ಮುಂಬೈಯಲ್ಲಿ ಹೀಗೊಂದು ಪ್ರಯೋಗ: ಮತ ಹಾಕಿದ ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್​ ನೀಡಲು ಆಯೋಗ ನಿರ್ಧಾರ

ಮುಂಬೈ: ಮತ ಹಾಕಿದವರಿಗೆ ಊಟ, ಮಜ್ಜಿಗೆ ಉಚಿತ ಕೊಡಲು ಕೆಲವು ಹೋಟೆಲ್​ಗಳು, ಸಂಘಟನೆಗಳು ಮುಂದಾಗಿದ್ದನ್ನು ಕೇಳಿದ್ದೇವೆ. ಆದರೆ, ಇದೇ ಪ್ರಥಮ ಬಾರಿಗೆ ಚುನಾವಣಾ ಆಯೋಗ ಹೊಸದೊಂದು ನಿರ್ಧಾರ ಮಾಡಿದೆ.

ಏ.29ರಂದು ಮುಂಬೈ ಉಪನಗರದಲ್ಲಿ ಚುನಾವಣೆ ನಡೆಯಲಿದ್ದು, ಅಲ್ಲಿ ನಿರ್ಮಾಣವಾಗಿರುವ ಸಖಿ ಮತದಾನ ಕೇಂದ್ರಗಳಲ್ಲಿ ಮತ ಹಾಕಿದ ಮಹಿಳೆಯರಿಗೆ ಉಚಿತವಾಗಿ ಸ್ಯಾನಿಟರಿ ಪ್ಯಾಡ್​ಗಳನ್ನು ನೀಡಲು ಇದೇ ಮೊದಲ ಬಾರಿಗೆ ಅಲ್ಲಿನ ಚುನಾವಣಾ ಆಯೋಗ ನಿರ್ಧಾರ ಮಾಡಿದೆ.

ಮಹಿಳೆಯರು ಹೆಚ್ಚೆಚ್ಚು ಮತ ಹಾಕಬೇಕು. ಈ ನಿಟ್ಟಿನಲ್ಲಿ ಅವರನ್ನು ಪ್ರೋತ್ಸಾಹಿಸಲು ಸದುದ್ದೇಶದಿಂದ ಸ್ಯಾನಿಟರಿ ಪ್ಯಾಡ್​ ವಿತರಣೆ ಮಾಡಲು ನಿಶ್ಚಯಿಸಲಾಗಿದೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.

ಮುಂಬೈ ಉಪನಗರದ 26 ವಿಧಾನಸಭಾ ಕ್ಷೇತ್ರಗಳಲ್ಲೂ ಸಖಿ ಮತದಾನ ಕೇಂದ್ರ ನಿರ್ಮಿಸಲಾಗುತ್ತದೆ. ಮತಗಟ್ಟೆಯನ್ನು ತುಂಬ ಸುಂದರವಾಗಿ ಅಲಂಕಾರ ಮಾಡಲಾಗುತ್ತದೆ. ಸಖಿ ಕೇಂದ್ರ ಮಹಿಳೆಯರಿಂದಲೇ ನಿರ್ವಹಿಸಲ್ಪಡುತ್ತದೆ ಎಂದು ಹೇಳಿದ್ದಾರೆ.