| ಬಿ.ಎಸ್.ಮಂಜುನಾಥ್
ಇಡೀ ವಿಶ್ವವನ್ನೇ ನಡುಗಿಸಿರುವ ಇಸ್ರೇಲ್-ಪ್ಯಾಲೆಸ್ತೇನ್ ಯುದ್ಧದ ಹೊಗೆ ಇನ್ನೂ ಆರಿಲ್ಲ. ಬಾಂಬ್, ಕ್ಷಿಪಣಿಗಳ ದಾಳಿ ತೀವ್ರತೆಗೆ ಧರೆಗುರುಳಿರುವ ಬೃಹತ್ ಕಟ್ಟಡಗಳಡಿ ಇಂದಿಗೂ ಕೊಳೆತ ಹೆಣಗಳ ಕಮಟು ವಾಸನೆ ಮೂಗಿಗೆ ಬಡಿಯುತ್ತದೆ. ಇತ್ತೀಚಿನ ವರದಿ ಪ್ರಕಾರ ಗಾಜಾ ಪಟ್ಟಿಯೊಂದರಲ್ಲೇ ಒಟ್ಟಾರೆ 8119 ಮೃತದೇಹಗಳು ಪತ್ತೆಯಾಗಿವೆ. ಇದರಲ್ಲಿ ಶೇ.26 ಮೃತದೇಹಗಳು ಹೆಣ್ಮಕ್ಕಳದ್ದಾಗಿದೆ. ಮಧ್ಯಪ್ರಾಚ್ಯವಷ್ಟೇ ಅಲ್ಲ, ಇನ್ನೂ ಹಲವು ರಾಷ್ಟ್ರಗಳಲ್ಲಿ ಇಂದಿಗೂ ಕೌಟುಂಬಿಕ ದೌರ್ಜನ್ಯ, ಅತ್ಯಾಚಾರದಂತಹ ರಾಕ್ಷಸಿ ಕೃತ್ಯಗಳಿಗೆ ನಿತ್ಯ ನೂರಾರು ಮಹಿಳೆಯರು ಬಲಿ ಆಗುತ್ತಿದ್ದಾರೆ. ಅಷ್ಟಕ್ಕೂ ಮಹಿಳೆಯರ ಪಾಲಿನ ಅತ್ಯಂತ ಅಪಾಯಕಾರಿ ರಾಷ್ಟ್ರಗಳಾವುವು? ಯಾವ ದೇಶ ಹೆಚ್ಚು ಸುರಕ್ಷಿತ ಎಂಬ ಸಮಗ್ರ ಮಾಹಿತಿಯನ್ನು ಇಲ್ಲಿ ಕೊಡಲಾಗಿದೆ.
ಅಪಾಯಕಾರಿ ದೇಶಗಳಿವು
ದಕ್ಷಿಣ ಆಫ್ರಿಕಾ: ಸದ್ಯದ ಮಾಹಿತಿ ಪ್ರಕಾರ ದಕ್ಷಿಣ ಆಫ್ರಿಕಾ ಮಹಿಳೆಯರ ಪಾಲಿಗೆ ಅತ್ಯಂತ ಅಪಾಯಕಾರಿ ದೇಶ, ಪುರುಷಾಧಾರಿತ ದೌರ್ಜನ್ಯ ಪ್ರಕರಣ ದಿನೇ ದಿನೆ ಹೆಚ್ಚುತ್ತಲೇ ಇದೆ. ಶೇ.25 ಮಹಿಳೆಯರಷ್ಟೇ ಏಕಾಂಗಿಯಾಗಿ ವಾಯು ವಿಹಾರಕ್ಕೆ ಹೋಗಲು ಸಿದ್ಧ ಎಂದು ಗಟ್ಟಿ ಮನಸ್ಸು ಮಾಡಿ ಹೇಳಿದ್ದಾರೆ. ಅಷ್ಟರ ಮಟ್ಟಿಗೆ ಹೆಣ್ಮಕ್ಕಳು ಮನೆಯಿಂದ ಹೊರಬರುವುದಕ್ಕೂ ಸಾಧ್ಯವಾಗದ ಪರಿಸ್ಥಿತಿ ಇದೆ. ಮಹಿಳೆಯರ ಅಪಹರಣ, ಸಾಗಣೆ, ಲೈಂಗಿಕ ದೌರ್ಜನ್ಯ ಪ್ರಕರಣಗಳೂ ನಿತ್ಯ ನೂರಾರು ಸಂಖ್ಯೆಯಲ್ಲಿ ಬೆಳಕಿಗೆ ಬರುತ್ತಿವೆ. ಸೋಲೋ ಟ್ರಿಪ್(ಏಕಾಂಗಿ ಪ್ರವಾಸ)ಕೈಗೊಳ್ಳುವ ವಿದೇಶಿ ಮಹಿಳೆಯರೇ ದುಷ್ಕರ್ವಿುಗಳಿಗೆ ಹೆಚ್ಚು ಟಾರ್ಗೆಟ್ ಆಗುತ್ತಿದ್ದಾರೆ.
