ಲೋಕಸಭಾ ಚುನಾವಣಾ ಕಾರ್ಯಕ್ಕೆ ಬಸ್​ಗಳ ಬಳಕೆ, ಕೇಳೂರಿಲ್ಲ ಪ್ರಯಾಣಿಕರ ಪರದಾಟ

ಚಿಕ್ಕಮಗಳೂರು: ಲೋಕಸಭೆ ಚುನಾವಣೆಗಾಗಿ ಆಯೋಗವು ಕೆಎಸ್​ಆರ್​ಟಿಸಿ ಮತ್ತು ಖಾಸಗಿ ಬಸ್ ಸೇವೆಯನ್ನು ಎರವಲು ಪಡೆದಿರುವುದರಿಂದ ಬಸ್ ಕೊರತೆಯಿಂದ ಪ್ರಯಾಣಿಕರು ಬುಧವಾರ ಪರದಾಡಿದರು.

ಚುನಾವಣಾ ಸೇವೆಗಾಗಿ ಬಸ್​ಗಳನ್ನು ಎರಡು ದಿನ ಮುಂಚಿತವಾಗಿ ಮಂಗಳವಾರ ಸಂಜೆಯೇ ಜಿಲ್ಲಾ ಚುನಾವಣಾ ಆಯೋಗ ಪಡೆದಿತ್ತು. ಹೀಗಾಗಿ ಕೆಲ ಮಾರ್ಗಗಳಲ್ಲಿ ಬಸ್ ಸೇವೆ ಇಲ್ಲದೆ ಪ್ರಯಾಣಿಕರು ಪರದಾಡಿದರು. ಬಹಳಷ್ಟು ಪ್ರಯಾಣಿಕರು ಮತದಾನ ದಿನ ಏ.18ರಂದು ಬಸ್ ಸೇವೆ ಕಡಿಮೆ ಎಂದು ಭಾವಿಸಿದ್ದರು. ಆದರೆ ಹಿಂದಿನ ದಿನವೇ ಬಸ್​ಗಳನ್ನು ಪಡೆದಿರುವುದರಿಂದ ಪ್ರಯಾಣಿಕರಿಗೆ ಅನಿರೀಕ್ಷಿತ ಬಿಸಿ ತಟ್ಟಿತು.

ಕೆಎಸ್​ಆರ್​ಟಿಸಿಯಿಂದ 147, ಖಾಸಗಿ 49 ಬಸ್, ಮಿನಿ ಬಸ್ 21, ಮ್ಯಾಕ್ಸಿಕ್ಯಾಬ್ 62 ಹಾಗೂ ಟಾಟಾ ವಿಂಗರ್ 10 ವಾಹನಗಳನ್ನು ಚುನಾವಣೆಗಾಗಿ ಪಡೆಯಲಾಗಿದೆ. ಇದೇ ರೀತಿ ಬೇರೆ ಜಿಲ್ಲೆಗಳಲ್ಲೂ ಬಸ್​ಗಳನ್ನು ಚುನಾವಣೆಗೆ ಪಡೆದಿರುವುದಿಂದ ಆ ಜಿಲ್ಲೆಗಳಿಂದ ಬರುವ ಮತ್ತು ಹೋಗುವ ಬಸ್​ಗಳ ಸಂಖ್ಯೆಯೂ ಕಡಿಮೆ ಇತ್ತು. ಇದರಿಂದ ಮಂಗಳೂರು, ಧರ್ಮಸ್ಥಳ, ಬೆಂಗಳೂರು, ದಾವಣಗೆರೆ, ಹುಬ್ಬಳ್ಳಿ ಕಡೆ ಪ್ರಯಾಣಿಸುವವರಿಗೆ ತೊಂದರೆಯಾಯಿತು. ನಿತ್ಯವೂ ಗಂಟೆಗೆ 10-15 ದೂರದ ಮಾರ್ಗದ ಬಸ್​ಗಳು ನಗರ ಬಸ್ ನಿಲ್ದಾಣಕ್ಕೆ ಬಂದು ಹೋಗುತ್ತಿದ್ದವು. ಬುಧವಾರ 6-8 ಬಸ್​ಗಳು ಮಾತ್ರ ಸಂಚರಿಸಿದವು.

ರೈಲು ಸೇವೆಯೂ ವ್ಯತ್ಯಯ: ಬಸ್​ಗಳು ಇಲ್ಲವೆಂದು ರೈಲು ನಿಲ್ದಾಣಗಳ ಕಡೆಗೆ ಜನ ಮುಖ ಮಾಡಿದರೆ ಅಲ್ಲೂ ರೈಲು ಸಂಚಾರದಲ್ಲೂ ವ್ಯತ್ಯಯ ಉಂಟಾಗಿತ್ತು. ತಿಪಟೂರು-ಬೆಂಗಳೂರು ಮತ್ತು ದಾವಣಗೆರೆ-ಹುಬ್ಬಳ್ಳಿ ನಡುವೆ ಜೋಡಿ ಹಳಿ ಕಾಮಗಾರಿ ನಡೆಯುತ್ತಿರುವುದರಿಂದ ಅರಸಿಕೆರೆ-ಹುಬ್ಬಳ್ಳಿ ಲೋಕಲ್ ರೈಲನ್ನು ಬೆಳಗ್ಗೆ ರದ್ದು ಮಾಡಲಾಗಿತ್ತು. ಇದೇ ರೀತಿ ಬೆಳಗ್ಗೆ 10.40ರ ಬೆಂಗಳೂರು-ಹುಬ್ಬಳ್ಳಿ ರೈಲು ಚಿಕ್ಕಜಾಜೂರುವರೆಗೆ ಮಾತ್ರ ಸಂಚರಿಸಿತು. ಎಕ್ಸ್​ಪ್ರೆಸ್ ರೈಲುಗಳೂ ವಿಳಂಬವಾದ್ದರಿಂದ ಪ್ರಯಾಣಿಕರು ಸರಿಯಾದ ಸಮಯಕ್ಕೆ ಹೋಗಲು ಸಾಧ್ಯವಾಗದೆ ಚಡಪಡಿಸಿದರು.

ಊರಿನತ್ತ ಮತದಾರರು: ತಮ್ಮ ಊರಿಗೆ ಹೋಗಿ ಮತ ಹಾಕಲು ಹೊರಟವರೇ ಹೆಚ್ಚಾಗಿ ಮಂಗಳವಾರ ಪ್ರಯಾಣ ಮಾಡುತ್ತಿದ್ದರು. ಮತ ಹಾಕುವುದಕ್ಕಾಗಿ ಊರಿಗೆ ಹೋಗಲು ಒಂದು ದಿನ ಮೊದಲು ಯೋಜನೆ ರೂಪಿಸಿಕೊಂಡರೂ ಕೆಲವರಿಗೆ ತೊಂದರೆ ಆಯಿತು. ಬಹುತೇಕರು ಸ್ವಯಂ ಆಸಕ್ತಿಯಿಂದ ಮತದಾನ ಮಾಡಲು ಹೊರಟಿದ್ದರು.