ವಿಶ್ವಕಪ್ ಟ್ರೋಫಿಗೆ ಫ್ರಾನ್ಸ್-ಕ್ರೊವೇಷಿಯಾ ಕಾದಾಟ

ಮಾಸ್ಕೋ: ಕೆಲವೇ ಕೆಲವರು ಊಹೆ ಮಾಡಿದಂಥ ಫಿಫಾ ವಿಶ್ವಕಪ್ ಫೈನಲ್ ಇದು. ಭಾನುವಾರ ಲಜ್ನಿಕಿ ಸ್ಟೇಡಿಯಂನಲ್ಲಿ ನಡೆಯಲಿರುವ 2018ರ ವಿಶ್ವಕಪ್ ಫುಟ್​ಬಾಲ್ ಟೂರ್ನಿಯ ಫೈನಲ್​ನಲ್ಲಿ ಕ್ರೊವೇಷಿಯಾ ತಂಡ ಬಲಿಷ್ಠ ಫ್ರಾನ್ಸ್ ತಂಡವನ್ನು ಎದುರಿಸಲಿದೆ. ಚೊಚ್ಚಲ ಅಂತಾರಾಷ್ಟ್ರೀಯ ಪ್ರಶಸ್ತಿ ಗೆಲ್ಲಬೇಕು ಎನ್ನುವುದು ಕ್ರೊವೇಷಿಯಾದ ಗುರಿಯಾಗಿದ್ದರೆ, ಕಳೆದ ಆರು ವಿಶ್ವಕಪ್​ಗಳ ಪೈಕಿ ಮೂರರಲ್ಲಿ ಫೈನಲ್​ಗೇರಿರುವ ಫ್ರಾನ್ಸ್, 20 ವರ್ಷಗಳ ಹಿಂದೆ ತವರು ನೆಲ ಪ್ಯಾರಿಸ್​ನಲ್ಲಿ ಕಳೆದಿದ್ದ ಕ್ಷಣವನ್ನು ಮರುಸೃಷ್ಟಿಸುವ ಇರಾದೆಯಲ್ಲಿದೆ. ಲೆಸ್ ಬ್ಲ್ಯೂಸ್ ಖ್ಯಾತಿಯ ಫ್ರಾನ್ಸ್​ಗೆ ಫೈನಲ್​ವರೆಗೆ ಮಾರ್ಗದರ್ಶನ ಮಾಡಿದ್ದು, 1998ರ ವಿಶ್ವಕಪ್ ವಿಜೇತ ತಂಡದ ನಾಯಕ ಡಿಡಿಯರ್ ಡೆಶಾಂಪ್ಸ್. 3ನೇ ಬಾರಿಗೆ ವಿಶ್ವಕಪ್​ನಲ್ಲಿ ಫ್ರಾನ್ಸ್ ತಂಡದ ಕೋಚ್ ಆಗಿರುವ ಡೆಶಾಂಪ್ಸ್, ಆಟಗಾರ ಹಾಗೂ ಕೋಚ್ ಆಗಿ ವಿಶ್ವಕಪ್ ಗೆದ್ದ ಅಪರೂಪದ 3ನೇ ಸಾಧಕ ಎನಿಸಿಕೊಳ್ಳುವ ಹಾದಿಯಲ್ಲಿದ್ದಾರೆ. ಇನ್ನೊಂದೆಡೆ ಕೇವಲ 9 ತಿಂಗಳ ಹಿಂದೆ ಬಾಲ್ಕನ್ ಟೀಮ್ ಕ್ರೊವೇಷಿಯಾ ತಂಡದ ಮ್ಯಾನೇಜರ್ ಆಗಿ ಅಧಿಕಾರ ವಹಿಸಿಕೊಂಡ ಜ್ಲಾಟ್ಕೊ ಡಾಲಿಕ್, ಜಾಗತಿಕ ಫುಟ್​ಬಾಲ್​ನ ಅತ್ಯುನ್ನತ ಪ್ರಶಸ್ತಿ ಹಾಗೂ ವಿಶ್ವಕಪ್ ಇತಿಹಾಸದ ಮಹದಚ್ಚರಿಯ ಗೆಲುವಿನಿಂದ ಕೇವಲ 90 ನಿಮಿಷಗಳ ಆಟದ ದೂರದಲ್ಲಿದ್ದಾರೆ. ಮಿಡ್​ಫೀಲ್ಡ್​ನ ಸ್ಟಾರ್ ಆಟಗಾರ ಲೂಕಾ ಮಾಡ್ರಿಕ್ ಹಾಗೂ ಫ್ರಾನ್ಸ್​ನ ಸೆನ್ಸೇಷನ್ ಕೈಲಿಯನ್ ಬಾಪೆ ನಡುವಿನ ಮುಖಾಮುಖಿ ಗಮನಸೆಳೆದಿದೆ. ಕೇವಲ 40 ಲಕ್ಷ ಜನಸಂಖ್ಯೆಯ ಕ್ರೊವೇಷಿಯಾಗೆ ವಿಶ್ವಕಪ್ ಗೆಲ್ಲುವ ಹಾದಿ ಸುಲಭವಿಲ್ಲ. ಅದಕ್ಕೆ ಕಾರಣ ಫ್ರಾನ್ಸ್​ನ ಆಟ. ಎರಡು ವರ್ಷಗಳ ಹಿಂದೆ ಯುರೋ ಕಪ್ ಫೈನಲ್​ನಲ್ಲಿ ಪೋರ್ಚುಗಲ್ ವಿರುದ್ಧ ಅಚ್ಚರಿಯ ಸೋಲು ಕಂಡ ಬಳಿಕ ಎಚ್ಚೆತ್ತುಕೊಂಡಿರುವ ಫ್ರಾನ್ಸ್, ಈ ಬಾರಿ ಅಂಥಾ ಸ್ಥಿತಿ ಮರುಕಳಿಸಬಾರದು ಎನ್ನುವ ಗುರಿಯಲ್ಲಿದೆ. ಇನ್ನು ಫ್ರಾನ್ಸ್ ಮಾಧ್ಯಮಗಳು ಫೈನಲ್ ಹಾದಿಯಲ್ಲಿ ತಂಡದ ಸಿದ್ಧತೆಯನ್ನು ವಿಶೇಷವಾಗಿ ಪರಿಗಣಿಸಿ ವರದಿ ಮಾಡಿವೆ. ಕ್ರೊವೇಷಿಯಾಗಿಂತ ಒಂದು ದಿನ ಮುಂಚಿತವಾಗಿ ಸೆಮಿಫೈನಲ್ ಆಡಿದ್ದ ಫ್ರಾನ್ಸ್, ಎಲ್ಲ ನಾಕೌಟ್ ಪಂದ್ಯಗಳನ್ನು ನಿಗದಿತ ಅವಧಿಯಲ್ಲೇ ಗೆದ್ದಿದೆ ಎಂದು ಬರೆದಿದೆ. ಇನ್ನೊಂದೆಡೆ ಕ್ರೊವೇಷಿಯಾ ತಂಡ ಎರಡು ಪಂದ್ಯಗಳನ್ನು ಪೆನಾಲ್ಟಿ ಶೂಟೌಟ್​ನಲ್ಲಿ ಗೆದ್ದಿದ್ದರೆ, ಒಂದು ಪಂದ್ಯವನ್ನು ಹೆಚ್ಚುವರಿ ನಿಮಿಷದಲ್ಲಿ ಗೆದ್ದಿದೆ ಎಂದು ಮೈಂಡ್​ಗೇಮ್ ಆರಂಭಿಸಿದೆ.

ಸಂಭಾವ್ಯ ತಂಡ

ಫ್ರಾನ್ಸ್: ಗೋಲ್ಕೀಪರ್: ಹುಗೋ ಲೋರಿಸ್ (1); ಡಿಫೆಂಡರ್: ಬೆಂಜಮಿನ್ ಪಾವಾರ್ಡ್ (2), ರಾಫೆಲ್ ವರಾನೆ (4), ಸ್ಯಾಮ್ಯುಯೆಲ್ ಉಮ್ಟಿಟಿ (5), ಲೂಕಾಸ್ ಹೆರ್ನಾಂಡೆಜ್ (21); ಮಿಡ್​ಫೀಲ್ಡರ್: ಪೌಲ್ ಪೋಗ್ಬಾ (6), ಎನ್​ಗೊಲೊ ಕಾಂಟೆ (13), ಬ್ಲೈಸೆ ಮಟೌಡಿ (14); ಫಾರ್ವರ್ಡ್ಸ್: ಕೈಲಿಯನ್ ಬಾಪೆ (10), ಅಂಟೋಯಿನ್ ಗ್ರಿಜ್​ವುನ್ (7), ಒಲಿವರ್ ಜಿರಾರ್ಡ್ (9) ಟೀಮ್ ಫಾಮೇಷನ್: 4-3-3


ಕ್ರೊವೇಷಿಯಾ: ಗೋಲ್ಕೀಪರ್: ಸುಬಸಿಕ್ (23), ಡಿಫೆಂಡರ್: ವರ್ಸಾಲಿಜ್ಕೊ (2), ದೆಜನ್ ಲೊವ್ರಿನ್ (6), ವಿಡಾ (21), ಇವಾನ್ ಸ್ಟ್ರೈನೆಕ್ (3); ಮಿಡ್​ಫೀಲ್ಡರ್: ಇವಾನ್ ರಾಕೆಟಿಕ್ (7), ಮಾರ್ಸೆಲೊ ಬ್ರೊಜೊವಿಕ್ (11), ಲೂಕಾ ಮಾಡ್ರಿಕ್ (10); ಫಾರ್ವರ್ಡ್: ಆಂಟೆ ರೆಬಿಕ್ (18), ಇವಾನ್ ಪೆರಿಸಿಕ್ (4), ಮಾರಿಯೋ ಮಾಂಡ್ಜುಕಿಕ್ (17). ಟೀಮ್ ಫಾಮೇಷನ್: 4-1-4-1

2022ರ ಕತಾರ್ ವಿಶ್ವಕಪ್ ದಿನಾಂಕ ಪ್ರಕಟ

ರಷ್ಯಾ ವಿಶ್ವಕಪ್​ನ ಮುಕ್ತಾಯ ಹಂತಕ್ಕೆ ಒಂದು ದಿನ ಬಾಕಿ ಇರುವ ವೇಳೆ ಫಿಫಾ, 2022ರಲ್ಲಿ ಕತಾರ್ ಆತಿಥ್ಯದಲ್ಲಿ ನಡೆಯಲಿರುವ ವಿಶ್ವಕಪ್​ನ ದಿನಾಂಕವನ್ನು ಪ್ರಕಟಿಸಿದೆ. ಇತ್ತೀಚಿನ ವರ್ಷಗಳಲ್ಲಿ ಫಿಫಾ ಜೂನ್-ಜುಲೈನಲ್ಲಿ ವಿಶ್ವಕಪ್ ನಡೆಸುತ್ತಿತ್ತು. 2022ರ ವಿಶ್ವಕಪ್ ನವೆಂಬರ್ 21ರಿಂದ ಡಿಸೆಂಬರ್ 18ರವರೆಗೆ ನಡೆಯಲಿದೆ. ಏಷ್ಯಾದಲ್ಲಿ 20 ವರ್ಷಗಳ ಬಳಿಕ ವಿಶ್ವಕಪ್ ನಡೆಯಲಿದೆ. 2002ರಲ್ಲಿ ಕೊರಿಯಾ-ಜಪಾನ್ ಜಂಟಿ ಆತಿಥ್ಯದಲ್ಲಿ ಏಷ್ಯಾದ ಮೊದಲ ವಿಶ್ವಕಪ್ ನಡೆದಿತ್ತು.

ಸಮಾರೋಪ ಸಮಾರಂಭ

ವಿಶ್ವಕಪ್​ನ ಧ್ಯೇಯಗೀತೆಯನ್ನು ಹಾಡಿರುವ ಗಾಯಕಿ ಎರಾ ಇಸ್ಟ್ರೇಫಿ, ಖ್ಯಾತ ಹಾಲಿವುಡ್ ನಟ ಹಾಗೂ ಗಾಯಕ ವಿಲ್ ಸ್ಮಿತ್ ಹಾಗೂ ನಿಕ್ಕಿ ಜಾಮ್ ಫೈನಲ್​ಗೆ ಮುನ್ನ ಸಮಾರೋಪ ಸಮಾರಂಭದಲ್ಲಿ ಕಾರ್ಯಕ್ರಮ ನೀಡಲಿದ್ದಾರೆ.

ಚಾಂಪಿಯನ್ ತಂಡಕ್ಕೆ ಫಿಫಾ ವಿಶ್ವಕಪ್ ಟ್ರೋಫಿ ಜತೆ 256 ಕೋಟಿ ರೂಪಾಯಿ ಬಹುಮಾನ ಸಿಗಲಿದೆ. ರನ್ನರ್​ಅಪ್ ತಂಡ 188 ಕೋಟಿ ರೂ. ಗೆ ತೃಪ್ತಿ ಪಡಲಿದೆ.

ಲಜ್ನಿಕಿ ಸ್ಟೇಡಿಯಂ, ಮಾಸ್ಕೋ

1980ರ ಒಲಿಂಪಿಕ್ಸ್, ಐಸ್ ಹಾಕಿ, ರಗ್ಬಿ, ಅಥ್ಲೆಟಿಕ್ಸ್​ನ ವಿಶ್ವ ಚಾಂಪಿಯನ್​ಷಿಪ್, ಜಗತ್ಪ್ರಸಿದ್ಧ ಸಂಗೀತಗಾರರ ಕಾರ್ಯಕ್ರಮ ಹಾಗೂ 3 ಸಾವಿರಕ್ಕೂ ಅಧಿಕ ಫುಟ್​ಬಾಲ್ ಪಂದ್ಯಗಳಿಗೆ ಈಗಾಗಲೇ ಆತಿಥ್ಯ ವಹಿಸಿಕೊಂಡಿರುವ ರಷ್ಯಾ ರಾಜಧಾನಿ ಮಾಸ್ಕೋದ ಲಜ್ನಿಕಿ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿದೆ. 1999ರ ಯುಇಎಎಫ್​ಎ ಕಪ್, 2008ರಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ಹಾಗೂ ಚೆಲ್ಸಿ ನಡುವಿನ ಯುಇಎಫ್​ಎ ಚಾಂಪಿಯನ್ಸ್ ಲೀಗ್ ಫೈನಲ್ ಪಂದ್ಯ ನಡೆದ ಸ್ಟೇಡಿಯಂ ಇದು. 2013ರಲ್ಲಿ ವಿಶ್ವಕಪ್​ಗಾಗಿಯೇ ನವೀಕರಣ ಆರಂಭವಾಗಿ 2017ರಲ್ಲಿ ಮುಗಿದಿತ್ತು. 2805 ಕೋಟಿ ರೂ. ವೆಚ್ಚದಲ್ಲಿ ಮರುನಿರ್ವಣ ನಡೆದಿದೆ. ಸ್ಟೇಡಿಯಂ ಸಾಮರ್ಥ್ಯ 80 ಸಾವಿರ.