವುದನ್ನು ಕಡ್ಡಾಯ ಮಾಡಬೇಕು. ಮನೆಯ ಮುಂದೆ ಸಾಕಷ್ಟು ಅವಕಾಶಗಳು ಇದ್ದರೆ, ಅಂಥವರಿಗೆ ಗಿಡ ನೆಟ್ಟರೆ ಮಾತ್ರ ಕಟ್ಟಡ ನಿರ್ವಣಕ್ಕೆ ಅನುಮತಿ ಅಥವಾ ಶುಲ್ಕ ವಿನಾಯಿತಿ ನೀಡುವಂಥ ಕಾನೂನು ಜಾರಿಯಾಗಬೇಕು. ಸಂಸಾರಕ್ಕೊಂದು ಮಗು ಎನ್ನುವಂತೆ ಮನೆಗೆ ಕನಿಷ್ಠ ನಾಲ್ಕು ಗಿಡಗಳನ್ನು ಕಡ್ಡಾಯ ಮಾಡಬೇಕು.

| ಅನುರಾಧಾ ಮುಲ್ಕಿ, ಮಂಗಳೂರು

ಜಮೀನಿನ ಅಂಚಿನಲ್ಲಿ ಪರಿಸರ ಬೇಲಿ

ವ್ಯವಸಾಯದ ಜಮೀನುಗಳ ಅಂಚಿನಲ್ಲಿ ರೈತರು ಕತ್ತಾಳೆ ಮಾಸಗಳನ್ನು ಹಚ್ಚಬೇಕು. ಇದರಿಂದ ಮಳೆಯ ನೀರು ಹೊರಗೆ ಹೋಗುವುದನ್ನು ತಡೆಯಬಹುದು. ಭೂ ಸವಕಳಿಯನ್ನೂ ನಿಲ್ಲಿಸಬಹುದು. ಅಲ್ಲದೆ ತೋಟಕ್ಕೆ ಭದ್ರತೆಯನ್ನೂ ನೀಡುತ್ತದೆ. ಐದು ಅಡಿ ಬಿಟ್ಟು ಒಳಭಾಗದಲ್ಲಿ ರೈತರಿಗೆ ಅನುಕೂಲವಾಗುವಂತಹ ಹೊಂಗೆ, ಬೇವು, ನೇರಳೆ, ಹುಣಸೆ, ಸೀತಾಫಲ, ಅಂಟುವಾಳದ ಮರಗಳನ್ನು, ಮಲೆನಾಡಿನಲ್ಲಾದರೆ ತೇಗ, ಮುತ್ತುಗದಂತಹ ಮರಾವಳಿಗಳನ್ನು ಬೆಳೆಸಬಹುದು. ಇದಿಷ್ಟೂ ಒಳಗಿನ ಯಾವುದೇ ಬೆಳೆಗೆ ಬೇಲಿಯಾಗಿ ರಕ್ಷಣೆ ನೀಡುತ್ತದೆ. ರೈತನ ಭೂಮಿ ಇಳಿಜಾರಾಗಿದ್ದಲ್ಲಿ ಅಲ್ಲಲ್ಲಿ ಸಣ್ಣ ಪ್ರಮಾಣದ ಒಡ್ಡುಗಳನ್ನು ಹಾಕಬೇಕು. ಇದರಿಂದ ಕಡಿಮೆ ಮಳೆ ಬಂದಂತಹ ಸಂದರ್ಭದಲ್ಲಿ ಭೂಮಿಯ ತೇವಾಂಶ ಹಾಗೆಯೇ ಸ್ವಲ್ಪ ದಿನಗಳ ಕಾಲ ಉಳಿದು, ಹಾಕಿದ ಫಸಲನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಹೀಗೆ ರೈತರು ಮೂರ್ನಾಲ್ಕು ವರ್ಷ ಜತನದಿಂದ ಬೇಲಿಯ ಗಿಡಗಳನ್ನು ಕಾಪಾಡಿದಲ್ಲಿ ಭದ್ರವಾದ ಕತ್ತಾಳೆಯ ಪರಿಸರ ಬೇಲಿ ಗಟ್ಟಿಗೊಳ್ಳುತ್ತದೆ. ಅಲ್ಲದೆ ಈ ಮರಗಳಿಂದ ಉದುರುವ ಎಲೆಗಳು, ಹೂವುಗಳು ಎಲ್ಲವೂ ಭೂಮಿಗೆ ಉತ್ಕೃಷ್ಟ ಗೊಬ್ಬರವಾಗುತ್ತದೆ.

| ಎಂ.ಎಸ್. ಮಂಜುಳಾ ಡಾ. ಸ್ವಾಮಿ ರಾಂಪುರ (ಚಿತ್ರದುರ್ಗ ಜಿಲ್ಲೆ)

