ಶೃಂಗೇರಿ ಕ್ಷೇತ್ರದಲ್ಲಿ 6.5 ಕೋಟಿ ರೂ. ಅವ್ಯವಹಾರ ಶಂಕೆ

ಬಾಳೆಹೊನ್ನೂರು: ಶೃಂಗೇರಿ ಕ್ಷೇತ್ರದಲ್ಲಿ ಕಳೆದ 11 ತಿಂಗಳಲ್ಲಿ ನಡೆದ ವಿವಿಧ ಕಾಮಗಾರಿಗಳಲ್ಲಿ ಗುಣಮಟ್ಟದ ಕೊರತೆ ಹಾಗೂ ಭ್ರಷ್ಟಾಚಾರ ನಡೆದಿರುವ ಶಂಕೆಯಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ತನಿಖೆ ನಡೆಸಬೇಕು ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ಒತ್ತಾಯಿಸಿದರು.

ಎನ್.ಆರ್.ಪುರ ತಾಲೂಕಿನ ಗಡಿಗೇಶ್ವರ-ಕಟ್ಟಿನಮನೆಯ ಡಾಂಬರ್ ರಸ್ತೆ ಕಾಮಗಾರಿ ಕಳಪೆಯಾಗಿದೆ. 1.75 ಕೋಟಿ ರೂ. ವೆಚ್ಚದಲ್ಲಿ ನಡೆದಿರುವ ಕಾಮಗಾರಿಯಲ್ಲಿ ರಸ್ತೆಗೆ ಹಾಕಿದ ಡಾಂಬರನ್ನು ಕೈಯಲ್ಲೇ ಕೀಳುವಷ್ಟರ ಮಟ್ಟಿಗೆ ಕಳಪೆಯಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.

ಗಡಿಗೇಶ್ವರ-ಕಟ್ಟಿನಮನೆ ರಸ್ತೆ ಕಾಮಗಾರಿ ಕಳಪೆಯಾಗಲು ಶಾಸಕರು, ಕಾಂಗ್ರೆಸ್ ಮುಖಂಡರೇ ಕಾರಣ. ಕಾಮಗಾರಿ ಕುರಿತು ಸ್ಥಳೀಯರು ಆಕ್ಷೇಪಿಸಿದಾಗ ಇಲ್ಲಿಗೆ ಪೊಲೀಸರನ್ನು ಕಳುಹಿಸಿ ಗ್ರಾಮಸ್ಥರನ್ನು ಬೆದರಿಸುವ ಕಾರ್ಯ ಕಾಂಗ್ರೆಸ್ ಮುಖಂಡರಿಂದ ನಡೆಯುತ್ತಿದೆ. ಕುದುರೆಗುಂಡಿಯಲ್ಲಿ ಪ್ರಕೃತಿ ವಿಕೋಪ ನಿಧಿಯಡಿ ರಸ್ತೆ ಬದಿಗೆ ನಿರ್ವಿುಸಬೇಕಾದ ತಡೆಗೋಡೆ ಕಾಮಗಾರಿಯನ್ನು ಶ್ರೀಮಂತ ವ್ಯಕ್ತಿಯೋರ್ವರ ತೋಟದೊಳಗೆ ಮುಖ್ಯರಸ್ತೆಯಿಂದ 300 ಅಡಿಗೂ ದೂರದಲ್ಲಿ ನಿರ್ವಿುಸಲಾಗಿದೆ ಆರೋಪಿಸಿದರು.

ರೈತರ ಹಣ ರಸ್ತೆಗೆ: ಕ್ಷೇತ್ರದ ಕಾಮಗಾರಿಗಳಲ್ಲಿ 6.5 ಕೋಟಿ ರೂ.ಗಿಂತ ಅಧಿಕ ಮೊತ್ತದ ಭ್ರಷ್ಟಾಚಾರ ನಡೆದಿದೆ. ಈ ಹಿಂದೆ ಕ್ಷೇತ್ರಕ್ಕೆ ಕೇಂದ್ರದಿಂದ ಪ್ರಕೃತಿ ವಿಕೋಪ ನಿಧಿಯಡಿ ಬಂದ ಹಣವನ್ನು ಶಾಸಕರು ರೈತರಿಗೆ ನೀಡಲು ಹಿಂದೇಟು ಹಾಕಿ ರಸ್ತೆ ಕಾಮಗಾರಿಗಳಿಗೆ ವಿನಿಯೋಗಿಸಲು ಸಿದ್ಧತೆ ನಡೆಸಿದ್ದರು. ನಾವು ಮೂರೂ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ರೈತರ ಖಾತೆಗೆ ಹಣ ಹಾಕುವಂತೆ ಒತ್ತಾಯಿಸಿದ ನಂತರ 15 ದಿನಗಳಲ್ಲಿ ಹಣ ಪಾವತಿಸಲಾಗಿದೆ ಎಂದು ಡಿ.ಎನ್.ಜೀವರಾಜ್ ಹೇಳಿದರು.

ಹಗಲು ದರೋಡೆ: ಶೃಂಗೇರಿ ಕ್ಷೇತ್ರದಲ್ಲಿ 11 ತಿಂಗಳಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಹಗಲು ದರೋಡೆ ನಡೆಸುತ್ತಿದ್ದಾರೆ ಎಂದು ಜೀವರಾಜ್ ಆರೋಪಿಸಿದರು. ಕಚೇರಿಗಳಲ್ಲಿ ಕಾಂಗ್ರೆಸ್​ನ ಏಜೆಂಟರು ತಲೆಯೆತ್ತಿದ್ದಾರೆ. ಅಧಿಕಾರಿಗಳು ಶಾಸಕರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಇದಕ್ಕಾಗಿ ಶಾಸಕರು ಹೋದಲೆಲ್ಲಾ ಅಧಿಕಾರಿಗಳನ್ನು ಹೊಗಳುತ್ತಿದ್ದಾರೆ.