ಭಯದ ನೆರಳಲ್ಲಿ ರಾಜ್ಯದ ಪ್ರವಾಸಿ ತಾಣಗಳು: ಇದು ವಿಜಯವಾಣಿ ರಿಯಾಲಿಟಿ ಚೆಕ್​

ಶ್ರೀಲಂಕಾದಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿ ವಿಶ್ವ ಸಮುದಾಯವನ್ನೇ ಬೆಚ್ಚಿ ಬೀಳಿಸಿದ್ದು, ಕರ್ನಾಟಕ ಸೇರಿದಂತೆ ದಕ್ಷಿಣ ರಾಜ್ಯಗಳಿಗೂ ಉಗ್ರ ಭೀತಿ ಎದುರಾಗಿದೆ. ಕೇಂದ್ರ ಗೃಹ ಸಚಿವಾಲಯದ ಮುನ್ಸೂಚನೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಹೀಗಿದ್ದರೂ ರಾಜ್ಯದ ನೂರಾರು ಪಾರಂಪರಿಕ ಹಾಗೂ ಪ್ರವಾಸಿ ತಾಣಗಳು ಸಂಪೂರ್ಣ ಸುರಕ್ಷಿತವಾಗಿಲ್ಲ ಎನ್ನುವುದು ವಿಶ್ವ ಭಯೋತ್ಪಾದನಾ ವಿರೋಧಿ ದಿನಾಚರಣೆ (ಮೇ21) ಹಿನ್ನೆಲೆಯಲ್ಲಿ ವಿಜಯವಾಣಿ ನಡೆಸಿದ ರಿಯಾಲಿಟಿ ಚೆಕ್​ನಲ್ಲಿ ಬೆಳಕಿಗೆ ಬಂದಿದೆ. ರಾಜ್ಯದ ಪಾರಂಪರಿಕ, ಐತಿಹಾಸಿಕ ಹಾಗೂ ಸುಪ್ರಸಿದ್ಧ ಧಾರ್ವಿುಕ, ಪ್ರವಾಸಿ ಸ್ಥಳಗಳಿಗೆ ಪ್ರತಿವರ್ಷ ಲಕ್ಷಾಂತರ ಭಕ್ತರು-ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ, ಬಹುತೇಕ ಕಡೆ ಸೂಕ್ತ ಭದ್ರತಾ ವ್ಯವಸ್ಥೆಗಳೇ ಇಲ್ಲ. ಇದ್ದರೂ ನಾಮಕಾವಸ್ಥೇ ಎನ್ನುವಂತಿದೆ. ರಾಜ್ಯ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಅಗತ್ಯವಿರುವ ಸ್ಥಳಗಳಲ್ಲಿ ಭದ್ರತೆ ಒದಗಿಸಿ ಸಂಭಾವ್ಯ ಅನಾಹುತ ತಪ್ಪಿಸಲಿ ಎಂಬುದು ನಮ್ಮ ಉದ್ದೇಶ.

ಗೋಳಗುಮ್ಮಟದಲ್ಲೂ ಕುರಿದೊಡ್ಡಿ!

ಪ್ರಪಂಚದ ಅತಿ ಎತ್ತರದ ಗುಮ್ಮಟ ಎಂದೇ ಖ್ಯಾತಿವೆತ್ತ ವಿಜಯಪುರ ಜಿಲ್ಲೆಯ ಗೋಳಗುಮ್ಮಟ ವೀಕ್ಷಿಸಲು ವರ್ಷಕ್ಕೆ ಸರಾಸರಿ 80 ಲಕ್ಷ ಪ್ರವಾಸಿಗರು ಆಗಮಿಸುತ್ತಾರೆ. ಭದ್ರತಾ ಸಂಸ್ಥೆಯೊಂದರಿಂದ ಐವರು ಶಸ್ತ್ರಸಜ್ಜಿತರ ಸಹಿತ 30 ಸಿಬ್ಬಂದಿ ನಿಯೋಜಿಸಲಾಗಿದ್ದು, 24 ತಾಸು ಭದ್ರತೆ ಒದಗಿಸಲಾಗಿದೆ. ಆದರೂ 2016ರ ನ.6ರ ತಡರಾತ್ರಿ ಇಲ್ಲಿನ ನಿಷೇಧಿತ ವಲಯದಲ್ಲಿ ಪಾರ್ಟಿ ನಡೆದಿತ್ತು. ಪ್ರಾಚ್ಯವಸ್ತು ಇಲಾಖೆ ಗುತ್ತಿಗೆದಾರ ಹಾಗೂ ಅಧಿಕಾರಿ ವರ್ಗವೇ ಪಾರ್ಟಿಯಲ್ಲಿ ಪಾಲ್ಗೊಂಡ ಬಗ್ಗೆ ವರದಿಯಾಗಿತ್ತು. ಇದಕ್ಕೂ ತಿಂಗಳ ಮುಂಚೆ ಗೋಳಗುಮ್ಮಟ ಆವರಣದಲ್ಲಿ ವ್ಯಕ್ತಿಯೊಬ್ಬರು ಕುರಿ ದೊಡ್ಡಿ ನಿರ್ವಿುಸಿದ್ದರು. ಈ ಬಗ್ಗೆ ವಿಜಯವಾಣಿ ವರದಿ ಮಾಡಿದ್ದು, ಆ ಬಳಿಕ ಕುರಿದೊಡ್ಡಿ ತೆರವುಗೊಳಿಸಲಾಗಿತ್ತು.