ಮೋದಿ ಕರೆಯಿಂದ ವೃಕ್ಷಸಂಪತ್ತು ಹೆಚ್ಚಳ ಸಾಧ್ಯ

ಪ್ರಧಾನಿ ಮೋದಿ ಅವರು ಹಿಂದೊಮ್ಮೆ ಸ್ವಚ್ಛ ಭಾರತ ಅಭಿಯಾನ ಆರಂಭಿಸಿದಾಗ ಇಡೀ ದೇಶದ ಜನ ಎಷ್ಟು ತ್ವರಿತವಾಗಿ ಮತ್ತು ಸಕ್ರಿಯವಾಗಿ ಸ್ಪಂದಿಸಿದರೆಂಬುದು ಎಲ್ಲರಿಗೂ ಗೊತ್ತಿದೆ. ಹಾಗೆಯೇ ಈ ಬಾರಿ ಅವರು ಎಲ್ಲ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಇಕ್ಕೆಲಗಳಲ್ಲಿ ವೃಕ್ಷಗಳನ್ನು ಬೆಳೆಸುವಂತೆ ಜನತೆಗೆ ಕರೆ ಕೊಟ್ಟರೆ ಸಾಕು. ಎಲ್ಲ ಹೆದ್ದಾರಿಗಳೂ ವೃಕ್ಷಸಂಪತ್ತಿನಿಂದ ನಳನಳಿಸುವುದರಲ್ಲಿ ಸಂಶಯವೇ ಇಲ್ಲ. ಪ್ರಧಾನಿಯ ಒಂದೇ ಕರೆಯಿಂದ ಕೋಟ್ಯಂತರ ವೃಕ್ಷಗಳು ರಸ್ತೆಬದಿ ಬೆಳೆದುನಿಲ್ಲುತ್ತವೆ. ಇದಕ್ಕೆ ಪೂರಕವಾಗಿ ಬೇಕಿದ್ದರೆ ಕಾರ್ಪೆರೇಟ್ ಕಂಪೆನಿಗಳ ಸಾಮಾಜಿಕ ಜವಾಬ್ದಾರಿ ನಿಧಿಯನ್ನೂ ಬಳಸಬಹುದು. ಆ ಕಂಪೆನಿಗಳ ಮಧ್ಯೆಯೇ ಪೈಪೋಟಿ ಏರ್ಪಡುವುದರಿಂದ ಒಂದೆರಡು ವರ್ಷಗಳಲ್ಲೇ ಹಸಿರನ್ನು ನೂರ್ಮಡಿ ಮಾಡಬಹುದು.

| ವಾಸುದೇವ ಪ್ರಭು ಶಿರಸಿ

ಹಣ್ಣಿನ ಬೀಜಗಳೆಂದರೆ ಕಸ ಅಲ್ಲ…

ನಾವೆಲ್ಲರೂ ಆಗಾಗ ಮನೆಗೆ ಹಣ್ಣುಗಳನ್ನು ತಂದು ತಿನ್ನುತ್ತೇವಲ್ವಾ? ಇನ್ನು ಮುಂದೆ ಪ್ರತಿ ಸಲ ಹಣ್ಣು ತಂದಾಗಲೂ ಒಂದು ಒಳ್ಳೆಯ ಪ್ರಯತ್ನ ಮಾಡೋಣ. ಮಾವು, ನೇರಳೆ, ಹಲಸು, ಸೀತಾಫಲ ಹೀಗೆ ಯಾವುದೇ ಹಣ್ಣಾದರೂ ಅದರ ಬೀಜಗಳನ್ನು ಕಸದ ಗಾಡಿಗೋ, ತೊಟ್ಟಿಗೋ ಹಾಕುವ ಬದಲು ಆ ಬೀಜಗಳನ್ನು ಸ್ವಚ್ಛವಾಗಿ ತೊಳೆದು ಒಂದು ಸಣ್ಣ ಚೀಲದಲ್ಲಿ ಪ್ಯಾಕ್ ಮಾಡಿ ಮನೆಯಲ್ಲಿ ಇಟ್ಟುಕೊಳ್ಳೋಣ. ಮಳೆಗಾಲ ಆರಂಭವಾದ ಬಳಿಕ ಕಾರು, ಬಸ್ಸು ಅಥವಾ ಯಾವುದೇ ವಾಹನದಲ್ಲಿ ಹೊರಗೆ ಹೋಗುವಾಗ ರಸ್ತೆ ಬದಿ ಇರುವ ಖಾಲಿ ಮಣ್ಣಿನ ನೆಲದಲ್ಲಿ ಎಸೆಯುತ್ತ ಹೋಗೋಣ. ಮಳೆ ಬಂದ ನಂತರ ಆ ಬೀಜಗಳು ಮೊಳಕೆ ಒಡೆದು ಸಸಿಯಾಗಿ ಬೆಳೆಯುವ ಸಾಧ್ಯತೆ ಹೆಚ್ಚಾಗಿರುತ್ತದೆ. ನಾವು ಎಸೆದ ಹತ್ತಾರು ಬೀಜಗಳ ಪೈಕಿ ಒಂದೆರಡಾದರೂ ಗಿಡವಾಗಿ, ಮರವಾಗಿ ಬೆಳೆದರೆ ನಮ್ಮ ಕೆಲಸ ಸಾರ್ಥಕ. ಅಲ್ವೆ? ಯಾರಿಗೋ ಫಲ ಕೊಡೋ ಗಿಡಕ್ಕೆ ನಾವ್ಯಾಕೆ ಬೀಜ ಹಾಕಬೇಕು ಅನ್ನಬೇಡಿ. ಅವರು ಯಾರೋ ಅಲ್ಲ, ನಮ್ಮ ಮುಂದಿನ ಪೀಳಿಗೆ!

| ಕುಮಾರ ಸಿ.ಟಿ. ತೊಡಿಕಾನ ಮತ್ತು ನೀತು ವೈ.ಜಿ.

