ಪೆರ್ಗಡೆಯವರ ಮರದ ಪ್ರತಿಮೆಗಳಿಗೆ ಹೊಸ ರೂಪ

<<ನಂದಳಿಕೆ ದೇಗುಲ ಮುಂಭಾಗ 21 ಮೂರ್ತಿಗಳ ಪ್ರದರ್ಶನ>>

ಹರಿಪ್ರಸಾದ್ ನಂದಳಿಕೆ, ಬೆಳ್ಮಣ್
ಐತಿಹಾಸಿಕ ನಂದಳಿಕೆ ಚಾವಡಿ ಅರಮನೆಯಲ್ಲಿ ಪಟ್ಟಾಭಿಷೇಕ ಹೊಂದಿ ಆಳ್ವಿಕೆ ನಡೆಸಿದ ಪೆರ್ಗಡೆಯವರ ಮರದ ಪ್ರತಿಮೆಗಳಿಗೆ ಬಣ್ಣ ಬಳೆದು ಹೊಸ ಸ್ವರೂಪ ನೀಡಲಾಗಿದೆ.
ಶಾಲಿವಾಹನ ಶಕ 1450ರಲ್ಲಿ ನಂದಳಿಕೆ ಚಾವಡಿಯಲ್ಲಿ ಅರಸಿಯಾಗಿ ಆಳ್ವಿಕೆ ನಡೆಸಿದ್ದ ಪಟ್ಟಾಭಿಷೇಕ ಹೊಂದಿದ್ದ ನಾಲ್ವರು ಪೆರ್ಗಡೆಯವರ ಸಹಿತ ಇತರ 17 ಮಂದಿಯ ಮರದ ಬೊಂಬೆಗಳಿಗೆ ಈ ಬಾರಿ ವಿಶೇಷ ಬಣ್ಣ ಬಳಿಯಲಾಗಿ ದೇಗುಲದ ಮುಂಭಾಗ ಪ್ರದರ್ಶನಕ್ಕೆ ಇಡಲಾಗಿದೆ. ಈ ಬೊಂಬೆಗಳು ನಂದಳಿಕೆ ಚಾವಡಿ ಅರಮನೆಯ ಹೆಗ್ಡೆಯವರ ಪರಂಪರೆ ಸಾರುವ ಬೊಂಬೆಗಳಾಗಿದ್ದು ಹೂವಯ್ಯ ಪೆರ್ಗಡೆ, ಎರಡೆ ಮಂಜಯ್ಯ ಪೆರ್ಗಡೆ, ಹಾಗೂ ಪೆರ್ಗಡೆಯವರ ಮಂತ್ರಿಗಳು, ಅಂಗರಕ್ಷಕರು, ದಾಸಿಯರು ಹಾಗೂ ನರ್ತಕಿಯರ ಸಹಿತ ಒಟ್ಟಾರೆ 21 ಮರದ ಮೂರ್ತಿಗಳಿಗೆ ಬಣ್ಣ ಬಳಿಯಲಾಗಿದೆ.
ಈ ಪೈಕಿ ಒಂದು ಮೂರ್ತಿಯ ಕೈ ಕಡಿದ ಸ್ಥಿತಿಯಲ್ಲಿದ್ದು ಆ ಪ್ರತಿಮೆ 2ನೇ ಮಂಜಯ್ಯ ಪೆರ್ಗಡೆಯವರದ್ದೆನ್ನಲಾಗಿದೆ. 1450ರಲ್ಲಿ ಅಧಿಕಾರ ನಡೆಸಿದ್ದ ಕಿನ್ಯಕ್ಕೆ ಹೆಗ್ಗಡತಿಯವರ ಬಳಿಕ ಯಾರಿಗೂ ಪಟ್ಟಬಂಧವಾದ ಉಲ್ಲೇಖ ಇಲ್ಲ.

ಮೂರ್ತಿಗಳಿಗೆ ಪಿಂಡಪ್ರದಾನ: ಈ ಎಲ್ಲ ಮರದ ಮೂರ್ತಿಗಳಿಗೆ ಪ್ರತಿ ವರ್ಷ ಮಹಾಲಯ ಅಮಾವಾಸ್ಯೆ ದಿನ ದೇಗುಲದ ನೈವೇದ್ಯದಿಂದ ಪಿಂಡ ಪ್ರದಾನ ಮಾಡಲಾಗುತ್ತದೆ. ಪಿತೃಗಳ ಸಾಲಿಗೆ ಸೇರಿಸುವ ಪರಂಪರೆಯೂ ಇದೆ. 21 ಮೂರ್ತಿಗಳಿಗೂ ಒಂದೇ ಹರಿವಾಣದಲ್ಲಿ ಪಿಂಡ ಪ್ರದಾನ ಮಾಡಲಾಗುವುದೆಂದು ದೇಗುಲದ ಪ್ರಬಂಧಕ ರವಿರಾಜ್ ಭಟ್ ತಿಳಿಸಿದ್ದಾರೆ.

ದೇವಳದಿಂದಲೇ ನಿರ್ವಹಣೆ:  ಎಲ್ಲ 21 ಮೂರ್ತಿಗಳ ನಿರ್ವಹಣೆ ದೇಗುಲದಿಂದಲೇ ನಡೆಯುತ್ತಿದ್ದು, ನಂದಳಿಕೆ ಚಾವಡಿ ಪರಂಪರೆಯ ಹೆಗ್ಡೆಯವರನ್ನು ನೆನಪಿಸುವ ಕಾರ್ಯವಾಗುತ್ತಿದೆ. ಎಲ್ಲ ಮೂರ್ತಿಗಳೂ ಆಕರ್ಷಣೀಯವಾಗಿವೆ. ಸಿರಿ ಜಾತ್ರೆಯ ಮೂಲಕ ನಂದಳಿಕೆ ಹೆಸರುವಾಸಿಯಾದರೆ ಈ ಸಿರಿ ಜಾತ್ರೆಯ ರೂವಾರಿಗಳಾದ ಹೆಗ್ಗಡೆ ಮನೆತನದವರ ಇರುವಿಕೆ ಸೂಚ್ಯವನ್ನು ಬೊಂಬೆಗಳ ಮೂಲಕ ತಿಳಿಯಪಡಿಸಲು ಪ್ರಯತ್ನಿಸಿದ್ದಾರೆ.