ಫಿಫಾ ವಿಶ್ವಕಪ್: ಬೆಲ್ಜಿಯಂ ಬಗ್ಗುಬಡಿದು ಫೈನಲ್​ ಪ್ರವೇಶಿಸಿದ ಫ್ರಾನ್ಸ್​

ಸೇಂಟ್ ಪೀಟರ್ಸ್ಬರ್ಗ್: ತೀವ್ರ ಕುತೂಹಲ ಕೆರಳಿಸಿದ್ದ ಮೊದಲ ಸೆಮಿಫೈನಲ್​ ಹಣಾಹಣಿಯಲ್ಲಿ ಫ್ರಾನ್ಸ್​ ತಂಡ ಪ್ರಬಲ ಬೆಲ್ಜಿಯಂ ತಂಡದ ವಿರುದ್ಧ 1-0 ಗೋಲುಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದು, 12 ವರ್ಷಗಳ ಬಳಿಕ ಫೈನಲ್​ ಪ್ರವೇಶಿಸಿದೆ.

ಫ್ರಾನ್ಸ್​ ತಂಡ 2006ರ ನಂತರ ವಿಶ್ವಕಪ್​ ಸಮಿಫೈನಲ್​ಗೆ ಪ್ರವೇಶಿಸಿತ್ತು. ಹಲವು ನಿರೀಕ್ಷೆಗಳೊಂದಿಗೆ ಮಂಗಳವಾರ ಕಣಕ್ಕಿಳಿದ ಫ್ರಾನ್ಸ್​ ತಂಡ ಸ್ಯಾಮ್ಯುಯೆಲ್ ಉಮ್ಮತಿ ಅವರು ಬಾರಿಸಿದ ಗೋಲ್ ನೆರವಿನಿಂದ ಪ್ರಬಲ ಬೆಲ್ಜಿಯಂ ತಂಡದ ವಿರುದ್ಧ ಅಮೋಘ ಜಯ ಸಾಧಿಸಿ ಫೈನಲ್​ ಪ್ರವೇಶಿಸಿದೆ. ಉಭಯ ತಂಡಗಳು ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಬೆಲ್ಜಿಯಂ ಶೇಕಡಾ 91 ರಷ್ಟು ನಿಖರವಾದ ಪಾಸ್ ನೀಡಿದರೂ ಗೆಲುವು ಸಾಧಿಸೋಕೆ ಸಾಧ್ಯವಾಗಲಿಲ್ಲ.

ಎರಡು ತಂಡಗಳು ಚೆಂಡಿನ ಮೇಲೆ ಸಾಕಷ್ಟು ನಿಯಂತ್ರಣ ಸಾಧಿಸಿದ್ದವು. ಅದರಲ್ಲೂ ಫ್ರಾನ್ಸ್ ಶೇಕಡಾ 64 ರಷ್ಟು ನಿಯಂತ್ರಣ ಸಾಧಿಸಿದರೆ, ಫ್ರಾನ್ಸ್ ಶೇಕಡಾ 36ರಷ್ಟು ಮಾತ್ರ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿತು. ಫ್ರಾನ್ಸ್ ಒಟ್ಟು ಐದು ಬಾರಿ ಎದುರಾಳಿ ಗೋಲು ಬಾಕ್ಸ್​​ ಮೇಲೆ ಗುರಿ ಇಟ್ಟಿತು. ಇದರಲ್ಲಿ ಕೇವಲ ಒಂದು ಬಾರಿ ಮಾತ್ರ ಫ್ರಾನ್ಸ್​ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಲು ಸಫಲವಾಯಿತು.

ಬೆಲ್ಜಿಯಂ ಕೂಡ ಆಕ್ರಮಣಕಾರಿ ಆಟವನ್ನು ಆಡಿತು. ಆದರೆ, ಗೋಲು ಗಳಿಸೋದಕ್ಕೆ ಬೆಲ್ಜಿಯಂಗೆ ಸಾಧ್ಯವಾಗಲಿಲ್ಲ. ಪಂದ್ಯದ 51ನೇ ನಿಮಿಷದಲ್ಲಿ ಫ್ರಾನ್ಸ್​​ನ ಸ್ಯಾಮ್ಯುಯೆಲ್ ಉಮ್ಮತಿ ಗಳಿಸಿದ ಗೋಲು ಬಿಟ್ಟರೆ ಮತ್ಯಾವಾ ಗೋಲುಗಳು ದಾಖಲಾಗಲಿಲ್ಲ. ಈ ಮೂಲಕ ಫ್ರಾನ್ಸ್ ಎರಡನೇ ಬಾರಿಗೆ ಟ್ರೋಫಿಗೆ ಮುತ್ತಿಡೋಕೆ ಸನ್ನದ್ಧವಾಗಿದೆ.

1998ರಲ್ಲಿ ಫ್ರಾನ್ಸ್ ಮೊದಲ ಬಾರಿಗೆ ಫಿಫಾ ವಿಶ್ವಕಪ್​ ಎತ್ತಿಹಿಡಿದಿತ್ತು. ಆದರೆ, ಈಗ 20 ವರ್ಷಗಳ ಬಳಿಕ ಫ್ರಾನ್ಸ್ ವಿಶ್ವಕಪ್​ ಜಯಿಸುವ ಉತ್ಸಾಹದಲ್ಲಿದೆ. ಬುಧವಾರ ನಡೆಯಲಿರುವ ಕ್ರೊವೇಷಿಯಾ ಹಾಗೂ ಇಂಗ್ಲೆಂಡ್​ ನಡುವಿನ 2ನೇ ಸೆಮಿಫೈನಲ್​ ಪಂದ್ಯದಲ್ಲಿ ಜಯ ಸಾಧಿಸುವ ತಂಡದ ವಿರುದ್ಧ ಫ್ರಾನ್ಸ್​ ಫೈನಲ್​ನಲ್ಲಿ ಸೆಣಸಲಿದೆ. ಫೈನಲ್​ ಪಂದ್ಯವು ಭಾನುವಾರ ನಡೆಯಲಿದೆ. (ಏಜೆನ್ಸೀಸ್​)