ಅಫ್ಘಾನಿಸ್ತಾನ: ಅಫ್ಘಾನಿಸ್ತಾನದ ಶೇ.87 ಮಹಿಳೆಯರು ಅವಿದ್ಯಾವಂತರಾಗಿದ್ದಾರೆ. ಹುಟ್ಟುವ ಪ್ರತಿ 11 ಹೆಣ್ಣುಮಕ್ಕಳಲ್ಲಿ ಒಂದು ಮಗು ಅಸಹಜ ಸಾವಿಗೀಡಾಗುತ್ತವೆ. ಉಳಿದಂತೆ ಶೇ.70-80 ಬಲವಂತದ ಮದುವೆ ಗಳಾಗಿರುತ್ತವೆ. ತಾಲಿಬಾನ್ ಆಡಳಿತಕ್ಕೇರಿದ ಬಳಿಕ ಮಹಿಳಾ ಸ್ವಾತಂತ್ರ್ಯ ಹರಣಗೊಂಡಿದೆ. ವೈದ್ಯಕೀಯ ಚಿಕಿತ್ಸೆ, ಶಿಕ್ಷಣವೂ ಮಹಿಳೆಯರ ಕೈಗೆಟುಕುತ್ತಿಲ್ಲ. ಕೌಟುಂಬಿಕ ದೌರ್ಜನ್ಯ, ಅತ್ಯಾಚಾರದಂತಹ ದುಷ್ಕೃತ್ಯಗಳು ನಿತ್ಯ ನಡೆಯುತ್ತಲೇ ಇರುತ್ತವೆೆ.
ಬದಲಾಗದ ಭಾರತ: ಅಭಿವೃದ್ಧಿಶೀಲ ರಾಷ್ಟ್ರವಾಗಿ ಹೊರಹೊಮ್ಮುತ್ತಿರುವ ಭಾರತವೂ ಮಹಿಳಾ ಸುರಕ್ಷತೆ ವಿಚಾರದಲ್ಲಿ ಸಾಕಷ್ಟು ಹಿಂದಿದೆ. ಮಹಿಳಾ ಸಮಾನತೆ, ಆದ್ಯತೆಗಳಿದ್ದರೂ ಲೈಂಗಿಕ ಕಿರುಕುಳ, ಹಿಂಸಾಚಾರ ಘಟನೆಗಳು ನಡೆಯುತ್ತಲೇ ಇವೆ. ಮಹಿಳೆಯರ ರಕ್ಷಣೆಗಾಗಿ ಹಲವು ಕಾನೂನು ಜಾರಿಗೆ ಬಂದಿದ್ದರೂ ದೌರ್ಜನ್ಯ ನಿಂತಿಲ್ಲ. ಇದರ ಜತೆಗೆ ಮಹಿಳಾ ಉದ್ಯೋಗಿಗಳ ಕಿರುಕುಳ, ಕೌಟುಂಬಿಕ ದೌರ್ಜನ್ಯಕ್ಕೂ ಕಡಿವಾಣ ಬಿದ್ದಿಲ್ಲ. ಕಳೆದ 10 ವರ್ಷದಲ್ಲಿ 50 ಮಿಲಿಯನ್ ಮಹಿಳೆಯರು, ಹೆಣ್ಮಕ್ಕಳು ಭಾರತದಲ್ಲಿ ನಾಪತ್ತೆ ಆಗಿದ್ದಾರೆ.
ಕಾಂಗೋ: ಆಫ್ರಿಕನ್ ರಾಷ್ಟ್ರ ಕಾಂಗೋ ಮಹಿಳೆಯರ ಸ್ಥಿತಿಯಂತೂ ಶೋಚನೀಯ. ಈ ದೇಶದಲ್ಲಿ ನಿತ್ಯ 1152 ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತದೆ. ಪತಿಯ ಅನುಮತಿ ಇಲ್ಲದೆ ಕಾನೂನು ಹೋರಾಟಕ್ಕಿಳಿಯುವ ಮಹಿಳೆಯರ ಸಂಖ್ಯೆ ಶೂನ್ಯ. ಉಳಿದಂತೆ ಶೇ.57 ಗರ್ಭಿಣಿಯರು ಇಂದಿಗೂ ಅಪೌಷ್ಟಿಕತೆ, ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇಲ್ಲೂ ಕೂಡ ಮಹಿಳಾ ಶಿಕ್ಷಣ ಕನಸಾಗೇ ಉಳಿದಿದೆ.
ಪಾಕಿಸ್ತಾನ: ಪಾಕಿಸ್ತಾನದಲ್ಲಿ ಶೇ.90 ಮಹಿಳೆಯರು ಕೌಟುಂಬಿಕ ದೌರ್ಜನ್ಯ ಎದುರಿಸುತ್ತಾರೆ. ಪ್ರತಿ ವರ್ಷ 1 ಸಾವಿರ ಮಹಿಳೆಯರು ಮರ್ಯಾದೆ ಹತ್ಯೆಗೆ ಬಲಿಯಾಗುತ್ತಾರೆ. ಇದಿಷ್ಟೇ ಅಲ್ಲ. ಶೇ.82 ಮಹಿಳೆಯರಿಗೆ ವಿದ್ಯಾರ್ಹತೆ ಇದ್ದರೂ ಕೆಲಸಕ್ಕೆ ಹೋಗುವ ಅವಕಾಶವಿಲ್ಲ. ಇಚ್ಛೆಗನುಗುಣವಾಗಿ ಬಟ್ಟೆ ಧರಿಸುವ, ವಾಹನ ಚಲಾಯಿಸುವುದಕ್ಕೂ ಹಲವೆಡೆ ನಿರ್ಬಂಧವಿದೆ.
ಸೊಮಾಲಿಯಾ: ಶೇ.95 ಮಹಿಳೆಯರು ಸ್ತ್ರೀ ಜನನಾಂಗಕ್ಕೆ ಹಾನಿ ಪಡಿಸುವ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಕಡು ಬಡತನವಿರುವ ಈ ದೇಶದಲ್ಲಿ ತುತ್ತು ಅನ್ನಕ್ಕೂ ಕಷ್ಟಪಡಬೇಕಾಗಿದೆ. ಶೇ.90 ಮಹಿಳೆಯರು, ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಶೇ.9ರಷ್ಟು ಮಹಿಳೆಯರಷ್ಟೇ ವೈದ್ಯಕೀಯ ವ್ಯವಸ್ಥೆಯಲ್ಲಿ ಗರ್ಭಧಾರಣೆ ಸೌಲಭ್ಯ ಪಡೆಯುತ್ತಿದ್ದಾರೆ.
ಫ್ರಾನ್ಸ್: ಫ್ರಾನ್ಸ್ನಲ್ಲಿ ಮಹಿಳೆಯರಿಗಾಗಿಯೇ ಹಲವು ವಿಶೇಷ ಕಾನೂನುಗಳಿವೆ. ಇಲ್ಲಿನ ಶೇ.22 ಬೃಹತ್ ಕಂಪನಿಗಳ ಬೋರ್ಡ್ ಮೆಂಬರ್ಗಳು ಮಹಿಳೆಯರೇ ಆಗಿದ್ದಾರೆ. ರಾತ್ರಿ ಎಷ್ಟೇ ಹೊತ್ತಾದರೂ ಮಹಿಳೆಯರು ಏಕಾಂಗಿಯಾಗಿ ಯಾವುದೇ ಭಯವಿಲ್ಲದೆ ಸಾರ್ವಜನಿಕ ಸಾರಿಗೆಯಲ್ಲಿ ಸಂಚರಿಸುತ್ತಾರೆ. ಅಲ್ಲದೆ ಮಹಿಳಾ ಸಿಬ್ಬಂದಿಗಾಗಿ 16 ವಾರ ರಜೆ ನೀಡುವ ವ್ಯವಸ್ಥೆ ಕೂಡ ಇದೆ.
ಆಸ್ಟ್ರೇಲಿಯಾ: ಈ ದೇಶ ಕೂಡ ಮಹಿಳೆಯರ ಪಾಲಿಗೆ ಬೆಸ್ಟ್. ಇಲ್ಲಿನ ಶೇ.35.9ರಷ್ಟು ಸಂಸದೀಯ ಸ್ಥಾನಗಳಲ್ಲಿ ಮಹಿಳೆಯರಿದ್ದಾರೆ. ಅಲ್ಲದೆ 200 ಖ್ಯಾತ ಕಂಪನಿಗಳ ಸಿಇಒ ಸ್ಥಾನದ ಪೈಕಿ ಶೇ.5ರಲ್ಲಿ ಮಹಿಳೆಯರಿದ್ದಾರೆ. ಮಹಿಳಾ ಸುರಕ್ಷತೆಗಾಗಿಯೇ ಇಲ್ಲಿ ಕಠಿಣ ಕಾನೂನುಗಳು ಜಾರಿಯಲ್ಲಿವೆ.
