ಮೈಸೂರು: ದೇಶಕ್ಕೆ ಸ್ವಾತಂತ್ರೃ ದೊರೆತು ಏಳು ದಶಕಗಳು ಕಳೆದರೂ ಇಂದಿಗೂ ಬಾಲ್ಯ ವಿವಾಹ, ಲೈಗಿಂಕ ದೌರ್ಜನ್ಯ, ಅತ್ಯಾಚಾರ, ಮಕ್ಕಳು ಶಾಲೆ ತೊರೆಯುತ್ತಿರುವುದನ್ನು ಕಾಣುತ್ತಿದ್ದೇವೆ. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಾದರೆ ಮಕ್ಕಳಿಗೆ ಶಿಕ್ಷಣ ನೀಡುವುದು ಅಗತ್ಯ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಎಸ್.ಮಂಜು ಹೇಳಿದರು.
ನಗರದ ಪುರಭವನದ ಆವರಣದಲ್ಲಿ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ (ಆರ್‌ಎಲ್‌ಎಚ್‌ಪಿ), ಧ್ವನಿ ಮಹಿಳಾ ಒಕ್ಕೂಟ ಗುರುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಯೊಂದು ಪಾಲಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ತಮ್ಮ ಕೌಟುಂಬಿಕ ಸಮಸ್ಯೆಗಳನ್ನು ಬದಿಗಿಟ್ಟು ಮಕ್ಕಳ ಶಿಕ್ಷಣವನ್ನೇ ಪ್ರಧಾನವಾಗಿ ಪರಿಗಣಿಸಬೇಕು ಎಂದು ಕರೆ ನೀಡಿದರು.
ನಾನು ಪಿಯುಸಿ ಪೂರ್ಣಗೊಳಿಸಿದ ಸಂದರ್ಭ ನನಗೆ ಬಾಲ್ಯ ವಿವಾಹ ಮಾಡಿಸಲಾಯಿತು. ನನ್ನ ಗಂಡನ ಬಳಿ ನಾನು ಓದಬೇಕು ಎಂದು ಕೇಳಿಕೊಂಡ ಸಂದರ್ಭ ಅವರು ಬೆಂಬಲ ನೀಡಿದರು. ನಂತರ ನಾನು ಕಾನೂನು ಪದವಿ ಪಡೆದು ಈಗ ವಕೀಲಳಾಗಿ ಸೇವೆ ಸಲ್ಲಿಸುತ್ತಿದ್ದೇನೆ. ನನಗೆ ಪಾಲಕರು ಉತ್ತಮ ಶಿಕ್ಷಣ ಕೊಡಿಸಿದ್ದರೆ ಇನ್ನೂ ಎತ್ತರಕ್ಕೆ ಹೋಗುತ್ತಿದ್ದೆನೇನೋ ಎಂದರು.
ಹೆಣ್ಣು ಮಕ್ಕಳು ನಾಲ್ಕು ಗೋಡೆಗಳಿಗೆ ಸೀಮಿತವಾಗಬೇಡಿ. ಪಾಲಕರು ಸರಿಯಾಗಿ ಶಿಕ್ಷಣ ಕೊಡಿಸಿದರೆ ಮಹಿಳೆರು ಅಬಲೆರಾಗದೇ ಸಬಲರಾಗುತ್ತಾರೆ. ಮಹಿಳಾ ದಿನಾಚರಣೆ ಕೇವಲ ಆಚರಣೆಗೆ ಸೀಮಿತವಾಗಬಾರದು. ಪ್ರತಿ ದಿನ ಮಹಿಳಾ ದಿನಾಚರಣೆ ಆಚರಿಸಿಕೊಳ್ಳಬೇಕು ಎಂದು ಹೇಳಿದರು.
ಪತ್ರಿಕೋದ್ಯಮಿ ರಶ್ಮಿ ಕೋಟಿ, ಧ್ವನಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ವಸಂತ, ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಅರ್ಥಶಾಸ್ತ್ರ ಪ್ರಾಧ್ಯಾಪಕಿ ಡಾ.ಎಂ.ಇಂದಿರಾ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಬಿ.ಎನ್.ನಾಗೇಂದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಆರ್.ರೋಹಿತ್, ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ ನಿರ್ದೇಶಕಿ ಸರಸ್ವತಿ ಇದ್ದರು.
