ಬೆಂಗಳೂರು: ಬಿಬಿಎಂಪಿ ಕೈಗೆತ್ತಿಕೊಂಡಿರುವ ಕೋರಮಂಗಲ ಕಣಿವೆ (ಕೆ-100 ವ್ಯಾಲಿ) ಯೋಜನೆಯಲ್ಲಿ ಕಾಮಗಾರಿ ಪೂರ್ಣಗೊಳಿಸದೆ 170 ಕೋಟಿ ರೂ. ಮೊತ್ತದ ಬಿಲ್ ಗುತ್ತಿಗೆದಾರರು ಪಡೆದಿದ್ದು, ಇದರ ವಿರುದ್ಧ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಗರದ ಜಾಗೃತ ಮತದಾರರ ವೇದಿಕೆಯು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದೆ.
ದೂರು ಸಲ್ಲಿಸಿದ ಬಳಿಕ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ವೇದಿಕೆಯ ಕಾರ್ಯದರ್ಶಿ ಎಂ.ಆರ್.ನಾಗೇಶ್, ಯೋಜನೆಯ ಕಾಮಗಾರಿಯಲ್ಲಿ ಶೇ. 40 ಮಾತ್ರ ಪೂರ್ಣಗೊಂಡಿದ್ದರೂ, ಪಾಲಿಕೆ ಅಧಿಕಾರಿಗಳು ಗುತ್ತಿಗೆದಾರರಿಗೆ ಶೇ.95 ಬಿಲ್ ಮೊತ್ತವನ್ನು ಪಾವತಿಸಿದ್ದಾರೆ. ಸಾರ್ವಜನಿಕರ ತೆರಿಗೆ ಹಣವನ್ನು ಸಮರ್ಪಕವಾಗಿ ಬಳಸದ ಪಾಲಿಕೆ ಅಧಿಕಾರಿಗಳು ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದು, ಈ ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಮತ್ತು ಗುತ್ತಿಗೆದಾರರನ್ನು ವಿಚಾರಣೆಗೆ ಒಳಪಡಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
2021ರಲ್ಲಿ ಬಿಬಿಎಂಪಿ ಕೆ.ಆರ್.ಮಾರುಕಟ್ಟೆಯಿಂದ ಬೆಳ್ಳಂದೂರು ಕೆರೆವರೆಗೂ ಕೆ-100 ಯೋಜನೆ ಪ್ರಕಟಿಸಿ 147 ಕೋಟಿ ರೂ. ಮೊತ್ತಕ್ಕೆ ಟೆಂಡರ್ ಆಹ್ವಾನಿಸಿತು. ನಂತರ ಟೆಂಡರ್ ಮೊತ್ತವನ್ನು ಹೆಚ್ಚಿಸಿ 179 ಕೋಟಿ ರೂ. ಮೊತ್ತಕ್ಕೆ ಸ್ಟಾರ್ ಇನ್ಪ್ರಾಟೆಕ್ ಕಂಪನಿಗೆ ಗುತ್ತಿಗೆ ನೀಡಿತು. ಹತ್ತು ತಿಂಗಳ ಅವಧಿಯ ಗಡುವನ್ನೂ ವಿಧಿಸಲಾಗಿತ್ತು. ಜತೆಗೆ ಕಾಮಗಾರಿಯಲ್ಲಿ ಎಸ್‌ಟಿಪಿ ಸ್ಥಾಪನೆ ಸಹ ಸೇರಿಸಲಾಗಿತ್ತು. ಆದರೆ, ಈವರೆಗೂ ಎಸ್‌ಟಿಪಿಯನ್ನು ಪೂರ್ಣಗೊಳಿಸಿಲ್ಲ. ಬದಲಾಗಿ ರಾಜಕಾಲುವೆಯಲ್ಲಿ ಹೂಳೆತ್ತಿ ಅಲಂಕಾರಿಕ ಸಸ್ಯಗಳನ್ನು ಮಾತ್ರ ಪ್ರದರ್ಶಿಸಿ ಬಿಲ್ ಬಿಡುಗಡೆಗೆ ಅಧಿಕಾರಿಗಳು ಅತ್ಯುತ್ಸಾಹ ತೋರಿಸಿದ್ದಾರೆ.
ಹಣ ಬಿಡುಗಡೆಗೆ ರಾಜಕೀಯ ಪ್ರಭಾವ?:
ಒಟ್ಟು 9 ಕಿ.ಮೀ. ಉದ್ದದ ಕೆ- 100 ಯೋಜನೆಯ ಕಾಮಗಾರಿಗೆ ಸಂಬಂಧಿಸಿದಂತೆ ಈವವರೆಗೆ 4 ಕಿ.ಮೀ. ಉದ್ದದ ರಾಜಕಾಲುವೆಯ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಜತೆಗೆ ಒಂದಿಷ್ಟು ಅಲಂಕಾರಿಕ ಗಿಡಗಳು ಹಾಗೂ ಇನ್ನಿತರ ಕೆಲಸ ಮಾತ್ರ ಮಾಡಲಾಗಿದೆ. ಇನ್ನೂ ಅರ್ಧದಷ್ಟು ಕೆಲಸ ಬಾಕಿ ಇದ್ದರೂ, ಗುತ್ತಿಗೆದಾರರು ರಾಜಕೀಯ ಪ್ರಭಾವ ಬಳಸಿ 170 ಕೋಟಿ ರೂ. ಮೊತ್ತದ ಬಿಲ್ ಬಿಡುಗಡೆ ಮಾಡಿಸಿಕೊಂಡಿದ್ದಾರೆ. ಇದರಲ್ಲಿ ಪಾಲಿಕೆಯ ಇಂಜಿನಿಯರಿಂಗ್ ವಿಭಾಗ ಸೇರಿ ಹಲವು ಅಧಿಕಾರಿಗಳು ಷಾಮೀಲಾಗಿದ್ದು, ಆರೋಪಿತ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ನಾಗೇಶ್ ತಿಳಿಸಿದ್ದಾರೆ.