ಪ್ರಾಮಾಣಿಕವಾಗಿ ಕೆಲಸ ಮಾಡಿ

ಪಿರಿಯಾಪಟ್ಟಣ: ಅಧಿಕಾರಿಗಳು ಸಕ್ರಿಯರಾಗುವ ಮೂಲಕ ಸರ್ಕಾರದ ಸವಲತ್ತುಗಳನ್ನು ಫಲಾನುಭವಿಗಳಿಗೆ ವಿತರಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು ಎಂದು ವಸತಿ ಸಚಿವ ವಿ.ಸೋಮಣ್ಣ ಸೂಚಿಸಿದರು.

ಪಟ್ಟಣದ ತಾಲೂಕು ಕಚೇರಿಯ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಗ್ರಾಮೀಣ ದಸರಾ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಅಧಿಕಾರಿಗಳು ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವವನ್ನು ರೂಢಿಸಿಕೊಂಡಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಬಹುದಾಗಿದೆ. ಜಿಲ್ಲೆಯ ಗಡಿ ಭಾಗವಾದ ಪಿರಿಯಾಪಟ್ಟಣ ತಾಲೂಕನ್ನು ಸರ್ವಾಂಗೀಣ ಅಭಿವೃದ್ಧಿ ಮಾಡಬೇಕೆನ್ನುವುದು ನನ್ನ ಅಭಿಲಾಷೆಯಾಗಿದ್ದು ಶಾಸಕ ಕೆ.ಮಹದೇವ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಅವರ ಆಶೋತ್ತರಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು.

ವಿಶ್ವವಿಖ್ಯಾತ ದಸರಾ ಮಹೋತ್ಸವವು ಸರ್ಕಾರದಿಂದ ನಡೆಯುತ್ತಿರುವ ರಾಷ್ಟ್ರದ ಏಕೈಕ ನಾಡ ಹಬ್ಬವಾಗಿದ್ದು ಈ ಬಾರಿಯ ದಸರಾ ಆಚರಣೆಯಲ್ಲಿ ಯಾವುದೇ ಕುಂದು ಕೊರತೆಗಳು ಆಗದಂತೆ ಮುನ್ನೆಚ್ಚರಿಕೆ ವಹಿಸಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದರು.

ಗ್ರಾಮೀಣ ಮಟ್ಟದಲ್ಲಿಯೂ ದಸರಾ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಬೇಕೆನ್ನುವ ನಿಟ್ಟಿನಲ್ಲಿ ಪ್ರತಿಯೊಂದು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿಗೆ ಹಾಗೂ ಪುರಸಭೆಗೆ ತಲಾ 1 ಲಕ್ಷ ರೂ. ಅನುದಾನ ನೀಡಲಾಗುವುದು. ಮೈಸೂರು ದಸರಾ ನೋಡಲು ಗ್ರಾಮೀಣ ಪ್ರದೇಶದ ಜನತೆಗೆ ಅವಕಾಶ ಕಲ್ಪಿಸಲಾಗಿದ್ದು ಪ್ರತಿಯೊಂದು ತಾಲೂಕು ಕೇಂದ್ರಗಳಿಂದ ಉಚಿತವಾಗಿ ಬಸ್‌ಗಳ ವ್ಯವಸ್ಥೆ ಮಾಡಲಾಗುತ್ತಿದ್ದು ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕೆಂದು ತಿಳಿಸಿದರು.

ಸೌಭಾಗ್ಯ ಯೋಜನೆಯಡಿ ಗ್ರಾಮದ ಹಲವು ಮನೆಗಳಿಗೆ ಇದುವರೆಗೂ ವಿದ್ಯುತ್ ಸಂಪರ್ಕ ದೊರಕಿಲ್ಲ ಎಂಬ ದೂರುಗಳು ಕೇಳಿಬರುತ್ತಿದ್ದು ಈ ಬಗ್ಗೆ ಸೆಸ್ಕ್‌ನ ಎಇಇ ಕಲೀಂ ಅಹಮ್ಮದ್ ಅವರನ್ನು ತರಾಟೆಗೆ ತೆಗೆದುಕೊಂಡ ಸಚಿವರು ಇನ್ನೊಂದು ವಾರದಲ್ಲಿ ಸಂಪೂರ್ಣ ಮಾಹಿತಿ ನೀಡುವಂತೆ ತಿಳಿಸಿದರು.

