ಬೆಂಗಳೂರು: ಅಡುಗೆ ಸರಿಯಾಗಿ ಮಾಡಲ್ಲ, ಕೆಲಸ ಕೂಡ ಜವಾಬ್ದಾರಿಯಿಂದ ಮಾಡಲ್ಲ ಎಂದು ನಿಂದಿಸುತ್ತಿದ್ದ ಬೋರ್‌ವೆಲ್ ಲಾರಿ ಚಾಲಕನನ್ನು ಜತೆಯಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರೇ ಕಬ್ಬಿಣದ ರಾಡ್ ಮತ್ತು ಸುತ್ತಿಗೆಯಿಂದ ಹಲ್ಲೆ ನಡೆಸಿ ಕೊಲೆಗೈದಿದ್ದಾರೆ.
ತಮಿಳುನಾಡಿನ ತಿರುಚಿ ಮೂಲದ ಸುರೇಶ್(೪೭) ಕೊಲೆಯಾದ ಲಾರಿ ಚಾಲಕ. ಕೃತ್ಯ ಎಸಗಿದ ಮಧ್ಯಪ್ರದೇಶದ ಸಹದೇವ್ ಅಲಿಯಾಸ್ ಬಾಬು(೩೨), ಸುನೀಲ್ ನಾವ್ಡೇ(೩೦), ದಿನೇಶ್(೩೧) ಅಲಕೇಶ್(೩೦), ಸಂಜಯ್(೨೮) ಎಂಬುವರನ್ನು ಬಂಧಿಸಲಾಗಿದೆ.
ಕೃತ್ಯ ಸಂಬಂಧ ಕೊಲೆಯಾದ ಸುರೇಶ್ ಅವರ ಸಂಬಂಧಿ ರವಿಚಂದ್ರನ್ ಎಂಬುವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಮಿಳುನಾಡಿನ ಸುರೇಶ್ ಮತ್ತು ಅವರ ಸಂಬಂಧ ರವಿಚಂದ್ರನ್ ಮೂರು ತಿಂಗಳಿಂದ ಅಮೃತ್ ಬೋರ್‌ವೇಲ್ ಕಲ್ಕಿ ಎಂಟರ್ ಪ್ರೈಸಸ್‌ನಲ್ಲಿ ಬೋರ್‌ವೆಲ್ ಲಾರಿ ಚಾಲಕ ಹಾಗೂ ಡ್ರಿಲ್ಲರ್ ಕೆಲಸ ಮಾಡಿಕೊಂಡಿದ್ದರು. ಭಾನುವಾರ ಸಿಂಗಸಂದ್ರದ ಎಇಸಿಎಸ್ ಲೇಔಟ್‌ನ ಸೈಟ್‌ವೊಂದರಲ್ಲಿ ಬೋರ್‌ವೆಲ್ ಕೊರೆಯಲು ಆರೋಪಿಗಳು, ಸುರೇಶ್ ಹಾಗೂ ರವಿಚಂದ್ರನ್ ಬಂದಿದ್ದರು. ರಾತ್ರಿಯಾಗಿದ್ದರಿಂದ ಸೋಮವಾರ ಬೋರ್‌ವೆಲ್ ಕೊರೆಯೋಣ ಎಂದು ಕೆಲಸ ಸ್ಥಗಿತಗೊಳಿಸಿ ಸೈಟ್‌ನಲ್ಲಿದ್ದ ಶೆಡ್‌ನಲ್ಲೇ ಉಳಿದುಕೊಂಡಿದ್ದರು. ರಾತ್ರಿ ಆರೋಪಿಗಳ ಪೈಕಿ ಸಹದೇವ್ ಅಡುಗೆ ಮಾಡುತ್ತಿದ್ದ. ಆಗ ಸುರೇಶ್, ನಿನಗೆ ಸರಿಯಾಗಿ ಅಡುಗೆ ಮಾಡಲು ಬರುವುದಿಲ್ಲ. ಕೆಲಸ ಕೂಡ ಜವಾಬ್ದಾರಿಯಿಂದ ಮಾಡಲ್ಲ ಎಂದು ತಮಿಳಿನಲ್ಲಿ ನಿಂದಿಸಿದ್ದಾರೆ. ಅದರಿಂದ ಕೋಪಗೊಂಡ ಸಹದೇವ್, ಸುರೇಶ್ ಜತೆ ಜಗಳ ಮಾಡಿಕೊಂಡಿದ್ದಾನೆ. ಬಳಿಕ ಇತರರು ಸಮಾಧಾನ ಮಾಡಿ, ಎಲ್ಲರೂ ಒಟ್ಟಿಗೆ ಊಟ ಮಾಡಿ, ಶೆಡ್‌ನಲ್ಲೇ ಮಲಗಿದ್ದಾರೆ.
ಕಬ್ಬಿಣದ ರಾಡ್, ಸುತ್ತಿಗೆಯಿಂದ ಹಲ್ಲೆ
ರಾತ್ರಿ ೧೧.೩೦ರ ಸುಮಾರಿಗೆ ಸಹದೇವ್ ಹಾಗೂ ಇತರರು ಕಬ್ಬಿಣದ ರಾಡ್ ಮತ್ತು ಸುತ್ತಿಗೆಯಿಂದ ಸುರೇಶ್‌ನ ಮುಖ, ತಲೆ ಹಾಗೂ ದೇಹದ ಇತರೆ ಭಾಗಕ್ಕೆ ಹೊಡೆದಿದ್ದು, ತೀವ್ರರಕ್ತಸ್ರಾವದಿಂದ ಸುರೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೆಲ ಹೊತ್ತಿನ ಬಳಿಕ ರಾಜೇಶ್ ಎಂಬಾತ ಸುರೇಶ್ ಹತ್ಯೆ ಕಂಡು, ರವಿಚಂದ್ರನ್‌ಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ದೂರು ದಾಖಲಿಸಿಕೊಂಡು ಸ್ಥಳಕ್ಕೆ ತೆರಳಿ ಪರಿಶೀಲಿಸಲಾಗಿದೆ. ನಂತರ ಅಲ್ಲೇ ಇದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಐವರ ಪೈಕಿ ಯಾರು ಸುರೇಶ್‌ನನ್ನು ಕೊಲೆ ಮಾಡಿದ್ದಾರೆ ಎಂಬ ಬಗ್ಗೆ ತೀವ್ರ ರೀತಿಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.