Tuesday, 11th December 2018  

Vijayavani

ಪಂಚರಾಜ್ಯಗಳ ಫಲಿತಾಂಶದಲ್ಲಿ ಕೈ ಆಟ-3 ರಾಜ್ಯಗಳಲ್ಲಿ ಅಧಿಕಾರದತ್ತ ಕಾಂಗ್ರೆಸ್​ - ವರ್ಕೌಟ್​ ಆಗದ ಮೋದಿ - ಅಮಿತ್ ಷಾ ಅಲೆ        ರಾಜಸ್ಥಾನದಲ್ಲಿ ಮ್ಯಾಜಿಕ್ ನಂಬರ್ ಸನಿಹ ಕಾಂಗ್ರೆಸ್-95 ಕ್ಷೇತ್ರದಲ್ಲಿ ಕಾಂಗ್ರೆಸ್, 80 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ        ಮಧ್ಯಪ್ರದೇಶದಲ್ಲಿ ಹಾವು ಏಣಿ ಆಟ - ಕೈ ಕಮಲ ಸಮಬಲದ ಹೋರಾಟ - ಸರ್ಕಾರ ರಚನೆಗೆ ಪಕ್ಷೇತರರೇ ನಿರ್ಣಾಯಕರು        ತೆಲಂಗಾಣದಲ್ಲಿ ನಡೆಯದ ಕೈ-ಕಮಲದ ಆಟ-ಶರವೇಗದಲ್ಲಿ ಮುನ್ನುಗಿದ ಕೆಸಿಆರ್​-ನೂತನ ಸಿಎಂ ಆಗಿ ನಾಳೆ ಪ್ರಮಾಣ ವಚನ        ಛತ್ತೀಸ್​ಗಢದಲ್ಲಿ ಅಧಿಕಾರದತ್ತ ಕಾಂಗ್ರೆಸ್ - ಆಡಳಿತಾರೂಢ ಬಿಜೆಪಿಗೆ ಭಾರಿ ಮುಖಭಂಗ        ಮಿಜೋರಾಂನಲ್ಲಿ ಕಾಂಗ್ರೆಸ್​​​ಗೆ ಭಾರಿ ಮುಖಭಂಗ - ಅಧಿಕಾರದ ಗದ್ದುಗೆ ಹಿಡಿದ ಎಂಎನ್​​​ಎಫ್​ - 25 ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ       
Breaking News

ಸರ್ಕಾರಿ ಆಸ್ಪತ್ರೆಗಳಲ್ಲಿ ದುಪ್ಪಟ್ಟಾಯ್ತು ರಕ್ತದ ಅಭಾವ!

Thursday, 14.06.2018, 3:03 AM       No Comments

| ವರುಣ ಹೆಗಡೆ

ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಸಮರ್ಪಕವಾಗಿ ರಕ್ತದಾನ ಶಿಬಿರ ನಡೆಯದ ಹಿನ್ನೆಲೆಯಲ್ಲಿ ಬಹುತೇಕ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತದ ಕೊರತೆ ಎದುರಾಗಿದೆ. ಪ್ರತಿ ವರ್ಷ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಶಾಲಾ-ಕಾಲೇಜುಗಳಿಗೆ ಬೇಸಿಗೆ ರಜೆ ಇರುವುದರಿಂದ ರಕ್ತದಾನ ಶಿಬಿರಗಳಿಗೆ ಹಿನ್ನಡೆ ಉಂಟಾಗಿ, ರಕ್ತದ ಅಭಾವ ಕಾಡುತ್ತಿದೆ. ಆದರೆ, ಈ ವರ್ಷ ಈ ಕೊರತೆಯ ಪ್ರಮಾಣ ದುಪ್ಪಟ್ಟಾಗಿದೆ.

