More

    ಕೆಲಸದಲ್ಲಿರಲಿ ಸೇವಾ ಮನೊಭಾವ – ಭ್ರಷ್ಟಚಾರ ಸಹಿಸಲ್ಲ

    ಗಂಗಾವತಿ: ಇಲಾಖೆಯಲ್ಲಿನ ಭ್ರಷ್ಟಚಾರ ಸಹಿಸಲ್ಲ. ಯೋಜನೆಗಳ ಅನುಷ್ಟಾನದಲ್ಲಿ ವಿಳಂಬವಾದರೆ ಸುಮ್ಮನಿರಲ್ಲ. ಸಂಬಳಕ್ಕಾಗಿ ದುಡಿಯದೇ ಸೇವಾ ಮನೋಭಾವನೆಯಿಂದ ಕೆಲಸ ಮಾಡಿ ಎಂದು ಇಲಾಖೆ ಅಧಿಕಾರಿಗಳಿಗೆ ಶಾಸಕ ಗಾಲಿ ಜನಾರ್ದನರೆಡ್ಡಿ ಖಡಕ್ ಎಚ್ಚರಿಕೆ ನೀಡಿದರು.

    ತಾಪಂ ಮಂಥನ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ತ್ರೈಮಾಸಿಕ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಚಾರ ಮಿತಿ ಮೀರಿದ್ದು, ಜನರಿಗೆ ಕಿರುಕುಳ ಹೆಚ್ಚಾಗುತ್ತಿದೆ. ಜನರಿಗೆ ಸಿಗಬೇಕಿರುವ ನ್ಯಾಯಸಮ್ಮತ ಯೋಜನೆಗಳ ಸಮರ್ಪಕ ಅನುಷ್ಟಾನಗೊಳಿಸಬೇಕಿದ್ದು, ನಿರ್ಲಕ್ಷಿತ ಅಧಿಕಾರಿಗಳಿಗೆ ಕ್ಷೇತ್ರದಲ್ಲಿ ಜಾಗವಿಲ್ಲ ಎಂದು ಹೇಳಿದರು.

    ಇದನ್ನೂ ಓದಿ: ಗ್ಯಾರಂಟಿ ಯೋಜನೆಯಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿಲ್ಲ

    ಅಧಿಕಾರಿಗಳು ಗಂಭೀರತೆಯಿಂದ ಕೆಲಸ ಮಾಡಬೇಕಿದ್ದು, ಲೋಪ ಕಂಡುಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮಕ್ಕೆ ಶಿಾರಸು ಮಾಡಲಾಗುವುದು. ತಪ್ಪು ಕಂಡುಬಂದಲ್ಲಿ ನಾನಾಗಲಿ ಅಥವಾ ಬೆಂಬಲಿಗರು ಬಂದರೂ ನಿಮ್ಮ ಕರ್ತವ್ಯ ಮರೆಯಬೇಡಿ. ಕೆಲಸ ಮಾಡುವ ನೌಕರರಿಗೆ ಬೆಂಗಾವಲಾಗಿರುವೆ ಎಂದರು.

    ಬಿತ್ತನೆ ಗುರಿ

    ತಾಲೂಕಿನಲ್ಲಿ ಖುಷ್ಕಿ, ಟಿಬಿಪಿ ಮತ್ತು ಇತರ ಸೇರಿ 25,184 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿಯಿದ್ದು, ಭತ್ತ, ಮೆಕ್ಕೆಜೋಳ, ಸಜ್ಜೆ, ಹೆಸರು, ತೊಗರಿ, ಸೂರ್ಯಕಾಂತಿ, ನವಣೆ ಸೇರಿ 490 ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನಿದೆ. 10,662 ಟನ್ ರಸಗೊಬ್ಬರ ಸಂಗ್ರಹವಿದ್ದು, ರಾಜ್ಯ ಮತ್ತು ಕೇಂದ್ರ ವಲಯ ಯೋಜನೆಗಳ ಅನುದಾನ ಮಂಜೂರಾಗಿಲ್ಲ ಎಂದು ಸಹಾಯಕ ಕೃಷಿ ನಿರ್ದೇಶಕ ಸಂತೋಷ ಪಟ್ಟದಕಲ್ ಹೇಳಿದರು.