ಗಟಾರಕ್ಕೆ ಕಲ್ಲು ಬಳಸಿ

ಅಭಿವೃದ್ಧಿಯ ಹೆಸರಿನಲ್ಲಿ ಸಿಮೆಂಟ್ ರಸ್ತೆಗಳನ್ನು ನಿರ್ವಿುಸಿ, ಅದರ ಅಕ್ಕಪಕ್ಕದಲ್ಲಿ ಸಿಮೆಂಟ್ ಹಾಗೂ ಕಬ್ಬಿಣವನ್ನು ಬಳಸಿ ಗಟಾರಗಳನ್ನು ನಿರ್ವಿುಸುತ್ತಿದ್ದಾರೆ. ಇದರಿಂದ ಭೂಮಿಯಲ್ಲಿ ನೀರು ಇಂಗದೇ ಹರಿದು ಹೋಗುತ್ತಿದೆ ಹಾಗೂ ಅಂತರ್ಜಲ ಕುಸಿಯುತ್ತಿದೆ. ಆದ್ದರಿಂದ ಗಟಾರಗಳನ್ನು ನಿರ್ವಿುಸುವಾಗ ಎರಡೂ ಬದಿಯಲ್ಲಿ ಕಲ್ಲುಗಳನ್ನು ಬಳಸುವುದು ಸರಿಯಾದ ಕ್ರಮ. ಇದರಿಂದ ನೀರು ಭೂಮಿಯಲ್ಲಿ ಇಂಗಿ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ.

| ಪ್ರಶಾಂತ್ ವಸಂತರಾವ್ ಪಾಟೀಲ್ ಧಾರವಾಡ

ಮರವನ್ನು ಕೊಂದರೆ ಶಿಕ್ಷೆ ಯಾಕಿಲ್ಲ?

ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಸಾಯಿಸಿದರೆ ಹೇಗೆ ಶಿಕ್ಷೆ ನೀಡಲಾಗುತ್ತದೆಯೋ ಹಾಗೆಯೇ ಮರಗಳನ್ನು ಕೊಲ್ಲುವವರಿಗೆ ಶಿಕ್ಷೆ ನಿಗದಿಯಾಗಬೇಕು. ಆ ಶಿಕ್ಷೆ ಏನು ಗೊತ್ತೆ? ಒಂದು ಮರ ಕಡಿದರೆ 50 ಗಿಡಗಳನ್ನು ನೆಟ್ಟು ಪೋಷಿಸಿ ಮರಗಳನ್ನಾಗಿಸಬೇಕು. ಸರಿಯಾಗಿ ಬೆಳೆಸುತ್ತಿದ್ದಾರೋ ಇಲ್ಲವೋ ಎಂಬ ಬಗ್ಗೆ ಕಾಲಕಾಲಕ್ಕೆ ಅಧಿಕಾರಿಗಳು ಹೋಗಿ ತಪಾಸಣೆ ಮಾಡುವುದನ್ನು ಕಡ್ಡಾಯ ಮಾಡಬೇಕು. ಬೆಳೆಸುತ್ತಿಲ್ಲವಾದರೆ ಭಾರಿ ಪ್ರಮಾಣದ ದಂಡ ವಿಧಿಸಲು ಕಾನೂನು ರೂಪಿಸಬೇಕು. ನನ್ನ ದೃಷ್ಟಿಯಲ್ಲಿ ಹಸಿರನ್ನು ಉಳಿಸಲು ಇದೊಂದು ವಿಶಿಷ್ಟ ಉಪಾಯ.

| ಪ್ರಣವ್ ಎನ್. ಅಣಜಿ 9ನೇ ತರಗತಿ ವಿದ್ಯಾರ್ಥಿ, ಸೊರಬ

ಮನೆ ಮುಂದೆ ಗಿಡ ಇದ್ರಷ್ಟೇ ರೇಷನ್ ಕಾರ್ಡ್

ಮನೆಯ ಮುಂದೆ ಮರ, ಗಿಡ ಇದ್ದರೆ ಮಾತ್ರ ಆ ಕುಟುಂಬಕ್ಕೆ ರೇಷನ್ ಕಾರ್ಡ್ ಕೊಡಲಾಗುವುದು ಎಂಬ ಕಾನೂನು ಜಾರಿಗೆ ತರಬೇಕು.

| ಕೊಟ್ರೇಶ್ ಪಿ. ಬೆನ್ನಿಹಳ್ಳಿ ದಾವಣಗೆರೆ

ಮನೆ ಮುಂದೆ ಬುಟ್ಟಿ ನೇತು ಹಾಕಿ!

