ಉಡುಪಿ ಜಿಲ್ಲೆಯಲ್ಲಿ ಮಹಿಳೆಯರದ್ದೇ ಪಾರಮ್ಯ

«ಪ್ರಮುಖ ಹುದ್ದೆಗಳಲ್ಲಿ ಮಹಿಳಾ ಸಾರಥ್ಯ * ಜನಪರ ಆಡಳಿತ ನೀಡುವ ಸವಾಲು»

ಅವಿನ್ ಶೆಟ್ಟಿ, ಉಡುಪಿ
ಉಡುಪಿ ಜಿಲ್ಲೆಯಲ್ಲಿ ಮಹಿಳೆಯರೇ ಸಂಪೂರ್ಣ ಆಡಳಿತ ಚುಕ್ಕಾಣಿ ಹಿಡಿದು, ಗಮನ ಸೆಳೆದಿದ್ದಾರೆ.
ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಜಿಲ್ಲಾ ಪಂಚಾಯಿತಿ ಸಿಇಒ ಸಿಂಧು ಬಿ.ರೂಪೇಶ್, ಮಹಿಳಾ ಹಾಗೂ ಮಕ್ಕಳ ಕಲ್ಯಾಣಾಧಿಕಾರಿ ಗ್ರೇಸಿ ಗೊನ್ಸಾಲ್ವಿಸ್, ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿ ಡಾ.ರೋಹಿಣಿ, ಜಿಲ್ಲಾ ಪಂಚಾಯಿತಿ ವಸತಿ ಯೋಜನಾಧಿಕಾರಿ ನಯನಾ, ಜಿಲ್ಲಾ ಗ್ರಂಥಾಲಯ ಅಧಿಕಾರಿ ನಳಿನಿ, ಜಿಲ್ಲಾ ತೋಟಗಾರಿಕಾ ಇಲಾಖೆ ಉಪ ನಿರ್ದೇಶಕಿ ಭುವನೇಶ್ವರಿ, ಆಯುಷ್ ಅಧಿಕಾರಿ ಅಲಕಾನಂದ…. ಹೀಗೆ ಎಲ್ಲ ವಿವಿಧ ಇಲಾಖೆಯ ಪ್ರಮುಖ ಹುದ್ದೆಗಳನ್ನು ಮಹಿಳೆಯರೇ ಅಲಂಕರಿಸಿದ್ದಾರೆ.
ಜಿಲ್ಲೆಯಲ್ಲಿ ರಾಜಕೀಯವಾಗಿಯೂ ಮಹಿಳೆಯರ ಪಾರಮ್ಯವಿದೆ. ಉಸ್ತುವಾರಿ ಸಚಿವೆ ಡಾ.ಜಯಮಾಲ, ಸಂಸದೆ ಶೋಭಾ ಕರಂದ್ಲಾಜೆ, ಜಿಪಂ ಉಪಾಧ್ಯಕ್ಷೆ ಶೀಲಾ ಶೆಟ್ಟಿ, ಉಡುಪಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಕಾರ್ಕಳ ತಾಪಂ ಅಧ್ಯಕ್ಷೆ ಮಾಲಿನಿ .ಜೆ ಶೆಟ್ಟಿ, ಕುಂದಾಪುರ ತಾಪಂ ಜಯಶ್ರೀಮೊಗವೀರ ಸೇರಿದಂತೆ ಪ್ರಮುಖ ಖುರ್ಚಿಗಳಲ್ಲಿ ಮಹಿಳೆಯರೇ ಇದ್ದಾರೆ. ಜಿ.ಪಂ.ನಲ್ಲಿ 9 ಮಹಿಳಾ ಸದಸ್ಯರು, ಉಡುಪಿ ತಾ.ಪಂ.20, ಕಾರ್ಕಳ ತಾ.ಪಂ.10, ಕುಂದಾಪುರ ತಾ.ಪಂ.ನಲ್ಲಿ 19 ಮಹಿಳಾ ಸದಸ್ಯರಿದ್ದಾರೆ.

ಜಿಲ್ಲೆಯಲ್ಲಿದೆ ಸವಾಲು
ಜಿಲ್ಲೆಯಲ್ಲಿ ಮರಳು ಸಮಸ್ಯೆ ಬೂದಿ ಮುಚ್ಚಿದ ಕೆಂಡದಂತಿದೆ. ಈ ಬಾರಿ ಹವಾಮಾನ ವೈಪರೀತ್ಯದ ಪರಿಣಾಮ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಯಾಗಲಿದೆ. ವಸತಿ ಯೋಜನೆಗಳಿಗೆ ಗುರಿ ನಿಗದಿಯಾಗಿಲ್ಲ, ಫಲಾನುಭವಿಗಳ ಖಾತೆಗಳಿಗೆ ಸಮರ್ಪಕವಾಗಿ ಹಣ ಪಾವತಿಯಾಗುತ್ತಿಲ್ಲ. ಕುಡಿಯುವ ನೀರು ಯೋಜನೆಗಳು ವ್ಯವಸ್ಥಿತವಾಗಿ ಅನುಷ್ಠಾನವಾಗುತ್ತಿಲ್ಲ. ಹೆದ್ದಾರಿ ಅವೈಜ್ಞಾನಿಕ, ವಿಳಂಬ ಕಾಮಗಾರಿ, ಕಂದಾಯ ಸಂಬಂಧಿತ ಕೆಲಸಗಳು ವಿಳಂಬ, ಮೀನುಗಾರರ ಸಮಸ್ಯೆಗೆ ಸ್ಪಂದನೆ ಇಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಈ ಎಲ್ಲ ಸವಾಲುಗಳನ್ನು ಮಹಿಳಾ ಜನಪ್ರತಿನಿಧಿಗಳು, ಅಧಿಕಾರಿಗಳು ಸಮರ್ಥವಾಗಿ ನಿಭಾಯಿಸಿ ಜನಪರ ಆಡಳಿತ ನೀಡಲಿದ್ದಾರೆ ಎಂಬ ನಿರೀಕ್ಷೆಯಲ್ಲಿ ಉಡುಪಿ ನಾಗರಿಕರದು.