ಸಂಡೂರು: ಅಭಿವೃದ್ಧಿಗೆ ಸಂಬಂಧಿಸಿದ ಸ್ಪರ್ಧೆಯಲ್ಲಿ ಎಲ್ಲ ದೇಶಗಳು ಜಾಗತಿಕ ತಾಪಮಾನದ ಪರಿಣಾಮ ಎದುರಿಸುತ್ತಿವೆ ಎಂದು ಗೊಲ್ಲಲಿಂಗಮ್ಮನಹಳ್ಳಿ ಪಿಡಿಒ ಪಾಪಣ್ಣ ಹೇಳಿದರು.
ಸ್ವಾಮಿಹಳ್ಳಿಯ ನರೇಗಾ ಕಾಮಗಾರಿ ಸ್ಥಳದಲ್ಲಿ ರೀಚ್ ಸಂಸ್ಥೆ, ಗೊಲ್ಲಲಿಂಗಮ್ಮನಹಳ್ಳಿ ಹಾಗೂ ಯರೇನಹಳ್ಳಿ ಗ್ರಾಪಂ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ನೈಸರ್ಗಿಕ ಸಂಪನ್ಮೂಲಗಳ ಅತಿಯಾದ ಬಳಕೆಯಿಂದ ಭೂಮಿ ಒಡಲು ಬರಿದಾಗುತ್ತಿದೆ ಎಂದರು.

ಜೀವಸಂಕುಲಕ್ಕೆ ಅಗತ್ಯವಾಗಿರುವ ನೈಸರ್ಗಿಕ ಸಂಪನ್ಮೂಲಗಳು ವ್ಯಾಪಾರದ ಸರಕಾಗಿದ್ದು, ಇದರ ಪರಿಣಾಮ ಪರಿಸರ ಮಾಲಿನ್ಯ ದೊಡ್ಡ ಸಮಸ್ಯೆಯಾಗಿದೆ. ಅರಣ್ಯ ನಾಶದಿಂದ ಮಳೆ ಕೊರತೆ ಉಂಟಾಗಿ ಭೂಮಿಯಲ್ಲಿ ಜೀವರಾಶಿಗಳಿಗೆ ನೀರಿನ ಅಭಾವ ತಲೆದೂರುತ್ತಿದೆ. ತಾಪಮಾನ ಏರಿಕೆಯಾಗಿ ಪರಿಸರ ವ್ಯವಸ್ಥೆಯಲ್ಲಿ ಬದಲಾವಣೆಗಳಿಗೆ ಕಾರಣವಾಗುತ್ತಿದೆ. ಹೀಗಾಗಿ ಪರಿಸರ ಸಂರಕ್ಷಣೆ ಮಾಡುವುದು ಇಂದಿನ ತುರ್ತು ಅಗತ್ಯವಾಗಿದೆ. ರೈತರು ಹೊಲದ ಬದುಗಳಲ್ಲಿ, ಗ್ರಾಮದ ಕೆರೆ-ಕುಂಟೆಗಳ ಜಾಗದಲ್ಲಿ ಗಿಡಗಳನ್ನು ಬೆಳೆಸುವ ಮೂಲಕ ಭೂಮಿಯನ್ನು ಹಸಿರಾಗಿಸಬೇಕಿದೆ ಎಂದರು.