    ಜಾನುವಾರುಗಳ ರೋಗ ತಪಾಸಣೆ, ಲಸಿಕೆ, ಮೇವು ಅಭಿವೃದ್ಧಿಗೆ ಆದ್ಯತೆ ನೀಡಿದ್ದು, ಕೃತಕ ಗರ್ಭಧಾರಣೆ ಗುರಿ ಶೇ.100 ಸಾಧಿಸಲಾಗಿದೆ ಎಂದು ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಸಣ್ಣಕ್ಕಿ ನಾಗರಾಜ್ ಹೇಳಿದರು. ದೂರುಗಳ ಬರದಂತೆ ಯೋಜನೆ ಅನುಷ್ಟಾನಗೊಳಿಸಲು ಜನಾರ್ದನ ರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದರು.

    ಹೆದ್ದಾರಿ ನಿಯಮ ಪಾಲಸಿ

    ರಸ್ತೆ ಬದಿ ಸಸಿಗಳನ್ನು ನೆಡುವಾಗ ಅರಣ್ಯ ಇಲಾಖೆ ಪಿಡಬ್ಲುೃಡಿ ನಿಯಮ ಪಾಲಿಸುತ್ತಿಲ್ಲ ಎಂದು ಪಿಡಬ್ಲುೃಡಿ ಎಇಇ ಸುದೇಶಕುಮಾರ ತಿಳಿಸಿದರು. ರಸ್ತೆಯಿಂದ ಇಂತಿಷ್ಟು ಅಳತೆ ದೂರದಲ್ಲಿ ಮರ ಬೆಳೆಸಿದರೆ ಮುಂದೆ ವಿಸ್ತರಣೆ ಸಂದರ್ಭದಲ್ಲಿ ತೆರವು ಪ್ರಶ್ನೆ ಬರುವುದಿಲ್ಲ ಎಂದರು.

    ಇದಕ್ಕೆ ಶಾಸಕ ರೆಡ್ಡಿ ಪ್ರತಿಕ್ರಿಯೆಸಿ ಸಂಬಂಧಪಟ್ಟ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ, ಮರಗಳನ್ನು ನೆಡಿ. ಮರ ಕಡಿಯುವಂಥ ಸ್ಥಿತಿ ಬಾರದಿರಲಿ ಎಂದು ಅರಣ್ಯ ಸಂರಕ್ಷಣಾಧಿಕಾರಿ ಶಿವರಾಜ ಮೇಟಿಗೆ ಸೂಚಿಸಿದರು.

    ನಗರದ 95 ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡವಿಲ್ಲ. ಗ್ರಾಮೀಣ ಭಾಗದಲ್ಲಿ ಸಮಸ್ಯೆ ನಿವಾರಣೆ ಹಂತಕ್ಕೆ ಬಂದಿದೆ. ಅನುದಾನವಿದ್ದರೂ ಜಾಗದ ಕೊರತೆಯಿಂದ ಪರಿಹಾರ ದೊರೆಯುತ್ತಿಲ್ಲ ಎಂದು ಸಿಡಿಪಿಒ ವಿರೂಪಾಕ್ಷಯ್ಯಸ್ವಾಮಿ ಹೇಳಿದರು.

    ಜಿಪಂ, ಆರ್‌ಡಿಪಿ, ಜೆಸ್ಕಾಂ, ನಗರಸಭೆ,ತೋಟಗಾರಿಕೆ, ಹಿಂದುಳಿದ ವರ್ಗ, ಸಮಾಜ ಕಲ್ಯಾಣ ಇಲಾಖೆ ಸೇರಿ ವಿವಿಧ ಇಲಾಖೆ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ತಹಸೀಲ್ದಾರ್‌ಗಳಾದ ಮಂಜುನಾಥ ಭೋಗಾವತಿ, ಅಮರೇಶ ಬಿರಾದಾರ್, ತಾಪಂ ಆಡಳಿತಾಧಿಕಾರಿ ಕೃಷ್ಣಮೂರ್ತಿ, ತಾಪಂ ಇಒಗಳಾದ ಮಹಾಂತಗೌಡ ಪಾಟೀಲ್, ದುಂಡಪ್ಪ, ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ ಇತರರಿದ್ದರು.

