More

    ಕ್ಷೇತ್ರ ಅರಸಿ ಬಂದವರಿಗೆ ಒಲಿದ ಪಟ್ಟ: ಕಮಲ ಅರಳದ ಕ್ಷೇತ್ರಕ್ಕೆ ಬಂದು ಗೆದ್ದ ಬೊಮ್ಮಾಯಿ..

    | ಪರಶುರಾಮ ಕೆರಿ ಹಾವೇರಿ

    ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ರಾಜನಾಥ್ ಸಿಂಗ್ ಕರೆಯ ಮೇರೆಗೆ 2008ರಲ್ಲಿ ಜನತಾ ಪರಿವಾರ ತೊರೆದು ಬಿಜೆಪಿ ಸೇರ್ಪಡೆಗೊಂಡ ಹುಬ್ಬಳ್ಳಿ ಮೂಲದ ಬಸವರಾಜ ಬೊಮ್ಮಾಯಿ, ವಿಧಾನಸಭೆ ಕ್ಷೇತ್ರ ಅರಸಿ ಶಿಗ್ಗಾಂವಿ ಕ್ಷೇತ್ರಕ್ಕೆ ಬಂದರು. ಹೀಗೆ ವಲಸೆ ಬಂದ ಅವರಿಗೆ 13 ವರ್ಷಗಳ ಅವಧಿಯಲ್ಲಿ ಸಿಎಂ ಪಟ್ಟ ಒಲಿದು ಬಂದಿದ್ದು ವಿಶೇಷ. ಆಗ ಕಾಂಗ್ರೆಸ್ ಪ್ರಾಬಲ್ಯವಿದ್ದ, ಕಮಲವೇ ಅರಳದ ಶಿಗ್ಗಾಂವಿ ಕ್ಷೇತ್ರವನ್ನು ಬಸವರಾಜ ಬೊಮ್ಮಾಯಿ ಆಯ್ಕೆ ಮಾಡಿಕೊಂಡಿದ್ದು ಅಚ್ಚರಿ ಮೂಡಿಸಿತ್ತು. ಚಾಣಾಕ್ಷ ನಡೆಯೊಂದಿಗೆ ಚುನಾವಣೆ ಎದುರಿಸಿ ಆಯ್ಕೆಯೂ ಆದರು. ರಾಜ್ಯದಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬಂದು ಜಲಸಂಪನ್ಮೂಲ ಸಚಿವರಾದರು. ಹಿಂದುಳಿದ ಪ್ರದೇಶ ಹಾಗೂ ಬರದ ನಾಡಾಗಿದ್ದ ಶಿಗ್ಗಾಂವಿ-ಸವಣೂರ ಕ್ಷೇತ್ರಕ್ಕೆ ಶಿಗ್ಗಾಂವಿ ಏತ ನೀರಾವರಿ ಯೋಜನೆ ತಂದು ಕ್ಷೇತ್ರದ ಜನರ ಪಾಲಿಗೆ ಆಧುನಿಕ ಭಗೀರಥರಾದರು. ಇದರ ಫಲವಾಗಿ ಕ್ಷೇತ್ರದ ಜನರು ಸತತವಾಗಿ 3 ಬಾರಿ ವಿಧಾನಸಭೆಗೆ ಆಯ್ಕೆಗೊಳಿಸಿದರು.

    ಸವಾಲು ಮೆಟ್ಟಿ ನಿಂತ ಚತುರ: ಅಲ್ಪಸಂಖ್ಯಾತ ಮತಗಳು ಪ್ರಾಬಲ್ಯ ಹೊಂದಿದ್ದ ಕ್ಷೇತ್ರದಲ್ಲಿ ಬೊಮ್ಮಾಯಿ ಅಭಿವೃದ್ಧಿ ಮಂತ್ರದೊಂದಿಗೆ ಕ್ಷೇತ್ರದ ಜನರ ಮನಸ್ಸಿನಲ್ಲಿ ಮನೆ ಮಾಡಿದರು. ಚುನಾವಣೆ ಸಮಯದಲ್ಲಿ ಎಷ್ಟೇ ಸವಾಲುಗಳು ಎದುರಾದರೂ ಅವುಗಳನ್ನು ದಿಟ್ಟತನದಿಂದ ಹಾಗೂ ತಮ್ಮದೇ ಆದ ಚಾಣಕ್ಯ ನೀತಿಯಿಂದ ಎದುರಿಸಿ, ಉತ್ತರ ಕರ್ನಾಟಕದ ಹೆಬ್ಬಾಗಿಲಿನಲ್ಲಿ ಕಮಲ ಅರಳಿಸಲು ಟೊಂಕ ಕಟ್ಟಿ ನಿಂತರು.

    ಬಿಎಸ್​ವೈ ಆಪ್ತ: ಸದಾ ಬಿಎಸ್​ವೈ ಅವರೊಂದಿಗೆ ಕಾಣಿಸಿ ಕೊಳ್ಳುತ್ತಿದ್ದ ಬೊಮ್ಮಾಯಿ, ಶಿಗ್ಗಾಂವಿ ಕ್ಷೇತ್ರಕ್ಕೆ ಅನುದಾನದ ಮಹಾಪೂರವನ್ನೇ ಹರಿಸಿದರು. ರಾಜಕೀಯ ಕುಟುಂಬದಿಂದ ಬಂದಿದ್ದ ಇವರಿಗೆ ರಾಜಕೀಯದ ಎಲ್ಲ ಪಟ್ಟುಗಳು ಗೊತ್ತಿದ್ದವು. ಅವುಗಳನ್ನು ಬಳಸಿಕೊಂಡು 2008ರಲ್ಲಿ ಬಿಜೆಪಿ ಸರ್ಕಾರದಲ್ಲಿ ಪೂರ್ಣಾವಧಿಗೆ ಜಲಸಂಪನ್ಮೂಲ ಸಚಿವರಾಗಿದ್ದರು.

    ಶಿಗ್ಗಾಂವಿ ಕ್ಷೇತ್ರದಿಂದ 2ನೇ ಮುಖ್ಯಮಂತ್ರಿ

    ಸಂತ ಶಿಶುನಾಳ ಶರೀಫ, ಭಕ್ತ ಕನಕದಾಸರು ಜನ್ಮ ತಾಳಿದ, ಭಾವೈಕ್ಯತೆಗೆ ಹೆಸರಾದ ಶಿಗ್ಗಾಂವಿ ಕ್ಷೇತ್ರಕ್ಕೆ ಇದೀಗ 2ನೇ ಬಾರಿಗೆ ಮುಖ್ಯಮಂತ್ರಿ ಸ್ಥಾನದ ಅದೃಷ್ಟ ಒಲಿದಿದೆ. ಹಾವೇರಿ ಜಿಲ್ಲೆಯಾಗಿ ಎರಡು ದಶಕಗಳು ಕಳೆದರೂ ಒಬ್ಬರೂ ಮುಖ್ಯಮಂತ್ರಿ ಸ್ಥಾನಕ್ಕೇರಿರಲಿಲ್ಲ. ಇದೀಗ ಜಿಲ್ಲೆಯಾದ ನಂತರ ಬಸವರಾಜ ಬೊಮ್ಮಾಯಿ ಮೊದಲ ಸಿಎಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಇದಕ್ಕೂ ಮೊದಲು ವಿಭಜನೆಪೂರ್ವ ಧಾರವಾಡ ಜಿಲ್ಲೆಯಲ್ಲಿ ಈಗಿನ ಹಾವೇರಿ ಜಿಲ್ಲೆಯೂ ಸೇರ್ಪಡೆಯಾಗಿತ್ತು. ಆ ಸಮಯದಲ್ಲಿ ಶಿಗ್ಗಾಂವಿ ಕ್ಷೇತ್ರದಿಂದ 1967ರಲ್ಲಿ ಎಸ್.ನಿಜಲಿಂಗಪ್ಪ ಅವಿರೋಧ ಆಯ್ಕೆಯಾಗಿ ಸಿಎಂ ಆಗಿದ್ದರು. ಹೀಗಾಗಿ ಶಿಗ್ಗಾಂವಿ ಕ್ಷೇತ್ರದಿಂದ ಸಿಎಂ ಸ್ಥಾನಕ್ಕೇರಿದವರಲ್ಲಿ ಬಸವರಾಜ ಬೊಮ್ಮಾಯಿ ಎರಡನೆಯವರಾಗಿದ್ದಾರೆ. ಇವರಿಬ್ಬರೂ ವಲಸಿಗರೇ ಎಂಬುದು ವಿಶೇಷ. ಎಸ್. ನಿಜಲಿಂಗಪ್ಪ ಚಿತ್ರದುರ್ಗ ಜಿಲ್ಲೆಯಿಂದ ವಲಸೆ ಬಂದು ಇಲ್ಲಿ ಶಾಸಕರಾಗಿದ್ದರು. ಅದೇ ರೀತಿ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿಯವರು. ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿ, ಜಗದೀಶ ಶೆಟ್ಟರ್ ವಿರುದ್ಧ ಸೋಲನುಭವಿಸಿದ್ದರು. 2008ರಲ್ಲಿ ಬಿಜೆಪಿ ಸೇರ್ಪಡೆಯಾಗಿ ಶಿಗ್ಗಾಂವಿಗೆ ವಲಸೆ ಬಂದಿದ್ದರು.