ಈ ರಾಷ್ಟ್ರಗಳು ಅಚ್ಚುಮೆಚ್ಚು
ಕೆನಡಾ: ಕೆನಡಾದಲ್ಲಿ ಮಹಿಳೆಯರು ಹೆಚ್ಚು ಸುರಕ್ಷಿತರಾಗಿದ್ದಾರೆ. ದೇಶದಲ್ಲಿ 1/3ರಷ್ಟು ಮಹಿಳಾ ಜಡ್ಜ್ಗಳಿದ್ದಾರೆ. ಇದಿಷ್ಟೇ ಅಲ್ಲ 15-49 ವರ್ಷದ 3/4ರಷ್ಟು ಮಹಿಳೆಯರು ಸುರಕ್ಷಿತ ಗರ್ಭಧಾರಣೆ ಸೌಲಭ್ಯ ಪಡೆಯುತ್ತಿದ್ದಾರೆ. ಉಳಿದಂತೆ ಶೇ.62ರಷ್ಟು ಪದವೀಧರರು ಮಹಿಳೆಯ ರಾಗಿರುವುದು ಈ ರಾಷ್ಟ್ರದ ಶಿಕ್ಷಣ ವ್ಯವಸ್ಥೆಗೆ ನಿದರ್ಶನ.
ಜರ್ಮನಿ: ಕೆನಡಾ ಬಿಟ್ಟರೆ ಜರ್ಮನಿ ಮಹಿಳಾ ಸುರಕ್ಷತೆ ದೇಶಗಳ ಸಾಲಿನಲ್ಲಿ ಎರಡನೇ ಸ್ಥಾನ ಪಡೆದಿದೆ. ಉತ್ತಮ ವೈದ್ಯಕೀಯ ಸೇವೆಯಿಂದಾಗಿ ಮಹಿಳೆಯರ ಜೀವಿತಾವಧಿ 83 ವರ್ಷಕ್ಕೆ ಏರಿಕೆ ಆಗಿದೆ. ಹಾಗೆಯೇ ಪುರುಷ, ಮಹಿಳಾ ಉದ್ಯೋಗಿಗಳ ಅಂತರ ಶೇ.11ಕ್ಕೆ ತಗ್ಗಿದೆ. ಲೈಂಗಿಕ ದಂಧೆಯಂತಹ ಪ್ರಕರಣಗಳಲ್ಲಿ ಶೇ.24.4 ಅಪರಾಧಿಗಳು ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.
ಯುಕೆ: ಒಟ್ಟಾರೆ ಅಪರಾಧ ಪ್ರಕರಣಗಳ ಸಾಲಿನಲ್ಲಿ ಮುಂಚೂಣಿಯಲ್ಲಿದ್ದರೂ ಬ್ರಿಟನ್ ಮಹಿಳೆಯರು ಹೆಚ್ಚು ಸೇಫ್ ಇದ್ದಾರೆ. ಇಲ್ಲಿನ ಶೇ.22.3 ನ್ಯಾಯಮೂರ್ತಿಗಳು ಮಹಿಳೆಯರಾಗಿದ್ದಾರೆ. ಜತೆಗೆ ಶೇ.17 ಪದವಿ ಪಡೆದಿರುವ ಮಹಿಳಾ ಸಚಿವರಿದ್ದಾರೆ. ಇಲ್ಲಿನ ಮಹಿಳಾ ದೌರ್ಜನ್ಯಕ್ಕೆ ಕಠಿಣ ಶಿಕ್ಷೆ ಇರುವುದರಿಂದ ಮಹಿಳಾ ಅಪರಾಧ ಗಂಭೀರ ಪ್ರಮಾಣದಲ್ಲಿ ಇಳಿಕೆ ಆಗಿದೆ.
ಆಧಾರ್ ಕಾರ್ಡ್ ಬಳಕೆದಾರರೇ ಇದೇ ನಿಮಗೆ ಕಡೆಯ ದಿನಾಂಕ! ತಪ್ಪಿದರೆ ರದ್ದಾಗಬಹುದು ಇರಲಿ ಎಚ್ಚರ