    ರೆಡ್ಡಿ ಆಪ್ತರೂ ಮೀಟಿಂಗ್‌ನಲ್ಲಿ ಭಾಗಿ

    ಮೊದಲ ಸಭೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾರತುರಾಯಿಯಲ್ಲಿ ಮಗ್ನರಾಗಿದ್ದು, ಮೊದಲ ಬಾರಿಗೆ ಎಲ್ಲ ಅಧಿಕಾರಿಗಳು ಭಾಗವಹಿಸಿದ್ದರು. ಅಧಿಕಾರಿಗಳು ಒಪ್ಪಿಸಿದ ವರದಿಗೆ ರೆಡ್ಡಿ ತಲೆತೂಗಿದರೇ ಹೊರತು ಪ್ರಶ್ನಿಸಲಿಲ್ಲ. ಸಭೆಗೆ ರೆಡ್ಡಿ ಆಪ್ತ ಅಲಿಖಾನ್ ಸೇರಿ ಕೆಆರ್‌ಪಿಪಿ ಕಾರ್ಯಕರ್ತರು ಭಾಗವಹಿಸಿದ್ದು, ಕೆಲವೊಂದು ಇಲಾಖೆ ಚರ್ಚೆಯಲ್ಲಿ ಕಾರ್ಯಕರ್ತರೇ ಅಧಿಕಾರಿಗಳ ವಿರುದ್ಧ ಮೌಖಿಕ ದೂರು ನೀಡಿದ ಪ್ರಸಂಗ ನಡೆಯಿತು.

    ಸಂಜೆ 4ಗಂಟೆವರೆಗೂ ಸಭೆ ನಡೆದರೂ ಸಮಾಧಾನಚಿತ್ತದಿಂದ ರೆಡ್ಡಿ ಆಲಿಸಿದ್ದು ವಿಶೇಷ. ಮೊದಲ ಸಭೆಯನ್ನು ತಾಪಂ ಆವರಣದಲ್ಲಿ ಸಸಿ ನೆಡುವ ಮೂಲಕ ಚಾಲನೆ ನೀಡಿದರು. ನಗರ ಮತ್ತು ಗ್ರಾಮೀಣ ಭಾಗದ ಕಾರ್ಯಕರ್ತರು ಸಭೆಗೆ ನುಗ್ಗಲೆತ್ನಿಸಿದ್ದರಿಂದ ಕೆಲಕಾಲ ಗದ್ದಲ ಉಂಟಾಯಿತು.

    ಪತ್ರಿಕಾಭವನಕ್ಕೆ ಭೇಟಿ

    ಸಭೆಗೂ ಮುನ್ನ ತಾಪಂ ಆವರಣದ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾಭವನಕ್ಕೆ ಭೇಟಿ ನೀಡಿದ ಶಾಸಕ ಗಾಲಿ ಜನಾರ್ದನ ರೆಡ್ಡಿ ಪತ್ರಕರ್ತರೊಂದಿಗೆ ಸಮಾಲೋಚನೆ ನಡೆಸಿದರು. ಪತ್ರಿಕಾಭವನದ ನವೀಕರಣ, ಗ್ರಂಥಾಲಯ ಕಟ್ಟಡ ಪೂರ್ಣಗೊಳಿಸುವುದು, ಅರ್ಹ ಪತ್ರಕರ್ತರಿಗೆ ನಿವೇಶನ ಮತ್ತು ಮನೆ ವಿತರಿಸುವ ಭರವಸೆ ನೀಡಿ, ನಿಮ್ಮೊಂದಿಗಿರುವೆ ಎಂದರು.

    ಸಂಘದಿಂದ ಗಾಲಿ ಜನಾರ್ದನ ರೆಡ್ಡಿ ಅವರನ್ನು ಸನ್ಮಾನಿಸಲಾಯಿತು. ತಾಲೂಕು ಅಧ್ಯಕ್ಷ ಇಂಗಳಗಿ ನಾಗರಾಜ್, ಉಪಾಧ್ಯಕ್ಷ ಹರೀಶ್ ಕುಲ್ಕರ್ಣಿ, ಕಾರ್ಯದರ್ಶಿ ಬಿ.ದೇವರಾಜ್, ಮಾಜಿ ಅಧ್ಯಕ್ಷ ವಿಶ್ವನಾಥ ಬೆಳಗಲ್ ಮಠ ಸೇರಿ ಪದಾಧಿಕಾರಿಗಳು ಮತ್ತು ಸದಸ್ಯರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts