ಕಾರ್ಯಕ್ರಮದಿಂದ ಅರ್ಧಕ್ಕೆ ಹೊರಟಿದ್ದ ಸಚಿವರಿಗೆ ಹಿರಿಯ ನಾಗರಿಕರ ತರಾಟೆ

ಚಿತ್ರದುರ್ಗ: ಕಾರ್ಯಕ್ರಮ ಮುಗಿಯುವ ಮುನ್ನವೇ ಸಭೆಯಿಂದ ಹೊರಟಿದ್ದ ಕಾರ್ಮಿಕ ಸಚಿವ ವೆಂಕಟರಮಣಪ್ಪ ಅವರಿಗೆ ಸಭೆಯಲ್ಲಿದ್ದ ಹಿರಿಯ ನಾಗರಿಕರು ಗರಂ ಆಗಿದ್ದು, ತರಾಟೆ ತೆಗೆದುಕೊಂಡಿದ್ದಾರೆ.

ನಗರದ ತರಾಸು ರಂಗಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಘಟನೆ ನಡೆದಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಚಿವರು ಸಭೆಯಿಂದ ಬೇಗ ಹೊರಡಲು ಸಿದ್ಧರಾಗಿದ್ದರು. ಈ ಸಂದರ್ಭದಲ್ಲಿ ಸಚಿವರ ನಡೆಗೆ ಗರಂ ಆದ ಹಿರಿಯ ನಾಗರಿಕರು ನೀವು ಕಾರ್ಯಕ್ರಮಕ್ಕೆ ತಡವಾಗಿ ಬಂದಾಗ ನಾವು ಕಾದಿದ್ದೇವೆ. ಈಗ ನೀವು ಬೇಗ ಹೊರಟರೆ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ.

ಜತೆಗೆ ಕಳೆದ ಬಾರಿಯೂ ನೀವು ಹೀಗೆ ಮಾಡಿದ್ದಿರಿ, ನೀವು ಹೋಗುವುದಾದರೆ ನಾವೂ ಕಾರ್ಯಕ್ರಮ ಬಿಟ್ಟು ಹೊರ ನಡೆಯುತ್ತೇವೆ ಎಂದು ಹಿರಿಯ ನಾಗರಿಕರು ಆಕ್ರೋಶ ಹೊರಹಾಕಿ ಸಚಿವರನ್ನು ತರಾಟೆ ತೆಗೆದುಕೊಂಡಿದ್ದಾರೆ. ಹಿರಿಯ ನಾಗರಿಕರ ಆಗ್ರಹಕ್ಕೆ ಮನ್ನಣೆ ನೀಡಿದ ಸಚಿವರು ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟು ಆ ನಂತರ ತೆರಳಿದ್ದಾರೆ.