Friday, 16th November 2018  

Vijayavani

Breaking News

ವಿಶ್ವಕಪ್ ಸೆಮಿಫೈನಲ್​ಗೆ ವೇದಿಕೆ ಸಜ್ಜು

Tuesday, 10.07.2018, 3:05 AM       No Comments

ಸೇಂಟ್​ಪೀಟರ್ಸ್​ಬರ್ಗ್: ಫಿಫಾ ವಿಶ್ವಕಪ್ ಫುಟ್​ಬಾಲ್​ನ ಸೆಮಿಫೈನಲ್ ಹಂತದಲ್ಲಿರುವ ತಂಡಗಳು ಯಾವುವು ಎನ್ನುವುದನ್ನು ನೋಡಿ. ಫ್ರಾನ್ಸ್, ಬೆಲ್ಜಿಯಂ, ಇಂಗ್ಲೆಂಡ್ ಹಾಗೂ ಕ್ರೊವೇಷಿಯಾ. ಮೂರು ವಾರಗಳ ಹಿಂದೆ 32 ತಂಡಗಳು ವಿಶ್ವಕಪ್ ಟ್ರೋಫಿ ಗೆಲ್ಲುವ ಸಲುವಾಗಿ ಹೋರಾಟ ಆರಂಭಿಸಿದಾಗ ಈ ನಾಲ್ಕು ತಂಡಗಳು ಸೆಮಿಫೈನಲ್​ಗೇರಲಿದೆ ಎನ್ನುವುದನ್ನು ಯಾರೊಬ್ಬರೂ ಊಹೆ ಮಾಡಿರಲಿಲ್ಲ. ಫ್ರಾನ್ಸ್ ತಂಡದ ಮೇಲೆ ನಿರೀಕ್ಷೆ ಇತ್ತಾದರೂ, ಬಲಾಢ್ಯ ತಂಡಗಳಿದ್ದ ಭಾಗದಲ್ಲಿ ಸ್ಥಾನ ಪಡೆದಿದ್ದ ಕಾರಣಕ್ಕೆ 1998ರ ಚಾಂಪಿಯನ್ ಉಪಾಂತ್ಯಕ್ಕೇರುವ ಯಾವ ಗಟ್ಟಿ ಅಂಶಗಳೂ ಇರಲಿಲ್ಲ. ಆದರೆ, 21ನೇ ಆವೃತ್ತಿಯ ವಿಶ್ವಕಪ್ ಫುಟ್​ಬಾಲ್ ಟೂರ್ನಿ ಈವರೆಗಿನ ಅನಿರೀಕ್ಷಿತ ಸೆಮಿಫೈನಲ್ಸ್ ಕಣಕ್ಕೆ ಸಾಕ್ಷಿಯಾಗಿದೆ.

ಸೆಮಿಫೈನಲ್ ಹಂತದಲ್ಲಿ ಟೂರ್ನಿ ನಿಂತಿದ್ದರೂ ಯಾವ ತಂಡ ವಿಶ್ವಕಪ್ ಫೈನಲ್​ಗೇರಲಿದೆ ಎನ್ನುವುದನ್ನೂ ಊಹೆ ಮಾಡುವುದು ಕಷ್ಟವಾಗಿದೆ. ಈ ನಾಲ್ಕೂ ತಂಡಗಳು ವಿಶ್ವಕಪ್​ನ ಸೆಮಿಫೈನಲ್ ಹಂತ ಕಾಣದೇ 10ಕ್ಕಿಂತ ಹೆಚ್ಚಿನ ವರ್ಷಗಳು ಕಳೆದಿವೆ. ಫ್ರಾನ್ಸ್ 2006ರಲ್ಲಿ ಕೊನೇ ಬಾರಿಗೆ ಉಪಾಂತ್ಯ ಘಟ್ಟದಲ್ಲಿ ಆಡಿದ್ದರೆ, ಕ್ರೊವೇಷಿಯಾ 1998, ಇಂಗ್ಲೆಂಡ್ 1990 ಹಾಗೂ ಬೆಲ್ಜಿಯಂ 1986ರಲ್ಲಿ ಕೊನೇ ಬಾರಿಗೆ ವಿಶ್ವಕಪ್ ಸೆಮಿಫೈನಲ್ ಆಡಿತ್ತು.

