ಜೀವಾನಿಲವೇ ವಿಷವಾದರೆ…

ಶುದ್ಧ ನೀರು, ಶುದ್ಧ ಆಹಾರ ಮಾತ್ರವಲ್ಲ, ಶುದ್ಧ ಗಾಳಿಯ ಕೊರತೆಯೂ ದಟ್ಟವಾಗಿದೆ. ಇಡೀ ಜಗತ್ತಿಗೇ ವಾಯು ಮಾಲಿನ್ಯ ಪೆಡಂ ಭೂತದಂತೆ ಕಾಡುತ್ತಿದ್ದು, ಜೀವಿ ಸಂಕುಲದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ತಾಯಿ ಗರ್ಭದಲ್ಲಿರುವ ಮಗುವಿನ ಆರೋಗ್ಯದ ಮೇಲೂ ಕಲುಷಿತ ಗಾಳಿಯ ಛಾಯೆ ಆವರಿಸಿರುವುದು ಕಳವಳಕಾರಿ.

| ಡಾ.ಸಮದ್ ಕೊಟ್ಟೂರು ಹೊಸಪೇಟೆ

ವಿಶ್ವ ಆರೋಗ್ಯ ಸಂಸ್ಥೆಯ 2018ರ ವರದಿಯಂತೆ ಜಗತ್ತಿನ ಮಧ್ಯಮ ಆದಾಯದ ದೇಶಗಳ ಒಂದು ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ನಗರಗಳ ಪೈಕಿ ಶೇ.97 ನಗರಗಳಲ್ಲಿ ವಾಯು ಮಾಲಿನ್ಯ ಅತ್ಯಂತ ಅಪಾಯಕಾರಿ ಮಟ್ಟದಲ್ಲಿದೆ. ಅದೇ ರೀತಿ 108 ದೇಶಗಳ 4,300 ನಗರಗಳ ವಾಯುಮಾಲಿನ್ಯ ಕಳೆದೆರಡು ವರ್ಷಗಳಲ್ಲಿ ದುಪ್ಪಟ್ಟಾಗಿದೆ. ಜಗತ್ತಿನಲ್ಲಿರುವ ಪ್ರತಿ 10 ಜನರಲ್ಲಿ 9 ಮಂದಿ ಮಲಿನ ವಾಯುವನ್ನೇ ಸೇವಿಸುತ್ತಿದ್ದಾರೆ.

ಐಕ್ಯೂ ಏರ್ ವಿಸುವಲ್ ಎಂಬ ಜಾಗತಿಕ ವಾಯು ವಿಚಕ್ಷಣಾ ಸಂಸ್ಥೆಯ ವರದಿ ಪ್ರಕಾರ ವಾಯುಮಾಲಿನ್ಯದ ಪರಿಣಾಮವಾಗಿ ವಿಷಾನಿಲವನ್ನೇ ಉಸಿರಾಡುತ್ತಿರುವ ದೇಶಗಳಲ್ಲಿ ಮೊಟ್ಟ ಮೊದಲ ಸ್ಥಾನದಲ್ಲಿರುವುದು ಬಾಂಗ್ಲಾದೇಶ. ನಂತರದ ಸ್ಥಾನ ಪಾಕಿಸ್ತಾನ, ಮೂರನೇ ಸ್ಥಾನ ಭಾರತ. ಆದರೆ, ಅತಿ ಹೆಚ್ಚು ವಿಷಾನಿಲವನ್ನೇ ಉಸಿರಾಡುತ್ತಿರುವ ನಗರಗಳಲ್ಲಿ ದೆಹಲಿಗೆ ಮೊದಲ ಸ್ಥಾನ. ನಂತರದ್ದೇ ಬಾಂಗ್ಲಾದೇಶದ ಢಾಕಾ. ದೆಹಲಿಯಲ್ಲಿ ಪಿ.ಎಂ.2.5 (ಗಾಳಿಯಲ್ಲಿರುವ ಅತಿಸೂಕ್ಷ್ಮ ಕಣಗಳು) ಮಟ್ಟ 113.5 ಇದೆ.

ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಎನ್ವಿರಾನ್​ವೆುಂಟಲ್ ಹೆಲ್ತ್ ಸೈನ್ಸಸ್ ಪ್ರಕಾರ, ಭಾರತದಲ್ಲಿ ವಾಯು ಮಾಲಿನ್ಯ ಸ್ಥಿತಿ ಅತ್ಯಂತ ದಾರುಣಾವಸ್ಥೆಗೆ ತಲುಪಿದೆ. ಅಪಾಯಕಾರಿ ವಾಯುಮಾಲಿನ್ಯದ ಪರಿಣಾಮ ಭಾರದಲ್ಲಿ ಪ್ರತಿವರ್ಷ 20 ಲಕ್ಷ ಜನರು ಅಕಾಲಿಕ ಸಾವನ್ನಪ್ಪುತ್ತಿದ್ದಾರೆ. ಕನಿಷ್ಠ 14 ಕೋಟಿ ಜನ ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಸುರಕ್ಷತಾ ಮಟ್ಟಕ್ಕಿಂತ 10 ಪಟ್ಟು ಮಲಿನ ಗಾಳಿ ಸೇವಿಸುತ್ತಿದ್ದಾರೆ. ಈ ವರದಿಗಳು ನಮ್ಮನ್ನು ಬೆಚ್ಚಿ ಬೀಳಿಸುತ್ತಿದ್ದು, ನಾವು ಎತ್ತ ಸಾಗುತ್ತಿದ್ದೇವೆ? ಅಭಿವೃದ್ಧಿ ನೆಪ ಮತ್ತು ದುರಾಸೆಯಿಂದ ಪ್ರಕೃತಿಮಾತೆಯನ್ನು ಕೊಲ್ಲುವ ಕೆಲಸಕ್ಕೆ ಕೈ ಹಾಕಿದ ಮಾನವ ಸಾಧಿಸಿದ್ದಾದರೂ ಏನು ಎಂದು ಗಂಭೀರವಾಗಿ ಚಿಂತಿಸಬೇಕಿದೆ.

ಅಂದಹಾಗೇ ಭಾರತದ ವಾಯುಮಾಲಿನ್ಯಕ್ಕೆ ಅತ್ಯಂತ ದೊಡ್ಡ ಕೊಡುಗೆ ಅಭಿವೃದ್ಧಿ ಕಾರ್ಯಗಳಾದ ರಸ್ತೆ ನಿರ್ವಣ, ಕಟ್ಟಡ ನಿರ್ಮಾಣ ಮುಂತಾದವುಗಳಿಂದ ಉಂಟಾಗುವ ಧೂಳು. ದೇಶದ ವಾಯುಮಾಲಿನ್ಯದಲ್ಲಿ ಶೇ.45 ಪಾಲು ಈ ವಲಯದಿಂದಲೇ ಬರುತ್ತಿದೆ. ಕೃಷಿ ತ್ಯಾಜ್ಯ, ಕಸ ಕಡ್ಡಿ ಮುಂತಾದವುಗಳನ್ನು ಸುಡುವುದರಿಂದ ಉತ್ಪನ್ನವಾಗುವ ಹೊಗೆ ಶೇ.17 ವಾಯು ಮಾಲಿನ್ಯಕ್ಕೆ ಕಾರಣವಾಗಿದೆ. ಇನ್ನು ಶೇ.14 ಮಾಲಿನ್ಯ ವಾಹಗಳ ಹೊಗೆಯಿಂದ, ಇಂಧನಗಳ ದಹನದಿಂದ ಬರುತ್ತಿದೆ. ಶೇ.9 ಮಾಲಿನ್ಯ ಡೀಸೆಲ್ ಜನರೇಟರ್​ಗಳಿಂದ, ಶೇ.8 ಮಾಲಿನ್ಯ ಕೈಗಾರಿಕೆಗಳಿಂದ ಹಾಗೂ ಶೇ.7 ವಾಯುಮಾಲಿನ್ಯ ಅಡುಗೆ ಮಾಡಲು ಅನಿಲ-ಉರುವಲು ಸುಡುವುದರಿಂದ ಆಗುತ್ತಿದೆ. ಹರಿಯಾಣ, ಪಂಜಾಬ್​ನಲ್ಲಿ ಕಬ್ಬು, ಗೋಧಿ ಮುಂತಾದ ಬೆಳೆ ಕಟಾವು ಮಾಡಿದ ಮೇಲೆ ಉಳಿಯುವ ರವುದಿ ಅಥವಾ ಕೃಷಿ ತ್ಯಾಜ್ಯವನ್ನು ಸುಡುವುದರಿಂದ ಹೊರಡುವ ಅಪಾರ ಹೊಗೆ ದೆಹಲಿಯ ವಾಹನ ಮತ್ತು ಡೀಸೆಲ್ ಜನರೇಟರ್​ಗಳ ಹೊಗೆಯೊಂದಿಗೆ ಸೇರಿಕೊಳ್ಳುತ್ತದೆ. ಮಂಜಿನ ಕಣಗಳೊಂದಿಗೆ ಮಿಶ್ರಣವಾಗುವ ಈ ಹೊಗೆಗೆ ಹೊಂಜು ಅಥವಾ ಸ್ಮಾಗ್ (ಸ್ಮೋಕ್ + ಫಾಗ್) ಎನ್ನುತ್ತಾರೆ. ಇದು ಭಾರವಾಗಿರುವ ಕಾರಣ ಕೆಳಸ್ಥರದಲ್ಲೇ ಉಳಿಯುತ್ತದೆ ಹಾಗೂ ಇಂತಹ ಅನಿಲವನ್ನೇ ಸೇವಿಸುವ ಜನ ಮರಣಾಂತಿಕ ಕಾಯಿಲೆಗೆ ತುತ್ತಾಗುತ್ತಿದ್ದಾರೆ.

ಜಗತ್ತಿನಾದ್ಯಂತ ವಾಯುಮಾಲಿನ್ಯದಿಂದ ವರ್ಷಕ್ಕೆ ಸುಮಾರು 50ರಿಂದ 70 ಲಕ್ಷ ಜನರು ಅಕಾಲಿಕ ಸಾವನ್ನಪ್ಪುತ್ತಿದ್ದಾರೆ. ಅದರಲ್ಲಿ 40 ಲಕ್ಷ ಜನರು ಏಷಿಯಾ ಪೆಸಿಫಿಕ್ ದೇಶದವರು ಎಂಬುದು ಕಳವಳಕಾರಿ. ಇಲ್ಲಿಯವರೆಗೆ ಸಕ್ಕರೆ ಕಾಯಿಲೆಗೆ ಅನುವಂಶೀಯತೆ, ಆಹಾರ ಪದ್ಧತಿ, ಜೀವನ ಶೈಲಿ ಕಾರಣ ಎಂದು ನಂಬಲಾಗಿತ್ತು. ಆದರೆ ನಿಜವಾದ ಶತೃ ವಾಯು ಮಾಲಿನ್ಯ ಎಂದು ಈಗ ಗೊತ್ತಾಗಿದೆ. ರಕ್ತದಲ್ಲಿ ಸೇರಿದ ಈ ಅತಿ ಸೂಕ್ಷ್ಮಕಣಗಳೇ ಮಧುಮೇಹಕ್ಕೆ ಕಾರಣವಂತೆ! ಹಾಗಾಗಿ ಎಲ್ಲಿ ವಾಯುಮಾಲಿನ್ಯ ಹೆಚ್ಚಾಗಿದೆಯೋ ಅಲ್ಲೆಲ್ಲ ಮಧುಮೇಹ ರೋಗಿಗಳೂ ಹೆಚ್ಚಾಗುತ್ತಿದ್ದಾರೆ. ಇರುವುದೊಂದೇ ಭೂಮಿ, ಸ್ವರ್ಗದಂತಹ ಭೂಮಿಯನ್ನು ನಾವೇ ನರಕ ಮಾಡುತ್ತಿದ್ದೇವೆ. ನಾವು ಬದುಕಿ ಮುಂದಿನ ಜನಾಂಗಕ್ಕೆ ಬದುಕಲು ಬಿಡಲು ಇಂದೇ ನಾವು ಪರಿಸರ ರಕ್ಷಿಸಲು ಪಣತೊಡೋಣ.

ಪರಿಸರದ ಮೇಲೆ ವಾಯುಮಾಲಿನ್ಯ ಎಫೆಕ್ಟ್

 • ನದಿ, ಸರೋವರ, ಕೆರೆ-ಕಟ್ಟೆ, ಕೊಳ, ಹಳ್ಳ ಇತ್ಯಾದಿಗಳ ನೀರಿನ ಆಮ್ಲೀಯತೆ ಹೆಚ್ಚಾಗುತ್ತದೆ.
 • ತೀರ ಪ್ರದೇಶ ಹಾಗೂ ದೊಡ್ಡ ನದಿ ಪಾತ್ರದ ಆಹಾರ ಭಂಡಾರದ ವಿನಾಶ
 • ಮಣ್ಣಿನ ಫಲವತ್ತತೆ ನಾಶದ ಪರಿಣಾಮ ಕೃಷಿ ವೈಫಲ್ಯ, ಆಹಾರ ಕೊರತೆ
 • ಜೈವಿಕ ಸೂಕ್ಷ್ಮ ಕಾಡುಗಳು ಹಾಗೂ ಜೀವ ವೈವಿಧ್ಯತೆಯ ವಿನಾಶ
 • ಆಮ್ಲ ಮಳೆ ಅದರಿಂದಾಗುವ ದುಷ್ಪರಿಣಾಮಗಳ ಸರಪಳಿ ಕ್ರಿಯೆ
 • ಕ್ರಮೇಣ ಜೀವಜಾಲ ವಿನಾಶ

ನಾವೇನು ಮಾಡಬೇಕು?

ಪರಿಸರ ಉಳಿಸಬೇಕೆಂದರೆ ತುರ್ತಾಗಿ ವಾಯುಮಾಲಿನ್ಯ ತಡೆಗಟ್ಟುವ ಕಾರ್ಯ ಆಗಲೇಬೇಕಿದೆ. ಈ ನಿಟ್ಟಿನಲ್ಲಿ ನಾವುಗಳು ಏನು ಮಾಡಬೇಕು ಎಂದು ವಿಶ್ವ ಸಂಸ್ಥೆಯ ಪರಿಸರ ಸಂರಕ್ಷಣಾ ಏಜೆನ್ಸಿ ಕೊಟ್ಟಿರುವ ಸಲಹೆ ಇಲ್ಲಿದೆ.

 • ವಿದ್ಯುತ್ ಮತ್ತು ಇಂಧನ ಉಳಿತಾಯ ಮಾಡಿ
 • ಅನಗತ್ಯವಾಗಿ ಸ್ವಂತ ವಾಹನ ಬಳಸದೆ, ಸಾರ್ವಜನಿಕ ವಾಹನ ಬಳಸಿ. ಕಾರನ್ನು ಒಬ್ಬರೇ ಬಳಸುವ ಬದಲಾಗಿ ಕಾರ್ ಪೂಲಿಂಗ್ ಮಾಡಿ.
 • ಕಟ್ಟಿಗೆ, ಕೃಷಿ ತ್ಯಾಜ್ಯ, ಕಸ ಇತ್ಯಾದಿ ಸುಡಬೇಡಿ.
 • ಕಾಲ ಕಾಲಕ್ಕೆ ವಾಹನ ದುರಸ್ತಿಗೊಳಿಸಿ, ಟೈರ್​ಗಳಿಗೆ ಸರಿಯಾಗಿ ಗಾಳಿ ತುಂಬಿ.
 • ಪರಿಸರ ಸ್ನೇಹಿ ಬಣ್ಣವನ್ನೇ ಬಳಸಿ.
 • ಕೃಷಿ ತ್ಯಾಜ್ಯವನ್ನು ಕಾಂಪೋಸ್ಟೀಕರಣ ಮಾಡಿ.
 • ಸೌರವಿದ್ಯುತ್ ಬಳಸುವ ಮೂಲಕ ಉತ್ತೇಜಿಸಿ.
 • ಪರಿಸರ ಸ್ನೇಹಿ ಬದುಕು ನಡೆಸಿ.

ಏನಿದು ಪಿ.ಎಂ.2.5 ?

ಪಿ.ಎಂ. 2.5 ಎಂದರೆ ಪಾರ್ಟಿಕ್ಯುಲೇಟ್ ಮ್ಯಾಟರ್(ಪಿ.ಎಂ.) ಅಥವಾ ಗಾಳಿಯಲ್ಲಿರುವ ಅತಿಸೂಕ್ಷ್ಮ ಕಣಗಳು ಎಂದರ್ಥ. ಪ್ಲಾಸ್ಟಿಕ್, ಕಟ್ಟಿಗೆ, ಪೇಪರ್, ರಬ್ಬರ್, ಬಟ್ಟೆ ಮುಂತಾದ ಘನ ತ್ಯಾಜ್ಯ ವಸ್ತುಗಳನ್ನು ಸುಟ್ಟಾಗ ಅವುಗಳಿಂದ ಹೊಮ್ಮುವ ಅತಿ ಸೂಕ್ಷ್ಮ ಕಣಗಳು, ಧೂಳು, ವಾಹನಗಳ, ಕಾರ್ಖಾನೆ, ಜನರೇಟರ್ ಇತ್ಯಾದಿಗಳಿಂದ ಹೊಮ್ಮುವ ಹೊಗೆ, ಕೃಷಿತ್ಯಾಜ್ಯ, ಕಲ್ಲಿದ್ದಲು ಮುಂತಾದ ಜೈವಿಕ ವಸ್ತು ಸುಟ್ಟಾಗ ಹೊಮ್ಮುವ ವಿಷಾನಿಲ ಇತ್ಯಾದಿ. ಇವು ಬರಿಗಣ್ಣಿಗೆ ಕಾಣಲಾರದಷ್ಟು ಸೂಕ್ಷ್ಮವಾಗಿರುತ್ತವೆ. ಇವುಗಳ ಅತೀ ಸಣ್ಣ ಕಣವೇ 2.5 ಮೈಕ್ರೋಮೀಟರ್ (ಅಥವಾ 0.0025 ಮಿಲಿ ಮೀಟರ್) ಗಾತ್ರ ಹೊಂದಿರುತ್ತದೆ. ಇದನ್ನೇ ಪಿ.ಎಂ.2.5 ಎನ್ನುವುದು. ಇದು ಎಷ್ಟು ಸೂಕ್ಷ್ಮಗಾತ್ರದ್ದೆಂದರೆ ಇಂತಹ 30 ಕಣಗಳನ್ನು ಒಂದರ ಪಕ್ಕ ಒಂದು ಇಟ್ಟರೆ ಅದು ನಿಮ್ಮ ತಲೆಗೂದಲಿನಷ್ಟು ದಪ್ಪವಾಗಿರುತ್ತದೆ. ಈ ಅತೀ ಸೂಕ್ಷ್ಮಕಣಗಳು ನಮ್ಮ ಶ್ವಾಸಕೋಶದ ಮೂಲಕ ಒಳಹೊಕ್ಕು ಸೂಕ್ಷ್ಮ ರಕ್ತನಾಳಗಳ ಮೂಲಕ ದೇಹದೆಲ್ಲೆಡೆ ಸೇರಿಕೊಳ್ಳುತ್ತಿದ್ದು, ಆರೋಗ್ಯದ ಮೇಲೆ ಭೀಕರ ಪರಿಣಾಮ ಬೀರುತ್ತಿವೆ. ಈ ಪಿ.ಎಂ.2.5ಕ್ಕಿಂತ ಸ್ವಲ್ಪ ದೊಡ್ಡ ಪಿ.ಎಂ.10 ಕಣಗಳಾದ ಸೂಕ್ಷ್ಮ ಧೂಳಿನ ಕಣ, ಪರಾಗರೇಣು, ಶಿಲೀಂಧ್ರ ಧೂಳು ಇತ್ಯಾದಿಗಳೂ ಶ್ವಾಸಕೋಶಕ್ಕೆ ಸೇರಿ ಅಪಾಯ ತಂದೊಡ್ಡುತ್ತಿವೆ.

ಬದುಕನ್ನೇ ಕಸಿಯುತ್ತಿದೆ ಕಲುಷಿತ ಗಾಳಿ

ಮಾನವನ ಆರೋಗ್ಯದ ಮೇಲೆ ವಾಯುಮಾಲಿನ್ಯ ಪರಿಣಾಮ ತೀವ್ರವಾಗಿದ್ದು, ಬದುಕನ್ನೇ ಕಸಿಯುತ್ತಿದೆ. ರಕ್ತದಲ್ಲಿ ಸೇರಿಕೊಂಡ ಪಿ.ಎಂ.2.5 ಕಣಗಳು ಮೊಟ್ಟ ಮೊದಲಿಗೆ ದಾಳಿ ಮಾಡುವುದು ಶ್ವಾಸಕೋಶ ಹಾಗೂ ಹೃದಯದ ಮೇಲೆ. ಇದರ ಪರಿಣಾಮ ಹೃದಯಾಘಾತ, ಅಸಂಬದ್ಧ ಹೃದಯ ಬಡಿತ, ಶಕ್ತಿಗುಂದುವ ಶ್ವಾಸಕೋಶ, ಆಮ್ಲಜನಕ ಕೊರತೆ, ತಲೆಸುತ್ತು, ರಕ್ತಹೀನತೆ, ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್, ಪಾರ್ಶ್ವವಾಯು, ಕೆಮ್ಮು, ಮಕ್ಕಳ ಮಿದುಳು ಬೆಳವಣಿಗೆ ಕುಂಠಿತ ಹಾಗೂ ಸ್ಮರಣಶಕ್ತಿ ನಾಶ, ಗರ್ಭಿಣಿಯರಲ್ಲಿ ಉರಿಯೂತ ಹೆಚ್ಚಾಗಿ ಅವಧಿ ಪೂರ್ವ ಮಗು ಜನನ, ಸಕ್ಕರೆ ಕಾಯಿಲೆ, ಅಕಾಲಿಕ ಸಾವಿನ ಸಂಖ್ಯೆಯಲ್ಲಿ ಹೆಚ್ಚಳ ಆಗುತ್ತಿದೆ.

ಇವರೇನಂತಾರೆ?

ವಾಯುಮಾಲಿನ್ಯ ತಡೆಯುವ ಪರಿಕಲ್ಪನೆಯೊಂದಿಗೆ ವರ್ಷವಿಡೀ ಜಾಗೃತಿ ಕಾರ್ಯಕ್ರಮಗಳು ನಡೆಯಲಿವೆ. ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಹಲವು ದಿಟ್ಟ ಹೆಜ್ಜೆಗಳನ್ನು ಇಡುತ್ತಿದೆ. ಸಾರ್ವಜನಿಕರ ಸಹಭಾಗಿತ್ವವಿದ್ದಲ್ಲಿ ಇಂಥ ಕಾರ್ಯಕ್ರಮಗಳು ಯಶಸ್ವಿಯಾಗಲಿವೆ.

| ಜೈರಾಮ್ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ

ಸಸಿ ನೆಡುವ ಪ್ರಕ್ರಿಯೆ ಚೈನ್​ಲಿಂಕ್ ಮಾದರಿಯಲ್ಲಿ ನಡೆಯಬೇಕು. ಪ್ರತಿಯೊಬ್ಬರೂ ತಲಾ 10 ಸಸಿ ನೆಟ್ಟು ಬೆಳೆಸಲು ಪಣ ತೊಡಬೇಕು. ಪರಿಚಯ ಸ್ಥರಿಗೂ 10 ಸಸಿ ನೆಡುವ ಕುರಿತು ಜಾಗೃತಿ ಮೂಡಿಸಬೇಕು. ಗಿಡ ನೆಟ್ಟು ಬೆಳೆಸುವುದರಿಂದ ಆಮ್ಲಜನಕದ ಸಮಸ್ಯೆ ನಿವಾರಣೆಯಾಗಲಿದೆ. ಮಳೆ ಕೊರತೆ ಕಡಿಮೆಯಾಗಿ ನೀರಿನ ಅಭಾವ ನೀಗಲಿದೆ. ಹೀಗಾಗಿ ಸರ್ಕಾರ, ಖಾಸಗಿ ಸಂಸ್ಥೆಗಳು ತಮ್ಮ ಯೋಜನೆಗಾಗಿ ಒಂದು ಮರ ಕಡಿದರೆ ಅದಕ್ಕೆ ಬದಲಾಗಿ 10 ಸಸಿ ನೆಡುವಂತೆ ಯೋಜನೆ ರೂಪಿಸಬೇಕು. ಹಾಗಾದಲ್ಲಿ ಮಾತ್ರವೇ ಪರಿಸರ ಉಳಿಸಿ, ಶುದ್ಧ ಗಾಳಿ ಸಿಗುವಂತಾಗಲಿದೆ.

| ದಯಾನಂದ್ ವ್ಯವಸ್ಥಾಪಕ ನಿರ್ದೇಶಕ, ಡಿಎಸ್ ಮ್ಯಾಕ್ಸ್

ಕಾಮಗಾರಿ ನಡೆಸುವ ಸಂದರ್ಭದಲ್ಲಿ ಪರಿಸರಕ್ಕೆ ಹಾನಿಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಪರಿಸರ ಸಂರಕ್ಷಣೆ ಮಾಡಬೇಕು. ಇದರಿಂದ ನಮ್ಮ ಮುಂದಿನ ಪೀಳಿಗೆಗೆ ಒಳಿತಾಗಲಿದೆ.

| ಶಿವಕುಮಾರ್ ಕೆಆರ್​ಡಿಸಿಎಲ್ ವ್ಯವಸ್ಥಾಪಕ ನಿರ್ದೇಶಕ