ಚುನಾವಣೆ ನೀತಿ ಸಂಹಿತೆ ಯಿಂದ ರಾಜಕಾರಣಿಗಳು ಹಾಗೂ ಗಣ್ಯರು ಜನ್ಮದಿನದಂದು ರಕ್ತದಾನ ಶಿಬಿರ ಏರ್ಪಡಿಸುವ ಗೋಜಿಗೆ ಹೋಗಲಿಲ್ಲ. ಹೀಗಾಗಿ ರಾಜ್ಯದಲ್ಲಿನ ಖಾಸಗಿ ರಕ್ತ ನಿಧಿ ಕೇಂದ್ರ ನಿಗದಿತ ಪ್ರಮಾಣದಲ್ಲಿ ರಕ್ತ ಸಂಗ್ರಹಿಸುವಲ್ಲಿ ವಿಫಲವಾಗಿವೆ. ಇನ್ನು ಸರ್ಕಾರಿ ಆಸ್ಪತ್ರೆಗಳ ರಕ್ತನಿಧಿಗಳ ಕೇಂದ್ರದ ಸ್ಥಿತಿ ಚಿಂತಾಜನಕವಾಗಿದ್ದು, ಉತ್ತರ ಕರ್ನಾಟಕ ಭಾಗದ ಕೇಂದ್ರದಲ್ಲಿ ರಕ್ತದ ಕೊರತೆಯಿಂದ ರೋಗಿಗಳು ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆರಂಭಿಸಿದ ಜೀವ ಸಂಜೀವಿನಿ ಯೋಜನೆಯಡಿ ಹೆಸರು ನಮೂದಿಸಿರುವ 121 ಕೇಂದ್ರದಿಂದ ಸದ್ಯ 2,835 ಯುನಿಟ್ ರಕ್ತ ಮಾತ್ರ ಲಭ್ಯವಿದೆ. ಇನ್ನು ಆರೋಗ್ಯ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ 200 ರಕ್ತನಿಧಿ ಕೇಂದ್ರದಲ್ಲಿ ಬೆಂಗಳೂರು, ಮೈಸೂರು, ಉಡುಪಿ, ಶಿವಮೊಗ್ಗ, ದಕ್ಷಿಣ ಕನ್ನಡ ಸೇರಿ ಬೆರಳಣಿಕೆ ಜಿಲ್ಲೆಗಳಲ್ಲಿ ಬೇಡಿಕೆಗೆ ಅನುಗುಣವಾಗಿ ರಕ್ತ ಪೂರೈಕೆಯಾಗುತ್ತಿದೆ. ಸರ್ಕಾರಿ ಆಸ್ಪತ್ರೆ ರಕ್ತ ನಿಧಿ ಕೇಂದ್ರಕ್ಕೆ ಸಾರ್ವಜನಿಕರನ್ನು ಸ್ವ ಇಚ್ಛೆಯಿಂದ ರಕ್ತದಾನ ಮಾಡಲು ಆಗಮಿಸುತ್ತಿಲ್ಲ. ಶಿಬಿರ ಕೂಡ ಮೊದಲಿನಂತೆ ನಡೆಯುತ್ತಿಲ್ಲ. ಹೀಗಾಗಿ ತುರ್ತು ಪರಿಸ್ಥಿಯಲ್ಲಿ ರೋಗಿಯ ಸಂಬಂಧಿಗಳಿಂದಲೇ ರಕ್ತ ಪಡೆದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸರ್ಕಾರಿ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಅಧಿಕಾರಿಯೇ ತಿಳಿಸಿದ್ದಾರೆ.

ಶೇ.1 ಜನರಿಗೆ ಅಗತ್ಯವಿರುವಷ್ಟು ರಕ್ತ ಸಂಗ್ರಹಿಟ್ಟುಕೊಳ್ಳಲಾಗುತ್ತದೆ. ಚುನಾವಣಾ ನೀತಿ ಸಂಹಿತೆಯಿಂದ ಶಿಬಿರ ನಡೆಯದಿದ್ದರೂ ಕೊರತೆ ಕಾಣಿಸಿಲ್ಲ.

| ಡಾ. ಜಯರಾಜ್, ಉಪ ನಿರ್ದೇಶಕ, ಬ್ಲಡ್ ಸೆಫ್ಟಿ ವಿಭಾಗ

 

ಗುರಿ ತಲುಪುವಲ್ಲಿ ವಿಫಲ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಡಿ ಕಾರ್ಯನಿರ್ವಹಿಸುತ್ತಿರುವ ರಾಜ್ಯದ ಎಲ್ಲ ರಕ್ತನಿಧಿ ಕೇಂದ್ರದಿಂದ ಕಳೆದ ಒಂದು ವರ್ಷದಲ್ಲಿ 8,65,467ಯುನಿಟ್ ರಕ್ತ ಸಂಗ್ರಹವಾಗಿದೆ. ಆದರೆ, ಕಳೆದ ವರ್ಷಾಂತ್ಯದಲ್ಲಿ ಚುರುಕುಗೊಂಡಿದ್ದ ಶಿಬಿರ ಈ ವರ್ಷದ ಆರಂಭದಲ್ಲಿ ಮಂಕಾಗಿದೆ. ರಾಮನಗರದಲ್ಲಿ 13,101 ಯುನಿಟ್ ಬೇಡಿಕೆಯಲ್ಲಿ ಜಿಲ್ಲೆಯ ಕೇಂದ್ರ 744 ಯುನಿಟ್ ಮಾತ್ರ ಒದಗಿಸಿದೆ. ಅದೇ ರೀತಿ, ಯಾದಗಿರಿಯಲ್ಲಿ 13,726 ಯುನಿಟ್ ಬೇಡಿಕೆಯಲ್ಲಿ ಕೇವಲ 1,457 ಯು. (ಶೇ.10.6) ರಕ್ತ ಸಂಗ್ರಹವಾಗಿದೆ. ಇನ್ನು ಬೆಂಗಳೂರು ಗ್ರಾಮಾಂತರ (ಶೇ. 19), ಚಾಮರಾಜನಗರ (ಶೇ.23.3), ಹಾವೇರಿ (ಶೇ.23.4), ಚಿಕ್ಕಮಗಳೂರು (ಶೇ.25.1), ಕೊಡಗು (ಶೇ.26.3), ಬೀದರ್ (ಶೇ.31.2), ಉತ್ತರ ಕನ್ನಡ (32.3), ತುಮಕೂರು (ಶೇ.44.1) ಹಾಗೂ ಚಿಕ್ಕಬಳ್ಳಾಪುರ (ಶೇ.47.5) ಜಿಲ್ಲೆಯಲ್ಲಿರುವ ರಕ್ತನಿಧಿ ಕೇಂದ್ರಗಳು ನಿಗದಿತ ಗುರಿಯ ಅರ್ಧದಷ್ಟು ರಕ್ತವನ್ನು ಸಂಗ್ರಹಿಸುವುವಲ್ಲಿ ವಿಫಲವಾಗಿವೆ.

ರಕ್ತದಾನದಿಂದ ಹೃದಯಾಘಾತ ಹಾಗೂ ಪಾರ್ಶ್ವವಾಯು ಸಂಭವಿಸುವ ಸಾಧ್ಯತೆ ಶೇ. 80 ಕಡಿಮೆ ಆಗಲಿದೆ. ನಿಯಮಿತವಾಗಿ ರಕ್ತದಾನ ಮಾಡುವುದರಿಂದ ದೇಹ ದಲ್ಲಿನ ಬೊಜ್ಜು ಸಹ ತಗ್ಗುತ್ತದೆ. ರಕ್ತದಾನ ಮಹಾದಾನ, ಪ್ರತಿ 6 ತಿಂಗಳಿಗೊಮ್ಮೆ ರಕ್ತ ನೀಡಿ.

|ಡಾ. ಶಿವಾನಂದ ಪಾಟೀಲ್ ಫೋರ್ಟಿಸ್ ಆಸ್ಪತ್ರೆ ಕಾರ್ಡಿಯಾಲಜಿಸ್ಟ್

 

ಉತ್ತರ ಕರ್ನಾಟಕದಲ್ಲಿ ಪರದಾಟ

ರಕ್ತದ ಕೊರತೆಯ ಬಿಸಿ ಉತ್ತರ ಕರ್ನಾಟಕ ಭಾಗದ ರೋಗಿಗಳಿಗೆ ಜೋರಾಗಿ ತಟ್ಟಿದೆ. ಜಾಗೃತಿಯ ಕೊರತೆಯಿಂದ ಸಾರ್ವಜನಿಕರು ರಕ್ತದಾನಕ್ಕೆ ಮುಂದೆ ಬರುತ್ತಿಲ್ಲ. ಹೀಗಾಗಿ ರಕ್ತನಿಧಿ ಕೇಂದ್ರದಲ್ಲಿ ಕೇವಲ ಮೂರರಿಂದ ನಾಲ್ಕು ಯುನಿಟ್ ಮಾತ್ರ ಸಂಗ್ರಹವಿದೆ. ಖಾಸಗಿ ರಕ್ತನಿಧಿ ಕೇಂದ್ರದಿಂದ ತರಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ವಣವಾಗಿದೆ. ದಾವಣಗೆರೆಯ ಲೈಫ್​ಲೈನ್ ರಕ್ತನಿಧಿ ಹಾಗೂ ಇಂಡಿಯನ್ ರೆಡ್​ಕ್ರಾಸ್ ಸೊಸೈಟಿ ಶಾಖೆ, ಕಲಬುರಗಿಯ ಹೆಲ್ತ್​ಕೇರ್ ರಕ್ತನಿಧಿ, ಕೊಪ್ಪಳದ ಇಂಡಿಯನ್ ರೆಡ್ ಕ್ರಾಸ್ ಶಾಖೆ, ವಿಜಯಪುರದ ಶ್ರೀ ಸಿದ್ದೇಶ್ವರ ರಕ್ತನಿಧಿ, ಬೆಂಗಳೂರು ರಕ್ತನಿಧಿ, ಧಾರವಾಡ ಎಸ್​ಡಿಎಂ ಕಾಲೇಜು ರಕ್ತನಿಧಿ, ಮಂಡ್ಯದ ಎಂ.ಡಿ.ಸಿ. ವಾಲೆಂಟರಿ ರಕ್ತನಿಧಿ, ಚಿತ್ರದುರ್ಗದ ಎಸ್.ಜಿ.ಎಂ. ರಕ್ತನಿಧಿ, ದಕ್ಷಿಣ ಕನ್ನಡದ ಸಿಟಿ ಆಸ್ಪತ್ರೆ ಮತ್ತು ಡಯಾಗ್ನಸ್ಟಿಕ್ ಸೆಂಟರ್​ನಲ್ಲಿ ಕೇವಲ ಒಂದು ಯುನಿಟ್ ಮಾತ್ರ ರಕ್ತ ಲಭ್ಯವಿದೆ. ಮುಂದಿನ ದಿನದಲ್ಲಿ ಕೊರತೆಯನ್ನು ಸರಿದೂಗಿಸಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಕೊರತೆ ಹೆಚ್ಚಳ ಸಾಧ್ಯತೆ

ಮುಂಗಾರು ಮಳೆ ಚುರುಕುಗೊಂಡ ಹಿನ್ನೆಲೆಯಲ್ಲಿ ಡೆಂಘ, ಚಿಕುನ್​ಗುನ್ಯಾ, ಮಲೇರಿಯಾ, ಎಚ್1ಎನ್1 ಸೇರಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಹೀಗಾಗಿ ರೋಗಿಗಳಿಗೆ ಪ್ಲೇಟ್​ಲೆಟ್ ರಕ್ತದ ಅಗತ್ಯತೆ ಎದುರಾಗುತ್ತದೆ. ಈ ಹಿನ್ನೆಲೆಯಲ್ಲಿ ರಕ್ತಕ್ಕೆ ಇನ್ನಷ್ಟು ಬೇಡಿಕೆ ಹೆಚ್ಚಳವಾಗುವ ಸಾಧ್ಯತೆಯಿದೆ. ಈಗಾಗಲೇ ಖಾಸಗಿ ಆಸ್ಪತ್ರೆಯಲ್ಲಿ ಬಿಳಿ ರಕ್ತ ಕಣಗಳಿಗೆ ಬೇಡಿಕೆ ಹೆಚ್ಚಳವಾಗಿದೆ.

ಚುನಾವಣೆ ನೀತಿ ಸಂಹಿತೆಯಿಂದ ಶಿಬಿರಗಳು ನಡೆಯದ ಹಿನ್ನೆಲೆ ರಕ್ತದ ಕೊರತೆ ಎದುರಾಗಿತ್ತು. ಕಾಲೇಜುಗಳೆಲ್ಲ ಆರಂಭವಾಗುತ್ತಿರುವುದರಿಂದ ಶಿಬಿರ ಹೆಚ್ಚಿಸಿ, ರಕ್ತದ ಕೊರತೆಯನ್ನು ಸರಿದೂಗಿಸಲು ಪ್ರಯತ್ನಿಸುತ್ತೇವೆ.

| ಎಸ್. ಅಶೋಕ್ ಕುಮಾರ್ ಶೆಟ್ಟಿ, ರೆಡ್​ಕ್ರಾಸ್ ಸಂಸ್ಥೆ ಪ್ರಧಾನ ಕಾರ್ಯದರ್ಶಿ

Leave a Reply

Your email address will not be published. Required fields are marked *

Back To Top