ಹೊಸ ಲುಕ್​ನ ವಿಶ್ವಕಪ್ ಸೆಮಿಫೈನಲ್ಸ್​ನಲ್ಲಿ ಹೊಸ ಚಾಂಪಿಯನ್ ತಂಡವೊಂದು ಹುಟ್ಟುವ ನಿರೀಕ್ಷೆಯೂ ಜೋರಾಗಿದೆ. ಫ್ರಾನ್ಸ್ ಹಾಗೂ ಇಂಗ್ಲೆಂಡ್ ತಂಡಗಳು ಮಾತ್ರವೇ ಹಿಂದೆ ವಿಶ್ವಕಪ್ ಟ್ರೋಫಿ ಹಿಡಿದ ಅನುಭವವಿರುವ ತಂಡಗಳಾಗಿವೆ. ವಿಶ್ವ ರ್ಯಾಂಕಿಂಗ್​ನಲ್ಲಿ ಬೆಲ್ಜಿಯಂ 3ನೇ ಸ್ಥಾನದಲ್ಲಿದ್ದರೆ, 7ರಲ್ಲಿ ಫ್ರಾನ್ಸ್, 12ರಲ್ಲಿ ಇಂಗ್ಲೆಂಡ್ ಹಾಗೂ 20ನೇ ಸ್ಥಾನದಲ್ಲಿ ಕ್ರೊವೇಷಿಯಾ ತಂಡಗಳಿವೆ. ಜರ್ಮನಿ ಫುಟ್​ಬಾಲ್​ನ ದಕ್ಷತೆ, ಹಳದಿ ಬಣ್ಣದ ಜೆರ್ಸಿ ಧರಿಸಿ ಆಡುವ ಬ್ರೆಜಿಲ್​ನ ಸಾಂಬಾ ಸ್ಟೈಲ್​ನ ಆಟ, ಸ್ಪೇನ್​ನ ಟಿಕಿ-ಟಕಾ ಪಾಸ್ ರೀತಿಯ ಆಟಗಳು ಮುಕ್ತಾಯ ಕಂಡಿವೆ. ಸೂಪರ್ ಸ್ಟಾರ್ ಆಟಗಾರರ ತಂಡವಾದ ಮೆಸ್ಸಿಯ ಅರ್ಜೆಂಟೀನಾ ಹಾಗೂ ಕ್ರಿಶ್ಚಿಯಾನೊ ರೊನಾಲ್ಡೊರ ಪೋರ್ಚುಗಲ್ 16ರ ಘಟ್ಟದಿಂದ ಮೇಲೇರಲು ಸಾಧ್ಯವಾಗಿಲ್ಲ.

1966ರಲ್ಲಿ ಲಂಡನ್​ನ ವೆಂಬ್ಲಿ ಸ್ಟೇಡಿಯಂನಲ್ಲಿ ಮಿರುಗುವ ಟ್ರೋಫಿಯನ್ನು ಬಾಬಿ ಮೂರ್ ಎತ್ತಿಹಿಡಿದ ಬಳಿಕ ಇಂಗ್ಲೆಂಡ್ ವಿಶ್ವಕಪ್​ನ ಸೆಮಿಫೈನಲ್ ಹಂತಕ್ಕೇರಿದ್ದು ಒಮ್ಮೆ ಮಾತ್ರ. ಅದು 1990ರಲ್ಲಿ. 1958 ಹಾಗೂ 1982ರ ವಿಶ್ವಕಪ್ ಸೆಮಿಫೈನಲ್​ನಲ್ಲಿ ಸೋತಿದ್ದ ಫ್ರಾನ್ಸ್, 1998ರಲ್ಲಿ ತವರಿನಲ್ಲಿ ನಡೆದ ವಿಶ್ವಕಪ್​ನಲ್ಲಿ ಜಯಿಸಿತ್ತು. 2006ರಲ್ಲಿ ಫೈನಲ್​ಗೇರಿ ಸೋಲು ಕಂಡಿತ್ತು. ಇನ್ನು 1990ರಲ್ಲಷ್ಟೇ ಫುಟ್​ಬಾಲ್ ತಂಡವನ್ನು ಕಟ್ಟಿದ್ದ ಕ್ರೊವೇಷಿಯಾ, ಸ್ವತಂತ್ರ ದೇಶವಾಗಿ1998ರಲ್ಲಿ ಆಡಿದ ಚೊಚ್ಚಲ ವಿಶ್ವಕಪ್ ಟೂರ್ನಿಯಲ್ಲಿಯೇ ಸೆಮಿಫೈನಲ್ ಸಾಧನೆ ಮಾಡಿ, ಫ್ರಾನ್ಸ್ ವಿರುದ್ಧ ಉಪಾಂತ್ಯದಲ್ಲಿ ನಿರಾಸೆ ಕಂಡಿತ್ತು. 1986ರಲ್ಲಿ ಏಕೈಕ ಬಾರಿ ವಿಶ್ವಕಪ್ ಸೆಮಿಫೈನಲ್ ಆಡಿದ್ದ ಬೆಲ್ಜಿಯಂ, ಅರ್ಜೆಂಟೀನಾ ವಿರುದ್ಧ ಸೋಲು ಕಂಡು ನಿರ್ಗಮಿಸಿತ್ತು. ಯಾವ ತಂಡ ವಿಶ್ವಕಪ್ ಗೆದ್ದರೂ ಇದರಲ್ಲಿ ಯುರೋಪ್​ನ ಸಂಭ್ರಮ ಹೆಚ್ಚಾಗುವುದಕ್ಕೆ ಮತ್ತಷ್ಟು ಕಾರಣ

ಗಳೂ ಇವೆ. ಸೆಮಿಫೈನಲ್​ನಲ್ಲಿರುವ ಒಟ್ಟು 92 ಆಟಗಾರರ ಪೈಕಿ 81 ಆಟಗಾರರು ಯುರೋಪ್​ನ ಅಗ್ರ ಐದು ವೃತ್ತಿಪರ ಲೀಗ್​ಗಳಲ್ಲಿ ಆಡುತ್ತಿದ್ದಾರೆ. ಇಂಗ್ಲೀಷ್ ಪ್ರೀಮಿಯರ್ ಲೀಗ್​ನ ಗರಿಷ್ಠ ಆಟಗಾರರು ಸೆಮಿಫೈನಲ್​ನಲ್ಲಿದ್ದಾರೆ. ಇಪಿಎಲ್​ನ 40 ಆಟಗಾರರು 4ರ ಘಟ್ಟದಲ್ಲಿದ್ದರೆ, ಸ್ಪೇನ್​ನ ಸ್ಪೇನಿಷ್ ಲಾ ಲೀಗಾ, ಫ್ರಾನ್ಸ್​ನ ಫ್ರಾನ್ಸ್ ಲೀಗ್-1ನ ತಲಾ 12 ಆಟಗಾರರು ಇದ್ದಾರೆ.

14 ಬೆಲ್ಜಿಯಂ ತಂಡ ವಿಶ್ವಕಪ್​ನ ಸೆಮಿಫೈನಲ್ ಹಂತದವರೆಗೆ ಬಾರಿಸಿದ ಗೋಲುಗಳ ಸಂಖ್ಯೆ 14. ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಹಂತದ ವೇಳೆಗೆ 14 ಹಾಗೂ ಅದಕ್ಕಿಂತ ಹೆಚ್ಚಿನ ಗೋಲು ಬಾರಿಸಿದ ಏಕೈಕ ತಂಡ ಬ್ರೆಜಿಲ್. 2002ರಲ್ಲಿ ಈ ಸಾಧನೆ ಮಾಡಿತ್ತು. ಆ ವರ್ಷ ಬ್ರೆಜಿಲ್ ಟ್ರೋಫಿಯನ್ನೂ ಜಯಿಸಿತ್ತು.

ಮಾಸ್ಕೋ ಟಿಕೆಟ್​ಗೆ ಮೆಗಾಫೈಟ್

ಸಾಂಬಾ ಟೀಮ್ ಬ್ರೆಜಿಲ್ ವಿಶ್ವಕಪ್ ಕಣದಿಂದ ನಿರ್ಗಮಿಸಿದ ಬಳಿಕ ಟ್ರೋಫಿ ಫೇವರಿಟ್ ಹಣೆಪಟ್ಟಿಯ ಭಾರವನ್ನು ಹೊತ್ತುಕೊಂಡಿರುವ ತಂಡ ಫ್ರಾನ್ಸ್. ಮೂರು ದಶಕಗಳ ಸುದೀರ್ಘ ಕಾಯುವಿಕೆಯ ಬಳಿಕ ಉಪಾಂತ್ಯದ ಘಟ್ಟಕ್ಕೇರಿರುವ ಉತ್ಸಾಹಿ ಬೆಲ್ಜಿಯಂ. ಇವೆರಡು ತಂಡಗಳು ಮಂಗಳವಾರ ಸೇಂಟ್ ಪೀಟರ್ಸ್​ಬರ್ಗ್ ಸ್ಟೇಡಿಯಂನಲ್ಲಿ ನಡೆಯಲಿರುವ 2018ರ ವಿಶ್ವಕಪ್​ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಮಾಜಿ ನಾಯಕ ಜಿನೆದಿನ್ ಜಿದಾನೆ, 2006ರ ವಿಶ್ವಕಪ್ ಫೈನಲ್​ನಲ್ಲಿ ಇಟಲಿಯ ಮಾಕೋ ಮಟೆರಾಜಿಗೆ ಹೆಡ್​ಬಟ್ ಮಾಡಿ ರೆಡ್​ಕಾರ್ಡ್ ಪಡೆದು ವೃತ್ತಿಜೀವನ ಅಂತ್ಯಗೊಳಿಸಿದ್ದರು. ಇದು ಜಿದಾನೆ ಪಾಲಿಗೆ ಮಾತ್ರವಲ್ಲ, ಫ್ರಾನ್ಸ್​ನ ವಿಶ್ವಕಪ್ ಹೋರಾಟಕ್ಕೂ ರೆಡ್​ಕಾರ್ಡ್ ನೀಡಿದಂತಾಗಿತ್ತು. 2010ರ ವಿಶ್ವಕಪ್​ನಲ್ಲಿ ಲೀಗ್ ಹಾಗೂ 2014ರ ವಿಶ್ವಕಪ್​ನಲ್ಲಿ ಕ್ವಾರ್ಟರ್​ಫೈನಲ್ ಹಂತದಲ್ಲಿಯೇ ಸೋತಿದ್ದ ಫ್ರಾನ್ಸ್​ಗೆ ಈ ಬಾರಿ ಟ್ರೋಫಿ ಗೆಲ್ಲುವ ಅಪೂರ್ವ ಅವಕಾಶವಿದೆ. ಎರಡೂ ತಂಡಗಳು ಈ ವಾರದ ಅಂತ್ಯದಲ್ಲಿ ನಡೆಯಲಿರುವ ಪದಕದ ಮುಖಾಮುಖಿಗೆ ಅರ್ಹತೆ ಪಡೆದಿವೆ. ಆದರೆ, ಚಿನ್ನದ ಪದಕಕ್ಕಾಗಿ ಯಾವ ತಂಡ ಹೋರಾಟ ನಡೆಸಲಿದೆ ಹಾಗೂ ಕಂಚಿನ ಪದಕಕ್ಕಾಗಿ ಯಾವ ತಂಡ ಆಡಲಿದೆ ಎನ್ನುವುದು ಈ ಪಂದ್ಯದ ಮೂಲಕ ನಿರ್ಣಯವಾಗಲಿದೆ. ಉಭಯ ತಂಡಗಳ ಆಟಗಾರರು, ವೃತ್ತಿಜೀವನವನ್ನೇ ಬದಲಿಸಲಿರುವ ಫೈನಲ್​ನಿಂದ ಕೇವಲ ಒಂದೂವರೆ ಗಂಟೆಯ ಫುಟ್​ಬಾಲ್ ಆಟದಿಂದ ದೂರವಿದ್ದಾರೆ. ಫ್ರಾನ್ಸ್ ಹಾಗೂ ಬೆಲ್ಜಿಯಂ ತಂಡಗಳಲ್ಲಿ ಅಪಾರ ವಿಶ್ವಾಸವಿದ್ದರೂ ಅರ್ಜೆಂಟೀನಾ ಹಾಗೂ ಜಪಾನ್ ತಂಡಗಳ ವಿರುದ್ಧ ರಕ್ಷಣಾ ವಿಭಾಗದ ವೈಫಲ್ಯ ಬಯಲಾಗಿತ್ತು. ಆದರೆ, ಕ್ವಾರ್ಟರ್​ಫೈನಲ್ ಪಂದ್ಯದಲ್ಲಿ ಭರ್ಜರಿ ನಿರ್ವಹಣೆಯ ಮೂಲಕ ಗೆಲುವು ಸಾಧಿಸಿದೆ. ಬೆಲ್ಜಿಯಂಗೆ ಡಿಫೆಂಡರ್ ಥಾಮಸ್ ಮೆನಿರ್ ಅಲಭ್ಯರಾಗಿದ್ದಾರೆ.

ಬೆಲ್ಜಿಯಂ ಪರ ಇತಿಹಾಸ

ಹಿಂದಿನ ಪಂದ್ಯಗಳ ಇತಿಹಾಸ ಗಮನಿಸಿದರೆ, ಬೆಲ್ಜಿಯಂ ಉತ್ತಮ ಸ್ಥಾನದಲ್ಲಿದೆ. ಹಿಂದಿನ 74 ಪಂದ್ಯಗಳಲ್ಲಿ 30ರಲ್ಲಿ ಬೆಲ್ಜಿಯಂ ಗೆದ್ದಿದ್ದರೆ, 24ರಲ್ಲಿ ಸೋಲು ಕಂಡಿದೆ. 20 ಪಂದ್ಯ ಡ್ರಾದಲ್ಲಿ ಅಂತ್ಯ ಕಂಡಿದೆ. ಆದರೆ, ಪ್ರಮುಖ ಟೂರ್ನಿಗಳಲ್ಲಿ ಫ್ರಾನ್ಸ್ ಮೇಲುಗೈ ಹೊಂದಿದೆ. ಆಡಿದ ಮೂರೂ ಪಂದ್ಯಗಳಲ್ಲಿ ಲೆಸ್ ಬ್ಲ್ಯೂಸ್ ಖ್ಯಾತಿಯ ಫ್ರಾನ್ಸ್ ಜಯ ಸಾಧಿಸಿದೆ. ಆದರೆ, ಪ್ರಮುಖ ಟೂರ್ನಿಯ ಕೊನೇ ಮುಖಾಮುಖಿ ಆಗಿದ್ದು 32 ವರ್ಷಗಳ ಹಿಂದೆ. 1986ರ ವಿಶ್ವಕಪ್​ನಲ್ಲಿ.

ಥಿಯರಿ ಹೆನ್ರಿ ಬಲ!

ಸೆಮಿಫೈನಲ್​ನ ಹಾಟ್ ಟಾಪಿಕ್ ಆಗಿರುವುದು ಫ್ರಾನ್ಸ್​ನ ಮಾಜಿ ಆಟಗಾರ ಥಿಯರಿ ಹೆನ್ರಿ. ಫ್ರಾನ್ಸ್ ಪರ ಗರಿಷ್ಠ ಗೋಲು ಬಾರಿಸಿದ ಆಟಗಾರ ಎನಿಸಿರುವ ಹೆನ್ರಿ ಸದ್ಯ ಬೆಲ್ಜಿಯಂ ತಂಡದ ಸಹಾಯಕ ಕೋಚ್. ಪಂದ್ಯಕ್ಕೂ ಮುನ್ನ ಫ್ರಾನ್ಸ್ ಆಟಗಾರ ಒಲಿವರ್ ಜಿರಾರ್ಡ್, ‘ಹೆನ್ರಿ ತಪು್ಪ ತಂಡವನ್ನು ಕೋಚಿಂಗ್​ಗಾಗಿ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನುವುದನ್ನು ನಾವು ತೋರಿಸಿಕೊಡಲಿದ್ದೇವೆ’ ಎಂದು ಹೇಳುವ ಮೂಲಕ ಪಂದ್ಯದ ಬಿಸಿ ಹೆಚ್ಚಿಸಿದ್ದಾರೆ.

Leave a Reply

Your email address will not be published. Required fields are marked *

Back To Top