ದಕ್ಷಿಣ ಭಾರತಕ್ಕೆ ಉಗ್ರ ಭೀತಿ: 3 ಉಗ್ರರ ತಂಡ ಸಕ್ರಿಯ ಶಂಕೆ, ರಾಜ್ಯಾದ್ಯಂತ ಕಟ್ಟೆಚ್ಚರ

| ಕೀರ್ತಿನಾರಾಯಣ ಸಿ. ಬೆಂಗಳೂರು

ಬಾಂಗ್ಲಾ ಉಗ್ರರು ಭಾರತ ಸೇರಿ ವಿಶ್ವದ ಹಲವೆಡೆ ‘ಒಂಟಿ ತೋಳ ದಾಳಿ’ಗೆ ಸಂಚು ರೂಪಿಸಿರುವ ಮಾಹಿತಿ ಬಹಿರಂಗವಾದ ಬೆನ್ನಲ್ಲೇ ಉಗ್ರರ ತಂಡವೊಂದು ದಕ್ಷಿಣ ಭಾರತವನ್ನು ಟಾರ್ಗೆಟ್ ಮಾಡಿ ಕಾರ್ಯಾಚರಣೆಗೆ ಇಳಿದಿದೆ ಎಂಬ ಸಂಗತಿ ಭಯೋತ್ಪಾದನಾ ವಿರೋಧಿ ದಿನ ಮೇ 21ರ ಸಂದರ್ಭದಲ್ಲೇ ಹೊರಬಿದ್ದಿರುವುದು ಆತಂಕ ಮೂಡಿಸಿದೆ.

ದಕ್ಷಿಣ ಭಾರತದಲ್ಲಿ ಭಯೋತ್ಪಾದಕ ಕೃತ್ಯ ಎಸಗಲು ಶಂಕಿತ ಉಗ್ರ ಅಬು ಅಲ್ ಕಿತಲ್ ಎಂಬಾತನ ನೇತೃತ್ವದಲ್ಲಿ ಮೂರು ಸದಸ್ಯರ ತಂಡ ರಚಿಸಿಕೊಂಡು, ಟೆಲಿಗ್ರಾಂ ಮೆಸೆಂಜರ್ ಆಪ್​ನಲ್ಲಿ ರ್ಚಚಿಸಿರುವ ವಿಚಾರ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳುವಂತೆ ಕೇಂದ್ರ ಗೃಹ ಇಲಾಖೆ ಮೇ 10ರಂದೇ ಕರ್ನಾಟಕ ಸೇರಿ ದೇಶದ ಎಲ್ಲ ರಾಜ್ಯಗಳಿಗೆ ಎಚ್ಚರಿಕೆ ಸಂದೇಶ ಕಳಿಸಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಮೂಲಕ ರಾಜ್ಯದ ಎಲ್ಲ ಕಮಿಷನರ್​ಗಳು, ಎಸ್ಪಿ ಮತ್ತು ಐಜಿಪಿಗಳಿಗೆ ಮಾಹಿತಿ ಕಳುಹಿಸಿ, ಅಹಿತಕರ ಘಟನೆಗಳಿಗೆ ಆಸ್ಪದವಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ನಿರ್ದೇಶನ ಕೊಟ್ಟಿದೆ.

ಬಿಗಿ ಭದ್ರತೆ: ಉಗ್ರ ದಾಳಿ ಎಚ್ಚರಿಕೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿರುವ ಪ್ರಮುಖ ಕಟ್ಟಡಗಳು, ಸಂಸ್ಥೆಗಳು, ನ್ಯಾಯಾಲಯ, ದೇವಸ್ಥಾನ, ಪ್ರಾರ್ಥನಾ ಮಂದಿರ, ವಿದೇಶಿ ರಾಯಭಾರ ಕಚೇರಿಗಳು, ವಿದೇಶಿ ಸಂಸ್ಥೆಗಳು, ಪ್ರಮುಖ ಪ್ರವಾಸಿ ಸ್ಥಳಗಳು, ವಿಮಾನ ನಿಲ್ದಾಣ, ರೈಲು ನಿಲ್ದಾಣ, ರೈಲುಗಳು, ಮೆಟ್ರೋ ನಿಲ್ದಾಣ, ಶಾಪಿಂಗ್ ಮಾಲ್​ಗಳು, ಬಸ್ ನಿಲ್ದಾಣ, ಐಟಿ-ಬಿಟಿ ಕಂಪನಿಗಳು, ವಾಣಿಜ್ಯ ಕೇಂದ್ರಗಳು, ಮಲ್ಟಿಪ್ಲೆಕ್ಸ್ ಹಾಗೂ ಸ್ಟಾರ್ ಹೋಟೆಲ್​ಗಳ ಬಳಿ ಭದ್ರತಾ ಕ್ರಮಗಳನ್ನು ಹೆಚ್ಚಳ ಮಾಡಲಾಗಿದೆ.

ಸುಳಿವು ಸಿಕ್ಕರೆ ಮಾಹಿತಿ ಕೊಡಿ : ಬಂದೋಬಸ್ತ್ ಕೈಗೊಳ್ಳುವ ಬಗ್ಗೆ ಕೆಳಹಂತದ ಅಧಿಕಾರಿ ಮತ್ತು ಸಿಬ್ಬಂದಿಗೆ ಮಾರ್ಗದರ್ಶನ ಕೊಡಿ. ಶಂಕಿತ ಉಗ್ರರು ಹಾಗೂ ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ನಿಗಾ ವಹಿಸಿ. ಯಾವುದೇ ರೀತಿಯ ಮಾಹಿತಿ ಸಿಕ್ಕರೆ ಕೂಡಲೆ ಗಮನಕ್ಕೆ ತನ್ನಿ. ತನಿಖಾ ಪ್ರಗತಿಯ ಕುರಿತು ಆಗಿಂದಾಗಲೇ ಮಾಹಿತಿ ವಿನಿಮಯ ಮಾಡುತ್ತಿರುವಂತೆ ಎಲ್ಲ ರಾಜ್ಯಗಳ ಪೊಲೀಸರಿಗೆ ಕೇಂದ್ರ ಗೃಹ ಇಲಾಖೆ ನಿರ್ದೇಶನ ನೀಡಿದೆ.

ಯಾವುದೇ ಅಹಿತಕರ ಘಟನೆಗೆ ಆಸ್ಪದ ಇಲ್ಲದಂತೆ ಬೆಂಗಳೂರಿನಲ್ಲಿ ಈಗಾಗಲೇ ಸಾಕಷ್ಟು ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ನಗರದಲ್ಲಿ ಬಂದೋಬಸ್ತ್​ಗೆ ಪೊಲೀಸರ ಕೊರತೆ ಇಲ್ಲ. ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ (ಕೆಐಎಸ್​ಎಫ್) ಒಂದು ತುಕಡಿಯನ್ನು ಮೆಟ್ರೋ ಭದ್ರತೆಗಾಗಿಯೇ ನಿಯೋಜಿಸಲಾಗಿದ್ದು, ಜನಸಂದಣಿ ಹೆಚ್ಚಿರುವ ಎಲ್ಲ ಸ್ಥಳಗಳಲ್ಲಿ ನಿಗಾ ವಹಿಸಲಾಗಿದೆ.

| ಟಿ.ಸುನೀಲ್​ಕುಮಾರ್ ಬೆಂಗಳೂರು ಪೊಲೀಸ್ ಕಮಿಷನರ್

ಟೆಲಿಗ್ರಾಂನಲ್ಲಿ ಉಗ್ರ ಚರ್ಚೆ!

@HAQALJIHAD121 (ID-36461741-) ಹೆಸರಿನಲ್ಲಿ ಟೆಲಿಗ್ರಾಂ ಖಾತೆ ತೆರೆದು ಉಗ್ರ ಕೃತ್ಯವೆಸಗುವ ಬಗ್ಗೆ ಚರ್ಚೆ ನಡೆಸಲಾಗಿದೆ. ಈ ಖಾತೆಯಲ್ಲೇ ಅಲ್ ಕಿತಲ್ ನೇತೃತ್ವದಲ್ಲಿ ಮೂವರು ಸದಸ್ಯರ ತಂಡವನ್ನು ರಚನೆ ಮಾಡಿಕೊಳ್ಳಲಾಗಿದೆ. ಯಾರ್ಯಾರನ್ನು ಟಾರ್ಗೆಟ್ ಮಾಡಬೇಕು, ವಿಧ್ವಂಸಕ ಕೃತ್ಯವನ್ನು ಹೇಗೆ, ಯಾವಾಗ ನಡೆಸಬೇಕು, ಅದಕ್ಕೆ ಬೇಕಾದ ಸಿದ್ಧತೆ ಕುರಿತು ಖಾತೆಯಲ್ಲಿ ಚರ್ಚೆ ನಡೆದಿರುವ ಬಗ್ಗೆ ಕೇಂದ್ರ ತನಿಖಾ ಸಂಸ್ಥೆಗಳಿಗೆ ಮಾಹಿತಿ ಸಿಕ್ಕಿದೆ. ತನಿಖಾಧಿಕಾರಿಗಳು ಈ ಬಗ್ಗೆ ಇನ್ನಷ್ಟು ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ರಾಜ್ಯಗಳಿಗೆ ಕಳುಹಿಸಿರುವ ಎಚ್ಚರಿಕೆ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ.

ಟಾರ್ಗೆಟ್ ಏನು?

ಟೆಲಿಗ್ರಾಂ ಆಪ್ ಮೂಲಕ ಶಂಕಿತ ಉಗ್ರರು ಚರ್ಚೆ ನಡೆಸಿರುವ ಪ್ರಕಾರ, ದಕ್ಷಿಣ ಭಾರತದ ಪ್ರತಿಷ್ಠಿತ ದೇವಸ್ಥಾನಗಳು, ಚರ್ಚ್​ಗಳು, ಐಷಾರಾಮಿ ಹೋಟೆಲ್​ಗಳು ಹಾಗೂ ಬಾರ್ ಆಂಡ್ ರೆಸ್ಟೋರೆಂಟ್​ಗಳನ್ನು ಟಾರ್ಗೆಟ್ ಮಾಡಲಾಗಿದೆ.

ಟೆಲಿಗ್ರಾಂ ಆಪ್​ನಲ್ಲಿ ಐಸಿಸ್

ಸಾಮಾಜಿಕ ಜಾಲತಾಣಗಳಲ್ಲಿ ಮಾಧ್ಯಮ ಪ್ರಕಟಣೆ, ತತ್ವ-ಸಿದ್ಧಾಂತಗಳನ್ನು ಪ್ರಚಾರ ಮಾಡಲು ಐಸಿಸ್ ಉಗ್ರರು ಟೆಲಿಗ್ರಾಂ ಆಪ್ ಬಳಕೆಗೆ ಮೊದಲ ಆದ್ಯತೆ ಕೊಡುತ್ತಿದ್ದಾರೆ. ಟೆಲಿಗ್ರಾಂ ಖಾತೆಗೆ ಸುಲಭವಾಗಿ ಪ್ರವೇಶಿಸಬಹುದು ಹಾಗೂ ಬರಹಗಳನ್ನು ಒಂದೇ ಬಾರಿಗೆ ಹಲವರಿಗೆ ಸಂಘಟಿತವಾಗಿ ವರ್ಗಾಯಿಸಬಹುದೆಂಬ ಕಾರಣಕ್ಕೆ ಇದನ್ನು ಹೆಚ್ಚು ಬಳಕೆ ಮಾಡಲಾಗುತ್ತಿದೆ. ಬರಹಗಳನ್ನು ಹರಿಬಿಡುವ ಮೂಲಕ ಅಮಾಯಕರನ್ನು ಉಗ್ರ ಕೃತ್ಯದತ್ತ ಸೆಳೆಯಲು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳಲಾಗುತ್ತಿದೆ.

ಮಾಲೀಕರ ಜತೆ ಪೊಲೀಸರ ಸಭೆ

ಪ್ರತಿಷ್ಠಿತ ಖಾಸಗಿ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮರಾ ಹಾಗೂ ಭದ್ರತಾ ಸಿಬ್ಬಂದಿ ನೇಮಕ ಮಾಡಿಕೊಳ್ಳುವಂತೆ ಆಯಾ ಸರಹದ್ದಿನ ಪೊಲೀಸರು ಸೂಚಿಸಿದ್ದಾರೆ. ಠಾಣಾ ಸರಹದ್ದಿನಲ್ಲಿರುವ ಪ್ರಮುಖ ದೇವಸ್ಥಾನಗಳ ಧರ್ಮದರ್ಶಿಗಳು, ಚರ್ಚ್​ಗಳು, ಕಟ್ಟಡಗಳು, ಹೋಟೆಲ್​ಗಳ ಮಾಲೀಕರ ಜತೆ ಪೊಲೀಸರು ಸಭೆ ನಡೆಸಿದ್ದಾರೆ. ಪೊಲೀಸ್ ಅಧಿಕಾರಿಗಳ ಸೂಚನೆ ಮೇರೆಗೆ ಬಹುತೇಕ ಕಡೆಗಳಲ್ಲಿ ಈಗಾಗಲೇ ಸಿಸಿ ಕ್ಯಾಮರಾ ಹಾಗೂ ಮೆಟಲ್ ಡಿಟೆಕ್ಟರ್ ಯಂತ್ರಗಳನ್ನು ಅಳವಡಿಸಲಾಗಿದೆ.

Leave a Reply

Your email address will not be published. Required fields are marked *