ಪುಸ್ತಕ ಓದುವಿಕೆಯಿಂದ ಅಂಧಶ್ರದ್ಧೆ ನಿವಾರಣೆ

ಮೈಸೂರು: ತಮ್ಮೊಳಗಿನ ಮೂಢನಂಬಿಕೆ, ಅಂಧಶ್ರದ್ಧೆಗಳಿಂದ ಹೊರಬರಲು ಒಳ್ಳೆಯ ಪುಸ್ತಕ ಓದುವ ಅಭ್ಯಾಸ ಬೆಳೆಸಿಕೊಳ್ಳುವುದು ಅಗತ್ಯ ಎಂದು ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸಂವಹನ ಪ್ರಕಾಶನದ ಸಹಯೋಗದಲ್ಲಿ ಕಸಾಪ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಪುಸ್ತಕ ದಿನಾಚರಣೆ ಮತ್ತು ಕೃತಿಸ್ವಾಮ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪುಸ್ತಕ ದಿನಾಚರಣೆ ಉಳಿದೆಲ್ಲ ದಿನಾಚರಣೆಗಳಿಗಿಂತ ಮಹತ್ವದಾಗಿದ್ದು, ಪುಸ್ತಕ ಸಂಸ್ಕೃತಿಗಿಂತ ಮತ್ಯಾವ ದೊಡ್ಡ ಸಂಸ್ಕೃತಿಯೂ ಇಲ್ಲ. ಪುಸ್ತಕವಿಲ್ಲದ ಸಮಾಜ, ಆತ್ಮವಿಲ್ಲದ ದೇಹದಂತೆ. ಪುಸ್ತಕ ಓದಿದರೆ ಸರಸ್ವತಿ ಜತೆಗೆ ಲಕ್ಷ್ಮೀ ಕೃಪೆಯೂ ಸಿಗುತ್ತದೆ ಎಂದರು.

ಪುರಾಣಪುರುಷ ಶ್ರೀರಾಮನು ಕೂಡ ಕಾಡಿನಲ್ಲಿ ಪುಸ್ತಕ ಓದುತ್ತಿದ್ದನು. ಹಾಗಾಗಿ, ರಾಮರಾಜ್ಯದ ಅವಿಭಾಜ್ಯ ಅಂಗವಾಗಿ ಪುಸ್ತಕಗಳು ಇದ್ದವು ಎಂದ ಅವರು, ಒಳ್ಳೆಯ ಪುಸ್ತಕಗಳನ್ನು ಓದುವ ಮೂಲಕ ಪುಸ್ತಕ ಸಂಸ್ಕೃತಿ ಬೆಳೆಸುವಂತೆ ತಿಳಿಸಿದರು.

ಓದುವುದು, ಮೇಯುವುದು, ಮೆಲುಕು ಹಾಕುವುದು, ಜೀರ್ಣಿಸಿಕೊಳ್ಳುವುದು ಈ ನಾಲ್ಕು ಹಂತಗಳನ್ನು ಪುಸ್ತಕ ಸಂಸ್ಕೃತಿ ಒಳಗೊಂಡಿದ್ದು, ಓದುಗರು ಇದನ್ನು ಅನುಸರಿಸಬೇಕು. ಕೆಲ ಪುಸ್ತಕಗಳು ಮೇಲ್ನೋಟಕ್ಕೆ ಲಘುವಾಗಿ ಕಂಡರು, ಅದರಲ್ಲಿನ ವಿಷಯ ಬಹಳ ಗಹನ ಮತ್ತು ವಿಸ್ತಾರವಾಗಿರುತ್ತದೆ. ಹಾಗಾಗಿ, ಪುಸ್ತಕಗಳನ್ನು ನೋಡಿದ ಕೂಡಲೇ ಲಘುವಾಗಿ ಪರಿಗಣಿಸಬಾರದು. ಪುಸ್ತಕದ ಸ್ವಾಮ್ಯವನ್ನು ನಾವೆಲ್ಲರು ಕಾಪಾಡಬೇಕು ಎಂದರು.

ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ ಮಾತನಾಡಿ, ಬದುಕಿನ ಮೌಲ್ಯಯುತ ಕೊಡುಗೆ ಎಂದರೆ ಅದು ವಿವೇಕ. ಈ ವಿವೇಕದ ಪರಿಭಾವನೆಯನ್ನು ತಂದುಕೊಡುವುದು ಪುಸ್ತಕ. ಪುಸ್ತಕ ದಿನಾಚರಣೆಯ ಹಿಂದೆ ವಿವೇಕದ ಸೂಕ್ಷ್ಮತೆ ಇದೆ. ಬದುಕಿನಲ್ಲಿ ತೀವ್ರವಾದ ಸಂಕಟ, ನೋವು ಇದ್ದಾಗ ವಿವೇಕ ಹುಟ್ಟುತ್ತದೆ ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಸಂವಹನ ಟ್ರಸ್ಟ್ ಅಧ್ಯಕ್ಷ ಡಿ.ಎನ್.ಲೋಕಪ್ಪ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಡಾ.ಜಯಪ್ಪ ಹೊನ್ನಾಳಿ, ಹಿರಿಯ ರಂಗಕರ್ಮಿ ರಾಜಶೇಖರ ಕದಂ ಇತರರು ಇದ್ದರು.

Leave a Reply

Your email address will not be published. Required fields are marked *