ಆಡಿಯೋ ಪ್ರಕರಣದ ಎಸ್​ಐಟಿ ತನಿಖೆಯ ನಿರ್ಧಾರದಿಂದ ಹಿಂದೆ ಸರಿಯಲ್ಲ: ಸ್ಪೀಕರ್​ ಸ್ಪಷ್ಟ ನಿಲುವು

ಬೆಂಗಳೂರು: ಬಿಜೆಪಿ ನಡೆಸುತ್ತಿದೆ ಎನ್ನಲಾದ ಆಪರೇಷನ್​ ಕಮಲಕ್ಕೆ ಸಂಬಂಧಿಸಿದ ಆಡಿಯೋದಲ್ಲಿ ಸ್ಪೀಕರ್​ಗೇ 50 ಕೋಟಿ ನೀಡಲಾಗಿದೆ ಎನ್ನುವ ಸಂಭಾಷಣೆಯ ಸತ್ಯಾಸತ್ಯತೆ ಅರಿಯಲು ವಿಶೇಷ ತನಿಖಾ ತಂಡ ರಚಿಸುವ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪೀಕರ್​ ರಮೇಶ್​ ಕುಮಾರ್​ ಇಂದು ಸ್ಪಷ್ಟಪಡಿಸಿದ್ದಾರೆ.

ಕಲಾಪ ಆರಂಭಕ್ಕೂ ಮೊದಲು ವಿಧಾನಸೌಧದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಸ್ಪೀಕರ್​ ರಮೇಶ್​ ಕುಮಾರ್​ “ಎಸ್ಐಟಿ ತನಿಖೆ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಎಸ್ಐಟಿ ತನಿಖಾಧಿಕಾರಿಗಳು ಯಾರನ್ನು ಬೇಕಾದರೂ ವಿಚಾರಣೆಗೆ ಒಳಪಡಿಸಬಹುದು. ನಂತರ ಅವರು ನೇರವಾಗಿ ಸಭಾಧ್ಯಕ್ಷರಿಗೆ ವರದಿ ಸಲ್ಲಿಸುವ ಅಗತ್ಯವೂ ಇಲ್ಲ,” ಎಂದು ಅವರು ತಿಳಿಸಿದರು.

ಇನ್ನು ಕಾಂಗ್ರೆಸ್​ನ ನಾಲ್ವರು ಅತೃಪ್ತ ಶಾಸಕರ ಅನರ್ಹತೆಗೆ ಕಾಂಗ್ರೆಸ್​ ಸಲ್ಲಿಸಿರುವ ದೂರಿನ ಕುರಿತು ಮಾತನಾಡಿದ ಅವರು, ಅನರ್ಹತೆಗೆ ಸಂಬಂಧಿಸಿದಂತೆ ಇನ್ನೂ ಪ್ರಕ್ರಿಯೆ ಪ್ರಾರಂಭಿಸಿಲ್ಲ. ನಿನ್ನೆಯಷ್ಟೇ ಶಾಸಕಾಂಗ ಪಕ್ಷದ ನಾಯಕರು ಮನವಿ ಸಲ್ಲಿಸಿದ್ದಾರೆ. ಮನವಿ ಪ್ರತಿಯನ್ನು ಸಂಪೂರ್ಣ ಅಭ್ಯಾಸ ಮಾಡಬೇಕು. ಅಡ್ವೊಕೇಟ್ ಜನರಲ್ ಜತೆ ಚರ್ಚಿಸಬೇಕು. ನಂತರ ಸಂಬಂಧಿಸಿದ ಶಾಸಕರಿಗೆ ನೋಟಿಸ್ ಜಾರಿ ಮಾಡಿ ಅವರಿಂದ ವಿವರಣೆ ಪಡೆಯಬೇಕು. ಹೀಗಾಗಿ ವಿಧಾನ ಮಂಡಲ ಅಧಿವೇಶನ ಮುಗಿದ ಬಳಿಕ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು,”ಎಂದು ಸ್ಪೀಕರ್​ ತಿಳಿಸಿದರು.