ಕವಿ ಮನೆಗೆ ತಪಾಸಣೆಯೇ ಇಲ್ಲ

ಶಿವಮೊಗ್ಗ ಜಿಲ್ಲೆಯ ಲಿಂಗನಮಕ್ಕಿ ಜಲಾಶಯ, ಪವರ್​ಹೌಸ್​ಗೆ ಪ್ರವೇಶ ನಿರ್ಬಂಧವಿದೆ. ಪ್ರಮುಖ ಪ್ರವಾಸಿ ತಾಣಗಳಾದ ತ್ಯಾವರೆಕೊಪ್ಪ ಸಿಂಹಧಾಮ, ಕುಪ್ಪಳಿ ಕವಿಮನೆಗೆ ಸಿಸಿ ಕ್ಯಾಮರಾಗಳಷ್ಟೇ ಭದ್ರತೆ ಹೊರತು ತಪಾಸಣೆ ಇಲ್ಲ. ಸಕ್ರೆಬೈಲು ಆನೆಬಿಡಾರ ಮುಕ್ತವಾಗಿದ್ದು, ಪ್ರವೇಶ ಶುಲ್ಕ ನೀಡಿ ಯಾರು ಬೇಕಾದರೂ ಒಳಹೋಗ ಬಹುದು. ಶಿವಮೊಗ್ಗದ ಶಿವಪ್ಪ ನಾಯಕ ಅರಮನೆಯದ್ದೂ ಇದೇ ಸ್ಥಿತಿ.

ಪಾರಂಪರಿಕ ಹಂಪಿ ಸುರಕ್ಷತೆಗಿಲ್ಲ ಆದ್ಯತೆ

ಪಾರಂಪರಿಕ ತಾಣವಾದ ಹಂಪಿಗೆ ಪ್ರತಿವರ್ಷ 20 ಸಾವಿರಕ್ಕೂ ಅಧಿಕ ಜನ ಭೇಟಿ ನೀಡುತ್ತಿದ್ದರೂ ಸುರಕ್ಷತೆಗಿಲ್ಲಿ ಗ್ಯಾರಂಟಿ ಇಲ್ಲ. ಶ್ರೀವಿರೂಪಾಕ್ಷೇಶ್ವರ, ವಿಜಯವಿಠಲ ದೇವಸ್ಥಾನ, ಕಮಲಮಹಲ್ ಇತರ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ್ದರೂ ಬಹುತೇಕ ನಿರುಪಯುಕ್ತವಾಗಿವೆ. ಪೊಲೀಸ್ ಠಾಣೆಗಳಿದ್ದರೂ ಸಿಬ್ಬಂದಿ ಕೊರತೆ ಕಾಡುತ್ತಿದೆ. ಇಲ್ಲಿನ ಮಂಟಪದ ಕಲ್ಲನ್ನು ಮೂವರು ವಿದ್ಯಾರ್ಥಿಗಳು ಕೆಡವಿದ್ದ ವಿಡಿಯೋ ಈಚೆಗೆ ವೈರಲ್ ಆಗಿತ್ತು.