ವಸತಿ ರಹಿತರಿಗೆ ಸೂರು ಕಲ್ಪಿಸಬೇಕೆನ್ನುವುದು ನನ್ನ ಮುಖ್ಯ ಉದ್ದೇಶವಾಗಿದ್ದು, ದಸರೆಯ ನಂತರ ಜಿಲ್ಲೆಯ ಪ್ರತಿಯೊಂದು ತಾಲೂಕಿನಲ್ಲಿಯೂ ಕೆಡಿಪಿ ಸಭೆಯನ್ನು ನಡೆಸಲು ತೀರ್ಮಾನಿಸಿದ್ದು ಆ ಸಭೆಯಲ್ಲಿ ಸೂಕ್ತ ಮಾಹಿತಿ ನೀಡದಿದ್ದಲ್ಲಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಶಾಸಕ ಕೆ.ಮಹದೇವ್ ಮಾತನಾಡಿ, ತಾಲೂಕಿನಾದ್ಯಂತ ಸುರಿದ ಭಾರಿ ಪ್ರಮಾಣದ ಮಳೆಯಿಂದಾಗಿ ಗ್ರಾಮೀಣ ಪ್ರದೇಶದ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದ್ದು ಇದನ್ನು ದುರಸ್ತಿಪಡಿಸಲು ಕನಿಷ್ಠ 4-5 ವರ್ಷ ಬೇಕಾಗಬಹುದು. ಗಿರಿಜನ ಹಾಡಿಗಳಲ್ಲಿ ಮೂಲ ಸೌಕರ್ಯಗಳಿಂದ ವಂಚಿತರಾಗಿ ಜನರು ಬದುಕು ನಡೆಸುತ್ತಿದ್ದಾರೆ. ಈ ಬಗ್ಗೆ ಸಚಿವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಮಳೆಯಿಂದಾಗಿ ತಾಲೂಕಿನಲ್ಲಿ 84 ಶಾಲಾ ಕೊಠಡಿಗಳು ಶಿಥಿಲಗೊಂಡಿದ್ದು ಕೂಡಲೇ ನೂತನ ಕೊಠಡಿಗಳನ್ನು ನಿರ್ಮಿಸಿಕೊಡುವಂತೆ ಸಚಿವರಿಗೆ ಬೇಡಿಕೆ ಸಲ್ಲಿಸಿದರು.

ಸಭೆಯಲ್ಲಿ ಜಿಪಂ ಸದಸ್ಯರಾದ ಕೆ.ಎಸ್. ಮಂಜುನಾಥ್, ಪಿ.ರಾಜೇಂದ್ರ, ರುದ್ರಮ್ಮ, ತಾಪಂ ಅಧ್ಯಕ್ಷೆ ಕೆ.ಆರ್.ನಿರೂಪಾ, ತಹಸೀಲ್ದಾರ್ ಶ್ವೆತಾ ಎನ್.ರವೀಂದ್ರ, ಎಸಿ ವೀಣಾ, ಡಿವೈಎಸ್ಪಿ ಸುಂದರರಾಜ್, ತಾಪಂ ಇಒ ಡಿ.ಸಿ. ಶ್ರುತಿ, ಬಿಇಒ ಚಿಕ್ಕಸ್ವಾಮಿ, ಮಾಜಿ ಶಾಸಕರಾದ ಎಚ್.ಸಿ.ಬಸವರಾಜು, ಎಂ.ಶಿವಣ್ಣ, ತಾಪಂ ಸದಸ್ಯರಾದ ಟಿ.ಈರಯ್ಯ, ಶ್ರೀನಿವಾಸ್, ಮಲ್ಲಿಕಾರ್ಜುನ, ಜಯಂತಿ, ಸುಮಿತ್ರಾ, ಪುರಸಭಾ ಸದಸ್ಯರಾದ ಎಚ್.ಕೆ. ಮಂಜುನಾಥ್, ನಿರಂಜನ್, ವಿನೋದ್ ಕುಮಾರ್, ಟಿಎಪಿಸಿಎಂಎಸ್ ಅಧ್ಯಕ್ಷ ಪಿ.ಎನ್. ಚಂದ್ರಶೇಖರ್ ಮತ್ತಿತರರು ಹಾಜರಿದ್ದರು.Leave a Reply

Your email address will not be published. Required fields are marked *