ಬಯಲು ಶೌಚ ಮುಕ್ತ ಜಿಲ್ಲೆ ನನ್ನ ಸಾಧನೆ

ಬಾಗಲಕೋಟೆ: ಬಯಲು ಶೌಚಕ್ಕೆ ಹೋಗುವುದು ಮಹಿಳೆಯರಿಗೆ ಅಪಮಾನ. ಇದೇ ಕಾರಣಕ್ಕೆ ನಾನು ಮಹಿಳೆಯಾಗಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಗಿದ್ದಾಗ ಜಿಲ್ಲೆಯನ್ನು ಸಂಪೂರ್ಣ ಬಯಲು ಶೌಚ ಮುಕ್ತ ಮಾಡಿದ್ದು ನನ್ನ ಸಾಧನೆ. ಇದರ ಜತೆಗೆ ಜನಪರವಾದ ಗ್ರಾಮ ವಾಸ್ತವ್ಯ ಗ್ರಾಮೀಣ ಪ್ರದೇಶದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳೇ ನನ್ನ ಗೆಲುವಿಗೆ ಶ್ರೀರಕ್ಷೆಯಾಗಿವೆ ಎಂದು ಕಾಂಗ್ರೆಸ್ ಅಭ್ಯರ್ಥಿ ವೀಣಾ ಕಾಶಪ್ಪನವರ ಹೇಳಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಕಾರ್ಯ ನಿರತ ಪತ್ರಕರ್ತರ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನ್ನ ಕಾರ್ಯ ಕ್ಷಮತೆ ಗಮನಿಸಿ ಕೇಂದ್ರ ಸರ್ಕಾರ ಸ್ವಚ್ಛ ಭಾರತ ರಾಯಭಾರಿಯಾಗಿ ನೇಮಕ ಮಾಡಿತ್ತು. ಸ್ವಚ್ಛ ಭಾರತ ಕೇಂದ್ರದ ಯೋಜನೆ ಎಂದು ಹೇಳುವ ಸಂಸದ ಪಿ.ಸಿ. ಗದ್ದಿಗೌಡರ ಅವರು, ಜಿಲ್ಲೆಯಲ್ಲಿ ಒಂದೇ ಒಂದು ಶೌಚಗೃಹ ಕಟ್ಟಿಸಿಲ್ಲ. ಜಾಗೃತಿಯಂತೂ ದೂರದ ಮಾತು ಎಂದು ಟೀಕಿಸಿದರು.

ಭಾಷಣದಿಂದ ಅಭಿವೃದ್ಧಿ ಆಗಲ್ಲ
ಪ್ರಧಾನಮಂತ್ರಿ ನರೇಂದ್ರ ಮೋದಿ ಒಂದು ಗಂಟೆ ಭಾಷಣ ಮಾಡಿದರೆ ಜಿಲ್ಲೆಯ ಅಭಿವೃದ್ಧಿಯಾಗಲ್ಲ. ಐದು ವರ್ಷ ಇಲ್ಲೇ ಇದ್ದು ಅಭಿವೃದ್ಧಿ ಮಾಡುವವರನ್ನು ಆಯ್ಕೆ ಮಾಡಿ. 15 ವರ್ಷದಿಂದ ಸಂಸದರಾಗಿರುವ ಪಿ.ಸಿ. ಗದ್ದಿಗೌಡರ ಏನು ಅಭಿವೃದ್ಧಿ ಮಾಡಿದ್ದಾರೆ. ಜಿಲ್ಲೆಯ ಜನರಿಗೆ ಸಿಗುವುದು ಕೂಡ ಅಪರೂಪ. ನಾನು ಅಧಿಕಾರಕ್ಕೋಸ್ಕರ ಚುನಾವಣೆಗೆ ನಿಂತಿಲ್ಲ. ಜಿಪಂ ಅಧ್ಯಕ್ಷೆಯಾಗಿದ್ದಾಗ ಜಿಲ್ಲೆಯ 700ಕ್ಕೂ ಹೆಚ್ಚು ಗ್ರಾಮ, ನಗರ ಪ್ರದೇಶಗಳಿಗೆ ಭೇಟಿ ನೀಡಿ ಖುದ್ದು ಸಮಸ್ಯೆ ಆಲಿಸಿದ್ದೇನೆ. ಕೋಟೆನಾಡಿನ ಸಮಗ್ರ ಅಭಿವೃದ್ಧಿಗೆ ಕನಸು ಕಟ್ಟಿಕೊಂಡಿದ್ದೇನೆ. ಕ್ಷೇತ್ರದ ಮತದಾರರು ಯಾರದೋ ಮುಖ ನೋಡಿ ಮತ ಹಾಕಬೇಡಿ. ತಮ್ಮನ್ನು ನೇರವಾಗಿ ಭೇಟಿಯಾಗುವ, ಸಂಸತ್‌ನಲ್ಲಿ ಈ ಭಾಗದ ಬಗ್ಗೆ ಧ್ವನಿ ಎತ್ತುವವರಿಗೆ ಅವಕಾಶ ಕೊಡಿ. ಉತ್ತಮ ಶಿಕ್ಷೃಣ, ಆರೋಗ್ಯ ಹಾಗೂ ಮೂಲ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನನ್ನ ಗುರಿಯಾಗಿದೆ ಎಂದು ಹೇಳಿದರು.

ಜಿಲ್ಲೆಯ ಅಭಿವೃದ್ಧಿಯ ಕನಸು
ಜಿಲ್ಲೆಯಲ್ಲಿ ನಿರೋದ್ಯೋಗ ಸಮಸ್ಯೆ ವ್ಯಾಪಕ ಪ್ರಮಾಣದಲ್ಲಿದೆ. ಅನೇಕ ಕುಟುಂಬಗಳು ಉದ್ಯೋಗ ಅರಿಸಿ ಗುಳೆ ಹೊರಟಿವೆ. ಸಣ್ಣ ಕೈಗಾರಿಕೆ ಸ್ಥಾಪನೆಗೆ ಒತ್ತು ನೀಡಬೇಕಿದೆ. ಪ್ರತಿ ತಾಲೂಕಿನಲ್ಲಿ ಕೈಗಾರಿಕೆ ಸ್ಥಾಪಿಸುವ ಬಯಕೆ ಇದೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಸ್ಮಾರ್ಟ್ ಕ್ಲಾಸಿಸ್, ಎಲ್ಲ ಕಾಲೇಜುಗಳಲ್ಲಿ, ಬಸ್ ನಿಲ್ದಾಣದಲ್ಲಿ ವೈ-ಫೈ ಆರಂಭಿಸುವ ಚಿಂತನೆ ಇದೆ. ರೈತರಿಗೆ ಉತ್ತಮ ಬೆಂಬಲ ಬೆಲೆ ದೊರಕಿಸಿಕೊಡಬೇಕಿದೆ. ಸಿರಿಧಾನ್ಯಕ್ಕೆ ಉತ್ತೇಜನ, ರೈತರ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ಅವಶ್ಯವಿದೆ. ಜಿಲ್ಲೆಯ ಐತಿಹಾಸಿಕ ಪ್ರವಾಸಿ ತಾಣಗಳಾದ ಬಾದಾಮಿ, ಐಹೊಳೆ, ಪಟ್ಟದಕಲ್ಲು ಅಭಿವೃದ್ಧಿ ಮಾಡಿ ಪ್ರವಾಸಿಗರಿಗೆ ಸೌಕರ್ಯ ಕಲ್ಪಿಸಬೇಕಿದೆ. ಡಿಜಿಟಲ್ ಶಿಕ್ಷಣ, ನೇಕಾರರಿಗೆ ಜವಳಿ ಪಾರ್ಕ್ ಸ್ಥಾಪನೆ, ದಿನಗೂಲಿ ನೌಕರರಿಗೆ ಶಾಶ್ವತ ಉದ್ಯೋಗ, ಗುಳೇದಗುಡ್ಡ, ರಬಕವಿ, ಬನಹಟ್ಟಿ, ತೇರದಾಳ ವ್ಯಾಪ್ತಿಯ ನೇಕಾರರು ಉತ್ಪಾದಿಸಿದ ಸೀರೆ ಮತ್ತಿತರ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ವ್ಯವಸ್ಥೆ ಮಾಡುವುದು ನನ್ನ ಕನಸಾಗಿದೆ ಎಂದು ಹೇಳಿದರು.