    ಕೆಜೆಪಿಗೆ ಹೋಗಲಿಲ್ಲ, ಬಿಜೆಪಿಗೆ ಕರೆ ತಂದರು: ಬಿಜೆಪಿಯಿಂದ ಮುನಿದ ಯಡಿಯೂರಪ್ಪ ಕೆಜೆಪಿ ಕಟ್ಟಿದ ಸಂದರ್ಭದಲ್ಲಿ ಆ ಪಕ್ಷಕ್ಕೆ ಹೋಗುತ್ತಾರೆಂಬ ನಿರೀಕ್ಷೆ ಇದ್ದರೂ, ಕೊನೇ ಘಳಿಗೆಯಲ್ಲಿ ಬಿಜೆಪಿಯಲ್ಲಿಯೇ ಬಸವರಾಜ ಬೊಮ್ಮಾಯಿ ಉಳಿದಿದ್ದು, ಅವರಿಗೆ ಈಗ ಬಹು ದೊಡ್ಡ ವರವಾಗಿದೆ. ಅಷ್ಟೇ ಅಲ್ಲ, ಮುನಿಸಿಕೊಂಡು ಆಚೆ ಹೋಗಿದ್ದ ಯಡಿಯೂರಪ್ಪರನ್ನು ಮತ್ತೆ ಬಿಜೆಪಿಗೆ ಕರೆದುಕೊಂಡು ಬರುವಲ್ಲಿ ಬೊಮ್ಮಾಯಿ ಅವರ ಪಾತ್ರವೂ ದೊಡ್ಡದಿತ್ತು ಎನ್ನುವುದನ್ನು ಮರೆಯುವಂತಿಲ್ಲ.

    ಹೊಸ ಮುಖಗಳಿಗೆ ಸಂಪುಟದಲ್ಲಿ ಸ್ಥಾನ

    ಸಿಎಂ ಆಯ್ಕೆ ಕಗ್ಗಟ್ಟಿನ ಬೆನ್ನ ಹಿಂದೆಯೇ ಬಿಜೆಪಿ ಹೈಕಮಾಂಡ್​ಗೆ ನೂತನ ಸಂಪುಟ ರಚನೆಯ ತಲೆ ನೋವು ಶುರುವಾಗಿದೆ. ಮುಂಬರುವ ಲೋಕಸಭೆ ಚುನಾವಣೆ ಮತ್ತಿತರ ಲೆಕ್ಕಾಚಾರದ ಮೇಲೆ ಅನೇಕ ಸಚಿವರು ಸ್ಥಾನ ಕಳೆದುಕೊಳ್ಳುವ ಸಾಧ್ಯತೆಗಳಿವೆ. ಕೆಲವೇ ಕೆಲವು ಸಚಿವರನ್ನು ಬಿಟ್ಟರೆ ವಲಸಿಗರಲ್ಲೂ ಆತಂಕ ಶುರುವಾಗಿದೆ. ಯಡಿಯೂರಪ್ಪ ಕೊಟ್ಟ ಮಾತಿನಂತೆ ನಡೆದುಕೊಂಡು ವಲಸಿಗರಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸಿದ್ದರು. ಈಗ ಆ ಇರಾದೆ ಹೈಕಾಂಡ್​ಗೆ ಇದ್ದಂತಿಲ್ಲ. ಹಾಗಾಗಿ ವಲಸಿಗರ ಪೈಕಿ ಕೆಲವರು ಸಚಿವ ಸ್ಥಾನ ಕಳೆದುಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಹೊಸ ಮುಖಗಳಿಗೆ ಅವಕಾಶ ಕೊಡಬೇಕು. ವಿಶೇಷವಾಗಿ ಯುವಕರಿಗೆ ಪ್ರಾತಿನಿಧ್ಯ ಕಲ್ಪಿಸಬೇಕು. ಆ ಮೂಲಕ ಪಕ್ಷಕ್ಕೆ ಹೊಸ ವರ್ಚಸ್ಸು ತರಬೇಕು ಎಂಬ ದೃಷ್ಟಿಯಿಂದ ಹೊಸ ಮುಖಗಳಿಗೆ ಹೈಕಮಾಂಡ್ ಮಣೆ ಹಾಕುವ ಸಾಧ್ಯತೆಗಳು ದಟ್ಟವಾಗಿವೆ. ನೂತನ ಸಂಪುಟದಲ್ಲಿ ಕನಿಷ್ಠ 10 ಮಂದಿಗೆ ಸಚಿವರಾಗುವ ಭಾಗ್ಯ ಸಿಗಲಿದೆ ಎಂದು ಹೇಳಲಾಗುತ್ತಿದೆ.

