More

    ಪ್ರಥಮ ಸ್ಥಾನ ಉಳಿಸಿಕೊಳ್ಳಲು ಶಕ್ತಿ ಮೀರಿ ಶ್ರಮಿಸಿ

    ಹಾಸನ: ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕಳೆದ ವರ್ಷ ದೊರೆತಿರುವ ಪ್ರಥಮ ಸ್ಥಾನದ ಪಟ್ಟ ಉಳಿಸಿಕೊಳ್ಳಲು ಎಲ್ಲ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಶಕ್ತಿ ಮೀರಿ ಶ್ರಮಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ ಸಲಹೆ ನೀಡಿದರು.

    ನಗರದ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಜಿಲ್ಲೆಯ ಎಲ್ಲ ಸರ್ಕಾರಿ ಶಾಲೆ ಮುಖ್ಯ ಶಿಕ್ಷಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಏರ್ಪಡಿಸಿದ್ದ ಪರೀಕ್ಷಾ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದರು.

    ವಾರ್ಷಿಕ ಪರೀಕ್ಷೆಗೆ ಕೇವಲ 72 ದಿನಗಳು ಮಾತ್ರ ಬಾಕಿಯಿದ್ದು, ಪರಿಶ್ರಮ ಹಾಕಬೇಕು. ಕಳೆದ ಬಾರಿ ರಾಜ್ಯದಲ್ಲೇ ಮೊದಲ ಬಾರಿಗೆ ತಾಯಂದಿರ ಸಭೆ ನಡೆಸಿದ್ದರಿಂದ ಫಲಿತಾಂಶದಲ್ಲಿ ಅಂದುಕೊಂಡ ಗುರಿ ಸಾಧಿಸಿದ್ದೇವೆ. ಈ ವರ್ಷವೂ ಅದೇ ಹಿರಿಮೆ ನಮ್ಮದಾದರೆ ಜಿಲ್ಲೆಗೆ ಕೀರ್ತಿ ಎಂದರು.

    ಐದಾರು ವರ್ಷಗಳಿಂದ ಜಿಲ್ಲೆ ಶೈಕ್ಷಣಿಕವಾಗಿ ಹಿಂದುಳಿದಿತ್ತು. 31ನೇ ಸ್ಥಾನ ತಲುಪಿದ್ದ ಜಿಲ್ಲೆ ಹಂತ ಹಂತವಾಗಿ ಚೇತರಿಕೆ ಕಂಡು ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿದೆ. ಈ ಸಾಧನೆಗೆ ಎಲ್ಲ ವಿದ್ಯಾರ್ಥಿ, ಪಾಲಕರು ಹಾಗೂ ಶಿಕ್ಷಕರ ಶ್ರಮ ಇದೆ ಎಂದು ಹೇಳಿದರು.
    ಮೂರು ತಾಲೂಕಿಗೆ ಎಚ್ಚರಿಕೆ: ಕಳೆದ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಬೇಲೂರು, ಹೊಳೆನರಸೀಪುರ ಹಾಗೂ ಹಾಸನ ತಾಲೂಕು ಕಳಪೆ ಸಾಧನೆ ತೋರಿದ್ದು ಈ ಬಾರಿ ಗಮನಹರಿಸಬೇಕು. ಈ ವಿಚಾರದಲ್ಲಿ ಮಾತ್ರ ವಿನಂತಿ ಮಾಡದೆ ಎಚ್ಚರಿಕೆ ನೀಡುತ್ತಿದ್ದೇನೆ ಎಂದು ಭವಾನಿ ರೇವಣ್ಣ ಹೇಳಿದರು.

    ಮುಂದೆಯೂ ಹೇಳಲ್ಲ: ಫಲಿತಾಂಶ ಸುಧಾರಣೆಗೆ ನಾನು ಅಥವಾ ಮಾಜಿ ಸಚಿವ ಎಚ್.ಡಿ. ರೇವಣ್ಣ ಕಾರಣ ಎಂದು ಎಲ್ಲಿಯೂ ಹೇಳಿಲ್ಲ. ಮುಂದೆಯೂ ಹೇಳುವುದಿಲ್ಲ. ಮಕ್ಕಳ ಹಾಗೂ ಶಿಕ್ಷಕರ ಪರಿಶ್ರಮದಿಂದ ದೊರೆತಿರುವ ಫಲಿತಾಂಶಕ್ಕೆ ನಾವು ಕ್ರೆಡಿಟ್ ತೆಗೆದುಕೊಳ್ಳುವುದಿಲ್ಲ. ಆದರೆ ಈ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿಸಿದರು ಎಂದರು.

    ಅರಸೀಕೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್‌ಕುಮಾರ್ ಮಾತನಾಡಿ, ಫಲಿತಾಂಶ ಚೇತರಿಕೆಗೆ ಈಗಾಗಲೇ ಟಾರ್ಗೆಟ್ ನಿಗದಿ ಮಾಡಿದ್ದೇವೆ. ಜ. 6 ರಿಂದ 11ರವರೆಗೆ ಪೂರ್ವ ಸಿದ್ಧತಾ ಪರೀಕ್ಷೆ ನಡೆಸಿದ್ದೇವೆ ಎಂದರು.
    ಗುಂಪು ಅಧ್ಯಯನ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ದತ್ತು ಪಡೆಯುವಿಕೆ, ಕೆಲ ಶಾಲೆಗಳಲ್ಲಿ ರಾತ್ರಿ ತರಗತಿ, ಬರವಣಿಗೆ ಕೌಶಲ ಹೆಚ್ಚಿಸಲು ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುತ್ತಿದೆ ಎಂದರು.

    ಎಲ್ಲ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಪರೀಕ್ಷೆಗಾಗಿ ಕೈಗೊಂಡಿರುವ ಕ್ರಮದ ಕುರಿತು ಮಾಹಿತಿ ನೀಡಿದರು. ಜಿಪಂ ಉಪಾಧ್ಯಕ್ಷ ಎಚ್.ಪಿ. ಸ್ವರೂಪ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಎಸ್. ಪ್ರಕಾಶ್, ಜಿಪಂ ಯೋಜನಾಧಿಕಾರಿ ಚಂದ್ರಶೇಖರ್, ರುದ್ರೇಶ್ ಇತರರಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts