ಶಿವಮೊಗ್ಗ: ವಿಧಾನಸೌಧದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಶಿವಮೊಗ್ಗದ ವ್ಯಕ್ತಿಯೊಬ್ಬರಿಗೆ 10 ಲಕ್ಷ ರೂ. ವಂಚಿಸಿದ ಆರೋಪದಲ್ಲಿ ಸರ್ಕಾರಿ ಶಾಲೆಯ ಸಹ ಶಿಕ್ಷಕನೊಬ್ಬನ ವಿರುದ್ಧ ಪ್ರಕರಣ ದಾಖಲಾಗಿದೆ.
ಶಿವಮೊಗ್ಗದ ವ್ಯಕ್ತಿಗೆ ವೆಂಕಟೇಶಮೂರ್ತಿ ಎಂಬಾತನ ಪರಿಚಯವಾಗಿತ್ತು. ಆತ ತಾನು ಬಿಬಿಎಂಪಿಯಲ್ಲಿ ಗುತ್ತಿಗೆದಾರ ಎಂದು ಪರಿಚಯಿಸಿಕೊಂಡಿದ್ದ. ಸ್ವಲ್ಪ ಸಮಯದ ಬಳಿಕ ವಿಧಾನಸೌಧದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿದ್ದ ವೆಂಕಟೇಶಮೂರ್ತಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಅಲ್ಲದೆ ಹಂತ ಹಂತವಾಗಿ 10 ಲಕ್ಷ ರೂ. ಪಡೆದಿದ್ದ. ಕೆಲಸದ ಕುರಿತು ವಿಚಾರಿಸಿದಾಗ ಇನ್ನಷ್ಟು ಸಮಯವಾಗಲಿದೆ ಎಂದು ತಿಳಿಸಿದ್ದ ಆತ ಬಳಿಕ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದ ಎಂದು ಆರೋಪಿಸಲಾಗಿದೆ.
ವೆಂಕಟೇಶಮೂರ್ತಿ ಕುರಿತು ಪರಿಶೀಲಿಸಿದಾಗ ಆತ ಸರ್ಕಾರಿ ಶಾಲೆಯೊಂದರಲ್ಲಿ ಸಹ ಶಿಕ್ಷಕನಾಗಿದ್ದಾನೆ. ಅಲ್ಲದೆ ಆತ ಶಾಲೆಗೂ ಗೈರಾಗಿದ್ದ ಎಂದು ತಿಳಿದು ಬಂತು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
