ರಷ್ಯಾ ಓಟಕ್ಕೆ ತಡೆ, ಉಪಾಂತ್ಯಕ್ಕೆ ಕ್ರೊವೇಷಿಯಾ

ಸೋಚಿ: ಫಿಫಾ ವಿಶ್ವಕಪ್​ನಲ್ಲಿ ಆತಿಥೇಯ ರಷ್ಯಾದ ಕನಸಿನ ಓಟ ದುಃಸ್ವಪ್ನದಂಥ ಸೋಲಿನೊಂದಿಗೆ ಕೊನೆಗೊಂಡಿದೆ. ನಿಗದಿತ ಅವಧಿಯಲ್ಲಿ ತಂಡದ ಸೋಲು ತಪ್ಪಿಸಿ ಹೀರೋ ಆಗಿದ್ದ ಡಿಫೆಂಡರ್ ಮಾರಿಯೋ ಫೆರ್ನಾಂಡಿಸ್, ಪೆನಾಲ್ಟಿ ಶೂಟೌಟ್​ನಲ್ಲಿ ಮಾಡಿದ ಪ್ರಮಾದ ಆತಿಥೇಯ ರಷ್ಯಾವನ್ನು ಕ್ವಾರ್ಟರ್​ಫೈನಲ್ ಹಂತದಲ್ಲಿಯೇ ಹೊರಹಾಕಿದೆ. ಕೊನೇ ಶೂಟ್​ನಲ್ಲಿ ಕ್ರೊವೇಷಿಯಾ ಪಾಲಿಗೆ ಮತ್ತೊಮ್ಮೆ ಹೀರೋ ಎನಿಸಿಕೊಂಡ ಬಾರ್ಸಿಲೋನಾ ಕ್ಲಬ್​ನ ಮಿಡ್​ಫೀಲ್ಡರ್ ಇವಾನ್ ರಾಕೆಟಿಕ್ ತಂಡವನ್ನು ವಿಶ್ವಕಪ್ ಇತಿಹಾಸದಲ್ಲಿ 2ನೇ ಬಾರಿಗೆ ಸೆಮಿಫೈನಲ್ ಹಂತಕ್ಕೇರಿಸುವಲ್ಲಿ ನೆರವಾದರು.

ಫಿಸ್ಟ್ ಒಲಿಂಪಿಕ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಕ್ರೊವೇಷಿಯಾ ಪೆನಾಲ್ಟಿ ಶೂಟೌಟ್​ನಲ್ಲಿ ರಷ್ಯಾ ತಂಡವನ್ನು 4-3ರಿಂದ ಮಣಿಸಿ ಉಪಾಂತ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸುವ ಅರ್ಹತೆ ಪಡೆಯಿತು. ನಿಗದಿತ ಅವಧಿಯಲ್ಲಿ ಪಂದ್ಯ 2-2 ಗೋಲುಗಳಿಂದ ಡ್ರಾಗೊಂಡಿತ್ತು. ಏರಿಳಿತಗಳಿಂದಲೇ ಕೂಡಿದ್ದ ಪಂದ್ಯದಲ್ಲಿ ರಷ್ಯಾ ಮೊದಲು ಮುನ್ನಡೆ ಕಂಡಿದ್ದರೆ, ಪಂದ್ಯದ ಮುಕ್ತಾಯ ಹಂತದಲ್ಲಿ ಕ್ರೊವೇಷಿಯಾ ಮುನ್ನಡೆ ಕಂಡಿತು. ಹೆಚ್ಚುವರಿ ಅವಧಿ ಮುಗಿಯಲು 5 ನಿಮಿಷವಿರುವಾಗ ಮಾರಿಯೋ ಫೆರ್ನಾಂಡಿಸ್ ಆಕರ್ಷಕ ಹೆಡರ್ ಗೋಲು ಸಿಡಿಸಿ ಸಮಬಲಕ್ಕೆ ಕಾರಣರಾಗಿದ್ದರು.

