ಮಸೀದಿಗೆ ದಾರುಶಿಲ್ಪ, ಕುಸುರಿ ಸ್ಪರ್ಶ

 ಹೇಮನಾಥ್ ಪಡುಬಿದ್ರಿ

ಹಿಂದು ಕ್ಷೇತ್ರಗಳ ಮಾದರಿಯಲ್ಲಿ ಆಕರ್ಷಕ ಶೈಲಿಯ ಮರದ ಕುಸುರಿ ಕೆಲಸದಿಂದ ಮಜೂರು-ಮಲ್ಲಾರು ಬದ್ರಿಯಾ ಜುಮಾ ಮಸೀದಿ ಪುನಃನಿರ್ಮಾಣಗೊಂಡಿದೆ.
ಭಾರತೀಯ ವಾಸ್ತುವಿಗೆ ಹೊಂದಿಕೊಂಡು, ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಪರಿಸರದ ವಿನ್ಯಾಸ ವೈವಿಧ್ಯಗಳನ್ನು ಸ್ವೀಕರಿಸಿ ಮಸೀದಿ ಪುನಃನಿರ್ಮಿಸಲಾಗಿದೆ. ಕರಾವಳಿಯ ಯಾವುದೇ ಮಸೀದಿಯಲ್ಲಿ ಕಾಣಸಿಗದ ದಾರುಶಿಲ್ಪ ಮತ್ತು ಕುಸುರಿ ಕೆಲಸ ಇಲ್ಲಿದೆ. ಮಸೀದಿ ಸಂಪೂರ್ಣ ಹವಾ ನಿಯಂತ್ರಿತ ವ್ಯವಸ್ಥೆ ಒಳಗೊಂಡಿದೆ. ಮಜೂರಿನ ದಾರುಶಿಲ್ಪಿ ಹರೀಶ್ ಆಚಾರ್ಯ ದಾರುಶಿಲ್ಪ ಮತ್ತು ಕುಸುರಿ ಕೆಲಸ ಮಾಡಿದ್ದಾರೆ.

ಹಿಂದು-ಮುಸಲ್ಮಾನರಿಂದ ಮರ ಕೊಡುಗೆ: ಮಸೀದಿಯೊಳಗಿನ ದಾರು ಶಿಲ್ಪದ ಕುಸುರಿ ಕೆಲಸಗಳಿಗೆ ಸಂಪೂರ್ಣ ಸಾಗುವಾನಿ ಮರವನ್ನೇ ಬಳಸಲಾಗಿದೆ. ಇದಕ್ಕಾಗಿ 1000 ಸಿಎಫ್‌ಟಿಯಷ್ಟು ಮರ ಬಳಸಲಾಗಿದೆ. ಮಸೀದಿ ವ್ಯಾಪ್ತಿಯೊಳಗಿನ 51 ಮನೆಮಂದಿ 57 ಸಾಗುವಾನಿ ಮರಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಹಿಂದುಗಳು ಕೂಡ ತಮ್ಮ ಮನೆಯಲ್ಲಿ ಬೆಳೆಸಿದ ಸಾಗುವಾನಿ ಮರಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ಮಸೀದಿ ವ್ಯಾಪ್ತಿಯ ಜಮಾಅತ್, ಮಸೀದಿಯ ಅಂಗ ಸಂಸ್ಥೆಗಳು ಮತ್ತು ಹೊರ ಜಮಾಅತ್‌ನ ಸದಸ್ಯರು ಹಾಗೂ ಉದ್ಯಮಿಗಳು, ದಾನಿಗಳು ಕೂಡ ಸಹಕಾರ ನೀಡಿದ್ದಾರೆ.

ಬೇರೆಲ್ಲೂ ಕಾಣದ ದಾರುಶಿಲ್ಪ ಶೈಲಿ: ಶಿಲ್ಪಿ ಹರೀಶ್ ಆಚಾರ್ಯ ತಮ್ಮದೇ ಆದ ಕಲ್ಪನೆಯಲ್ಲಿ ಮಸೀದಿ, ಮಿನಾರ, ಗುಂಬಜ್‌ನ ಚಿತ್ರ ಬಿಡಿಸಿ, ಮಸೀದಿ ಆಡಳಿತ ಸಮಿತಿಗೆ ನೀಡಿದ್ದರು. ಇಸ್ಲಾಂ ಧರ್ಮಕ್ಕೆ ಸ್ವೀಕಾರಾರ್ಹವಾಗಿರುವ ಕಾರಣ, ಕುಸುರಿ ಕೆಲಸಕ್ಕೆ ಅನುಮತಿ ಲಭಿಸಿತು. ಮಸೀದಿ ಪ್ರವೇಶ ದ್ವಾರ ಸೇರಿದಂತೆ ಒಟ್ಟು 6 ದ್ವಾರಗಳನ್ನು ನಿರ್ಮಿಸಲಾಗಿದೆ. ಆರಾಧನಾ ಕೇಂದ್ರದಲ್ಲಿ ವಾಸ್ತುವಿಗೆ ಹೊಂದಿಕೊಂಡು 8 ಕಿಟಕಿಗಳನ್ನು ಅಳವಡಿಸಲಾಗಿದೆ. ಒಳಗೆ ಎರಡು ಬದಿಗಳಲ್ಲಿ ಕಂಬಗಳನ್ನು ನಿಲ್ಲಿಸಲಾಗಿದ್ದು, ದೇವಸ್ಥಾನಗಳಲ್ಲಿ ಕಾಣಸಿಗುವಂತೆ ಕರ್ಣ ಮುಚ್ಚಿಗೆ ಮಾದರಿ ದಾರುಶಿಲ್ಪದ ವೈಭವವಿದೆ.

ಇಸ್ಲಾಂ ಧರ್ಮಗುರುಗಳಿಂದ ಪ್ರಶಂಸೆ: ಮಸೀದಿ ಧರ್ಮಗುರು ಅಬ್ದುರ‌್ರಶೀದ್ ಸಖಾಫಿ ಅಲ್‌ಕಾಮಿಲ್, ಸಮಿತಿ ಅಧ್ಯಕ್ಷ ಎಂ.ಎಚ್.ಅಬ್ದುಲ್ ಹಮೀದ್, ಕಾರ್ಯದರ್ಶಿ ಮೊಹಮ್ಮದ್ ಫಾರೂಕ್ ಚಂದ್ರನಗರ ಮಾರ್ಗದರ್ಶನದಲ್ಲಿ, ಉದ್ಯಮಿ ಸಿರಾಜ್ ಪಾಟಿ ಮಸೀದಿ ನಿರ್ಮಾಣ ಮತ್ತು ಮಸೀದಿಯೊಳಗಿನ ದಾರುಶಿಲ್ಪದ ಕೆಲಸಕ್ಕೆ ಸಮಗ್ರ ಮಾಹಿತಿ ನೀಡಿದ್ದರು. ದಾರುಶಿಲ್ಪದ ಕೆತ್ತನೆಗೆ ಉಡುಪಿ ಜಿಲ್ಲಾ ಖಾಝಿ ಹಾಜಿ ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ಉಸ್ತಾದ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಹರೀಶ್ ಆಚಾರ್ಯ ಅವರಿಗೆ ಇದೀಗ ದೇಶ-ವಿದೇಶಗಳ ವಿವಿಧೆಡೆಗಳಲ್ಲಿರುವ ಮಸೀದಿಯಲ್ಲಿ ಈ ರೀತಿಯ ದಾರುಶಿಲ್ಪದ ಕೆತ್ತನೆಗೆ ಬೇಡಿಕೆ ಬಂದಿದೆ.

ದೇವಸ್ಥಾನಗಳಲ್ಲಿ ದಾರುಶಿಲ್ಪ ಕೆಲಸ ಮಾಡಿದ್ದೇನೆ. ಅಲ್ಲಿನ ಅನುಭವಗಳನ್ನು ಇಲ್ಲಿ ಬಳಸಿದ್ದೇನೆ. ಆದರೆ ಮಸೀದಿಯ ಕುಸುರಿ ಕೆಲಸ ಮಾಡಿರುವುದು ಇದೇ ಪ್ರಥಮ. ಈ ಕೆಲಸವನ್ನು ಮುಸ್ಲಿಂ ಸಮುದಾಯ ಯಾವ ರೀತಿ ಸ್ವೀಕರಿಸಲಿದೆ ಎಂಬ ಹೆದರಿಕೆ ಇತ್ತು. 10 ತಿಂಗಳ ನಿರಂತರ ಕೆಲಸಕ್ಕೆ ಪೂರ್ಣ ಸಹಕಾರ, ಪ್ರಶಂಸೆ ದೊರಕಿದೆ. ಉತ್ತಮ ಸಂಭಾವನೆ, ಗೌರವದ ಉಡುಗೊರೆಯೂ ಸಿಕ್ಕಿದೆ.
– ಹರೀಶ್ ಆಚಾರ್ಯ ಉಳಿಯಾರು, ದಾರುಶಿಲ್ಪಿ