ವಿಶ್ವಕಪ್​ನಲ್ಲಿ ಸೆಣಸಲು ಇಂಗ್ಲೆಂಡ್​ಗೆ ಹಾರುವ ಮುನ್ನ ತಂಡ ಹೇಗೆ ಸಜ್ಜಾಗಿದೆ ಎಂಬುದನ್ನು ಬಿಚ್ಚಿಟ್ಟ ಕೊಹ್ಲಿ, ರವಿಶಾಸ್ತ್ರಿ

ನವದೆಹಲಿ: ಮೇ 30 ರಿಂದ ಕ್ರಿಕೆಟ್​ ತವರು ಇಂಗ್ಲೆಂಡ್​ ಹಾಗೂ ವೇಲ್ಸ್​ನಲ್ಲಿ ಆರಂಭವಾಗುವ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಪಾಲ್ಗೊಳ್ಳಲು ಇಂದು (ಮಂಗಳವಾರ) ಟೀಂ ಇಂಡಿಯಾ ಪ್ರಯಾಣ ಬೆಳೆಸಿದ್ದು, ಹೊರಡುವ ಮುನ್ನ ಮುಖ್ಯ ತರಬೇತುದಾರ ರವಿಶಾಸ್ತ್ರಿ ಹಾಗೂ ನಾಯಕ ವಿರಾಟ್​ ಕೊಹ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ವಿಶ್ವಕಪ್​ನಲ್ಲಿ ಸೆಣಸಲು ಯಾವ ರೀತಿ ಸಜ್ಜಾಗಿದ್ದೇವೆ ಎಂಬುದರ ಬಗ್ಗೆ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಯಕ ವಿರಾಟ್​ ಕೊಹ್ಲಿ ಅವರು ನಾವು ನಿಜವಾಗಿಯೂ ಒಳ್ಳೆಯ ಕ್ರಿಕೆಟ್​ ಆಡುತ್ತಿದ್ದೇವೆ. ಒಳ್ಳೆಯ ಫಲಿತಾಂಶ ನೀಡುವ ಕಡೆ ನಾವು ಗಮನ ಹರಿಸುತ್ತೇವೆ ಎಂದು ಕೊಹ್ಲಿ ತಿಳಿಸಿದರು. ವಿಶ್ವಕಪ್​ಗೆ ಆಯ್ಕೆಯಾಗಿರುವ ತಂಡದ ಸದಸ್ಯರೆಲ್ಲರೂ ಐಪಿಎಲ್​ನಲ್ಲಿ ಉತ್ತಮ ನಿರ್ವಹಣೆ ತೋರಿದ್ದು, ವಿಶ್ವಕಪ್​ನಲ್ಲಿಯೂ ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂಬ ನಿರೀಕ್ಷೆ ಇದೆ ಎಂದು ಹೇಳಿದರು.

ಪರಿಸ್ಥಿತಿಗಿಂತ ಒತ್ತಡವನ್ನು ನಿಭಾಯಿಸುವುದು ತುಂಬಾ ಪ್ರಮುಖವಾಗಿದೆ. 50 ಓವರ್​ನ ಏಕದಿನ ವಿಶ್ವಕಪ್​ಗಾಗಿ ಎಲ್ಲ ಬೌಲರ್​ಗಳು ಮಾನಸಿಕವಾಗಿ ಸಿದ್ಧರಾಗಿದ್ದಾರೆ. ಐಪಿಎಲ್​ನಲ್ಲಿಯೂ ನಮ್ಮ ತಂಡದ ಯಾವುದೇ ಬೌಲರ್​ಗಳಲ್ಲಿ ದಣಿವು ಕಾಣಲಿಲ್ಲ. ಇದೇ ರೀತಿ ವಿಶ್ವಕಪ್​ನಲ್ಲಿಯೂ ಮುಂದುವರಿಯಲಿದ್ದಾರೆ. ಎಲ್ಲಿಯೂ ನಮ್ಮ ದೈಹಿಕ ಸಾಮರ್ಥ್ಯವನ್ನು ಕೆಳಗೆ ಬಿಟ್ಟುಕೊಂಡದಂತೆ ಟೂರ್ನಿಗೂ ಮುನ್ನವೇ ಎಲ್ಲರಿಗೂ ಮನದಟ್ಟು ಮಾಡಿದ್ದೇವೆ ಎಂದು ಕೊಹ್ಲಿ ತಿಳಿಸಿದರು.

