ಕೂಡ್ಲಿಗಿ: ತಾಲೂಕಿನ ವಿರುಪಾಪುರ ಗ್ರಾಮದ ಬಯಲಾಟ ರಂಗ ಕಲಾವಿದೆ ಬಿ. ಗಂಗಮ್ಮ ಅವರಿಗೆ ಬಯಲಾಟ ಅಕಾಡೆಮಿಯಿಂದ 2024-25ನೇ ಸಾಲಿನ ಗೌರವ ಪ್ರಶಸ್ತಿ ಲಭಿಸಿದೆ.
ಕಾಡಪ್ಪ, ಭರಮಕ್ಕ ಅವರ ಪುತ್ರಿಯಾದ 64 ವರ್ಷದ ಗಂಗಮ್ಮ ಅವರು, ತಮ್ಮ 16ನೇ ವಯಸ್ಸಿನಿಂದಲೇ ಬಯಲಾಟಗಳಲ್ಲಿ ಅಭಿನಯಿಸಲು ಆರಂಭಿಸಿದ್ದರು. ಗಂಗಮ್ಮ ಅವರು ಐತಿಹಾಸಿಕ, ಸಾಮಾಜಿಕ, ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ.
ಆದರೆ ಅವರು ಮುಖ್ಯವಾಗಿ ಬಯಲಾಟದ ಪಾತ್ರಗಳಲ್ಲಿ ವಿಜೃಂಭಿಸಿ ರಾಜ್ಯಾದ್ಯಂತ ಹೆಸರು ಮಾಡಿದ್ದಾರೆ. ತಾಲೂಕಿನ ಹಿರಿಯ ರಂಗ ಕಲಾವಿದೆಯರಲ್ಲಿ ಒಬ್ಬರಾಗಿರುವ ಗಂಗಮ್ಮ ಅವರು ಕಿರಿಯರಿಗೆ ಮಾರ್ಗದರ್ಶನ ಮಾಡುವುದರ ಜತೆಗೆ ಮಹಿಳೆಯರದೇ ಬಯಲಾಟ ತಂಡ ಕಟ್ಟಿಕೊಂಡು ರಾಜ್ಯದ ಅನೇಕ ಕಡೆ ಹಾಗೂ ಪಕ್ಕದ ಆಂಧ್ರದಲ್ಲಿಯೂ ಬಯಲಾಟ ಪ್ರದರ್ಶನಗಳನ್ನು ಮಾಡಿದ್ದಾರೆ.
ಹಿಂದುಳಿದ ತಾಲೂಕಿನ ಗ್ರಾಮೀಣ ಪ್ರದೇಶದ ಬಯಲಾಟ ರಂಗ ಕಲಾವಿದೆಯನ್ನು ಗುರುತಿಸಿ ಈ ಸಾಲಿನ ಬಯಲಾಟ ಅಕಾಡೆಮಿ ಪ್ರಶಸ್ತಿ ನೀಡಿರುವುದು ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿಗೆ ಹೆಮ್ಮೆಯಾಗಿದೆ.
ನನ್ನಂತಹ ಗ್ರಾಮೀಣ ಪ್ರತಿಭೆಯನ್ನು ಗುರುತಿಸಿ ಬಯಲಾಟ ಆಕಾಡೆಮಿ ಪ್ರಶಸ್ತಿ ನೀಡಿರುವುದು ಸಂತೋಷವಾಗಿದ್ದು, ರಂಗಭೂಮಿಗೆ ಸಲ್ಲಿಸಿದ ಸೇವೆಗೆ ಸಂದ ಗೌರವ ಎಂದು ಬಿ. ಗಂಗಮ್ಮ ಪ್ರಕ್ರಿಯಿಸಿದ್ದಾರೆ.