ನರಗುಂದ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಲ್ಲಿ ತಾಲೂಕಿನ ಕಲ್ಲಾಪೂರದಲ್ಲಿ ತಾಲೂಕು ಮಹಿಳಾ ವಿಚಾರಗೋಷ್ಠಿ ಜರುಗಿತು.
ಕೊಪ್ಪಳ ಗ್ರಾಮಾಭಿವೃದ್ಧಿ ಸಂಸ್ಥೆ ನಿರ್ದೇಶಕ ಚಂದ್ರಶೇಖರ ಜೆ. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸ್ವಸಹಾಯ ಸಂಘಗಳು ಗುಣಮಟ್ಟ ಕಾಯ್ದುಕೊಂಡು ಯಶಸ್ಸು ಪಡೆಯಬೇಕಾಗಿದೆ. ಗ್ರಾಮೀಣ ಮಹಿಳೆಯರು ಮತ್ತು ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರನ್ನು ಸಂಘಟಿಸಿ ಅವರಿಗೆ ಶಿಕ್ಷಣ, ಆರೋಗ್ಯ, ಅವರ ಮಕ್ಕಳ ಲಾಲನೆ, ಪಾಲನೆ, ವ್ಯವಹಾರ ಜ್ಞಾನ ಮತ್ತು ಮಹಿಳಾ ಸಬಲೀಕರಣಗೊಳಿಸಲು ಮಹಿಳಾ ಜ್ಞಾನವಿಕಾಸ ರಚನೆ ಮಾಡಲಾಗಿದೆ ಎಂದು ತಿಳಿಸಿದರು.
ತಾಪಂ ಮಾಜಿ ಅಧ್ಯಕ್ಷ ಪ್ರಕಾಶಗೌಡ ತಿರಕನಗೌಡ್ರ, ಕಲ್ಲಾಪೂರ ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಯಲ್ಲಪ್ಪಗೌಡ ಶಿವಪೂರ ಮಾತನಾಡಿದರು. ವಾಣಿಶ್ರೀ ಆರ್. ‘ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ’ ಹಾಗೂ ನ್ಯಾಯವಾದಿ ಎಸ್.ಕೆ. ಹರಪನಳ್ಳಿ ‘ಮಹಿಳೆ ಮತ್ತು ಕಾನೂನು’ ಕುರಿತು ಉಪನ್ಯಾಸ ನೀಡಿದರು.
ಶಿರೋಳ ಗ್ರಾಪಂ ಅಧ್ಯಕ್ಷೆ ಹನುಮವ್ವ ಹಿರೇಮನಿ ಅಧ್ಯಕ್ಷತೆ ವಹಿಸಿದ್ದರು. ಧಗ್ರಾಯೋ ಜಿಲ್ಲಾ ನಿರ್ದೇಶಕ ಯೋಗೇಶ ಎ., ತಾಲೂಕು ಯೋಜನಾಧಿಕಾರಿ ಜಗದೀಶ ಬಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಲಾಭಾಂಶ ಪಡೆದುಕೊಂಡ ಕೆಲ ಸ್ವಸಹಾಯ ಸಂಘಗಳ ಸದಸ್ಯರು ಹಾಗೂ ಸಾಧಕ ಮಹಿಳೆಯರನ್ನು ಗೌರವಿಸಲಾಯಿತು. ಗುರುರಾಜ ಬೆಳಗಲಿ ಕಾರ್ಯಕ್ರಮ ನಿರ್ವಹಿಸಿದರು.