ಚಹಾಲ್​ ಹಾಗೂ ಕುಲದೀಪ್​ ಯಾದವ್​ ನಮ್ಮ ಬೌಲಿಂಗ್​ ಪಿಲ್ಲರ್​ಗಳು. ಕೇದರ್​ ಜಾಧವ್​ ಕೂಡ ನಮ್ಮ ಸ್ಟಾರ್​ ಆಟಗಾರ. ಜಾಧವ್​ ಟಿ20 ಮಾದರಿ ಪಂದ್ಯದಲ್ಲಿ ಉತ್ತಮ ನಿರ್ವಹಣೆ ತೋರಿಲ್ಲ. ಆದರೆ, ಏಕದಿನ ಪಂದ್ಯದಲ್ಲಿ ತಮ್ಮ ಸಾಮರ್ಥ್ಯ ತೋರಲಿದ್ದಾರೆ ಎಂಬ ಭರವಸೆ ಇದೆ.

ರವಿಶಾಸ್ತ್ರಿ ಹೇಳಿದ್ದೇನು?
ಇದೇ ವೇಳೆ ಮಾತನಾಡಿದ ತಂಡದ ಮುಖ್ಯ ಕೋಚ್​ ರವಿಶಾಸ್ತ್ರಿ, ಈ ವಿಶ್ವಕಪ್​ ನಮಗೆ ಒಳ್ಳೆಯ ಅವಕಾಶವಾಗಿದೆ. ಕಳೆದ ಐದು ವರ್ಷದಿಂದ ನಮ್ಮ ತಂಡ ಉತ್ತಮ ಕ್ರಿಕೆಟ್​ ಆಡಿಕೊಂಡು ಬರುತ್ತಿದೆ. ಉತ್ತಮ ನಿರ್ವಹಣೆಯೊಂದಿಗೆ ಟೂರ್ನಿಯನ್ನು ಎಂಜಾಯ್​ ಮಾಡಬೇಕಿದೆ. ಒಳ್ಳೆಯ ಸಂಭವನೀಯತೆಯಲ್ಲಿ ನಾವು ಆಡಿದರೆ, ವಿಶ್ವಕಪ್​ ಟ್ರೋಫಿ ನಮ್ಮದಾಗಲಿದೆ. ಸ್ವಲ್ಪ ದಿನದ ಅಂತರವಾಗಿರುವುದರಿಂದ 50 ಓವರ್​ ಮಾದರಿ ತುಸು ಕಷ್ಟವಾದರೂ ತಂಡ ಬೇಗ ಹೊಂದುಕೊಳ್ಳಲಿದೆ. ಇದೊಂದು ಬಲವಾದ ಸ್ಪರ್ಧೆಯ ಜತೆಗೆ ಅದ್ಭುತವೂ ಹೌದು ಎಂದು ಹೇಳಿದ್ದಾರೆ.

ಕೊನೆಯ 10 ಓವರ್​ಗಳಲ್ಲಿ ಫ್ಲೆಕ್ಸಿಬಲ್​ ಆಗಿ ಆಡುವುದೇ ನಮ್ಮ ತಂಡದ ಮಂತ್ರವಾಗಿದೆ. ಆಂಗ್ಲ ಪಿಚ್​ಗಳು ಸಮತಟ್ಟಾಗಿದ್ದು, ಸ್ಥಳದಿಂದ ಸ್ಥಳಕ್ಕೆ ಅವು ಬದಲಾಗುತ್ತವೆ. ಇದನ್ನು ನಾವು ಗಣನೆಗೆ ತೆಗೆದುಕೊಂಡಿದ್ದೇವೆ. ಅಲ್ಲಿನ ನೆಲಕ್ಕೆ ಹೊಂದುಕೊಳ್ಳುವಂತೆ ತಯಾರಿ ಮಾಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು. (ಏಜೆನ್ಸೀಸ್​)