ನಗರವಿರಲಿ, ಹಳ್ಳಿಯಿರಲಿ ನಿಮ್ಮ ಮನೆಯ ಮುಂದಿನ ಗಿಡಗಳಿಗೆ ಸಣ್ಣ ಬುಟ್ಟಿಯನ್ನು ನೇತು ಹಾಕಿ. ಅಲ್ಲಿ ಹಕ್ಕಿಗಳಿಗಾಗಿ ನೀರು, ಕಾಳುಕಡಿ, ಹಣ್ಣುಗಳನ್ನು ಇಡಿ. ಮನೆಯ ಮುಂದೆ ಇದನ್ನು ಮಾಡಲು ಸಾಧ್ಯವಾಗದಿದ್ದರೆ ತಾರಸಿ ಮೇಲಾದರೂ ಈ ವ್ಯವಸ್ಥೆ ಮಾಡಿ. ಹಾಗೆಯೇ ಸ್ವಲ್ಪ ಜಾಗವಿದ್ದರೂ ಕೆಲ ಹೂಗಿಡಗಳಿಗೆ ಅವಕಾಶ ಕಲ್ಪಿಸಿ. ಇದರಿಂದ ಅಳಿದು ಹೋಗುತ್ತಿರುವ ಗುಬ್ಬಿಯಂತಹ ಪಕ್ಷಿಗಳು, ಜೇನಿನಂಥ ಕೀಟಗಳಿಗೆ ಬದುಕಲು, ಅವುಗಳ ಸಂತತಿ ಬೆಳೆಯಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಇದೊಂದು ಅಳಿಲು ಸೇವೆಯಾಗಿದ್ದರೂ ಪರಿಸರ ಸಂರಕ್ಷಣೆಯ ದಿಸೆಯಲ್ಲಿ ಬಹುದೊಡ್ಡ ಕೊಡುಗೆ.

| ಉಲ್ಲಾಸ ರಾಮ ಗುನಗಾ, ಧಾರವಾಡ

ಕಸ ಕರಗಿಸುವ ಕಾಯಕ

ನಮ್ಮ ಹಳ್ಳಿಯಲ್ಲಿ ಕಸದ ಸಮಸ್ಯೆಯೇ ಇಲ್ಲ. ಏಕೆಂದರೆ ಹಸಿ ಕಸವನ್ನು ಮುಸುರೆ ಮಾಡಿ ಜಾನುವಾರುಗಳಿಗೆ ಕೊಡುತ್ತೇವೆ. ಒಣ ಕಸ ತಿಪ್ಪೆ ಗೊಬ್ಬರವಾಗಿ ಜಮೀನು ಸೇರುತ್ತದೆ. ಬಚ್ಚಲ ನೀರು ಮರಗಳ ಬುಡದಲ್ಲಿ ಇಂಗಿಹೋಗುತ್ತದೆ. ಸಿಂಗಾಪೂರ್​ನಲ್ಲಿ ಶೇಕಡಾ 99ರಷ್ಟು ಕಸವನ್ನು ಕರಗಿಸಿ ವಿದ್ಯುತ್ ಉತ್ಪಾದನೆ ಮಾಡುತ್ತಾರಂತೆ. ಅದೇ ರೀತಿ ನಮ್ಮಲ್ಲೂ ಮಾಡಿದರೆ ಕಸದ ಸಮಸ್ಯೆಗೂ ಪರಿಹಾರ ಸಿಗುತ್ತದೆ. ಪರಿಸರಕ್ಕೂ ಒಳ್ಳೆಯದು.

| ಉಮೇಶ್ ಅರಸು ನರಸೀಪುರ, ಅರಸನಕೋಟೆ.

ಪಂಚವಟಿ ವನ ಬೆಳೆಸೋಣ

ಪರಿಸರ ಸಂರಕ್ಷಣೆ ಮತ್ತು ಔಷಧೋಪಚಾರದಲ್ಲಿ ಪವಿತ್ರ ಪಂಚವಟಿ ವನದ ಪಾತ್ರ ಬಹು ಮುಖ್ಯವಾಗಿದೆ. ಪಂಚವಟಿ ಎಂದರೆ ಐದು ಪವಿತ್ರ, ಜನಹಿತಕಾರಿ, ಪರಿಸರ ಮಾಲಿನ್ಯವನ್ನು ನಿವಾರಣೆ ಮಾಡುವ ಮತ್ತು ರೋಗಗಳನ್ನು ಗುಣಪಡಿಸುವ ಶ್ರೇಷ್ಠ ಗುಣವುಳ್ಳ ಗಿಡಗಳ ಒಂದು ಗುಂಪು. ಅವುಗಳೆಂದರೆ ಬಿಲ್ವ, ಬನ್ನಿ, ಬೇವು, ಅರಳಿ ಹಾಗೂ ಅತ್ತಿ. ಪಂಚವಟಿಯನ್ನು ಪ್ರಾಚೀನ ಕಾಲದಲ್ಲಿ ಋಷಿ ಮುನಿಗಳು, ಆಯುರ್ವೆದ ಪಂಡಿತರು ಬೆಳೆಸುತ್ತಿದ್ದರು ಎಂಬ ಪ್ರತೀತಿ ಇದೆ. ಆ ಗಿಡಗಳನ್ನು ಬೆಳೆಸುವುದಕ್ಕೆ ನಾವೆಲ್ಲ ಈಗ ಆದ್ಯತೆ ನೀಡೋಣ.

– ಲಿಂಗರಾಜ ವಿ. ನಿಡುವಣಿ

ಬರ್ತ್​ಡೇಗೆ ಕೇಕ್ ಬಿಡಿ, ಸಸಿ ನೆಡಿ…

ಹುಟ್ಟು ಹಬ್ಬದಂತಹ ಸಮಾರಂಭಗಳನ್ನು ಕೇಕ್ ಕತ್ತರಿಸುವ ಬದಲು ಸಸಿ ನೆಡುವ ಮೂಲಕ ಆಚರಿಸೋಣ. ಮದುವೆ, ಗೃಹ ಪ್ರವೇಶ ಇತ್ಯಾದಿ ಸಭೆ ಸಮಾರಂಭಗಳಲ್ಲಿ ಉಡುಗೊರೆಯಾಗಿ ಸಸಿಗಳನ್ನು ನೀಡೋಣ, ಅವರ ಕೈಯಿಂದಲೇ ನೆಡಿಸುವ ಮೂಲಕ ಶುಭ ಹಾರೈಸೋಣ. ಆಗಲಾದರೂ ಪರಿಸರದ ಬಗ್ಗೆ ಕೊಂಚ ಜಾಗೃತಿ ಮೂಡಬಹುದು.

| ನಾಗರಾಜ್ ಶೆಟ್ಟರ್ ಶಿವಮೊಗ್ಗ

ಎಂಪಿ, ಎಂಎಲ್​ಎಗಳಿಗೆ ಕಡ್ಡಾಯವಾಗಲಿ

ಸಂಸದರು ಮತ್ತು ಶಾಸಕರಾಗಿ ಆರಿಸಿಬಂದ ಜನಪ್ರತಿನಿಧಿಗಳು ಪ್ರಮಾಣ ವಚನ ಸ್ವೀಕರಿಸುವುದು ಹೇಗೆ ಕಡ್ಡಾಯವೋ, ಹಾಗೆಯೇ ತಾವು ಗೆದ್ದ ಕ್ಷೇತ್ರದಲ್ಲಿ ಕನಿಷ್ಠ ಅವರು ಸಸಿಗಳನ್ನು ನೆಡುವುದನ್ನೂ ಕಡ್ಡಾಯ ಮಾಡಬೇಕು. ಆ ಸಸಿಗಳಿಗೆ ಅವರ ಹೆಸರು ಇಡಬೇಕು. ಮುಂದಿನ ಐದು ವರ್ಷಗಳಲ್ಲಿ ಅವರೇ ಆ ಸಸಿಗಳನ್ನು ಜತನದಿಂದ ಕಾಪಾಡುವ ಜವಾಬ್ದಾರಿ ವಹಿಸಿಕೊಳ್ಳಬೇಕು. ಜನಪ್ರತಿನಿಧಿಗಳೇ ಹೀಗೆ ಮಾಡಿದರೆ ಅದು ಆಯಾ ಕ್ಷೇತ್ರಗಳ ಮತದಾರರಲ್ಲೂ ಜಾಗೃತಿ ಮೂಡಿಸಿದಂತಾಗುತ್ತದೆ.

| ಸೃಷ್ಟಿ ಎಂ. ಮಲಗಿಹಾಳ 9ನೇ ತರಗತಿ, ಲಿಂಗಸಗೂರು

ಟೈರ್​ಗೆ ಬೆಂಕಿ ಹಾಕೋದನ್ನು ನಿಷೇಧಿಸಿ

ರಬ್ಬರ್​ನಿಂದ ತಯಾರಿಸಲಾದ ಟೈರ್​ಗಳನ್ನು ಸುಡುವುದು, ಪ್ರತಿಭಟನೆಗಳಲ್ಲಿ ಮಾಮೂಲಿ. ಹೀಗೆ ಮಾಡುವುದರಿಂದ ಇಂಗಾಲದ ಮಾನಾಕ್ಸೈಡ್ ವಾತಾವರಣವನ್ನು ಕೂಡಿಕೊಂಡು, ವಾಯು ಮಂಡಲವನ್ನು ಕಲುಷಿತಗೊಳಿಸುತ್ತದೆ. ಇದು ತುಂಬಾ ಅಪಾಯಕಾರಿ. ಆದ್ದರಿಂದ ಟೈರ್ ಸುಡುವುದನ್ನು ಸರ್ಕಾರ ನಿಷೇಧಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು.

| ಶ್ರೀರಂಗ ಪುರಾಣಿಕ ವಿಜಯಪುರ

ಸೀಡ್​ಬಾಲ್ ಪ್ರಯೋಗ ಹೆಚ್ಚಲಿ

ಈಗ ಕೆಲವು ಕಡೆಗಳಲ್ಲಿ ‘ಸೀಡ್​ಬಾಲ್’ ಪ್ರಯೋಗ ಯಶಸ್ವಿಯಾಗುತ್ತಿದ್ದು, ಈ ಪ್ರಯೋಗ ಇನ್ನಷ್ಟು ಹೆಚ್ಚಾಗಬೇಕಿದೆ. ಮಣ್ಣು, ಸಾವಯವ ಗೊಬ್ಬರ, ಸೆಗಣಿ, ಎರೆಗೊಬ್ಬರ, ಗೋಮೂತ್ರ ಸೇರಿಸಿ ಹದವಾಗಿ ಮಿಶ್ರಣ ಮಾಡಿ ಅದರ ಒಳಗಡೆ ಬೀಜವನ್ನು ಹಾಕಿ ಚೆಂಡಿನ ಆಕಾರ ಮಾಡಿ ಕಾಡುಗಳಲ್ಲಿ ಎಸೆಯುವ ಪ್ರಯೋಗವಿದು. ಇದನ್ನು ಶಾಲಾ- ಕಾಲೇಜು ಮಕ್ಕಳ ಕೈಯಿಂದ ಮಾಡಿಸುವ ಅಗತ್ಯವಿದೆ. ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಸೀಡ್​ಬಾಲ್ ಪ್ರಯೋಗ ಮಾಡಿಸಬೇಕು. ಹೀಗೆ ಮಾಡಿದರೆ ಮಳೆಗಾಲದಲ್ಲಿ ಅದು ನೆನೆದು ಮೊಳಕೆಯೊಡೆದು ಗಿಡ ಹುಟ್ಟುತ್ತದೆ.

| ಆರ್. ಸಂತೋಷ್ ಮದೇಹಳ್ಳಿ, ಚಿತ್ರದುರ್ಗ

ಮರಗಳ ಮಾಹಿತಿ ನೀಡುವ ಪ್ರಯೋಗ

ತಂತ್ರಜ್ಞಾನ ಉಪಯೋಗಿಸಿಕೊಂಡು ಜನರಲ್ಲಿ ಪರಿಸರ ಸಂರಕ್ಷಣೆ ಮತ್ತು ಮರಗಳ ಬಗ್ಗೆ ವೈಜ್ಞಾನಿಕವಾಗಿ ಅರಿವು ಮೂಡಿಸುವ ಪ್ರಯೋಗವನ್ನು ಸಸ್ಯ ವಿಜ್ಞಾನದ ವಿದ್ಯಾರ್ಥಿಯಾದ ನಾನು ಸ್ನೇಹಿತರ ಜತೆಗೂಡಿ ಮಾಡುತ್ತಿದ್ದೇನೆ. ನಮ್ಮ ಕಾಲೇಜಿನ ಉದ್ಯಾನದಲ್ಲಿರುವ ಪ್ರತಿಯೊಂದು ಮರದ ವೈಜ್ಞಾನಿಕ ಮಾಹಿತಿಯನ್ನು ಗಣಕೀಕರಣ ಮಾಡಿದ್ದೇವೆ. ಒಂದು ವೆಬ್​ಸೈಟ್ ಸೃಷ್ಟಿಸಿ ಅದರಲ್ಲಿ ದತ್ತಾಂಶ ಸಂಗ್ರಹಿಸಿದ್ದೇವೆ. ಪ್ರತಿಯೊಂದು ಮರದ ‘ಕ್ಯೂಆರ್ ಕೋಡ್’ ಸೃಷ್ಟಿಸಿ ಕಾಂಡಕ್ಕೆ ಕಟ್ಟಿದ್ದೇವೆ. ಯಾರು ಬೇಕಾದರೂ ತಮ್ಮಮೊಬೈಲ್ ಫೋನ್​ನಿಂದ ಸ್ಕಾ್ಯನ್ ಮಾಡಿ ಮರದ ಬಗ್ಗೆ ಮತ್ತು ಪರಿಸರ ಸಂರಕ್ಷಣೆಯಲ್ಲಿ ಆ ಮರದ ನಿರ್ದಿಷ್ಟ ಪಾತ್ರದ ಬಗ್ಗೆ ಮಾಹಿತಿ ಪಡೆಯಬಹುದು. ಮಾಲಿನ್ಯದ ತೀವ್ರತೆಯನ್ನು ತಿಳಿದುಕೊಳ್ಳಬಹುದಾದ ಕಲ್ಲು ಹೂವುಗಳಿಂದ (ಲೈಕೆನ್) ಹಿಡಿದು ಅತಿ ಹೆಚ್ಚು ಆಮ್ಲಜನಕ ಬಿಡುಗಡೆ ಮಾಡುವ, ವಾಯುಮಾಲಿನ್ಯವನ್ನು ಹೀರಿಕೊಳ್ಳುವ, ಶಬ್ದಮಾಲಿನ್ಯವನ್ನು ಕಡಿಮೆ ಮಾಡುವ, ಅಳಿವಿನ ಅಂಚಿನಲ್ಲಿರುವ ಮರಗಳ ಮಾಹಿತಿಯೂ ಇಲ್ಲಿ ಲಭ್ಯ (ರೆಡ್ ಡೇಟಾ ಬುಕ್). ಇಂಥ ಮರಗಳನ್ನು ನಾವು ಎಲ್ಲೆಲ್ಲಿ ಬೆಳೆದು ಪರಿಸರ ರಕ್ಷಿಸಬಹುದು ಎಂಬುದರ ಬಗ್ಗೆ ಅರಿವು ಮೂಡಿಸುವ ಸಣ್ಣ ಪ್ರಯತ್ನ ನಮ್ಮದು. ಮುಂದಿನ ದಿನಗಳಲ್ಲಿ ಬೆಳಗಾವಿಯ ಎಲ್ಲಾ ಉದ್ಯಾನಗಳಲ್ಲಿ ಇದನ್ನು ಅಳವಡಿಸಲಿದ್ದೇವೆ.

| ದುಂಡಪ್ಪ ಬಾಡಗಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ

ಕೆರೆ ಇದೆ, ಗಿಡವಿಲ್ಲ…

ದೇಶದಲ್ಲಿ ಪ್ರತಿ ನಗರ, ಪಟ್ಟಣ, ಗ್ರಾಮಗಳಲ್ಲಿ ಕನಿಷ್ಠ ಒಂದಾದರೂ ಕೆರೆಗಳಿವೆ. ಈ ಕೆರೆಗಳ ಸುತ್ತಮುತ್ತಲಿನ ಜಾಗದಲ್ಲಿ ಸಾವಿರಾರು ಗಿಡ ನೆಡುವಷ್ಟು ಜಾಗವಿದೆ. ಆದರೆ ಆ ಕಾರ್ಯ ಮಾತ್ರ ಆಗಿಲ್ಲ. ಇದಕ್ಕೆ ಅರಣ್ಯ ಇಲಾಖೆ, ಸ್ಥಳೀಯ ಆಡಳಿತ ಮನಸ್ಸು ಮಾಡಬೇಕು. ಇದಕ್ಕಾಗಿ ‘ಒಂದು ಕೆರೆ-ನೂರು ಮರ’ ಎನ್ನುವ ಯೋಜನೆ ರೂಪಿಸಬೇಕು. ಇದರಿಂದ ದೇಶದಲ್ಲಿ ಕೋಟ್ಯಂತರ ಮರಗಳನ್ನು ಬೆಳೆಸಬಹುದು. ಕೆೆರೆಕಟ್ಟೆಗಳ ಅಚ್ಚುಕಟ್ಟು ಪ್ರದೇಶ ಒತ್ತುವರಿಯಾಗದಂತೆ ತಡೆಯುವುದಕ್ಕೂ ಇದು ಸಹಕಾರಿ.

| ಬೀರಪ್ಪ ಡಿ. ಡಂಬಳಿ ಕೋಹಳ್ಳಿ, ಬೆಳಗಾವಿ

ಯೂಸ್ ಆಂಡ್ ಥ್ರೋ ಬೇಡ

ಹೆಚ್ಚಿನ ಶಿಕ್ಷಣ ಸಂಸ್ಥೆಗಳು ಪ್ರತಿವರ್ಷ ವಿದ್ಯಾರ್ಥಿಗಳಿಗೆ ಹೊಸ ಪಠ್ಯ ಪುಸ್ತಕ ಹಾಗೂ ನೋಟ್ ಬುಕ್ಕುಗಳನ್ನು ವಿತರಿಸುತ್ತವೆ. ಒಮ್ಮೆ ಬಳಸಿದ್ದನ್ನು ಯೂಸ್ ಆಂಡ್ ಥ್ರೋ ಮಾಡುವ ಬದಲು ಮಾರನೆ ವರ್ಷ ಹಿಂಪಡೆದು, ಅವುಗಳಿಗೆ ಹೊಸ ಲ್ಯಾಮಿನೇಷನ್ ಮಾಡಿಸಿ, ಮುಂದಿನ ಸಾಲಿನ ವಿದ್ಯಾರ್ಥಿಗಳಿಗೆ ವಿತರಿಸಿದರೆ ಕಾಗದಕ್ಕಾಗಿ ಕಡಿಯುವ ಅದೆಷ್ಟೋ ಮರಗಳನ್ನು ಉಳಿಸಿಕೊಳ್ಳಬಹುದು. ನೋಟ್ ಬುಕ್​ಗಳನ್ನು ವಿದ್ಯಾರ್ಥಿಗಳಿಂದ ಪಡೆದು ಖಾಲಿ ಇರುವ ಹಾಳೆಗಳಿಂದ ಹೊಸ ನೋಟ್ ಬುಕ್ ತಯಾರಿಸುವ ಕೆಲಸ ಆಗಬೇಕು.

| ಮಮತಾ ಲಕ್ಮನೆ ಬೆಂಗಳೂರು

ಗಿಡ ಬೆಳೆಸಿದರೆ ಮಾತ್ರ ಪರೀಕ್ಷೆಯಲ್ಲಿ ಪಾಸು!

ಫಿಲಿಪೈನ್ಸ್​ನಲ್ಲಿ ಮೊನ್ನೆ ತಾನೆ ಹೊಸದಾಗಿ ಕಾನೂನೊಂದನ್ನು ಜಾರಿಗೆ ತರಲಾಗಿದೆ. ಅದರ ಅನ್ವಯ ವಿದ್ಯಾರ್ಥಿಗಳು ಹೈಸ್ಕೂಲ್ ಹಾಗೂ ಡಿಗ್ರಿ ಪಾಸಾಗಬೇಕು ಎಂದರೆ ಪ್ರತಿಯೊಬ್ಬರೂ ಕನಿಷ್ಠ 10 ಸಸಿಗಳನ್ನು ನೆಡಬೇಕು. ಇಲ್ಲದಿದ್ದರೆ ಅವರನ್ನು ಅನುತ್ತೀರ್ಣ ಮಾಡಲಾಗುತ್ತದೆ. ಈ ಮೂಲಕ ಪ್ರತಿ ವರ್ಷ 17 ಕೋಟಿ ಸಸಿಗಳನ್ನು ವಿದ್ಯಾರ್ಥಿಗಳಿಂದ ನೆಡಿಸುವ ಯೋಜನೆ ರೂಪಿಸಲಾಗಿದೆ. ಅಂಕ ಗಳಿಕೆ, ಅನುತ್ತೀರ್ಣವಾಗುವ ಭಯದಿಂದಲಾದರೂ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಸಸಿ ನೆಟ್ಟು ಬೆಳೆಸುತ್ತಾರೆ. ಇದನ್ನು ನಮ್ಮಲ್ಲೂ ಜಾರಿಗೆ ತಂದರೆ ಹೇಗೆ?

ಕಾಳ್ಗಿಚ್ಚು ತಡೆಯುವ ಉಪಾಯ

ಕಾಡಿನಲ್ಲಿ ಸಾವಿರ ಎಕರೆಗೊಮ್ಮೆ ‘ಫೈರ್ ಲೈನ್’ ಮಾಡಿದರೆ ಕಾಳ್ಗಿಚ್ಚು ತಡೆಯಬಹುದು. ಕಾಡಿನ ಸುತ್ತಲೂ ಟ್ರಂಚ್ ಹೊಡೆಯುವುದು, ಪ್ರತಿ ಬೇಸಿಗೆಯಲ್ಲಿ ಬೃಹತ್ ಮರಗಳ ಬೀಜ ಸಂಗ್ರಹಿಸುವುದು. ಅರಣ್ಯವನ್ನು ಪ್ಲಸ್ ಆಕಾರದಲ್ಲಿ ಬೇರೆ ಬೇರೆ ಯೂನಿಟ್ ಮಾಡುವುದು, ಬೇಸಿಗೆಯ ಮೂರು ತಿಂಗಳೂ ಬೆಂಕಿಯಿಂದ ರಕ್ಷಿಸಲು ಹೈ-ಅಲರ್ಟ್ ಕಾವಲುಪಡೆ ಇಡುವುದು ಇಂದಿನ ಅತ್ಯಗತ್ಯವಾಗಿದೆ.

| ಕುಸುಮಾ ರಾಮರಾವ್ ಗದ್ದೇಮನೆ, ಸೊರಬ

ಧಾರ್ವಿುಕ ಟಚ್ ಕೊಡಿ!

ಪ್ರತಿಯೊಂದು ಮರದ ಬುಡದಲ್ಲಿ ಒಂದೊಂದು ದೇವರನ್ನು ಪ್ರತಿಷ್ಠಾಪಿಸಿ, ಅದಕ್ಕೆ ಹಸಿರು ಸೀರೆ ಉಡಿಸಿ ಅರಿಷಿಣ-ಕುಂಕುಮ ಹಚ್ಚಬೇಕು. ಇದರಿಂದ ಗಿಡಮರಗಳನ್ನು ಉಳಿಸಲು ಸಾಧ್ಯ. ಏಕೆಂದರೆ ಭಾರತೀಯರಲ್ಲಿ ದೈವತ್ವದ ಭಯ- ಭಕ್ತಿ ಅಪಾರ. ಭಾರತದಲ್ಲಿ ಇದೊಂದೇ ಸರಿಯಾದ ಮಾರ್ಗ.

| ನಾಮದೇವ ಕಾಗದಗಾರ ರಾಣೆಬೆನ್ನೂರು