ದೇವರಹಿಪ್ಪರಗಿ: ಮಹಿಳೆಯರು ಮತ್ತು ಮಕ್ಕಳ ರಕ್ಷಣೆ ಸಲುವಾಗಿ ಸರ್ಕಾರ ಅನೇಕ ಕಾನೂನುಗಳನ್ನು ಜಾರಿಗೆ ತಂದರೂ ಮಕ್ಕಳು ಹಾಗೂ ಮಹಿಳೆಯರ ಮೇಲೆ ನಿರಂತರ ದೌರ್ಜನ್ಯಗಳು ನಡೆಯುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಶಹಜಾದ್ ಕಾಗಲ್ ಹೇಳಿದರು.
ತಾಲೂಕಿನ ಕೋರವಾರ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಉಜ್ವಲ ಸಂಸ್ಥೆಯ ಐಎಲ್‌ಪಿ ಯೋಜನೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಹಿಳೆಯರು ಮತ್ತು ಮಕ್ಕಳ ಕಾವಲು ಸಮಿತಿ ರಚನಾ ಸಭೆಯಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ಬಾಲ ಕಾರ್ಮಿಕ, ಮಕ್ಕಳ ಕಳ್ಳ ಸಾಗಣೆ, ಬಾಲ್ಯ ವಿವಾಹ, ಲೈಂಗಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳ, ಮಹಿಳೆಯರನ್ನು ವೇಶ್ಯಾವಾಟಿಕೆಗೆ ಬಳಸಿಕೊಳ್ಳುವುದು ಇಂತಹ ಪ್ರಕರಣಗಳು ಇನ್ನೂ ಜೀವಂತವಾಗಿವೆ. ಅವುಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿ ಸುಸ್ಥಿರ ಸಮಾಜ ನಿರ್ಮಿಸಲು ಮಹಿಳೆಯರ ಮತ್ತು ಮಕ್ಕಳ ಕಾವಲು ಸಮಿತಿ ರಚನೆ ಅನಿವಾರ್ಯವಾಗಿದೆ. ಈ ಸಮಿತಿಯಲ್ಲಿ ಒಟ್ಟು 17 ಸದಸ್ಯರಿದ್ದು, ನಾವೆಲ್ಲರೂ ಸಮುದಾಯದ ಜನರಿಗೆ ತಿಳಿವಳಿಕೆ ಹೇಳಿ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಯ ಸಂಪೂರ್ಣ ಜವಾಬ್ದಾರಿ ನಿರ್ವಹಿಸೋಣ ಎಂದರು.
ಉಜ್ವಲ ಸಂಸ್ಥೆಯ ಐಎಲ್‌ಪಿ ಯೋಜನೆಯ ತಾಲೂಕು ಸಂಯೋಜಕ ಸಾಗರ ಘಾಟಗೆ ಮಾತನಾಡಿದರು. ಶಶಿಕಾಂತ ಸುಂಗಠಾಣ, ಸಂಗಮ್ಮ ಶಂಬೇವಾಡಿ, ಪ್ರೇಮಾ ಕುಳೇಕುಮಟಗಿ, ಜಯಶ್ರೀ ಮಠಪತಿ, ಹೊನ್ನಮ್ಮ ಚವ್ಹಾಣ, ಶೈಲಾ ಬಿರಾದಾರ ಇತರರಿದ್ದರು.
ಮಹಿಳೆಯರು ಮತ್ತು ಮಕ್ಕಳ ರಕ್ಷಣೆಯ ಕಾವಲು ಸಮಿತಿಯ ಸದಸ್ಯರು: ಶೈನಾಜಬಿ ಬ್ಯಾಕೋಡ (ಅಧ್ಯಕ್ಷೆ), ಮಹೆಜನಬಿ ತುರಕನಗೇರಿ (ಉಪಾಧ್ಯಕ್ಷೆ), ಮಹಾನಂದ ನಾಯ್ಕಲ್, ಪ್ರೇಮಾ ಚವ್ಹಾಣ, ಎಸ್.ಬಿ.ಜೋಶಿ, ವೈ.ಎಸ್.ಮನವಳ್ಳಿ, ಎ.ಟಿ.ಗುಬ್ಬೆವಾಡ, ಕೆ.ಎಸ್.ಕಟ್ಟಿಮನಿ, ಪಿ.ಎಸ್.ಬಿರಾದಾರ, ಎಸ್.ಎಸ್.ಬಿರಾದಾರ, ಶಹಜಾನ್ ಕಾಗಲ್, ಎಸ್.ಎಸ್.ಘಾಟಗೆ, ಡಿ.ಬಿ ನಂದಗೌಡರ, ಸಂಗಮ್ಮ ದಿಂಡವಾರ, ರೂಪಾ ಸುಂಬಡ, ಶ್ರೀಶಾ ಜೋಶಿ ಹಾಗೂ ಕಾರ್ಯದರ್ಶಿ ಕೆ.ಎಸ್.ಕಡಕಭಾವಿ.