    4 ಸ್ಥಾನ ಖಾಲಿ ಉಳಿಸಲು ನಿರ್ಧಾರ?: ಸಿಎಂ ಸೇರಿ 30 ಜನರಿಗೆ ಸಚಿವ ಸ್ಥಾನ ನೀಡಿ 4 ಸ್ಥಾನ ಖಾಲಿ ಉಳಿಸಿಕೊಳ್ಳಲು ಹೈಕಮಾಂಡ್ ಚಿಂತನೆ ನಡೆಸಿದೆ. ಒತ್ತಡದ ಮೇಲೆ ಈ ಸಂಖ್ಯೆ ಏರುಪೇರಾಗಲಿದೆ ಎನ್ನಲಾಗಿದೆ.

    ಯಾರು ಸೇಫ್?: ವಲಸಿಗರ ಪೈಕಿ ಬಿ.ಸಿ.ಪಾಟೀಲ್, ಬೈರತಿ ಬಸವರಾಜ, ಕೆ.ಸುಧಾಕರ್, ಆನಂದ್ ಸಿಂಗ್ ಸ್ಥಾನ ಉಳಿಸಿಕೊಳ್ಳುವುದು ಬಹುತೇಕ ಖಚಿತವಾಗಿದ್ದು, ಉಳಿದ ವಲಸಿಗರ ಸ್ಥಿತಿ ಡೋಲಾಯಮಾನವಾಗಿದೆ. ಪಕ್ಷಕ್ಕೆ ಕಟಿಬದ್ಧವಾಗಿ ದುಡಿಯವ ಸಾಮರ್ಥ್ಯವುಳ್ಳ, ಯುವ ಹಾಗೂ ಸಂಘಟನಾ ಚತುರತೆವುಳ್ಳವರಿಗೆ ಹೈಕಮಾಂಡ್ ಮಣೆ ಹಾಕಲು ಕಾರ್ಯತಂತ್ರ ರೂಪಿಸಿದೆ.

    ಇಬ್ಬರು ಮಹಿಳೆಯರಿಗೂ ಅವಕಾಶ: ಯಡಿಯೂರಪ್ಪ ಸಂಪುಟದಲ್ಲಿ ಶಶಿಕಲಾ ಜೊಲ್ಲೆ ಒಬ್ಬರೇ ಮಹಿಳಾ ಸಚಿವರಿದ್ದರು. ಈಗ ಇಬ್ಬರು ಮಹಿಳೆಯರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿ, ಮಹಿಳಾ ಮತದಾರರ ಓಲೈಕೆಗೆ ಹೈಕಮಾಂಡ್ ಆಲೋಚಿಸಿದೆ ಎನ್ನಲಾಗಿದೆ. ಆ ಪ್ರಕಾರ, ಪೂರ್ಣಿಮಾ ಶ್ರೀನಿವಾಸ್, ರೂಪಾಲಿ ನಾಯ್್ಕ ಸಚಿವರಾಗುವ ಸಾಧ್ಯತೆಗಳಿವೆ. ಜೊಲ್ಲೆ ವಿರುದ್ಧ ಮೊಟ್ಟೆ ಖರೀದಿ ಆರೋಪ ಕೇಳಿ ಬಂದಿದೆ.

    ಹೊಸ ಮುಖಗಳು ಯಾವುವು?: ಪಿ.ರಾಜೀವ್, ಹಾಲಪ್ಪ ಆಚಾರ್, ಅರಗ ಜ್ಞಾನೇಂದ್ರ, ದತ್ತಾತ್ರೇಯ ಪಾಟೀಲ್ ರೇವೂರ, ಪ್ರೀತಂ ಗೌಡ, ಅಪ್ಪಚ್ಚು ರಂಜನ್, ಎಂ.ಪಿ.ಕುಮಾರ ಸ್ವಾಮಿ ಅಥವಾ ನೆಹರು ಓಲೇಕಾರ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಎಸ್.ಎ. ರವೀಂದ್ರನಾಥ್, ಸೋಮಶೇಖರ ರೆಡ್ಡಿ ಹೊಸ ಸಚಿವರಾಗಿ ಸಂಪುಟ ಸೇರಲಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

    ಕ್ಷೇತ್ರ ಅರಸಿ ಬಂದವರಿಗೆ ಒಲಿದ ಪಟ್ಟ: ಕಮಲ ಅರಳದ ಕ್ಷೇತ್ರಕ್ಕೆ ಬಂದು ಗೆದ್ದ ಬೊಮ್ಮಾಯಿ..
    ನೂತನ ಸಿಎಂ ಆಗಿ ಆಯ್ಕೆಯಾದ ಬಸವರಾಜ ಬೊಮ್ಮಾಯಿ ಅವರಿಗೆ ಬಾಳೆಹೊನ್ನೂರು ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಶುಭ ಕೋರಿದ್ದು, ಯಡಿಯೂರಪ್ಪ ಮಾಡಿರುವ ಅಭಿವೃದ್ಧಿ ಕಾರ್ಯ ಗಳನ್ನು ಮುಂದುವರಿಸಿಕೊಂಡು ಹೋಗುವಂತೆ ಸಲಹೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts