ಬೆಳಗಾವಿ: ನಗರದಲ್ಲಿ ವರ್ಷಗಳಿಂದ ನಡೆಯುತ್ತಿರುವ ಸ್ಮಾರ್ಟ್ ಸಿಟಿ, ಭೂಗತ ಒಳಚರಂಡಿ (ಯುಜಿಡಿ), ಜಲಮಂಡಳಿ ಕಾಮಗಾರಿಗಳಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗುತ್ತಿದ್ದು, ಕಾಮಗಾರಿಯ ಧೂಳು, ಕೆಲ ವಾಹನಗಳು ಹೊರಸೂಸುವ ಹೊಗೆಯಿಂದ ಜನರು ಸಮಸ್ಯೆ ಎದುರಿಸುತ್ತಿದ್ದಾರೆ.
2019ರಿಂದ ನಗರದ ವಿವಿಧ ಕಡೆ ಸ್ಮಾರ್ಟ್ ಸಿಟಿ ಯೋಜನೆಯಡಿ ಕಾಂಕ್ರೀಟ್ ರಸ್ತೆ, ಚರಂಡಿ ಕಾಮಗಾರಿಗಳು, ಜಲಮಂಡಳಿಯಿಂದ ಕುಡಿಯುವ ನೀರಿನ ಪೈಪ್‌ಲೈನ್, ಒಳಚರಂಡಿ, ಕೆಲ ಮಾರ್ಗಗಳ ದುರಸ್ತಿ ಹಾಗೂ ಹೆಸ್ಕಾಂನಿಂದ ಕಾಮಗಾರಿಗಳು ನಡೆಯುತ್ತಿವೆ. ಆದರೆ, ಕಾಮಗಾರಿ ಕೈಗೊಳ್ಳುವ ಸಂದರ್ಭದಲ್ಲಿ ಧೂಳು, ವಾಸನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿವೆ ಎಂದು ನಗರ ವಾಸಿಗಳು ಆರೋಪಿಸುತ್ತಿದ್ದಾರೆ.
ಸಂಚಾರಕ್ಕೆ ತೊಡಕು: ನಗರದ ಎಸ್‌ಪಿಎಂ ರಸ್ತೆಯು ಸ್ಮಾರ್ಟ್ ಸಿಟಿ ಯೋಜನೆಯಡಿ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಯುತ್ತಿದ್ದರೆ, ಮತ್ತೊಂದೆಡೆ ಒಳಚರಂಡಿ ಕೆಲಸವೂ ನಡೆಯುತ್ತಿದೆ. ಇದರಿಂದ ಈ ಮಾರ್ಗದಲ್ಲಿ ಸಂಚರಿಸುವ ಜನರಿಗೆ ಹಾಗೂ ವಾಹನ ಸವಾರರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗುತ್ತಿದೆ. ಸಂಚಾರಕ್ಕೆ ಪರ್ಯಾಯ ಮಾರ್ಗವೂ ಇಲ್ಲದೆ ಸಮಸ್ಯೆ ಎದುರಿಸುವಂತಾಗಿದೆ ಎಂದು ಹಿರಿಯ ನಾಗರಿಕರು ದೂರಿದ್ದಾರೆ.
ಸಂಚಾರ ದಟ್ಟಣೆ, ವಿದ್ಯಾರ್ಥಿಗಳ ಆಕ್ರೋಶ: ರಸ್ತೆಗಳಿಗೆ ಕಾಂಕ್ರೀಟ್ ಹಾಕಿದ ನಂತರ ಗುಣಮಟ್ಟ ಕಾಪಾಡಲು ಕನಿಷ್ಠ 21 ದಿನಗಳು ಬೇಕಾಗುತ್ತದೆ. ಈ ನಡುವೆ ಜಲಮಂಡಳಿಯವರು ಕಾಂಕ್ರೀಟ್ ಹಾಕುವ ಮೊದಲು ಯುಜಿಡಿ ಪೈಪ್‌ಲೈನ್ ಕೆಲಸ ಕೈಗೆತ್ತಿಕೊಂಡಿದ್ದಾರೆ. ಹಾಗಾಗಿ ರಸ್ತೆಗಳನ್ನು ಮುಚ್ಚಲಾಗಿದೆ. ಸಿವಿಲ್ ಹಾಸ್ಪಿಟಲ್ ರಸ್ತೆ, ಕಾಲೇಜು ರಸ್ತೆ, ಎಸ್‌ಪಿಎಂ ರಸ್ತೆ, ಆರ್‌ಪಿಡಿ ಕಾಲೇಜು ರಸ್ತೆ, ಖಾನಾಪುರ ರಸ್ತೆ, ಮಹಾತ್ಮ ಫುಲೆ ರಸ್ತೆ, ಕೆಎಲ್‌ಇ ಆಸ್ಪತ್ರೆ ರಸ್ತೆ, ಶಿವಬಸವ ನಗರ ಮತ್ತು ಇತರ ಹಲವು ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದೆ ಎಂದು ಕಾಲೇಜು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ನಗರದಲ್ಲಿ ಸ್ಮಾರ್ಟ್ ಸಿಟಿ, ಜಲಮಂಡಳಿ ಸೇರಿ ವಿವಿಧ ಕಾಮಗಾರಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಮಸ್ಯೆಉಂಟಾಗಿರುವುದು ನಿಜ. ಈಗಾಗಲೇ ಕೆಲ ರಸ್ತೆಗಳನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.
| ಶಶಿಧರ ಕುರೇರ ಸ್ಮಾರ್ಟ್ ಸಿಟಿ ಎಂಡಿ