ಡೆನ್ಮಾರ್ಕ್ ವಿರುದ್ಧ ಕಳೆದ ಭಾನುವಾರ ನಡೆದ 16ರ ಘಟ್ಟದ ಪಂದ್ಯದಲ್ಲೂ ನಿರ್ಣಾಯಕ ಶೂಟ್ ಪಡೆದಿದ್ದ ಇವಾನ್ ರಾಕಿಟಿಕ್, ಈ ಬಾರಿಯೂ ಯಾವುದೇ ಒತ್ತಡವಿಲ್ಲದೆ ತಾಳ್ಮೆಯಿಂದ ಚೆಂಡನ್ನು ಗುರಿ ಸೇರಿಸಿ ಗೆಲುವಿಗೆ ಕಾರಣರಾದರು. ವಿಶ್ವಕಪ್​ನಲ್ಲಿ ರಷ್ಯಾದ ಅಭಿಯಾನವನ್ನು ಕೊನೆಗೊಳಿಸಿರುವ ಕ್ರೊವೇಷಿಯಾ, ದೇಶದ ಗೋಲ್ಡನ್ ಜನರೇಷನ್ 1998ರಲ್ಲಿ ಫ್ರಾನ್ಸ್ ಆತಿಥ್ಯದಲ್ಲಿ ವಿಶ್ವಕಪ್ ಸೆಮಿಫೈನಲ್​ಗೇರಿದ ಸಾಧನೆಯನ್ನು ಸರಿಗಟ್ಟಿದೆ. ಈ ಬಾರಿ ಇನ್ನೊಂದು ಹಂತ ಮೇಲೇರುವ ಗುರಿಯಲ್ಲಿ ಬುಧವಾರ ಇಂಗ್ಲೆಂಡ್ ತಂಡವನ್ನು ಲಜ್ನಿಕಿ ಸ್ಟೇಡಿಯಂನಲ್ಲಿ ಜ್ಲಾಟ್ಕೋ ಡಾಲಿಕ್ ಮಾರ್ಗದರ್ಶನದ ಟೀಮ್ ಎದುರಿಸಲಿದೆ.

ರಾಕಿಟಿಕ್​ರ ಸಾಹಸದೊಂದಿಗೆ ಕ್ರೊವೇಷಿಯಾ ಗೋಲ್ಕೀಪರ್ ಡೇನಿಯಲ್ ಸುಬಸಿಕ್ ಕೂಡ ಗಮನಸೆಳೆದರು. ಫೆಡರ್ ಸ್ಮೋಲೋವ್​ರ ಮೊದಲ ಪೆನಾಲ್ಟಿಯನ್ನು ರಕ್ಷಿಸಿದರೆ, ಫೆರ್ನಾಂಡೀಸ್ ಆತುರದಲ್ಲಿ ಬಾರಿಸಿದ ಶಾಟ್ ಗೋಲುಪೆಟ್ಟಿಗೆಯ ಬಳಿಯೂ ಬರದೆ ಹೊರನಡೆಯಿತು. ಒಂದೇ ವಿಶ್ವಕಪ್ ಟೂರ್ನಿಯ ಎರಡು ನಾಕೌಟ್ ಪಂದ್ಯವನ್ನು ಪೆನಾಲ್ಟಿ ಶೂಟೌಟ್ ಮೂಲಕ ಗೆದ್ದ 2ನೇ ತಂಡ ಕ್ರೊವೇಷಿಯಾ. 1990ರಲ್ಲಿ ಅರ್ಜೆಂಟೀನಾ ತಂಡ ಈ ಸಾಧನೆ ಮಾಡಿತ್ತು.

ಮುನ್ನಡೆ ಕಂಡಿದ್ದ ರಷ್ಯಾ

ಸ್ಪೇನ್ ವಿರುದ್ಧದ ಕಳೆದ ಪಂದ್ಯಕ್ಕೆ ನಿಷೇಧಿತರಾಗಿದ್ದ ಡೆನಿಸ್ ಚೆರಿಶೀವ್ ಮತ್ತೊಂದು ಆಕರ್ಷಕ ಗೋಲಿನೊಂದಿಗೆ ರಷ್ಯಾಗೆ ಮುನ್ನಡೆ ನೀಡಿದರು. ಗುಂಪು ಹಂತದಲ್ಲಿ ಸೌದಿ ಅರೇಬಿಯಾ ಹಾಗೂ ಈಜಿಪ್ಟ್ ವಿರುದ್ಧ ಮಿಂಚಿದ್ದ ಚೆರಿಶೀವ್ 31ನೇ ನಿಮಿಷದಲ್ಲಿ ಪೆನಾಲ್ಟಿ ಆವರಣದ ಹೊರಗಡೆಯಿಂದ ಬಾರಿಸಿದ ಚೆಂಡು ಗೋಲು ಪೆಟ್ಟಿಗೆ ಸೇರಿತು. ಆದರೆ, ಮುನ್ನಡೆ ಕೇವಲ 8 ನಿಮಿಷ ಉಳಿದುಕೊಂಡಿತು. 39ನೇ ನಿಮಿಷದಲ್ಲಿ ಆಂಡ್ರೆಜ್ ಕ್ರಮಾರಿಕ್ ಬಾರಿಸಿದ ಹೆಡರ್ ಗೋಲು ಕ್ರೊವೇಷಿಯಾಕ್ಕೆ ಸಮಬಲ ನೀಡಿತು. ಹೆಚ್ಚುವರಿ ಅವಧಿಯ 10ನೇ ನಿಮಿಷದಲ್ಲಿ ಲೂಕಾ ಮಾಡ್ರಿಕ್ ಕಾರ್ನರ್ ಕಿಕ್ ಮಾಡಿದ ಚೆಂಡನ್ನು ಡೊಮಾಗೊಜ್ ವಿಡಾ ಹೆಡ್ ಮಾಡಿ ಗುರಿ ಸೇರಿಸಿ ಮುನ್ನಡೆ ನೀಡಿದರು. ಇನ್ನೇನು ಕ್ರೊವೇಷಿಯಾ ಗೆದ್ದೇ ಬಿಟ್ಟಿತು ಎನ್ನುವ ಹಂತದಲ್ಲಿ, 2 ವರ್ಷದ ಹಿಂದೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್​ರಿಂದ ಪೌರತ್ವ ಪಡೆದುಕೊಂಡಿದ್ದ ಫೆರ್ನಾಂಡಿಸ್ 115ನೇ ನಿಮಿಷದಲ್ಲಿ ಹೆಡರ್ ಗೋಲು ಸಿಡಿಸಿದ್ದರು.

ಆಟಗಾರರ ಜತೆ ಕುಣಿದ ಕ್ರೊವೇಷಿಯಾ ಅಧ್ಯಕ್ಷೆ!

ಕ್ವಾರ್ಟರ್​ಫೈನಲ್ ಪಂದ್ಯವನ್ನು ಕ್ರೊವೇಷಿಯಾ ಅಧ್ಯಕ್ಷೆ ಕೊಲಿಂಡಾ ಗ್ರಬಾರ್ ಕಿಟರೋವಿಕ್, ರಷ್ಯಾ ಪ್ರಧಾನಿ ಡಿಮಿಟ್ರಿ ಮೆಡ್ವೆಡೇವ್ ಜತೆ ವೀಕ್ಷಿಸಿದರು. ವಿಡಾ ಗೋಲು ಬಾರಿಸಿದಾಗ ಸಾಮಾನ್ಯ ಪ್ರೇಕ್ಷಕರಂತೆ ಕುಣಿದು ಸಂಭ್ರಮ ಆಚರಿಸಿದ ಕೊಲಿಂಡಾ, ಬಳಿಕ ರಷ್ಯಾ ಸಮಬಲ ಸಾಧಿಸಿದಾಗ ಮೆಡ್ವೆಡೇವ್​ರ ಕೈಕುಲುಕಿ ಶುಭ ಕೋರಿದರು. ತಂಡ ಸೆಮಿಫೈನಲ್​ಗೇರಿದ ಬಳಿಕ ಡ್ರೆಸಿಂಗ್ ರೂಮ್ೆ ತೆರಳಿದ ಕೊಲಿಂಡಾ, ಆಟಗಾರರ ಜತೆ ಕುಣಿಯುತ್ತಾ ಗೆಲುವಿನ ಸಂಭ್ರಮ ಆಚರಿಸಿದರು. 2015ರಲ್ಲಿ ಕ್ರೊವೇಷಿಯಾದ ನಾಲ್ಕನೇ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ ಕೊಲಿಂಡಾ, ದೇಶದ ಅತಿ ಕಿರಿಯ ಅಧ್ಯಕ್ಷೆ ಎನಿಸಿದ್ದಾರೆ. 50 ವರ್ಷದ ಕೊಲಿಂಡಾಗೆ ಇಬ್ಬರು ಮಕ್ಕಳಿದ್ದು, ಪುತ್ರಿ ಕ್ಯಾಥರಿನಾ ವೃತ್ತಿಪರ ಫಿಗರ್ ಸ್ಕೇಟರ್ ಆಗಿದ್ದಲ್ಲದೆ, ಕ್ರೊವೇಷಿಯಾದ ರಾಷ್ಟ್ರೀಯ ಜೂನಿಯರ್ ಚಾಂಪಿಯನ್ ಕೂಡ ಆಗಿದ್ದಾರೆ. ವಿಶೇಷವೆಂದರೆ, ಕ್ವಾರ್ಟರ್​ಫೈನಲ್ ಪಂದ್ಯ ನೋಡುವ ಸಲುವಾಗಿ ತಮ್ಮ ನಿಬಿಡ ವೇಳಾಪಟ್ಟಿಯಲ್ಲೂ ಕೊಲಿಂಡಾ ರಷ್ಯಾಗೆ ಆಗಮಿಸಿದ್ದರು. ಶನಿವಾರ ಬೆಳಗ್ಗೆ ವಿಮಾನದ ಎಕಾನಮಿ ಕ್ಲಾಸ್​ನಲ್ಲಿ ಪ್ರಯಾಣ ಮಾಡಿ ಸೋಚಿಗೆ ತಲುಪಿದ್ದರು! ವಿಮಾನದಲ್ಲಿ ಬರುವ ವೇಳೆಯಲ್ಲೂ ಸಹ ಪ್ರಯಾಣಿಕರೊಂದಿಗೆ ಸೆಲ್ಪಿ ತೆಗೆದುಕೊಂಡು ಯಾವುದೇ ಪ್ರತಿಷ್ಠೆಗಳಿಲ್ಲದೆ ರಷ್ಯಾಗೆ ಬಂದಿದ್ದರು. ಅದಲ್ಲದೆ, ವಿಐಪಿ ಗ್ಯಾಲರಿಯಲ್ಲಿ ದೇಶದ ಟಿ-ಶರ್ಟ್ ಧರಿಸಿ ಕೂರುವ ಅವಕಾಶವಿಲ್ಲದ ಕಾರಣ, ಸಾಮಾನ್ಯ ಪ್ರೇಕ್ಷಕರೊಂದಿಗೆ ಕುಳಿತು ಪಂದ್ಯ ವೀಕ್ಷಿಸಿದ್ದರು. ಆ ಬಳಿಕ ಅವರು ವಿಐಪಿ ಗ್ಯಾಲರಿಗೆ ತೆರಳಿದ್ದರು.