ತೆಲಸಂಗ: ಖಾಲಿ ಕೊಡ ಹಿಡಿದು ಪ್ರತಿಭಟನೆ

ತೆಲಸಂಗ: ಗ್ರಾಮದಲ್ಲಿ ನಿರ್ಮಿಸಿರುವ ಜಲಕುಂಭದಲ್ಲಿ ನೀರಿಲ್ಲ. ನೀರು ತುಂಬಿಸದಿದ್ದರೆ ಜಲಕುಂಭ ಕಟ್ಟಿದ್ದೇಕೆ. ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ನಮಗೆ ನೀರು ಕೊಡುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಖಾಲಿ ಕೊಡ ಹಿಡಿದು ಸ್ಥಳೀಯ ವಿವೇಕಾನಂದ ನಗರದ ಮಹಿಳೆಯರು ಶುಕ್ರವಾರ ತೆಲಸಂಗ ಗ್ರಾಪಂಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಗ್ರಾಮ ಹೊರವಲಯದ ಎತ್ತರ ಪ್ರದೇಶದಲ್ಲಿ ನಮ್ಮ ಮನೆಗಳಿವೆ. ಈ ಭಾಗಕ್ಕೆ ನಳದ ನೀರು ಬರುವುದೇ ಇಲ್ಲ. ಎತ್ತರ ಪ್ರದೇಶವಾಗಿದ್ದರಿಂದ ನೀರು ಬರುವುದಿಲ್ಲ. 6 ತಿಂಗಳ ಹಿಂದೆ ಜಲಕುಂಭ ನಿರ್ಮಾಣ ಮಾಡಲಾಗಿದೆ. ಆದರೆ, ಇದು ಕೇವಲ ನೋಡಲಿಕ್ಕೆ ಮಾತ್ರ ಕಟ್ಟಲಾಗಿದೆ. ಇಲ್ಲಿಯ ಜನರ ಗೋಳು ಕೇಳುವವರೇ ಇಲ್ಲ. ನೀರಿನ ಸಮಸ್ಯೆಗೆ ಪರಿಹಾರ ದೊರೆಯದಿದ್ದರಿಂದ ನಾವು ತಾಳ್ಮೆ ಕಳೆದುಕೊಂಡಿದ್ದೇನೆ. ಕೂಡಲೇ ಸಮಸ್ಯೆಗಳಿಗೆ ಪರಿಹಾರ ಕೊಡಿ ಇಲ್ಲವೇ ಪಂಚಾಯಿತಿ ಬಿಟ್ಟು ಹೊರ ನಡೆಯಿರಿ ಎಂದು ಸಿಬ್ಬಂದಿಯನ್ನು ಹೊರಹಾಕಿ ಬಾಗಿಲು ಮುಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಎರಡು ವರ್ಷದಿಂದ ಗಟಾರ ನಿರ್ಮಾಣ ಮಾಡುತ್ತೇವೆ ಎಂದು ಹೇಳುತ್ತಲೇ ಇದ್ದೀರಿ. ಆದರೆ, ಅದು ಕೂಡ ಪೂರ್ಣಗೊಂಡಿಲ್ಲ ಎಂದು ನಿವಾಸಿಗಳು ಅಧಿಕಾರಿಗಳೊಂದಿಗೆ ಕೆಲಹೊತ್ತು ವಾಗ್ವಾದ ನಡೆಸಿದರು. ಗ್ರಾಪಂ ಕಾರ್ಯದರ್ಶಿ ಆರ್.ಎಸ್.ಹಿರೇಮಠ ಹಾಗೂ ರಾಮಣ್ಣ ಕುಂಬಾರ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿ 4 ದಿನಗಳ ಒಳಗೆ ಜಲಕುಂಭಕ್ಕೆ ನೀರು ತುಂಬಿಸುವುದಾಗಿ ಭರವಸೆ ನೀಡಿದರು. ನಾಲ್ಕು ದಿನಗಳಲ್ಲಿ ನೀರಿನ ಸಮಸ್ಯೆ ಬಗೆಹರಿಯದಿದ್ದರೆ ಮತ್ತೆ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದ ಬಳಿಕ ಮಹಿಳೆಯರು ಪ್ರತಿಭಟನೆ ಕೈ ಬಿಟ್ಟರು.