ಮುಖಂಡರಲ್ಲಿ ಭಿನ್ನಾಭಿಪ್ರಾಯವಿಲ್ಲ
ಜಿಲ್ಲೆಯ ನಾಯಕರಲ್ಲಿ ಭಿನ್ನಾಭಿಪ್ರಾಯವಿಲ್ಲ. ಎಲ್ಲ ತಿಳಿಗೊಂಡಿದೆ. ಪಕ್ಷದ ಗೆಲುವಿಗೆ ಒಗ್ಗಟ್ಟಾಗಿ ಶ್ರಮಿಸುತ್ತಿದ್ದಾರೆ. ನಮಗೆ ಸಿದ್ದರಾಮಯ್ಯ ಅವರ ಬಲ ಇದೆ. ಅವರ ಸರ್ಕಾರದ ಜನಪರ ಯೋಜನೆಗಳು, ಮೈತ್ರಿ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನರು ನೋಡಿದ್ದಾರೆ. ಲೋಕಸಭೆ ಕ್ಷೇತ್ರಾದ್ಯಂತ ಬಿರುಸಿನ ಪ್ರಚಾರ ಆರಂಭಿಸಿರುವ ನಮಗೆ ಎಲ್ಲೆಡೆ ಉತ್ತಮ ಜನಬೆಂಬಲ ವ್ಯಕ್ತವಾಗುತ್ತಿದೆ. ಈ ಬಾರಿ ಕ್ಷೇತ್ರದಲ್ಲಿ ಬದಲಾವಣೆ ಗಾಳಿ ಬೀಸಿದೆ. ಜನರು ಆಶೀರ್ವಾದ ಮಾಡಿ ಅಭಿವೃದ್ಧಿಗೆ ಕೈಜೋಡಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾ ಕಾನಿಪ ಅಧ್ಯಕ್ಷೃ ಮಹೇಶ ಅಂಗಡಿ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಜಗದೀಶ ಗಾಣಿಗೇರ, ನಿರೂಪಿಸಿ, ವಂದಿಸಿದರು.

ಪ್ರಚಾರಕ್ಕೆ ನಾಯಕರ ಆಗಮನ
ತಮ್ಮ ಪರ ಪ್ರಚಾರಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷೃದ ರಾಜ್ಯ ನಾಯಕರು ಆಗಮಿಸಲಿದ್ದಾರೆ. ಪ್ರಚಾರ ಸಮಿತಿ ಸದಸ್ಯರು ಪಾಲ್ಗೊಂಡು ಪ್ರಚಾರ ಆರಂಭಿಸಲಿದ್ದಾರೆ. ಸಮನ್ವಯ ಸಮಿತಿ ಅಧ್ಯಕ್ಷೃ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ. ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ ಗೂಂಡುರಾವ್ ಸೇರಿ ಅನೇಕರು ಪ್ರಚಾರಕ್ಕೆ ಆಗಮಿಸಲಿದ್ದಾರೆ ಎಂದು ವೀಣಾ ಹೇಳಿದರು.

ಜಿಪಂ ಅಧ್ಯಕ್ಷರಾಗಿದ್ದಾಗ ಜನಪರವಾಗಿ ಕೆಲಸ ಮಾಡಿದ್ದೇನೆ. ನನ್ನ ಕಚೇರಿ ಸಾರ್ವಜನಿಕರಿಗೆ ಮುಕ್ತವಾಗಿತ್ತು. ಎಲ್ಲರನ್ನು ವಿಶ್ವಾಸಕ್ಕೆ ಪಡೆದು, ಪಕ್ಷೃ, ಜಾತಿ ಭೇದ ಮರೆತು ಆಡಳಿತ ನಡೆಸಿದ್ದೇನೆ. ನನಗೆ ಅನುಭವದ ಕೊರತೆ ಇಲ್ಲ. ಅಭಿವೃದ್ಧಿ ಮಾಡುವ ಇಚ್ಛಾಶಕ್ತಿ ಇದೆ. ಜನರ ಕಷ್ಟದ ಅರಿವು ನನಗಿದೆ.
– ವೀಣಾ ಕಾಶಪ್ಪನವರ ಕಾಂಗ್ರೆಸ್ ಅಭ್ಯರ್ಥಿ