ಹನೂರು: ವಿದ್ಯಾರ್ಥಿ ದೆಸೆಯಲ್ಲಿ ಪ್ರತಿಯೊಬ್ಬರೂ ಗಿಡ, ಮರಗಳನ್ನು ಬೆಳೆಸುವುದರ ಮೂಲಕ ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಜಿಲ್ಲಾ ಕುಷ್ಠರೋಗ ಸಮನ್ವಯಾಧಿಕಾರಿ ಡಾ.ಮೋಹನ್ ತಿಳಿಸಿದರು.
ಪಟ್ಟಣದ ಜಿ.ವಿ.ಗೌಡ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದು, ದೈಹಿಕ ಶ್ರಮ ಕಡಿಮೆಯಾಗುತ್ತಿದೆ. ಇದರಿಂದ ರಕ್ತದೊತ್ತಡ, ಸಕ್ಕರೆ ಕಾಯಿಲೆ ಸಾಮಾನ್ಯವಾಗಿದೆ. ಆದ್ದರಿಂದ ಆರೋಗ್ಯ ಸದೃಢವಾಗಿರಬೇಕಾದರೆ ಪರಿಸರ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ಪರಿಸರ ಸಂರಕ್ಷಣೆಗೆ ಹೆಚ್ಚಿನ ಗಮನಹರಿಸಬೇಕಿದೆ. ಆದ್ದರಿಂದ ಪ್ರತಿಯೊಬ್ಬರೂ ಗಿಡ ನೆಟ್ಟು ನೀರುಣಿಸಿ ಪೋಷಿಸಿ ದೊಡ್ಡ ಮರವನ್ನಾಗಿ ಬೆಳೆಸುವುದೇ ಪರಿಸರಕ್ಕೆ ನೀಡುವ ಬಹುದೊಡ್ಡ ಕೊಡುಗೆ ಎಂದು ತಿಳಿಸಿದರು.
ಪರಿಸರ ದಿನಾಚರಣೆ ಅಂಗವಾಗಿ ಈ ವರ್ಷದ ಧ್ಯೇಯವಾಕ್ಯ ಭೂಮಿ ಮರುಸ್ಥಾಪನೆ, ಮರುಭೂಮೀಕರಣ ಹಾಗೂ ಬರ ಸ್ಥಿತಿ ಸ್ಥಾಪಕತ್ವ ಕುರಿತು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು. ಇದರಲ್ಲಿ ಪೂರ್ಣಿಮಾ (ಪ್ರಥಮ), ಅಂಜಲಿ (ದ್ವಿತೀಯ) ಹಾಗೂ ತೃತೀಯ ಸ್ಥಾನ ಪಡೆದ ಶರಣ್ಯಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಕಾಶ್, ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ ದ್ವಾರಕೀಶ್, ಶಿಕ್ಷಕರಾದ ಶಾಂತರಾಜು, ಶ್ರೀನಿವಾಸನಯ್ಡು, ಗೌತಮಿ, ಮಧುಮಿತಾ ಇನ್ನಿತರರು ಇದ್ದರು.