ಎಸ್​ಪಿ ಸೂಚನೆಗೂ ಇಲ್ಲ ಸ್ಪಂದನೆ

ವಾರ್ಷಿಕ 10-12 ಲಕ್ಷ ಪ್ರವಾಸಿಗರು ಆಗಮಿಸುವ ಚಿಕ್ಕಮಗಳೂರು ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಿಗೆ ಭದ್ರತೆ ಹೆಚ್ಚಿಸಲಾಗಿದ್ದರೂ ಚೆಕ್​ಪೋಸ್ಟ್​ಗಳಲ್ಲಿ ವಾಹನ ತಪಾಸಣೆ ಕಟ್ಟುನಿಟ್ಟಾಗಿಲ್ಲ. ಶೃಂಗೇರಿ ದೇವಸ್ಥಾನದಲ್ಲಿ ಬಾಂಬ್ ಡಿಟೆಕ್ಟರ್ ಬಾಗಿಲು ಪ್ರವೇಶ ನೆಪ ಮಾತ್ರಕ್ಕಿದೆ. ದತ್ತಪೀಠ-ಬಾಬಾಬುಡನ್ ಗಿರಿ ಶ್ರೇಣಿ, ಮುಳ್ಳಯ್ಯನ ಗಿರಿ, ಕೊಟ್ಟಿಗೆಹಾರ, ಬಾಳೆಹೊನ್ನೂರು, ಭದ್ರಾ ಜಲಾಶಯ ಹಿನ್ನೀರು ಮುಂತಾದ ಪಾಕೃತಿಕ ತಾಣಗಳಲ್ಲಿ ಪ್ರವಾಸಿಗರ ತಪಾಸಣೆ ಪೊಲೀಸರಿಗೂ ಪ್ರಾಯೋಗಿಕವಾಗಿ ಕಷ್ಟಕರ. ಅನಧಿಕೃತವಾಗಿ 500ಕ್ಕೂ ಹೆಚ್ಚು ಹೋಂ ಸ್ಟೇ, 100ಕ್ಕೂ ಹೆಚ್ಚು ರೆಸಾರ್ಟ್​ಗಳು ತಲೆ ಎತ್ತಿವೆ. ತಿಂಗಳ ಹಿಂದೆ ದೇವಸ್ಥಾನ, ಮಸೀದಿ, ಹೋಂ ಸ್ಟೇ, ರೆಸಾರ್ಟ್, ಲಾಡ್ಜ್ ಮಾಲೀಕರ ಸಭೆ ಕರೆದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ ಎಚ್ಚರಿಕೆ ವಹಿಸಲು ಸೂಚಿಸಿದ್ದಾರೆ. ಇದ್ಯಾವುದನ್ನೂ ಮಾಲೀಕರು ಪಾಲಿಸುತ್ತಿಲ್ಲ.

ರಾಜಧಾನಿಗೆ ಬೇಕು ಇನ್ನಷ್ಟು ಭದ್ರತೆ

ರಾಜಧಾನಿ ಬೆಂಗಳೂರಿಗೆ ಇನ್ನೂ ಹೆಚ್ಚಿನ ಭದ್ರತೆ ಬೇಕು. ವಿಧಾನಸೌಧ, ಹೈಕೋರ್ಟ್, ರಾಜಭವನ, ಆರ್​ಬಿಐ ಸೇರಿ ಪ್ರಮುಖ ಕಚೇರಿಗಳಲ್ಲಿ ಸೆಕ್ಯುರಿಟಿ ಹೆಚ್ಚಿಸಲಾಗಿದ್ದರೂ ಮೆಜೆಸ್ಟಿಕ್ ಬಿಎಂಟಿಸಿ-ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಲ್ಲಿ ಇನ್ನೂ ಅಭದ್ರತೆ ಕಾಡುತ್ತಿದೆ. ಮೂರ್ನಾಲ್ಕು ಪ್ರವೇಶ ದ್ವಾರ ಮತ್ತು ಸಾರಿಗೆ ಇಲಾಖೆ ಮುಂಜಾಗ್ರತ ಕ್ರಮ ಕೈಗೊಳ್ಳದಿರುವುದು ಆತಂಕ ಮೂಡಿಸಿದೆ. ರೈಲು ನಿಲ್ದಾಣದಲ್ಲಿ ಕೇಂದ್ರ ಪಡೆ ಮತ್ತು ಪೊಲೀಸರು ಕಾವಲಿಗಿದ್ದರೂ ಸಿಬ್ಬಂದಿ ಕೊರತೆಯಿಂದಾಗಿ ಆಗಾಗ ಭದ್ರತಾ ಲೋಪವಾಗುತ್ತಿದೆ. ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಅನುಮಾನಾಸ್ಪದ ವ್ಯಕ್ತಿ ಪ್ರಕರಣದ ಬಳಿಕ ಎಚ್ಚೆತ್ತು ಕೈಗಾರಿಕಾ ಭದ್ರತಾ ಪಡೆ ಮತ್ತು ಸ್ಥಳೀಯ ಪೊಲೀಸರನ್ನು ನಿಯೋಜಿಸಲಾಗಿದೆ. ಸಾರ್ವಜನಿಕರೂ ಎಚ್ಚೆತ್ತುಕೊಂಡು ಪೊಲೀಸ್ ಇಲಾಖೆಯ ಮಾರ್ಗದರ್ಶನ ಪಾಲಿಸಿ ಅವರ ಜತೆ ಕೈಜೋಡಿಸುವುದು ಅಗತ್ಯ.

ಚನ್ನಕೇಶವನಿಗಿತ್ತು ಬಾಂಬ್ ಸ್ಪೋಟದ ಬೆದರಿಕೆ

ಕೆಲ ವರ್ಷಗಳ ಹಿಂದೆ ಉಗ್ರರ ಬಾಂಬ್ ಸ್ಪೋಟದ ಬೆದರಿಕೆ ಎದುರಿಸಿದ್ದ ಬೇಲೂರಿನ ವಿಶ್ವ ಪ್ರಸಿದ್ಧ ಚನ್ನಕೇಶವ ದೇವಾಲಯಕ್ಕೆ ನಿತ್ಯ ಸಾವಿರಾರು ಪ್ರವಾಸಿಗರು ಬರುತ್ತಿದ್ದರೂ, ಆಧುನಿಕ ಭದ್ರತಾ ಕ್ರಮಗಳನ್ನು ಈವರೆಗೂ ಅಳವಡಿಸಿಲ್ಲ. ಮೆಟಲ್ ಡಿಟೆಕ್ಟರ್ ಅಳವಡಿಸಲಾಗಿದ್ದರೂ ಕಡ್ಡಾಯವಾಗಿ ಎಲ್ಲರೂ ಅದರ ಮೂಲಕವೇ ಹಾದು ಹೋಗುವಂತೆ ನಿಗಾವಹಿಸಲು ಸಿಬ್ಬಂದಿ ಕೊರತೆ ಕಾಡುತ್ತಿದೆ.

ಮಲ್ಪೆ ತೀರದಲ್ಲಿ ಸಾಕಾಗದ ಕಾವಲು

ನಿತ್ಯ 10 ಸಾವಿರ ಜನ ಆಗಮಿಸುವ ಮಲ್ಪೆ ಬೀಚ್​ನಲ್ಲಿ ಸಿಸಿ ಕ್ಯಾಮರಾಗಳು ಹಳೆಯದಾಗಿದ್ದು, ಹೊಸದರ ಅಳವಡಿಕೆಗೆ ಸಿದ್ಧ್ದತೆ ನಡೆಯುತ್ತಿದೆ. ವರ್ಷಕ್ಕೆ 8ರಿಂದ 10 ಲಕ್ಷ ಜನ ಭೇಟಿ ನೀಡುವ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಸಿಸಿ ಕ್ಯಾಮರಾ ಹಾಕಿದ್ದರೂ ಕಾವಲು ಸಾಲದು. ಕೆಲ ವರ್ಷಗಳ ಹಿಂದೆ ಮೂಡುಬಿದರೆಯ ಸಾವಿರ ಕಂಬದ ಬಸದಿಯ ಸಿದ್ಧಾಂತ ಮಂದಿರ ಬಸದಿಯಲ್ಲಿ ಕಳವು ಆದ ಬಳಿಕ ಸೆಕ್ಯುರಿಟಿ ಚುರುಕುಗೊಂಡಿದೆ.

ಸವದತ್ತಿ ಯಲ್ಲಮ್ಮ ಕಾಪಾಡಮ್ಮ

ಸವದತ್ತಿ ತಾಲೂಕಿನ ಯಲ್ಲಮ್ಮನಗುಡ್ಡದಲ್ಲಿ ಆದಿಶಕ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ರಾಜ್ಯವಲ್ಲದೆ ಹೊರಗಿನಿಂದಲೂ ತಿಂಗಳು ಲಕ್ಷಾಂತರ ಭಕ್ತರು ಬರುತ್ತಾರೆ. ಸದ್ಯ ಪ್ರವೇಶದ್ವಾರದಲ್ಲಿ ಪ್ರತಿ ವಾಹನ ಪರಿಶೀಲಿಸಿ ಬಿಡಲಾಗುತ್ತಿದೆ. ಆದರೆ, ಬನದ ಹುಣ್ಣಿಮೆ ಮತ್ತು ಭಾರತ ಹುಣ್ಣಿಮೆ ದಿನಗಳಂದು 30 ಲಕ್ಷಕ್ಕಿಂತ ಅಧಿಕ ಭಕ್ತರು ಸೇರುವ ಕಾರಣ 40-50 ಪೊಲೀಸ್ ಸಿಬ್ಬಂದಿಯಿಂದ ಭದ್ರತೆ ಒದಗಿಸುವುದು ಕಷ್ಟ.

ಹೂಲಿಯಲ್ಲಿ ನಿಧಿಗಳ್ಳರ ಹಾವಳಿ:101 ಪುರಾತನ ದೇವಾಲಯಗಳಿದ್ದ ಸವದತ್ತಿ ತಾಲೂಕಿನ ಹೂಲಿ ಗ್ರಾಮವೀಗ ಹಾಳು ಕೊಂಪೆ. ನಿಧಿಗಳ್ಳರ ಹಾವಳಿಯಿಂದ ದೇವಸ್ಥಾನದ ಅವಶೇಷಗಳಿಗೆ ಧಕ್ಕೆ ಬರುತ್ತಿದೆ. ಪುರಾತತ್ವ ಸಂರಕ್ಷಣಾ ಇಲಾಖೆ ನಿದ್ರಾವಸ್ಥೆಯಲ್ಲಿದ್ದರೆ, ಪೊಲೀಸರು ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ. ಗೋಕಾಕ ಜಲಪಾತಕ್ಕೆ ವರ್ಷಕ್ಕೆ 11 ಲಕ್ಷ ಪ್ರವಾಸಿಗರು ಬರುತ್ತಿದ್ದರೂ ಭದ್ರತೆ ಇಲ್ಲ.

ಬಾಗಲಕೋಟೆಯಲ್ಲಿ ಸೆಕ್ಯುರಿಟಿ ಗಾರ್ಡ್ ಮಾತ್ರ

ಬಾಗಲಕೋಟೆ ಜಿಲ್ಲೆಯಲ್ಲಿ ಬಾದಾಮಿ ಮೇಣ ಬಸೀದಿ, ಪಟ್ಟದಕಲ್ಲು, ಐಹೊಳೆ, ಮಹಾಕೂಟ, ಬನಶಂಕರಿ ದೇವಸ್ಥಾನ, ಬಸವಣ್ಣನವರ ಐಕ್ಯ ಸ್ಥಳ ಕೂಡಲಸಂಗಮಗಳಿಗೆ ವಾರ್ಷಿಕ 33 ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರಿಲ್ಲಿ, ಸೆಕ್ಯುರಿಟಿ ಗಾರ್ಡ್ ಬಿಟ್ಟರೆ ದೊಡ್ಡ ಪ್ರಮಾಣದ ಭದ್ರತೆ ಇಲ್ಲ. ಸ್ಪೋಟಕಗಳನ್ನು ಪರಿಶೀಲಿಸುವ ಆಧುನಿಕ ಸಲಕರಣೆಗಳನ್ನು ಅಳವಡಿಸಿಲ್ಲ.

ಶ್ರೀರಂಗನಾಥ ಸ್ವಾಮಿಗಿಲ್ಲ ರಕ್ಷಣೆ

ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ದೇವಾಲಯ ಕೇಂದ್ರ ಪುರಾತತ್ವ ಇಲಾಖೆಗೆ ಸೇರಿದ್ದು, ದೇವಾಲಯದ ಪೂಜೆ-ಪುನಸ್ಕಾರಗಳ ಜವಾಬ್ದಾರಿ ಮುಜರಾಯಿ ಇಲಾಖೆಗೆ ಒಳಪಟ್ಟಿದೆ. ಇಬ್ಬರ ಜಗಳದಿಂದ ದೇವಾಲಯದ ಪರಿಸ್ಥಿತಿ ಅತಂತ್ರವಾಗಿದೆ. ದೇವಾಲಯದ ಒಳಗೆ ಯಾರೂ ಏನು ಬೇಕಾದರೂ ಕೊಂಡೊಯ್ಯಬಹುದು. ಗಂಜಾಂನ ನಿಮಿಷಾಂಬ ದೇವಾಲಯದಲ್ಲೂ ಸಿಬ್ಬಂದಿ ಹೊರತುಪಡಿಸಿ ಇತರ ಭದ್ರತೆ ವ್ಯವಸ್ಥೆ ಇಲ್ಲ. ಸ್ಪೋಟಕ ಪತ್ತೆ ಮಾಡುವ ಯಂತ್ರವನ್ನು ಬೇಸಿಗೆ ಅರಮನೆ ಹೊರತುಪಡಿಸಿ ಇತರ ಯಾವ ತಾಣಗಳಲ್ಲೂ ಇಟ್ಟಿಲ್ಲ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕರು ಅಡಗಿದ್ದ ಮುತ್ತತ್ತಿಯಲ್ಲಿ ಮದ್ಯಪಾನ ನಿಷೇಧ ಇರುವುದರಿಂದ ಭದ್ರತೆ ವ್ಯವಸ್ಥೆ ಇದೆ. ಆದರೆ ಕೊಳ್ಳೇಗಾಲದ ಕಡೆಯಿಂದ ಬರುವವರಿಗೆ ಅಡ್ಡಿ ಇಲ್ಲ. ನಂಜನಗೂಡು ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನದಲ್ಲೂ ಭದ್ರತೆ ದೃಷ್ಟಿಯಿಂದ ಸಾಕಷ್ಟು ಸುಧಾರಿತ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ. ಹೊಯ್ಸಳೇಶ್ವರ ದೇಗುಲ ಸೇರಿ ಒಟ್ಟು 5 ರಾಷ್ಟ್ರೀಯ ಸ್ಮಾರಕಗಳು ಹಳೇಬೀಡಿನಲ್ಲಿವೆ. ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಹೊಯ್ಸಳೇಶ್ವರ ದೇಗುಲಕ್ಕೆ ಸರ್ಕಾರಿ-ಖಾಸಗಿ ಸಂಸ್ಥೆಗಳ ಭದ್ರತೆ ಒದಗಿಸಿದ್ದರೂ ಸಮಯ ಪಾಲನೆ-ಶಿಸ್ತಿನ ಕಾರ್ಯನಿರ್ವಹಣೆ ಇಲ್ಲದ್ದರಿಂದ ಆತಂಕ ತಪ್ಪಿಲ್ಲ.

ದಕ್ಷಿಣದ ಕಾಶಿಯಲ್ಲೂ ಸಿಸಿ ಕಣ್ಣಿಲ್ಲ!

ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಹೊಂದಿರುವುದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ, ಮುರ್ಡೆಶ್ವರ ಕ್ಷೇತ್ರಗಳಿಗೆ ತಲಾ ಒಂದೂವರೆ ಲಕ್ಷ ಪ್ರವಾಸಿಗರು ಭೇಟಿ ಕೊಡುತ್ತಾರೆ. ದೇವಸ್ಥಾನಗಳ ಆವರಣ ಬಿಟ್ಟರೆ, ಕಡಲತೀರ, ರ್ಪಾಂಗ್ ಸ್ಥಳ ಸೇರಿ ಹೆಚ್ಚು ಜನ ಇರುವ ಎಲ್ಲೂ ಸಿಸಿ ಕ್ಯಾಮರಾಗಳಿಲ್ಲ. ಕೆಲವೊಮ್ಮೆ ಮಾತ್ರ ಆಳ ಸಮುದ್ರದಲ್ಲಿ ಕೋಸ್ಟ್​ಗಾರ್ಡ್ ಗಸ್ತು ನೌಕೆಗಳು ತಪಾಸಣೆ ಕೈಗೊಳ್ಳುತ್ತವೆ. ವಿದೇಶಿಗರಿಂದ ಮಾದಕ ವಸ್ತುಗಳ ಮಾರಾಟ ಜಾಲವೂ ಇದ್ದು, ಈ ವರ್ಷ ಇಬ್ಬರನ್ನು ಬಂಧಿಸಲಾಗಿದೆ. ಜಿಲ್ಲೆಯ ಅರಬ್ಬಿ ಸಮುದ್ರ ವ್ಯಾಪ್ತಿಯಲ್ಲಿ 40ಕ್ಕೂ ಅಧಿಕ ದ್ವೀಪಗಳಿದ್ದು, ನಿಗಾ ಇಡುವ ವ್ಯವಸ್ಥೆ ಸಮರ್ಪಕವಾಗಿಲ್ಲ.

ಅಕ್ರಮಗಳು ನಡೆಯುತ್ತಿದ್ದರೂ ನಿರ್ಲಕ್ಷ್ಯ

ಕೆಆರ್​ಎಸ್​ನ ಗೋಪಾಲಸ್ವಾಮಿ ದೇವಾಲಯಕ್ಕೆ ಈಗ ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದು, ಹಿನ್ನೀರಿನಲ್ಲಿ ಮೋಜು-ಮಸ್ತಿ ಮಾಡಲು ಹೆಚ್ಚು ಜನರು ಬರುತ್ತಾರೆ. ಅಲ್ಲಿ ಯಾವುದೇ ಭದ್ರತೆಯಿಲ್ಲ. ಕಾರಿನಲ್ಲೇ ಮೋಜು ಮಸ್ತಿ ಸೇರಿ ಹಲವು ಅಕ್ರಮಗಳು ನಡೆದಿವೆ. ಈ ಬಗ್ಗೆ ವಿಜಯವಾಣಿ ವರದಿ ನಂತರ ಅಧಿಕಾರಿಗಳು ದೂರು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಜಿನಬಿಂಬಗಳ ಕಳವಾಗಿದ್ದರೂ ಒದಗಿಸಿಲ್ಲ ಆಧುನಿಕ ಭದ್ರತೆ

ಶ್ರವಣಬೆಳಗೊಳದ ಭಗವಾನ್ ಬಾಹುಬಲಿ ಸ್ವಾಮಿಯ 58 ಅಡಿ ಎತ್ತರದ ಏಕಶಿಲಾ ಮೂರ್ತಿ ಬಳಿ ಉಗ್ರರ ದಾಳಿಯಂಥ ಕೃತ್ಯಗಳನ್ನು ತಡೆಯುವಂತಹ ಆಧುನಿಕ ತಂತ್ರಜ್ಞಾನ ಅಳವಡಿಕೆಯಾಗಿಲ್ಲ. ಮಹಾಮಸ್ತಕಾಭಿಷೇಕ ಸಂದರ್ಭ ಅಳವಡಿಸಿದ್ದ ಆಧುನಿಕ ಭದ್ರತಾ ಸೌಲಭ್ಯಗಳನ್ನು ಉತ್ಸವದ ಬಳಿಕ ಕಡಿತಗೊಳಿಸಲಾಗಿದೆ. ಕೆಲ ತಿಂಗಳ ಹಿಂದೆ ಜಿನನಾಥಪುರದಲ್ಲಿರುವ ಗಂಗರ ಕಾಲದ ಪ್ರಾಚೀನ ಅರೆಗಲ್ ಪಾರ್ಶ್ವನಾಥ ಬಸದಿಯ ಕಿಟಕಿ ಮುರಿದು ಅಮೂಲ್ಯ ಪಂಚಲೋಹದ ಜಿನಬಿಂಬಗಳನ್ನು ಕಳವು ಮಾಡಲಾಗಿತ್ತು. ಚಂದ್ರಗಿರಿ ಚಿಕ್ಕಬೆಟ್ಟದ ಚಾವುಂಡರಾಯ ಬಸದಿ ಹಾಗೂ ಅಂತರಾಳ ಪಾರ್ಶ್ವನಾಥ ಬಸದಿಗಳ ಬಾಗಿಲಿನ ಬೀಗ ಮುರಿದು ಹುಂಡಿ ಹಣ ದೋಚಲಾಗಿತ್ತು.

ಆರರಲ್ಲಿ ಮೂರು ರಿಪೇರಿ

ತುಮಕೂರು ಜಿಲ್ಲೆಯ ದೇವರಾಯನದುರ್ಗ, ನಾಮದಚಿಲುಮೆ, ಮಧುಗಿರಿ ಏಕಶಿಲಾ ಬೆಟ್ಟ, ಗೊರವನಹಳ್ಳಿ ಪ್ರಮುಖ ಪ್ರವಾಸಿ ತಾಣವಾಗಿದ್ದು, ಸ್ಥಳೀಯ ಠಾಣೆ ಪೇದೆಗಳು ಗಸ್ತು ತಿರುಗುವುದು ಬಿಟ್ಟರೆ ಭದ್ರತಾ ವ್ಯವಸ್ಥೆ ಮಾಡಲಾಗಿಲ್ಲ. ಸಿದ್ಧಗಂಗಾ ಮಠದಲ್ಲಿ ವಿಶೇಷ ಸಂದರ್ಭದಲ್ಲಿ ಮಾತ್ರ ಪೊಲೀಸರು ಭದ್ರತೆ ಒದಗಿಸಿರುತ್ತಾರೆ. ಬೆಂಗಳೂರು ಗ್ರಾ. ಜಿಲ್ಲೆಯ ಶಿವಗಂಗೆ ಬೆಟ್ಟದ ಪ್ರವೇಶ ದ್ವಾರದಿಂದ ದೇಗುಲದ ಒಳಾಂಗಣದಲ್ಲಿ 6 ಸಿಸಿ ಕ್ಯಾಮರಾಗಳಿದ್ದರೂ 3 ಕಾರ್ಯ ನಿರ್ವಹಿಸುತ್ತಿಲ್ಲ. ದೇವನಹಳ್ಳಿಯ ಟಿಪು್ಪ ಕೋಟೆ ಯಲ್ಲಿ ಭದ್ರತಾ ವ್ಯವಸ್ಥೆ ಇಲ್ಲ.

ಕೋಟೆನಾಡಿನಲ್ಲಿ ಅಪಾಯವಿದ್ದರೂ ಕೇಳೋರಿಲ್ಲ

ಚಿತ್ರದುರ್ಗ ಜಿಲ್ಲೆಯ ಏಳು ಸುತ್ತಿನ ಕೋಟೆ, ಚಂದ್ರವಳ್ಳಿ, ಆಡುಮಲ್ಲೇಶ್ವರ, ವಾಣಿವಿಲಾಸ ಸಾಗರ, ಗಾಯತ್ರಿ ಜಲಾಶಯ, ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ದೇಗುಲ, ಹಾಲುರಾಮೇಶ್ವರ, ಗವಿರಂಗನಾಥ ಸ್ವಾಮಿ ದೇವಸ್ಥಾನಗಳಿಗೆ ಪ್ರವಾಸಿಗರು ಹೆಚ್ಚು ಭೇಟಿ ನೀಡುತ್ತಾರೆ. 2018ರ ಜನವರಿಯಿಂದ ಈವರೆಗೆ 25 ಲಕ್ಷ ಜನ ಭೇಟಿ ಕೊಟ್ಟಿದ್ದಾರೆ. ವಿವಿ ಸಾಗರದ ಡ್ಯಾಂ ಮೇಲೆ ಎಗ್ಗಿಲ್ಲದೆ ಪ್ರಿ-ವೆಡ್ಡಿಂಗ್ ಶೂಟ್, ಚಲನಚಿತ್ರಗಳ ಚಿತ್ರೀಕರಣಗಳು ನಡೆಯುತ್ತಿವೆ. ಇದರಿಂದ ಅಣೆಕಟ್ಟಿಗೆ ಅಪಾಯ ಹೆಚ್ಚಾಗಿದೆ. ಜತೆಗೆ ಗಾಯತ್ರಿ ಜಲಾಶಯ, ಹಾಲುರಾಮೇಶ್ವರದಲ್ಲಿ ಯಾರು ಬಂದರೂ ಕೇಳುವವರಿಲ್ಲದ ಸ್ಥಿತಿ ಇದೆ.

ಡಿಟೆಕ್ಟರ್ ಇಲ್ಲದ ಬಾಗಿಲು

ಉಡುಪಿಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಮೂರು ಬಾಗಿಲುಗಳಿದ್ದು ಯಾವುದಕ್ಕೂ ಮೆಟಲ್ ಡಿಟೆಕ್ಟರ್ ಇಲ್ಲ. ಗಣ್ಯರು ಭೇಟಿ ನೀಡಿದಾಗ ಮಾತ್ರ ನಿಗಾ ವಹಿಸಿ ಭದ್ರತೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಬೇರೆ ದಿನಗಳಲ್ಲಿ ಭದ್ರತೆಗೆ ಹೆಚ್ಚಿನ ಮಹತ್ವ ನೀಡುವುದಿಲ್ಲ.

ಶೀಘ್ರ ಅಗತ್ಯ ಕ್ರಮ

ಗಂಗಾವತಿ ತಾಲೂಕಿನ ಆನೆಗೊಂದಿ, ನವವೃಂದಾವನ ಗಡ್ಡಿ, ಪಂಪಾ ಸರೋವರ, ಅಂಜನಾದ್ರಿ ಬೆಟ್ಟಕ್ಕೆ ನಿತ್ಯ 2000ಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಅಂಜನಾದ್ರಿ ಬೆಟ್ಟ ಹೊರತುಪಡಿಸಿ ಉಳಿದೆಡೆ ಭದ್ರತಾಪಡೆ ನಿಯೋಜಿಸಿಲ್ಲ. ಶೀಘ್ರ ಅಗತ್ಯ ಭದ್ರತೆ ಕೈಗೊಳ್ಳುವುದಾಗಿ ಪುರಾತತ್ವ ಉಪ ಅಧೀಕ್ಷಕರು ತಿಳಿಸಿದ್ದಾರೆ.

ಕೊಡಗಲ್ಲೂ ಇಲ್ಲ ಸೂಕ್ತ ಭದ್ರತೆ

ಕೊಡಗು ಜಿಲ್ಲೆಯ ರಾಜಾಸೀಟ್ ಉದ್ಯಾನ, ರಾಜರ ಗದ್ದುಗೆ, ಅಬ್ಬಿಫಾಲ್ಸ್, ತಲಕಾವೇರಿ- ಭಗಂಡೇಶ್ವರ ದೇವಾಲಯ, ಕಾವೇರಿ ನಿಸರ್ಗಧಾಮ, ದುಬಾರೆ ಆನೆ ಕ್ಯಾಂಪ್, ಇರ್ಪ ಜಲಪಾತ ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದರೂ ಈ ಯಾವ ಪ್ರದೇಶದಲ್ಲೂ ಹೆಚ್ಚಿನ ಭದ್ರತಾ ವ್ಯವಸ್ಥೆ ಒದಗಿಸಿಲ್ಲ.

Leave a Reply

Your email address will not be published. Required fields are marked *